ವಿವಿ ಪುರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಆಗ್ರಹ

| Published : Aug 22 2024, 12:55 AM IST

ಸಾರಾಂಶ

ತಾಲೂಕಿನ ವಿವಿಪುರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ವಿವಿಪುರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಕನ್ನಡಪ್ರಭ ವಾರ್ತೆ ಹಿರಿಯೂರು

ತಾಲೂಕಿನ ವಿವಿಪುರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ವಿವಿಪುರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.

ಪ್ರತಿಭಟನೆಯನ್ನು ಉದ್ದೇಶಿಸಿ ರೈತ ಸಂಘದ ತಾಲೂಕು ಅಧ್ಯಕ್ಷ ಕೆಟಿ ತಿಪ್ಪೇಸ್ವಾಮಿ ಮಾತನಾಡಿ ವಾಣಿ ವಿಲಾಸ ಜಲಾಶಯದ ಪಕ್ಕದಲ್ಲಿರುವ ಭರಮಗಿರಿ ಕೆರೆ, ಗೌನಹಳ್ಳಿ ಕೆರೆ, ಭೂತನ ಹಟ್ಟಿಕೆರೆ, ಬೀರೇನಹಳ್ಳಿ ಕೆರೆ, ಕೂನಿಕೆರೆ ಹಾಗೂ ತವಂದಿ ಕೆರೆಗಳಿಗೆ ನೀರು ತುಂಬಿಸಬೇಕು. ವಾಣಿ ವಿಲಾಸ ಜಲಾಶಯಕ್ಕೆ ಪ್ರತಿ ವರ್ಷ ಯಾವುದಾದರೂ ಮೂಲದಿಂದ 10 ಟಿಎಂಸಿ ನೀರು ಮೀಸಲಿಡಬೇಕು. ಕೇಂದ್ರ ಸರ್ಕಾರ ಘೋಷಣೆ ಮಾಡಿರುವ ₹5300 ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರ ಕೂಡಲೇ ಈ ಭಾಗದ ಕೆರೆಗಳಿಗೆ ವಾಣಿ ವಿಲಾಸ ಜಲಾಶಯದಿಂದ ನೀರು ತುಂಬಿಸುವ ಕೆಲಸ ಮಾಡಬೇಕು. ಈ ಭಾಗದ ಬೋರ್ ವೆಲ್ ಗಳಲ್ಲಿ ನೀರಿಲ್ಲದೆ ಕುಡಿಯುವ ನೀರನ್ನು ಟ್ಯಾಂಕರ್ ಗಳ ಮೂಲಕ ಗ್ರಾಮ ಪಂಚಾಯ್ತಿಯವರು ಸರಬರಾಜು ಮಾಡುತ್ತಿದ್ದಾರೆ. ಹೀಗಾದರೆ ಮುಂದಿನ ದಿನಗಳಲ್ಲಿ ನಾವು ಕಟ್ಟಿಕೊಂಡ ಅಡಿಕೆ, ತೆಂಗು, ಬಾಳೆ ಮುಂತಾದ ತೋಟಗಾರಿಕಾ ಬೆಳೆಗಳು ಒಣಗಿ ಹೋಗಿ ಸಾವಿರಾರು ರೈತರ ಬದುಕು ಬೀದಿಗೆ ಬೀಳುತ್ತದೆ. ಆದ್ದರಿಂದ ಕೂಡಲೇ ಈ ಭಾಗಕ್ಕೆ ನೀರು ಹರಿಸಬೇಕು. ಇನ್ನೊಂದು ವಾರದೊಳಗಾಗಿ ಯಾವುದೇ ಆದೇಶ ಬರದಿದ್ದರೆ ಹಿರಿಯೂರು ತಾಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸುವ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದರು.

ಕಾರ್ಯಾಧ್ಯಕ್ಷ ಸಿದ್ದವೀರಪ್ಪ ಮಾತನಾಡಿ, ಮೈಸೂರು ಮಹಾರಾಜರು ಈ ಭಾಗದ ರೈತರಿಗಾಗಿ ಕಟ್ಟಿಸಿರುವ ಜಲಾಶಯ ರೈತರಿಗೆ ಉಪಯುಕ್ತ ಆಗದೇ ಕೇವಲ ಕುಡಿಯುವ ನೀರಿಗಾಗಿ ಬಳಕೆಯಾಗುತ್ತಿದೆ. 30 ಟಿಎಂಸಿ ನೀರಿನ ಸಾಮರ್ಥ್ಯದ ಡ್ಯಾಮ್ ಇರುವುದರಿಂದ ಈ ಭಾಗದ ಪ್ರತಿಯೊಬ್ಬ ರೈತನ ಜಮೀನಿಗೂ ನೀರು ಹರಿಯಬೇಕು ಎಂದು ಆಗ್ರಹಿಸಿದರು.

ಚಳವಳಿ ಇದೀಗ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ಪ್ರತಿ ರೈತರ ಜಮೀನಿಗೂ ನೀರು ಹರಿವ ತನಕ ಈ ಹೋರಾಟ ಮುಂದುವರೆಯಲಿದೆ . ನೀರಾವರಿ ಅಧಿಕಾರಿಗಳು ಈ ಜಿಲ್ಲೆಯಲ್ಲಿ ನಡೆಯುತ್ತಿರುವ ಹನಿ ನೀರಾವರಿ ಪದ್ಧತಿಯನ್ನು ಕೂಡಲೇ ಕೈ ಬಿಡಬೇಕು. ಮಳೆಗಾಲದಲ್ಲಿ ಡ್ರಿಪ್ ಮೂಲಕ ನೀರು ಹರಿಸಿದರೆ ಯಾರಿಗೂ ಪ್ರಯೋಜನವಿಲ್ಲ. ಅದನ್ನು ನಿಲ್ಲಿಸಿ ನಮ್ಮ ಮಣ್ಣಿನ ಕೆರೆಗಳಿಗೆ ನೀರು ತುಂಬಿಸಲು ಮುಂದಾಗಬೇಕು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ರೈತ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ್, ಹೊಳಲ್ಕೆರೆ ಅಧ್ಯಕ್ಷ ರಂಗಣ್ಣ, ಹೊಸದುರ್ಗ ಅಧ್ಯಕ್ಷ ಚಿತ್ತಪ್ಪ,ರೈತ ಮುಖಂಡರಾದ ಸಿದ್ದರಾಮಣ್ಣ, ಅರಳಿಕೆರೆ ತಿಪ್ಪೇಸ್ವಾಮಿ, ಕೆಂಚಪ್ಪ, ಮಂಜಣ್ಣ ಬಳಗಟ್ಟೆ, ವೆಂಕಟೇಶ್, ಹನುಮಂತಪ್ಪ, ಎಲ್ಲಪ್ಪ, ಶಾಂತರಾಜ್, ಕರಿಯಪ್ಪ, ಭೂತಯ್ಯ, ಹನುಮಂತಪ್ಪ, ರಾಮಯ್ಯ, ಭೂತರಾಜ್, ಕಣ್ಮಯ್ಯ, ಗಿರೀಶ್ ರಾಮಣ್ಣ, ನಿಂಗಮ್ಮ, ಸರೋಜಮ್ಮ, ರತ್ನಮ್ಮ, ಶಂಕ್ರಪ್ಪ, ಪಾಂಡುರಂಗಪ್ಪ ಮುಂತಾದವರು ಹಾಜರಿದ್ದರು.