ಸಾರಾಂಶ
ಜಿಲ್ಲೆಯ ಘೋಷಿತ ಏತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು । ಸರ್ಕಾರಕ್ಕೆ ಮನವಿ
ಕನ್ನಡಪ್ರಭ ವಾರ್ತೆ ಕೊಪ್ಪಳಮೇ ಸಾಹಿತ್ಯ ಬಳಗ, ಲಡಾಯಿ ಪ್ರಕಾಶನ ಗದಗ, ಕವಿ ಪ್ರಕಾಶನ ಕವಲಕ್ಕಿ, ಚಿತ್ತಾರ ಕಲಾ ಬಳಗ ಧಾರವಾಡ ಇವುಗಳ ಸಹಯೋಗದಲ್ಲಿ ನಡೆದ 10ನೇ ಮೇ ಸಾಹಿತ್ಯ ಮೇಳದಲ್ಲಿ ನಿರ್ಣಯಿಸಿದ ಬೇಡಿಕೆಗಳನ್ನು ತುರ್ತಾಗಿ ಅನುಷ್ಠಾನಗೊಳಿಸುವಂತೆ ಅಪರ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮೇಳದಲ್ಲಿ ಕೊಪ್ಪಳ ಜಿಲ್ಲೆಯಲ್ಲಿ ಅವಶ್ಯವಾಗಿರುವ ನಿರ್ಣಯ ಮಂಡಿಸಿದ್ದು, ಈ ನಿರ್ಣಯಗಳ ಶೀಘ್ರ ಅನುಷ್ಠಾನಗೊಳ್ಳುವುದು ಅವಶ್ಯವಾಗಿದ್ದು, ಸರ್ಕಾರ ಅವುಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಪ್ರಗತಿಪರ ಮುಖಂಡರು ಒತ್ತಾಯಿಸಿದ್ದಾರೆ.ತುಂಗಭದ್ರಾ ಅಣೆಕಟ್ಟೆಯಲ್ಲಿ ತುಂಬಿರುವ 30 ಟಿಎಂಸಿಯಷ್ಟಿರುವ ಹೂಳು ತೆಗೆಯಬೇಕು, ನದಿಗೆ ಬಂದು ಸೇರುವ ವಿಷಕಾರಿ ತ್ಯಾಜ್ಯತಡೆಯಬೇಕು, ವಿಷಕಾರಿ ತ್ಯಾಜ್ಯಗಳನ್ನು ನದಿಗೆ ಹರಿಬಿಡುವವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಕೆಲಸವನ್ನು ಮಾಡದ ಸುಮ್ಮನೆ ಉಳಿಯುವ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು.
ಜಿಲ್ಲೆಯ ಘೋಷಿತ ಏತ ನೀರಾವರಿ ಯೋಜನೆಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು. ಹಿರೇಹಳ್ಳ ಅಣೆಕಟ್ಟೆಯ ಎತ್ತರವನ್ನು ಒಂದು ಮೀಟರ್ ಎತ್ತರಿಸಬೇಕು. ಈಗ ತುಂಬಿರುವ ಹೂಳು ತೆಗೆಯಬೇಕು. ಹಿರೇಹಳ್ಳ ಯೋಜನೆಯಲ್ಲಿ ಜಮೀನು ಮತ್ತು ಮನೆ ಕಳೆದುಕೊಂಡ ನಿರಾಶ್ರಿತರ ವ್ಯಾಜ್ಯಗಳು ಸುಮಾರು 40 ವರ್ಷಗಳಿಂದ ನ್ಯಾಯಲಯದಲ್ಲಿ ನನೆಗುದಿಗೆ ಬಿದ್ದಿರುವುದು ಸರ್ಕಾರಕ್ಕೆ ನಾಚಿಕೆ ತರುವ ಸಂಗತಿ. ಈ ವ್ಯಾಜ್ಯಗಳನ್ನು 6 ತಿಂಗಳು ಕಾಲಮಿತಿಯೊಳಗೆ ಇತ್ಯರ್ಥಗೊಳಿಸಿ ತಕ್ಷಣ ಪರಿಹಾರ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ.ಈ ಸಂದರ್ಭದಲ್ಲಿ ಬಸವರಾಜ ಸೂಳಿಬಾವಿ, ಅಲ್ಲಮಪ್ರಭು ಬೆಟ್ಟದೂರ, ಶರಣಪ್ಪ ಬಾಚಲಾಪೂರ, ಬಸವರಾಜ ಶೀಲವಂತರ, ಕೆ.ಬಿ. ಗೋನಾಳ, ಮಂಜುನಾಥ ಜಿ. ಗೊಂಡಬಾಳ, ಡಾ. ವಿ.ಬಿ. ರಡ್ಡೇರ, ಎಂ.ಕೆ. ಸಾಹೇಬ್, ಶರಣು ಶೆಟ್ಟರ್ ಇತರರು ಇದ್ದರು. ಮನವಿಯನ್ನು ಜಿಲ್ಲಾಧಿಕಾರಿಗಳ ಪರವಾಗಿ ಎಡಿಸಿ ಸಾವಿತ್ರಿ ಕಡಿ ಸ್ವೀಕರಿಸಿದರು.