ಅಲಂಕಾರಿಕ ಮೀನುಗಳಿಗೆ ಬೇಡಿಕೆ ಹೆಚ್ಚು: ಡೀನ್ ಡಾ.ಮಂಜಪ್ಪ.ಕೆ

| Published : Feb 08 2024, 01:32 AM IST

ಅಲಂಕಾರಿಕ ಮೀನುಗಳಿಗೆ ಬೇಡಿಕೆ ಹೆಚ್ಚು: ಡೀನ್ ಡಾ.ಮಂಜಪ್ಪ.ಕೆ
Share this Article
  • FB
  • TW
  • Linkdin
  • Email

ಸಾರಾಂಶ

ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ 3 ದಿನದ ಮೀನುಕೃಷಿ, ಸಿಹಿನೀರು ಅಲಂಕಾರಿಕ ಮೀನು ಉತ್ಪಾದನೆ ಮತ್ತು ಮಾರಾಟ ಕುರಿತ ತರಬೇತಿ ಕಾರ್ಯಕ್ರಮವನ್ನು ಡೀನ್ ಡಾ ಮಂಜಪ್ಪ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಹಿರಿಯೂರು

ಅಲಂಕಾರಿಕ ಮೀನು ಉತ್ಪಾದನೆಗೆ ರಾಜ್ಯದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆಯಿದೆ ಎಂದು ತೋಟಗಾರಿಕೆ ಮಹಾವಿದ್ಯಾಲಯದ ಡೀನ್ ಡಾ.ಮಂಜಪ್ಪ.ಕೆ ರವರು ಅಭಿಪ್ರಾಯಪಟ್ಟಿದ್ದಾರೆ.

ರಾಷ್ಟ್ರೀಯ ಮೀನುಗಾರಿಕೆ ಅಭಿವೃದ್ಧಿ ಮಂಡಳಿ, ಹೈದರಬಾದ್ ಪ್ರಾಯೋಜಕತ್ವದಲ್ಲಿ ತಾಲೂಕಿನ ಬಬ್ಬೂರು ಫಾರಂನ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಶತಮಾನೋತ್ಸವ ಭವನದಲ್ಲಿ 3 ದಿನದ ಮೀನುಕೃಷಿ, ಸಿಹಿನೀರು ಅಲಂಕಾರಿಕ ಮೀನು ಉತ್ಪಾದನೆ ಮತ್ತು ಮಾರಾಟ ಕುರಿತ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಇತ್ತೀಚಿನ ದಿನಗಳಲ್ಲಿ ಜನರಲ್ಲಿ ವಾಸ್ತು ಕಲ್ಪನೆ ಮೂಡಿ ಬರುತ್ತಿದ್ದು, ಇದರಲ್ಲಿ ಬಣ್ಣದ ಮೀನುಗಳು ಪ್ರಮುಖವಾಗಿದ್ದು ನಗರ ಪ್ರದೇಶ ಮತ್ತು ಪಟ್ಟಣದಲ್ಲಿ ಅಲಂಕಾರಿಕ ಮೀನುಗಳು ಮನೆಯ ಅಂದ ಚೆಂದ ಹೆಚ್ಚಿಸುವ ಮತ್ತು ಮನಸ್ಸಿಗೆ ಆನಂದ ತರುವ, ದಿನನಿತ್ಯದ ಒತ್ತಡಗಳಿಂದ ದೂರವಿಡುವಂತಹ ದೃಷ್ಟಿಯಲ್ಲಿ ಜನರಿಗೆ ಹತ್ತಿರವಾಗುತ್ತಿವೆ. ಮನೆಗಳಲ್ಲಿ ಅಕ್ವೇರಿಯಂ ಇಡುವುದರಿಂದ ಹೃದಯಬೇನೆ, ಮಾನಸಿಕ ಒತ್ತಡದಂತಹ ಕಾಯಿಲೆಗಳು ಕಡಿಮೆಯಾಗುವುದೆಂದು ವೈದ್ಯರು ಸಹ ಮನೆಯಲ್ಲಿ ಅಕ್ವೇರಿಯಂ ಇಡುವ ಹವ್ಯಾಸ ಶಿಫಾರಸು ಮಾಡುತ್ತಿದ್ದಾರೆ. ನಮ್ಮ ರಾಜ್ಯದಲ್ಲಿ ಅಲಂಕಾರಿಕ ಮೀನುಗಳಿಗೆ ತುಂಬಾ ಬೇಡಿಕೆಯಿದ್ದು ಸದ್ಯದ ಬೇಡಿಕೆ ನೆರೆರಾಜ್ಯಗಳಾದ ತಮಿಳುನಾಡು ಮತ್ತು ಪಶ್ಚಿಮಬಂಗಾಳ ರಾಜ್ಯಗಳಿಂದ ತಂದು ಪೂರೈಸಲಾಗುತ್ತಿದೆ. ಆದರೆ ನೆರೆರಾಜ್ಯದಿಂದ ತಂದಂತಹ ಮೀನುಗಳು ಇಲ್ಲಿನ ಹವಾಗುಣಕ್ಕೆ ಹೊಂದಿಕೊಳ್ಳದೆ ಬೇಗ ಸಾಯುತ್ತಿವೆ. ಆದುದರಿಂದ ಸ್ಥಳೀಯವಾಗಿ ಉತ್ಪಾದನೆ ಮಾಡಿದ ಮೀನುಗಳಿಗೆ ದಿನದಿನಕ್ಕೆ ಬೇಡಿಕೆ ಹೆಚ್ಚುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಲಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರದ ಸಹ ಸಂಶೋಧನಾ ನಿರ್ದೇಶಕ ಡಾ. ಸುರೇಶ್ ಏಕಬೋಟೆ ಮಾತನಾಡಿ, ಕೇವಲ ಶ್ರೀಮಂತರಿಗೆ ಸೀಮಿತವಾಗಿದ್ದ ಅಲಂಕಾರಿಕ ಮೀನುಗಳು ಇಂದು ಸರ್ವ ಜನಾಂಗದವರು ವಾಸ್ತು ಹಾಗೂ ಅಲಂಕಾರಕ್ಕಾಗಿ ಬಳಸುತ್ತಿದ್ದು, ಅಲಂಕಾರಿಕ ಮೀನುಗಳಿಗೆ ಬೇಡಿಕೆ ಹೆಚ್ಚಿಸಿದೆ. ರೈತರು 3 ದಿನದ ಈ ತರಬೇತಿ ಕಾರ್ಯಕ್ರಮದ ಮೂಲಕ ಪರಿಣಿತಿ ಹೊಂದಿ ಮೀನು ಕೃಷಿಯನ್ನು ಮನೆಯ ಹತ್ತಿರವಿರುವ ಅಂಗಳದಲ್ಲಿ ಅಥವಾ ಹಿತ್ತಲಿನಲ್ಲಿ ಸಿಮೆಂಟ್ ತೊಟ್ಟಿ ನಿರ್ಮಿಸಿಕೊಂಡು ಮಾಡಬಹುದಾಗಿದೆ. ಸುಮಾರು 400 ಲೀಟರ್ ಸಾಮರ್ಥ್ಯದ 10 ಸಿಮೆಂಟ್ ತೊಟ್ಟಿಗಳಿಗೆ ಪ್ರತಿ ತೊಟ್ಟಿಗೆ 100ರಂತೆ 1000 ಮೀನು ಮರಿ ಬಿತ್ತನೆ ಮಾಡಿದಾಗ ಶೇ.80ರಷ್ಟು ಅಂದರೆ 800 ಮೀನು ಬದುಕುಳಿಯುತ್ತವೆ. ಉತ್ತಮ ಪೋಷಣೆ ಹಾಗೂ ನೀರಿನ ಗುಣಮಟ್ಟ ಕಾಪಾಡಿದಲ್ಲಿ ಶೇ.90ರಷ್ಟು ಮೀನು ಬದುಕುಳಿಯುತ್ತವೆ. ಪ್ರತಿ ಮೀನನ್ನು 5 ರೂನಂತೆ ಮಾರಾಟ ಮಾಡಿದರೂ ಕನಿಷ್ಟ 4 ಸಾವಿರ ರು. ದೊರೆಯುತ್ತದೆ. ಇದರ ಉತ್ಪಾದನೆಗೆ ಬೇಕಾದ ಮೀನುಮರಿಗಳು, ಆಹಾರ, ಗೊಬ್ಬರದ ಖರ್ಚು ಸೇರಿ 810 ರು. ಗಳಾಗುತ್ತದೆ. ಅಲ್ಲಿಗೆ ನಿವ್ವಳವಾಗಿ 3,190 ರೂ ಲಾಭ ಪಡೆಯಬಹುದು. ಅಲ್ಲದೇ ವರ್ಷಕ್ಕೆ 4-5 ಬೆಳೆ ತೆಗೆಯಬಹುದು. ಇದರಿಂದ ರೈತರ ಆರ್ಥಿಕತೆ ಸುಧಾರಿಸುತ್ತದೆ ಎಂದರು.

ಈ ಸಂದರ್ಭದಲ್ಲಿ ಮೀನುಗಾರಿಕೆ ಇಲಾಖೆ ಉಪ ನಿರ್ದೇಶಕ ಕುಮಾರಸ್ವಾಮಿ , ಸಹ ಪ್ರಾಧ್ಯಾಪಕ ಡಾ. ಎ.ವಿ.ಸ್ವಾಮಿ, ಸಹ ಪ್ರಾಧ್ಯಾಪಕರು, ಒಳನಾಡು ಮೀನುಗಾರಿಕೆ ಸಹಾಯಕ ಪ್ರಾಧ್ಯಾಪಕಿ ಡಾ.ಶೃತಿಶ್ರೀ, ಡಾ. ಶಿಲ್ಪಾ ಪಿ. ಚೌಟಿ, ಡಾ.ಶಿವಲೀಲಾ ಎಸ್.ಕುಕನೂರ್ ಹಾಗೂ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಉಪಸ್ಥಿತರಿದ್ದರು.