ಸಾರಾಂಶ
ಮಂಗಳೂರು ಮಹಾನಗರ ಪಾಲಿಕೆ ಬಜೆಟ್ ಪೂರ್ವ ಸಾರ್ವಜನಿಕ ಸಮಾಲೋಚನಾ ಸಭೆ ಮಂಗಳವಾರ ನಡೆಯಿತು.
ಕನ್ನಡಪ್ರಭ ವಾರ್ತೆ ಮಂಗಳೂರು
ಮಂಗಳೂರು ಮಹಾನಗರ ಪಾಲಿಕೆಯ ಆದಾಯ ಹೆಚ್ಚಿಸುವ ನಿಟ್ಟಿನಲ್ಲಿ ಕಂದಾಯ ಸೋರಿಕೆ ಆಗುವುದನ್ನು ತಡೆಗಟ್ಟಬೇಕು, ಆಸ್ತಿ ಮತ್ತು ನೀರಿನ ಬಿಲ್ ಬಾಕಿ ವಸೂಲಿ ಮಾಡಬೇಕು ಎಂದು ಮಂಗಳವಾರ ನಡೆದ ಬಜೆಟ್ ಪೂರ್ವ ಸಾರ್ವಜನಿಕ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ ಸಾರ್ವಜನಿಕರು ಒತ್ತಾಯಿಸಿದ್ದಾರೆ.ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತ ಹನುಮಂತ ಕಾಮತ್ ಮತ್ತು ಜಿ.ಕೆ.ಭಟ್, ಕಳೆದ ಹಲವು ವರ್ಷಗಳಿಂದ ಬಜೆಟ್‌ನಲ್ಲಿ ಜನರ ಸಲಹೆಗಳನ್ನು ಸೇರಿಸಲಾಗಿಲ್ಲ ಎಂದು ಆರೋಪಿಸಿದರು.
ಆಸ್ತಿ ತೆರಿಗೆ ಪರಿಷ್ಕರಣೆ: ಹನುಮಂತ ಕಾಮತ್ ಮಾತನಾಡಿ, ಮೂರು ವರ್ಷಕ್ಕೊಮ್ಮೆ ಆಸ್ತಿ ತೆರಿಗೆ ಪರಿಷ್ಕರಣೆ ಮಾಡಲಾಗುತ್ತದೆ. ಆದರೆ ಕಳೆದ ಹಲವು ವರ್ಷಗಳಿಂದ ಕಟ್ಟಡ ಪರವಾನಗಿ ಶುಲ್ಕ ಪರಿಷ್ಕರಿಸಿಲ್ಲ. ಸ್ಲಂ ಡೆವಲಪ್‌ಮೆಂಟ್ ಸೆಸ್ ಅಡಿಯಲ್ಲಿ ವಸತಿ/ ವಾಣಿಜ್ಯ ಸೈಟ್‌ನಿಂದ ಪ್ರತಿ ಚದರ ಮೀಟರ್‌ಗೆ 20 ಪೈಸೆಯಿಂದ 40 ಪೈಸೆ ಮಾತ್ರ ಸಂಗ್ರಹಿಸಲಾಗುತ್ತಿದ್ದು, ಇದನ್ನು ಹೆಚ್ಚಿಸಬೇಕಾಗಿದೆ. ಕೆಎಂಸಿ ಕಾಯ್ದೆಯಂತೆ ನಗರದಲ್ಲಿ ನೋಂದಣಿ ಮತ್ತು ಬಾಡಿಗೆಗೆ ಪಡೆದಿರುವ ಎಲ್ಲ ವಾಹನಗಳಿಗೆ ಮೂಲಸೌಕರ್ಯ ಉಪಕರ ವಿಧಿಸಲು ಅವಕಾಶ ಕಲ್ಪಿಸಿದ್ದರೂ, ಇದುವರೆಗೆ ಅದನ್ನು ಬಳಸಿಕೊಂಡಿಲ್ಲ ಎಂದು ಹೇಳಿದರು.ಆದಾಯ ಸೋರಿಕೆ ಮೂಲಗಳು: ಮಂಗಳೂರು ಮಹಾನಗರ ಪಾಲಿಕೆಗೆ ಉಳ್ಳಾಲ, ಮೂಲ್ಕಿ, ಚೇಳ್ಯಾರು, ಬಾಳದಿಂದ ಕೋಟ್ಯಂತರ ರು. ನೀರಿನ ಬಿಲ್ ಪಾವತಿ ಬಾಕಿ ಇದೆ. ನಗರದ ಪ್ರಮುಖ ಭಾಗಗಳಲ್ಲಿ ಅಳವಡಿಸಲಾಗುವ ಹೋರ್ಡಿಂಗ್‌ಗಳಿಂದಲೂ ಆದಾಯ ಸೋರಿಕೆಯಾಗುತ್ತಿದೆ. ಮೊಬೈಲ್ ಕಂಪೆನಿಯವರು ರಸ್ತೆಗಳನ್ನು ಕತ್ತರಿಸಿ ಕೇಬಲ್ ಅಳವಡಿಸುವ ಸಂದರ್ಭ ಸೂಕ್ತ ಶುಲ್ಕ ಪಾವತಿಸುತ್ತಿಲ್ಲ. ಆದಾಯ ಸೋರಿಕೆ ತಡೆದರೆ ಜನಸಾಮಾನ್ಯರ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸುವ ಅಗತ್ಯವೇ ಇಲ್ಲ ಎಂದು ಹನುಮಂತ ಕಾಮತ್ ಅಭಿಪ್ರಾಯಪಟ್ಟರು.ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಬದಲಿಗೆ 10 ಸೆಂಟ್ಸ್‌ವರೆಗಿನ ಜಮೀನಿಗೆ ಏಕ ನಿವೇಶನ ಮಂಜೂರಾತಿಯನ್ನು ಪಾಲಿಕೆಯೇ ನೀಡುವ ವ್ಯವಸ್ಥೆ ಮಾಡಿದರೆ ಆದಾಯ ಗಳಿಸಲು ಸಹಕಾರಿಯಾಗಲಿದೆ ಎಂದು ಇನ್ನೋರ್ವ ಸಾಮಾಜಿಕ ಕಾರ್ಯಕರ್ತ ಜಿ.ಕೆ. ಭಟ್ ಹೇಳಿದರು.ಹಸಿರು ಹೆಚ್ಚಿಸಲು ಆಗ್ರಹ: ದೋಷಪೂರಿತ ಮೀಟರ್‌ಗಳನ್ನು ಸರಿಪಡಿಸಲು ನೀರಿನ ಮೀಟರ್ ಟೆಸ್ಟಿಂಗ್ ಲ್ಯಾಬ್ ಸ್ಥಾಪಿಸಲು ಪಾಲಿಕೆ ಹಣ ಮೀಸಲಿಡಬೇಕು ಎಂದು ಪದ್ಮನಾಭ್ ಉಳ್ಳಾಲ್ ಒತ್ತಾಯಿಸಿದರು. ಮಂಗಳೂರು ವಾರ್ಡ್ ಸಮಿತಿಯ ಸಂಚಾಲಕ ಕಿಶೋರ್ ಮಾತನಾಡಿ, ಪ್ರತಿ ವಾರ್ಡ್‌ನಲ್ಲಿ ಹಸಿರು ಹೊದಿಕೆ ಹೆಚ್ಚಿಸಬೇಕು ಮತ್ತು ಬೀದಿ ನಾಯಿಗಳು, ಪ್ರಾಣಿಗಳಿಗಾಗಿ ಹಣ ಮೀಸಲಿಡಬೇಕು ಎಂದು ಹೇಳಿದರು.ನಿರ್ಗತಿಕರಿಗೆ ನಿಧಿ ಮೀಸಲಿಡಿ: ವೈಟ್ ಡವ್ಸ್ ಸಂಸ್ಥೆಯ ಪ್ರತಿನಿಧಿ ಮಾತನಾಡಿ, ನಿರ್ಗತಿಕರ ಕಲ್ಯಾಣಕ್ಕಾಗಿ ನಿಧಿಯನ್ನು ಮೀಸಲಿಡಬೇಕು. ಅಲ್ಲದೆ, ನಿರ್ಗತಿಕರಿಗೆ ವಿವಿಧ ಸಂಸ್ಥೆಗಳು ಆಹಾರ ವಿತರಿಸಲು ಜಾಗ ಗುರುತಿಸಿಕೊಡುವಂತೆ ಒತ್ತಾಯಿಸಿದರು.ಮನೆ, ವಾಣಿಜ್ಯ ಸಂಸ್ಥೆಗಳಿಂದ ಬಾಕಿ ಉಳಿದಿರುವ ಆಸ್ತಿ ತೆರಿಗೆಯಿಂದ ಕನಿಷ್ಠ 26 ಕೋಟಿ ರು., ಖಾಲಿ ನಿವೇಶನಗಳಿಂದ 19 ಕೋಟಿ ರು., ಮೀಟರ್ ಇಲ್ಲದ ನೀರಿನ ಸಂಪರ್ಕದಿಂದ 60 ಲಕ್ಷ ರು., ದೋಷಪೂರಿತ ನೀರಿನ ಮೀಟರ್‌ಗಳಿಂದ 26 ಲಕ್ಷ ರು.ಗಳನ್ನು ಸಂಗ್ರಹಿಸಬಹುದು ಎಂದು ಎನ್.ಪಿ. ಶೆಣೈ ಹೇಳಿದರು. ಪರಿಸರ ಕಾರ್ಯಕರ್ತ ಜೀತ್ ಮಿಲನ್ ರೋಚ್ ಮಾತನಾಡಿ, ನಗರದಲ್ಲಿ ಹಸಿರು ಹೊದಿಕೆ ಹೆಚ್ಚಿಸಲು ಪಾಲಿಕೆಯಿಂದ ಹಸಿರು ಸೆಸ್ ಸಂಗ್ರಹಿಸಬೇಕು ಎಂದು ಮನವಿ ಮಾಡಿದರು.ಪಾಲಿಕೆ ಸದಸ್ಯರು ಮತ್ತು ಅಧಿಕಾರಿಗಳಿಗೆ ತರಬೇತಿ ನೀಡುವ ಮೂಲಕ ವಾರ್ಡ್ ಸಮಿತಿಗಳನ್ನು ಬಲಪಡಿಸಲು ಹಣ ಮೀಸಲಿಡಬೇಕು ಮತ್ತು ನಗರದಲ್ಲಿ ಸ್ವಚ್ಛತಾ ಅಭಿಯಾನಕ್ಕೆ ನಿಧಿ ಮೀಸಲಿಡಬೇಕು ಎಂದು ಜನಶಿಕ್ಷಣ ಟ್ರಸ್ಟ್ ನಿರ್ದೇಶಕ ಶೀನ ಶೆಟ್ಟಿ ಲಿಖಿತವಾಗಿ ಎಂಸಿಸಿಗೆ ಒತ್ತಾಯಿಸಿದ್ದಾರೆ.