ಸಾರಾಂಶ
ಹೊಸಪೇಟೆ: ಜಿಲ್ಲೆಯಲ್ಲಿ ಪ್ರತ್ಯೇಕವಾಗಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯ ಸ್ಥಾಪನೆಗೆ ಸರಕಾರ ಮಂಜೂರಾತಿ ನೀಡಿ ಆದೇಶ ಹೊರಡಿಸಿದೆ.
ಅಖಂಡ ಬಳ್ಳಾರಿ ಜಿಲ್ಲೆ ವಿಭಜನೆಯಾಗಿರುವ ವಿಜಯನಗರ ಜಿಲ್ಲೆಯಲ್ಲಿ ಹೊಸಪೇಟೆ, ಹಗರಿಬೊಮ್ಮನಹಳ್ಳಿ, ಕೂಡ್ಲಿಗಿ, ಹಡಗಲಿ, ಹರಪನಹಳ್ಳಿ, ಕೊಟ್ಟೂರು ತಾಲೂಕುಗಳನ್ನು ಒಳಗೊಂಡ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವನ್ನು ಪೂರಕ ಅಧಿಕಾರಿ, ಸಿಬ್ಬಂದಿಗಳ ಹುದ್ದೆಗಳೊಂದಿಗೆ ಸರಕಾರ ಮಂಜೂರಾತಿ ನೀಡುವಂತೆ ಕರ್ನಾಟಕ ಉಚ್ಛ ನ್ಯಾಯಾಲಯದ ರಿಜಿಸ್ಟ್ರಾರ್ ಜನರಲ್ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದರು.ನ್ಯಾಯಾಲಯಕ್ಕೆ ಪೀಠೋಪಕರಣಗಳು, ಟೈಪ್ ರೈಟರ್ಸ್, ದೂರವಾಣಿ, ಜೆರಾಕ್ಸ್, ಲೇಖನ ಸಾಮಗ್ರಿ, ಗಣಕ ಯಂತ್ರ ಸೇರಿದಂತೆ ಅಗತ್ಯ ಸಾಮಗ್ರಿಗಳನ್ನು ಸೇರಿದಂತೆ ನ್ಯಾಯಾಲಯಕ್ಕೆ ಬೇಕಾದ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಹುದ್ದೆಯನ್ನಯ ಸೃಜಿಸಿ ಮಂಜೂರು ಮಾಡಬೇಕು. ಜತೆಗೆ ವರ್ಷಕ್ಕೆ ಅಂದಾಜು 418.36 ಲಕ್ಷ ರೂ. ಅನುದಾನ ಇರುವುದಾಗಿ ಪ್ರಸ್ತಾವನೆಯಲ್ಲಿ ತಿಳಿಸಿದ್ದರು.
ನ್ಯಾಯಾಲಯ ಪ್ರಾರಂಭ ಮತ್ತು 57 ಅಧಿಕಾರಿ, ಸಿಬ್ಬಂದಿ ಹುದ್ದೆಗಳ ಸೃಜನೆಗೆ ಆರ್ಥಿಕ ಇಲಾಖೆ ಸಹಮತಿ ನೀಡಿತ್ತು.ಈ ಹಿನ್ನೆಲೆಯಲ್ಲಿ ನ್ಯಾಯಾಲಯ ಸ್ಥಾಪನೆ ಮತ್ತು ನ್ಯಾಯಾಲಯಕ್ಕೆ 57 ಪೂರಕ ಅಧಿಕಾರಿ ಮತ್ತು ಸಿಬ್ಬಂದಿ ಹುದ್ದೆಗಳನ್ನು ಸೃಜಿಸಲು ಮಂಜೂರಾತಿ ನೀಡಿ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿಗಳು ಆದೇಶ ಹೊರಡಿಸಿದ್ದಾರೆ.
ಸಿಎಂಗೆ ಮನವಿ ಸಲ್ಲಿಸಿದ್ದ ಶಾಸಕ ಎಚ್.ಆರ್.ಗವಿಯಪ್ಪ ಹರ್ಷ: ವಿಜಯನಗರ ಜಿಲ್ಲೆಗೆ ಪ್ರತ್ಯಕ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವನ್ನು ಮಂಜೂರು ಮಾಡುವಂತೆ ಕಳೆದ ಜೂನ್ 20ರಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿ ನ್ಯಾಯಾಲಯವನ್ನು ಮಂಜೂರು ಮಾಡಿರುವುದನ್ನು ತಿಳಿಸಲು ಹರ್ಷಿಸುತ್ತೇನೆ ಎಂದು ಶಾಸಕ ಎಚ್.ಆರ್.ಗವಿಯಪ್ಪ ತಿಳಿಸಿದ್ದಾರೆ.ಜಿಲ್ಲೆಯ ಸಾರ್ವಜನಿಕರು ಹಾಗು ನ್ಯಾಯವಾದಿಗಳು ನ್ಯಾಯಾಲಯಕ್ಕೆ ಸಂಬಂಧಿಸಿದ ಕಾರ್ಯಗಳಿಗೆ ದೂರದ ಬಳ್ಳಾರಿಗೆ ಹೋಗುವುದು ತಪ್ಪಿಸಿದಂತಾಗಿದೆ. ಇದರಿಂದ ಸಾರ್ವಜನಿಕರ ಹಣ ಮತ್ತು ಸಮಯ ಉಳಿತಾಯವಾಗಲಿದೆ. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರ ನ್ಯಾಯಾಲಯವನ್ನು ಮಂಜೂರು ಮಾಡಿ ಆದೇಶ ಹೊರಡಿಸಲು ಸಹಕಾರಿಯಾದ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಿಗೆ, ಮುಖ್ಯಮಂತ್ರಿಗಳಿಗೆ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಿಗೆ ಈ ಸಂದರ್ಭದಲ್ಲಿ ಅಭಿನಂದನೆ ಸಲ್ಲಿಸಿದ್ದಾರೆ.