ಸಾರಾಂಶ
ಜಮಖಂಡಿ: ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಒ.ಪಿ.ಎಸ್. ಹಳೇ ನಿಶ್ಚಿತ ಪಿಂಚಣಿ ಯೋಜನೆ ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಆಗ್ರಹಿಸಿದೆ.
ಕನ್ನಡಪ್ರಭ ವಾರ್ತೆ ಜಮಖಂಡಿ
ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರಿಗೆ ಎನ್.ಪಿ.ಎಸ್ ರದ್ದುಗೊಳಿಸಿ ಒ.ಪಿ.ಎಸ್. ಹಳೇ ನಿಶ್ಚಿತ ಪಿಂಚಣಿ ಯೋಜನೆ ಕೂಡಲೇ ಜಾರಿಗೊಳಿಸಬೇಕೆಂದು ಕರ್ನಾಟಕ ರಾಜ್ಯ ಅನುದಾನಿತ ಶಾಲಾ, ಕಾಲೇಜುಗಳ ಪಿಂಚಣಿ ವಂಚಿತ ನೌಕರರ ಸಂಘ ಆಗ್ರಹಿಸಿದೆ.ಸಂಘದ ಅಧ್ಯಕ್ಷ ಎಸ್.ಕೆ.ಕರಡಿ, ಉಪಾಧ್ಯಕ್ಷ ಬಿ.ಆರ್. ಖವಟಕೊಪ್ಪ ಸೇರಿ ಮುಖಂಡರ ನೇತೃತ್ವದಲ್ಲಿ ಪದಾಧಿಕಾರಿಗಳು ತಾಲೂಕು ಕಚೇರಿಗೆ ತೆರಳಿ ತಹಸೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಹಳೆಯ ಪಿಂಚಣಿ ವ್ಯವಸ್ಥೆ ಜಾರಿಗೆ ತರುವುದಾಗಿ ಸರ್ಕಾರ ಚುನಾವಣೆ ಪ್ರಣಾಳಿಕೆಯಲ್ಲಿ ಭರವಸೆ ನೀಡಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿದು ವರ್ಷ ಕಳೆದರೂ ಹಳೆಯ ಪಿಂಚಣಿ ಜಾರಿ ಬಗ್ಗೆ ಚಕಾರ ಎತ್ತುತ್ತಿಲ್ಲ. ವಿಳಂಬ ನೀತಿ ಅನುಸರಿಸುತ್ತಾ ಕಾಲ ಹರಣ ಮಾಡುತ್ತಿದೆ. ಸರ್ಕಾರದ ಈ ಧೋರಣೆಯಿಂದ ಬೇಸತ್ತಿರುವ ಅನುದಾನಿತ ಶಿಕ್ಷಣ ಸಂಸ್ಥೆಗಳ ನೌಕರರು ಈಗ ಮತ್ತೆ ಹೋರಾಟಕ್ಕಿಳಿಯುವಂತೆ ಮಾಡಿದೆ.ಶೀಘ್ರ ನೌಕರರ ನ್ಯಾಯಯುತ ಬೇಡಿಕೆ ಈಡೇರಿಸಿ ನುಡಿದಂತೆ ನಡೆದುಕೊಳ್ಳಬೇಕೆಂದು ಸಂಘದ ಅಧ್ಯಕ್ಷ ಕೆ.ಎಸ್.ಕರಡಿ, ಉಪಾಧ್ಯಕ್ಷ ಬಿ.ಆರ್. ಖವಟಕೊಪ್ಪ ಆಗ್ರಹಿಸಿದರು.ಜಮಖಂಡಿ ತಾಲೂಕಿನ ಪಿಂಚಣಿ ವಂಚಿತ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಎಸ್.ಕೆ. ಕರಡಿ,ಎಂ.ಎಚ್. ಪರ‍್ಸನಳ್ಳಿ, ಎಂ.ಎನ್. ಪತ್ತಾರ, ಡಿ.ಆರ್. ಖವಟಕೊಪ್ಪ, ಎನ್.ಎಸ್.ತುಪ್ಪದ, ಎನ್.ವಿ. ದೇಸಾಯಿ, ಕೆ.ಎಚ್.ಸಣಮನಿ, ಬಿ.ಎ. ನರಸಗೌಡರ, ಎಸ್.ವೈ. ಕಮತೆ ಇತರರು ಇದ್ದರು.: