₹17 ಲಕ್ಷ ನೆಲ ಬಾಡಿಗೆ ಶುಲ್ಕಕ್ಕೆ ಡಿಮ್ಯಾಂಡ್‌ : ಪಾಲಿಕೆಗೆ ಹೈಕೋರ್ಟ್‌ ನೋಟಿಸ್‌

| Published : Dec 03 2024, 01:01 AM IST / Updated: Dec 03 2024, 12:07 PM IST

Highcourt

ಸಾರಾಂಶ

ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ನಕ್ಷೆ ಮಂಜೂರು ಮಾಡಲು ನೆಲ ಬಾಡಿಗೆ ಶುಲ್ಕ ಸೇರಿ ವಿವಿಧ ಶುಲ್ಕ ಒಳಗೊಂಡಂತೆ ಒಟ್ಟು ₹17 ಲಕ್ಷ ಪಾವತಿಸಲು   ಬಿಬಿಎಂಪಿ ನೋಟಿಸ್‌  ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

 ಬೆಂಗಳೂರು : ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಹೊಸದಾಗಿ ನಕ್ಷೆ ಮಂಜೂರು ಮಾಡಲು ನೆಲ ಬಾಡಿಗೆ ಶುಲ್ಕ ಸೇರಿ ವಿವಿಧ ಶುಲ್ಕ ಒಳಗೊಂಡಂತೆ ಒಟ್ಟು ₹17 ಲಕ್ಷ ಪಾವತಿಸಲು ಸೂಚಿಸಿ ಬಿಬಿಎಂಪಿ ತಮಗೆ ನೀಡಿರುವ ಡಿಮ್ಯಾಂಡ್‌ ನೋಟಿಸ್‌ ಪ್ರಶ್ನಿಸಿ ಹಿರಿಯ ವಕೀಲ ಪ್ರಭುಲಿಂಗ ಕೆ. ನಾವದಗಿ ಸಲ್ಲಿಸಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿಗೆ ಹೈಕೋರ್ಟ್‌ ನೋಟಿಸ್‌ ಜಾರಿ ಮಾಡಿದೆ.

ಈ ಕುರಿತು ಮಾಜಿ ಅಡ್ವೋಕೇಟ್‌ ಜನರಲ್‌ ಪ್ರಭುಲಿಂಗ ಕೆ.ನಾವದಗಿ ಸಲ್ಲಿಸಿರುವ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್ ಅವರ ನ್ಯಾಯಪೀಠ ಈ ಆದೇಶ ಮಾಡಿ, ಅರ್ಜಿದಾರರಿಗೆ ಡಿಮ್ಯಾಂಡ್‌ ನೋಟಿಸ್‌ನಲ್ಲಿ ತಿಳಿಸಿರುವ ಕೆಲ ತೆರಿಗೆ-ಶುಲ್ಕಗಳ ಪಾವತಿಗೆ ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ಮಾಡಿದೆ.

ಆರ್‌.ಟಿ. ನಗರದ ಮಠದಹಳ್ಳಿಯಲ್ಲಿ ಹೊಂದಿರುವ ನಿವೇಶನದಲ್ಲಿ ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣ ಮಾಡಲು ಅರ್ಜಿದಾರರು ಉದ್ದೇಶಿಸಿದ್ದಾರೆ. ಅದರಂತೆ ನಕ್ಷೆ ಮಂಜೂರಾತಿಗೆ ಕೋರಿ ಬಿಬಿಎಂಪಿಗೆ ಅರ್ಜಿ ಸಲ್ಲಿಸಿದ್ದರು. ನಕ್ಷೆ ಮಂಜೂರಾತಿ ನೀಡಲು ₹17,72,000 ಪಾವತಿ ಮಾಡುವಂತೆ ಸೂಚಿಸಿ ಬಿಬಿಎಂಪಿಯು 2024ರ ಸೆ.11ರಂದು ಅರ್ಜಿದಾರರಿಗೆ ಡಿಮ್ಯಾಂಡ್‌ ನೋಟಿಸ್‌ ನೀಡಿದೆ.

ಅದನ್ನು ಪ್ರಶ್ನಿಸಿರುವ ಅರ್ಜಿದಾರರು, ಬಿಬಿಎಂಪಿ ಪಾವತಿಸಲು ಸೂಚಿಸಿರುವ ಮೊತ್ತದಲ್ಲಿ ಅಭಿವೃದ್ಧಿ ಶುಲ್ಕ, ನೆಲ ಬಾಡಿಗೆ, ಪರಿಶೀಲನಾ ಶುಲ್ಕ, ನೀರು ಪೂರೈಕೆ ಸೆಸ್‌, ಎಂಆರ್‌ಟಿಎಸ್‌, ವರ್ತುಲ ರಸ್ತೆ, ಕೊಳಚೆ ಅಭಿವೃದ್ಧಿ ಸೇರಿ ಇನ್ನಿತರ ತೆರಿಗೆ (ಶುಲ್ಕ ) ಒಳಗೊಂಡಿದೆ. ಆದರೆ, ಕರ್ನಾಟಕ ಪಟ್ಟಣ ಮತ್ತು ನಗರ ಯೋಜನಾ ಕಾಯ್ದೆ (ಕೆಟಿಸಿಪಿ) ಮತ್ತು ಕರ್ನಾಟಕ ಮುನ್ಸಿಪಲ್‌ ಕಾರ್ಪೋರೇಷನ್‌ (ಕೆಎಂಸಿ) ಕಾಯ್ದೆಯಡಿ ತಿದ್ದುಪಡಿ ತಂದು ದೊಡ್ಡ ಮೊತ್ತದ ತೆರಿಗೆ ವಿಧಿಸಲಾಗಿದೆ. ಆದರೆ, ಈ ರೀತಿಯ ತೆರಿಗೆ ವಿಧಿಸುವುದು ಅಸಾಂವಿಧಾನಿಕ ಎಂದು ಹೈಕೋರ್ಟ್‌ ಈ ಹಿಂದೆಯೇ ಆದೇಶಿಸಿದೆ ಎಂದು ಆಕ್ಷೇಪಿಸಿದ್ದಾರೆ.

ನಕ್ಷೆ ಮಂಜೂರಾತಿ ಮಾಡಲು ನೆಲಬಾಡಿಗೆ ಶುಲ್ಕ ಸೇರಿ ವಿವಿಧ ರೀತಿಯ ತೆರಿಗೆ ಪಾವತಿಸಲು ಕೆಟಿಸಿಪಿ ಕಾಯ್ದೆ ಸೆಕ್ಷನ್‌ 18-ಎ, ಕರ್ನಾಟಕ ಯೋಜನಾ ಪ್ರಾಧಿಕಾರ ಅಧಿನಿಯಮಗಳ ನಿಯಮ 37-ಸಿ, ಕರ್ನಾಟಕ ಮುನ್ಸಿಪಲ್‌ ಕಾಪೋರೇಷನ್‌ ಮತ್ತು ಇತರೆ ಕೆಲ ಕಾನೂನುಗಳು (ತಿದ್ದುಪಡಿ) ಕಾಯ್ದೆ-2021ರರ ಅಧಿನಿಯಮಗಳ ಅಡಿಯಲ್ಲಿ ಅನಧಿಕೃತವಾಗಿ ತೆರಿಗೆಗಳನ್ನು ವಿಧಿಸಲಾಗುತ್ತಿದೆ. ಆದ್ದರಿಂದ ತಮಗೆ ನೀಡಿರುವ ಡಿಮ್ಯಾಂಡ್‌ ನೋಟಿಸ್‌ ರದ್ದುಪಡಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.