ಸಾರಾಂಶ
ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಕನ್ನಡ ಕೃಷಿ ಪ್ರತಿಷ್ಠಾನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಬೆಂಗಳೂರು : ಬೆಳಗಾವಿಯಲ್ಲಿ ಕರ್ತವ್ಯ ನಿರತ ನಿರ್ವಾಹಕರ ಮೇಲಿನ ಹಲ್ಲೆಕೋರರ ವಿರುದ್ಧ ಗೂಂಡಾ ಕಾಯ್ದೆಯಡಿ ಕ್ರಮ ಕೈಗೊಳ್ಳಬೇಕು ಹಾಗೂ ಕಠಿಣ ಕಾಯ್ದೆ ಆಗಿರುವ ರಾಜ್ಯ ಸರ್ಕಾರ ಸಾರಿಗೆ ನೌಕರರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೊಳಿಸುವಂತೆ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನೌಕರರ ಕನ್ನಡ ಕೃಷಿ ಪ್ರತಿಷ್ಠಾನ ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ಅವರಿಗೆ ಮನವಿ ಸಲ್ಲಿಸಿದೆ.
ಟಿಕೆಟ್ ನೀಡುವ ವೇಳೆ ಮರಾಠಿ ಬರಲ್ಲ ಕನ್ನಡ ಮಾತಾಡಿ ಎಂದು ಹೇಳಿದ್ದಕ್ಕೆ ನಿರ್ವಾಹಕ ಮತ್ತು ಚಾಲಕನ ಮೇಲೆ ಇಚ್ಛೆ ಹಲ್ಲೆ ಮಾಡಿರುವುದು ಖಂಡನೀಯ. ಕರ್ನಾಟಕದ ಅಧಿಕೃತ ಭಾಷೆ ಕನ್ನಡ. ಹಲ್ಲೆಕೋರ ಕಿಡಿಗೇಡಿಗಳ ವಿರುದ್ಧ ಗೂಂಡಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಪುಂಡರನ್ನು ಬಂಧಿಸಿ ಜೈಲಿಗೆ ಕಳುಹಿಸಬೇಕು. ನಿರ್ವಾಹಕನ ವಿರುದ್ಧ ದಾಖಲಿಸಿರುವ ಸುಳ್ಳು ಪೋಕ್ಸೋ ಪ್ರಕರಣವನ್ನು ಕೈಬಿಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದೆ.
ಜೊತೆಗೆ ಇತ್ತೀಚಿನ ದಿನಗಳಲ್ಲಿ ಸಾರಿಗೆ ನೌಕರರು, ಚಾಲಕರ ಮೇಲಿನ ಹಲ್ಲೆ ಪ್ರಕರಣಗಳು ಹೆಚ್ಚುತ್ತಿದ್ದು, ಕೂಡಲೇ ರಾಜ್ಯ ಸರ್ಕಾರ ‘ಸಾರಿಗೆ ನೌಕರರ ಸಂರಕ್ಷಣಾ ಕಾಯ್ದೆ’ ಜಾರಿಗೆ ತಂದು ನೌಕರರನ್ನು ರಕ್ಷಿಸಬೇಕು ಎಂದು ಆಗ್ರಹಿಸಿದೆ. ಈ ವೇಳೆ ಸಂಘಟನೆಯ ಸದಸ್ಯರು ಇದ್ದರು.