ದುಡಿವ ಮಹಿಳೆಗೆ ಕನಿಷ್ಠ ವೇತನ, ರಕ್ಷಣೆಗೆ ಆಗ್ರಹ

| Published : Sep 22 2024, 01:53 AM IST / Updated: Sep 22 2024, 01:54 AM IST

ದುಡಿವ ಮಹಿಳೆಗೆ ಕನಿಷ್ಠ ವೇತನ, ರಕ್ಷಣೆಗೆ ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಹಾಸನ: ದುಡಿಯವ ಮಹಿಳೆಯರಿಗೆ ಕನಿಷ್ಠ ವೇತನ ಜಾರಿಗಾಗಿ, ಕೆಲಸದ ಸ್ಥಳಗಳಲ್ಲಿ ಸೂಕ್ತ ರಕ್ಷಣೆಗಾಗಿ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಮನವಿ ಸಲ್ಲಿಸಲಾಯಿತು.

ಹಾಸನ: ದುಡಿಯವ ಮಹಿಳೆಯರಿಗೆ ಕನಿಷ್ಠ ವೇತನ ಜಾರಿಗಾಗಿ, ಕೆಲಸದ ಸ್ಥಳಗಳಲ್ಲಿ ಸೂಕ್ತ ರಕ್ಷಣೆಗಾಗಿ ಜಸ್ಟಿಸ್ ವರ್ಮಾ ಸಮಿತಿಯ ಶಿಫಾರಸುಗಳನ್ನು ಜಾರಿ ಮಾಡುವಂತೆ ಒತ್ತಾಯಿಸಿ ಶನಿವಾರ ಸಿಐಟಿಯು ನೇತೃತ್ವದಲ್ಲಿ ಶನಿವಾರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆಯನ್ನು ನಡೆಸಿ ಮನವಿ ಸಲ್ಲಿಸಲಾಯಿತು. ಸಿಐಟಿಯು ಜಿಲ್ಲಾ ಕಾರ್ಯದರ್ಶಿ ಮತ್ತು ದುಡಿಯುವ ಮಹಿಳೆಯರ ಸಮನ್ವಯ ಸಮಿತಿಯ ಸೌಮ್ಯ ಮಾತನಾಡಿ, ಭಾರತದಲ್ಲಿ ಕಾರ್ಮಿಕ ಪುರುಷರು ಮತ್ತು ಮಹಿಳೆಯರು ಮಕ್ಕಳ ಮತ್ತು ಮಹಿಳೆಯರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ, ಕ್ರೂರಹಿಂಸೆ ಮತ್ತು ಸಮಾಜದಲ್ಲಿ ಹಾಗೂ ಕೆಲಸದ ಸ್ಥಳದಲ್ಲಿ ಮಹಿಳೆಯರ ವಿರುದ್ಧ ನಡೆಯುತ್ತಿರುವ ನಿರಂತರ ತಾರತಮ್ಯದಿಂದ ಜನ ಭಯಭೀತರಾಗಿದ್ದಾರೆ. ಸಿಐಟಿಯು ಬ್ಯಾನರ್‌ ಅಡಿಯಲ್ಲಿ, ನಾವು ಮಹಿಳೆಯರ ವಿರುದ್ಧ ನಡೆಯುತ್ತಿರುವ ಎಲ್ಲಾ ರೀತಿಯ ತಾರತಮ್ಯ ಮತ್ತು ಹಿಂಸೆಯನ್ನು ತಕ್ಷಣವೇ ನಿಲ್ಲಿಸುವಂತೆ ಮತ್ತು ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಸುರಕ್ಷತೆ ಒದಗಿಸುವಂತೆ ಒತ್ತಾಯಿಸುತ್ತೇವೆ. ಕೋಲ್ಕತಾದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೈದ್ಯೆಯ ಮೇಲೆ ನಡೆದ ಘೋರ ಅತ್ಯಾಚಾರ ಮತ್ತು ಹತ್ಯೆ, ಮಹಾರಾಷ್ಟ್ರದ ಬದ್ಲಾಪುರ, ಠಾಣೆಯಲ್ಲಿ ನಾಲ್ಕು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ, ಯುಪಿಯಲ್ಲಿ ನರ್ಸ್‌ ಮೇಲೆ ನಡೆದ ಅತ್ಯಾಚಾರ ಮತ್ತು ಹತ್ಯೆ, ಹದಿಹರೆಯದವರ ಮೇಲೆ ನಡೆದ ಸಾಮೂಹಿಕ ಅತ್ಯಾಚಾರ, ಅಸ್ಸಾಂನಲ್ಲಿ ಬಾಲಕಿಯ ಮೇಲೆ ಮತ್ತು ಉತ್ತರಾಖಂಡ್‌ನ ಡೆಹ್ರಾಡೂನ್‌ನಲ್ಲಿ ಬಸ್‌ನಲ್ಲಿ ಮತ್ತೊಬ್ಬ ಬಾಲಕಿಯ ಮೇಲೆ ನಡೆದ ಅತ್ಯಾಚಾರಗಳು, ಈ ಕೆಲವೇ ದಿನಗಳಲ್ಲಿ ದೇಶದ ಮಹಿಳೆಯರಲ್ಲಿ ಭಯಾನಕತೆಯನ್ನು ಹುಟ್ಟು ಹಾಕಿವೆ. ಈ ಘಟನೆಗಳು ನಮ್ಮದೇಶದಲ್ಲಿ, ವಿಶೇಷವಾಗಿ ಕೆಲಸದ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿ, ನಮ್ಮ ದೇಶದ ಕಾನೂನು ಮತ್ತು ಆಡಳಿತ ವ್ಯವಸ್ಥೆಯಲ್ಲಿನ ಲೋಪಗಳನ್ನು ಬಯಲು ಮಾಡಿವೆ ಎಂದರು.

ಹತ್ರಾಸ್, ಕಥುವಾ, ಉನ್ನಾವೋ ಮುಂತಾದ ಸ್ಥಳಗಳಲ್ಲಿ ನಡೆದ ಅತ್ಯಾಚಾರದ ಘೋರ ಘಟನೆಗಳು ಮತ್ತು ಈ ಪ್ರಕರಣಗಳಲ್ಲಿ ರಾಜ್ಯ ಸರ್ಕಾರಗಳು ಮತ್ತು ಆಡಳಿತ ಪಕ್ಷಗಳಿಂದ ಆರೋಪಿಗಳಿಗೆ ನೀಡಲಾದ ಬೆಂಬಲವು ಮಹಿಳೆಯರ ವಿರುದ್ಧ ಆಳವಾಗಿ ಬೇರೂರಿರುವ ಸಾಂಸ್ಥಿಕ ಪಕ್ಷಪಾತವನ್ನು ಮತ್ತು ಮೇಲ್ಜಾತಿಯ ಶ್ರೀಮಂತರಿಂದ ಬಂದ ಅಪರಾಧಿಗಳಿಗೆ ನೀಡಲಾಗುವ ರಕ್ಷಣೆಯನ್ನು ಬಯಲು ಮಾಡಿದೆ. ಇಂದಿಗೂ ಸರ್ವಕಾಲಿಕ ಅಪರಾಧಿಗಳಾಗಿರುವ ಸ್ವಯಂಘೋಷಿತ ದೇವಮಾನವರು ಆಡಳಿತ ಪಕ್ಷದಿಂದ ಆಶ್ರಯ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ ಎಂದು ಆತಂಕ ವ್ಯಕ್ತಪಡಿಸಿದರು.

ಕೆಲಸದ ಸ್ಥಳದಲ್ಲಿ ಮಹಿಳೆಯರು ಅಸಮಾನ ವೇತನ, ಕಡಿಮೆ ಅವಕಾಶಗಳು ಮತ್ತು ಲೈಂಗಿಕ ದೌರ್ಜನ್ಯ ಸೇರಿದಂತೆ ವಿವಿಧ ರೀತಿಯ ತಾರತಮ್ಯ ಮತ್ತು ಕಿರುಕುಳಗಳಿಗೆ ಒಳಗಾಗುತ್ತಿದ್ದಾರೆ. ಈ ಸಮಸ್ಯೆಗಳನ್ನು ಪರಿಹರಿಸಲು ಪ್ರಸ್ತುತ ಕಾನೂನು ಮತ್ತು ಆಡಳಿತ ವ್ಯವಸ್ಥೆಗಳು ಸಾಕಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ಆರೋಪಿಸಿದರು. ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಲ್ಪಟ್ಟಿರುವ ಕುಸ್ತಿಪಟುಗಳು ಲೈಂಗಿಕ ದೌರ್ಜನ್ಯದ ವಿರುದ್ಧ ಬೀದಿಗಿಳಿಯಲು ಒತ್ತಾಯಿಸಲಾಯಿತು, ಆದರೆ ಅವರು ಇನ್ನೂ ಅಪರಾಧಿಗಳಿಂದ ನ್ಯಾಯ ಮತ್ತು ರಕ್ಷಣೆಯನ್ನು ಪಡೆಯದಿರುವುದು ನಮ್ಮ ದೇಶಕ್ಕೆ ನಾಚಿಕೆಗೇಡಿನ ಸಂಗತಿಯಾಗಿದೆ ಎಂದರು.

ಮಣಿಪುರ ಸೇರಿದಂತೆ ಇಂತಹ ಪ್ರಕರಣಗಳಲ್ಲಿ ನಿಮ್ಮ ಮೌನವು ಅಪರಾಧಿಗಳನ್ನು ಪ್ರೋತ್ಸಾಹಿಸುತ್ತದೆ ಮತ್ತು ಮಹಿಳೆಯರ ಮೇಲಿನ ಸಾಮಾಜಿಕ ಪೂರ್ವಗ್ರಹಗಳು ಮತ್ತು ತಾರತಮ್ಯ ಮನೋಭಾವವನ್ನು ಬಲಪಡಿಸುತ್ತದೆ. ಕೇಂದ್ರ ಸರ್ಕಾರ ಮಹಿಳೆಯರ ಮೇಲಿನ ದೌರ್ಜನ್ಯದ ವಿರುದ್ಧ ಹೋರಾಟದಲ್ಲಿ ಮುಂಚೂಣಿಯಲ್ಲಿ ನಿಂತು, ಅಗತ್ಯವಾದ ಎಲ್ಲಾ ಕಾನೂನು ಮತ್ತು ಆಡಳಿತಾತ್ಮಕ ಕ್ರಮಗಳನ್ನು ತೆಗೆದುಕೊಳ್ಳುವಿರಿ ಎಂದು ನಾವು ನಂಬುತ್ತೇವೆ. ಲೈಂಗಿಕ ದೌರ್ಜನ್ಯದಲ್ಲಿ ಭಾಗಿಯಾದವರ ವಿರುದ್ಧ, ಅವರ ರಾಜಕೀಯ ಪ್ರಭಾವದ ಹೊರತಾಗಿಯೂ, ನೀವು ಬಲವಾದ ನಿಲುವನ್ನು ತೆಗೆದುಕೊಳ್ಳುವಿರಿ ಎಂಬ ವಿಶ್ವಾಸ ನಮಗಿದೆ ಎಂದು ಹೇಳಿದರು. ಪರಿಸ್ಥಿತಿಯ ಗಂಭೀರತೆಯನ್ನು ಪರಿಗಣಿಸಿ, ದುಡಿಯುವ ಮಹಿಳೆಯರ ಸಮನ್ವಯ ಸಮಿತಿ ಸಿಐಟಿಯು ಮಹಿಳೆಯರನ್ನು ಎಚ್ಚೆತ್ತುಕೊಳ್ಳಲು ಪ್ರಚಾರಾಂದೋಲನವನ್ನು ನಡೆಸಿ ಕೇಂದ್ರ ಸರ್ಕಾರವು ಆದಷ್ಟು ಬೇಗ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒತ್ತಾಯ ಮಾಡುತ್ತೇವೆ ಎಂದರು.

ಪ್ರತಿಭಟನೆಯ ನೇತೃತ್ವವನ್ನು ಸಿಐಟಿಯು ಜಿಲಾ ಪ್ರಧಾನ ಕಾರ್ಯ ಎಂಬಿ.ಪುಷ್ಪ, ಅಂಗನವಾಡಿ ನೌಕರರ ಸಂಘಟನೆಯ ಕೆ.ಪಿ. ವೀಣಾ, ಜಿಪಿ.ಶೈಲಾ, ಶಾರದ, ನಾಜೀಯಾ, ಬಿಸಿಯೂಟ ಸಂಘಟನೆಯ ಕಸ್ತೂರಿ, ಮೀನಾಕ್ಷಿ, ಸಂಜೀವಿನಿ ಸಂಘದ ಅಶ್ವತ್ಥ್‌, ಹಸೀನಾ ವಹಿಸಿದ್ದರು. ಸಿಐಟಿಯು ಕಾರ್ಯದರ್ಶಿ ಅರವಿಂದ್ ಇತರರು ಉಪಸ್ಥಿತರಿದ್ದರು.