ಸಾರಾಂಶ
ಲಕ್ಷ್ಮೇಶ್ವರ: ಗ್ರಾಮೀಣ ಪ್ರದೇಶದ ಜನರಿಗೆ ತಮ್ಮ ಊರಿನಲ್ಲಿ ವರ್ಷದಲ್ಲಿ 100 ದಿನ ಕೆಲಸ ನೀಡಿ ಕುಟುಂಬ ನಿರ್ವಹಣೆಗೆ ಅನುಕೂಲ ಮಾಡಿ ಕೊಡುವುದರ ಜತೆಗೆ ಫಲಾನುಭವಿಗಳ ಜೀವನಾದರಕ್ಕೆ ನೆರವಾಗುವ ವೈಯಕ್ತಿಕ ಕಾಮಗಾರಿಗಳಿಗೂ ಒತ್ತು ನೀಡಲಾಗುತ್ತಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ ಹೇಳಿದರು.
ಅವರು ಪಟ್ಟಣದ ತಾಪಂ ಕಚೇರಿಯ ಸಭಾಭವನದಲ್ಲಿ ನಡೆದ ಸಂಜೀವಿನಿ ಮಹಿಳಾ ಸಂಘದ ಸದಸ್ಯರ ಸಭೆಯಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ವೈಯಕ್ತಿಕ ಕಾಮಗಾರಿ ವಿತರಣಾ ಮೇಳ, ಸ್ವಚ್ಛತೆಯೆಡೆಗೆ ದಿಟ್ಟ ಹೆಜ್ಜೆ ಮತ್ತು ಉದ್ಯೋಗ ಖಾತ್ರಿ ನಡಿಗೆ ಸಬಲತೆಯಡೆಗೆ ಅಭಿಯಾನದ ಕುರಿತು ಮಾಹಿತಿ ನೀಡಿ, ಮಾತನಾಡಿದರು.ಉದ್ಯೋಗ ಖಾತ್ರಿಯ ಅನುಷ್ಠಾನ ಇಲಾಖೆಗಳಾದ ತೋಟಗಾರಿಕೆ, ಅರಣ್ಯ, ರೇಷ್ಮೆ ಮತ್ತು ಕೃಷಿ ಇಲಾಖೆಯ ಸಹಯೋಗದಲ್ಲಿ ನಿರಂತರ ಆದಾಯ ನೀಡುವ ಬೆಳೆ ಬೆಳೆಯಬಹುದಾಗಿದೆ. ಬಹುವಾರ್ಷಿಕ ಬೆಳೆಗಳಾದ ಶ್ರೀಗಂಧ, ಹಬ್ಬೆವು, ಹುಣಸೆ, ಮಾವು, ವೀಳೆದೆಲೆ, ಕರಿಬೇವು, ಡ್ರ್ಯಾಗನ್ ಫ್ರೊಟ್, ನುಗ್ಗೆ, ಪೇರಲ, ಸೀತಾಫಲ, ನೆಲ್ಲಿ, ಸೀಬೆ, ಹೂವಿನ ಬೆಳೆಗಳಾದ ಮಲ್ಲಿಗೆ, ಗುಲಾಬಿ, ಹಣ್ಣಿನ ಬೆಳೆಗಳಾದ ಬಾಳೆ, ಪಪ್ಪಾಯಿ, ನಿಂಬೆ ಸೇರಿ ಇತರೆ ಹಲವು ಬೆಳೆ ಬೆಳೆಯಲು ಆರ್ಥಿಕ ನೆರವು ನೀಡಲಾಗುತ್ತದೆ. ಅಲ್ಲದೆ ಕೋಳಿ, ಕುರಿ ಶೆಡ್‌ಗಳ ನಿರ್ಮಾಣಕ್ಕೂ ಸಹಾಯಧನ ನೀಡಲಾಗುತ್ತಿದೆ ಎಂದರು.
ಮಹಾತ್ಮಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಪ್ರತಿ ದಿನಕ್ಕೆ ₹349 ಕೂಲಿ ಇದೆ. ಮಹಿಳೆಯರು, ಪುರುಷರು ಎಂಬ ತಾರತಮ್ಯವಿಲ್ಲದೆ ಸಮಾನ ಕೆಲಸಕ್ಕೆ ಸಮಾನ ಕೂಲಿ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದ ಜನರು ಯೋಜನೆಯ ಲಾಭ ಪಡೆದುಕೊಳ್ಳಬೇಕು ಎಂದರು.ಸಂಜೀವಿನಿ ಯೋಜನೆಯ ತಾಲೂಕು ಕಾರ್ಯಕ್ರಮ ವ್ಯವಸ್ಥಾಪಕ ಮಾರುತಿ ಕೊಡ್ಲಿ ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆಯು ಬಡವರ ಕಲ್ಯಾಣಕ್ಕಾಗಿ ಇರುವ ಮಹತ್ವದ ಯೋಜನೆಯಾಗಿದೆ. ಗ್ರಾಮೀಣ ಭಾಗದವರು ಆರ್ಥಿಕವಾಗಿ ಮುಂದೆ ಬರಲು ಪೂರಕವಾಗಿದೆ ಎಂದರು.
ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ ಮಾತನಾಡಿದರು. ತಾಪಂ ಅಧಿಕಾರಿ ಬಿ.ಬಿ. ತಳವಾರ, ಮಧುಮತಿ, ಸೋಮಶೇಖರ ತಳವಾರ, ಗಣೇಶ ಸುಲಾಖೆ ಇತರರಿದ್ದರು.