ಆದಿ ದ್ರಾವಿಡ ಪ್ರಮಾಣ ಪತ್ರ ನೀಡಲು ಆಗ್ರಹ

| Published : Jan 30 2024, 02:03 AM IST

ಸಾರಾಂಶ

ಕೊಡಗು ಸೇರಿದಂತೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿರುವ ಆದಿ ದ್ರಾವಿಡ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕೆಂದು ರಾಜ್ಯಾಧ್ಯಕ್ಷ ಎಚ್.ಎಂ.ಸೋಮಪ್ಪ ಒತ್ತಾಯಿಸಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿಜಿಲ್ಲಾದ್ಯಂತ ವಾಸಿಸುತ್ತಿರುವ ತುಳು ಭಾಷಿಕ ‘ಆದಿ ದ್ರಾವಿಡ’ ಜಾತಿ ಬಾಂಧವರಿಗೆ ೮ ವಿವಿಧ ರೀತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ಸಮಸ್ಯೆ ಎದುರಿಸುವಂತಾಗಿದೆ. ಆದುದರಿಂದ ಆದಿ ದ್ರಾವಿಡ ಎಂದು ಜಾತಿ ಪ್ರಮಾಣಪತ್ರ ನೀಡಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ರಾಜ್ಯ ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಎಚ್.ಎಂ.ಸೋಮಪ್ಪ ಒತ್ತಾಯಿಸಿದ್ದಾರೆ.ನಗರದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಸೇರಿದಂತೆ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಲ್ಲಿರುವ ಆದಿ ದ್ರಾವಿಡ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕೆಂದು ಆಗ್ರಹಿಸಿದರು.ಕೊಡಗು ಜಿಲ್ಲೆಯಲ್ಲಿ ಸುಮಾರು ೨೫ ಸಾವಿರ ಮಂದಿ ಆದಿ ದ್ರಾವಿಡ ಜಾತಿ ಬಾಂಧವರು ಇದ್ದು, ಇವರಿಗೆ ೮ ವಿವಿಧ ರೀತಿಯ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತಪ್ಪಾಗಿ ಜಾತಿ ನಮೂದು ಮಾಡುತ್ತಿರುವುದರಿಂದ ಆದಿದ್ರಾವಿಡ ಜನಾಂಗದ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ವಿವಾಹ ಸಂಬಂಧಗಳಿಗೆ ತುಂಬಾ ತೊಂದರೆಯಾಗುತ್ತಿದೆ ಮತ್ತು ಆದಿದ್ರಾವಿಡ ಸಮುದಾಯ ಸೌಲಭ್ಯದಿಂದ ವಂಚಿತವಾಗುತ್ತಿದೆ. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಮೂಹಕ್ಕೆ ಸಮರ್ಪಕವಾಗಿ ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಬಂದು ನೆಲೆಸಿರುವ ಆದಿ ದ್ರಾವಿಡ ಸಮುದಾಯಕ್ಕೆ ತಪ್ಪಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಪರಿಶಿಷ್ಟ ಪಂಗಡ ಮತ್ತು ಜಾತಿಗೆ ಸೇರಿದ ಮಂದಿ ನಿವೇಶನದ ಕೊರತೆಯನ್ನು ಎದುರಿಸುತ್ತಿದ್ದಾರೆ. ತೋಟ ಕಾರ್ಮಿಕರು, ಕಟ್ಟಡ ಕಾರ್ಮಿಕರು, ಮತ್ತಿತರ ಅರ್ಹರಿಗೆ ಹಂಚಬೇಕು. ೬ ಸಾವಿರ ಎಕರೆಯಷ್ಟಿರುವ ಸರ್ಕಾರಿ ಜಮೀನನ್ನು ಸರ್ಕಾರ ವಶಕ್ಕೆ ಪಡೆದುಕೊಂಡು ನಿವೇಶನ ರಹಿತರಿಗೆ ಹಂಚಿಕೆ ಮಾಡಬೇಕೆಂದು ಸೋಮಪ್ಪ ಆಗ್ರಹಿಸಿದರು.ಅಂಬೇಡ್ಕ‌ರ್ ಪ್ರತಿಮೆ ಸ್ಥಾಪನೆಗೆ ಒತ್ತಾಯ : ಭಾರತ ದೇಶ ಇಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಚಿಸಿದ ಸಂವಿಧಾನದಡಿಯಲ್ಲಿ ಮುನ್ನಡೆಯುತ್ತಿದೆ. ಅಂಬೇಡ್ಕ‌ರ್ ಅವರ ಗೌರವಾರ್ಥವಾಗಿ ಬಹುತೇಕ ಎಲ್ಲಾ ಜಿಲ್ಲೆಗಳಲ್ಲಿ ಅಂಬೇಡ್ಕರ್ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಇಷ್ಟು ವರ್ಷಗಳಾದರೂ ಅಂಬೇಡ್ಕರ್ ಪ್ರತಿಮೆ ನಿರ್ಮಿಸಿಲ್ಲ, ಹೀಗಾಗಿ ಡಾ.ಅಂಬೇಡ್ಕ‌ರ್ ಅವರ ಪ್ರತಿಮೆಯನ್ನು ಶೀಘ್ರ ಸ್ಥಾಪಿಸಲು ಕೊಡಗು ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು