ಸಾರಾಂಶ
ಕನ್ನಡಪ್ರಭ ವಾರ್ತೆ ಚಿತ್ತಾಪುರ
ಕಳೆದ ಒಂದು ತಿಂಗಳಿಂದ ಕುಡಿಯುವ ನೀರು ಸರಿಯಾಗಿ ಪೂರೈಕೆಯಾಗದಿರುವ ಕಾರಣ ಬೇಸಿಗೆಯಲ್ಲಿ ನೀರಿಗಾಗಿ ಪರದಾಡುವಂತಾಗಿದೆ, ಈ ಕುರಿತಾಗಿ ಸ್ಥಳಿಯ ಗ್ರಾಪಂಗೆ ಮೌಖಿಕ ಹಾಗೂ ಲಿಖಿತವಾಗಿ ದೂರು ಸಲ್ಲಿಸಿದ್ದರೂ ಜನಪ್ರತಿನಿಧಿಗಳು ಹಾಗೂ ಗ್ರಾಪಂ ಮತ್ತು ತಾಲೂಕು ಪಂಚಾಯಿತಿ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ಎಸ್‌ಯುಸಿಐ(ಸಿ) ವಾಡಿ ಸ್ಥಳಿಯ ಕಾರ್ಯದರ್ಶಿ ಅರ್.ಕೆ ವೀರಬದ್ರಪ್ಪ ಆರೋಪಿಸಿದರು.ಗ್ರಾಮದಲ್ಲಿ ದಿನಗಳು ಕಳೆದಂತೆ ಸಮಸ್ಯೆಗಳು ಹೆಚ್ಚಾಗುತ್ತಿವೆ. ಈಗ ಸುಡು ಬಿಸಿಲಿನಲ್ಲಿ ಕೊಡ ನೀರಿಗಾಗಿ ಕೂಲಿ ಬಿಟ್ಟು ಮಕ್ಕಳು ಶಾಲೆ ಬಿಟ್ಟು ಪ್ರಾಣಕ್ಕೆ ಸಂಚಕಾರ ತರುವಂತಹ ತೆರೆದ ಬಾವಿಯ ನೀರಿಗಾಗಿ ದಿನಲೂ ಕಷ್ಟಪಡುವಂತಾಗಿದೆ. ಗ್ರಾಮದಲ್ಲಿರುವ ಬೋರ್‌ವೆಲ್ ಹಾಗೂ ತೆರೆದ ಬಾವಿಯ ನೀರು ಕುಡಿಯಲು ಯೋಗ್ಯವಲ್ಲ ಎಂದು ಬಹು ದಿನಗಳ ಹಿಂದೆಯೇ ನೀರು ಪರೀಕ್ಷೆ ಮಾಡಿದ ತಜ್ಞರು ವರದಿ ನೀಡಿದ್ದಾರೆ. ಇದೇ ಕಲುಷಿತ ನೀರು ಕುಡಿದು ಹಲವು ಬಾರಿ ಗ್ರಾಮದ ಜನರು ಅಸ್ವಸ್ಥರಾಗಿ ಆಸ್ಪತ್ರೆಗೆ ಸೇರಿರುವ ಉದಾಹರಣೆಗಳು ಇವೆ. ಇಷ್ಟಾದರೂ ಗ್ರಾಮ ಪಂಚಾಯಿತಿ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಒಂದು ನೀರು ಶುದ್ಧೀಕರಣ ಘಟಕವನ್ನು ಪ್ರಾರಂಭಿಸುವ ಕೆಲಸ ಮಾಡುತ್ತಿಲ್ಲ, ಇದು ಗ್ರಾಪಂ ಆಡಳಿತಕ್ಕೆ ಕೈಗನ್ನಡಿಯಾಗಿದೆ.
ಕ್ಷೇತ್ರದ ಶಾಸಕರೇ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದಾರೆ. ಅವರು ಜಿಲ್ಲೆಯಲ್ಲಿ ಎಲ್ಲಿಯೂ ಕೂಡಾ ಕುಡಿಯುವ ನೀರಿನ ತೊಂದರೆ ಆಗದಂತೆ ಆದೇಶ ನೀಡಿದ್ದಾರೆ. ಅದರಂತೆ ಜಿಲ್ಲಾ ಆಡಳಿತವು ಕೂಡಾ ತಿಳಿಸಿದೆ. ಇಷ್ಟಾದರೂ ಕೂಡಾ ಸ್ಥಳಿಯ ಗ್ರಾಪಂ ಜನರ ಜೀವದೊಂದಿಗೆ ಆಟವಾಡುತ್ತಿದ್ದಾರೆ ಎಂದರು.ಕೂಡಲೇ ಗ್ರಾಮದ ಜನರಿಗೆ ಆಗುತ್ತಿರುವ ಕುಡಿಯುವ ನೀರಿನ ತೊಂದರೆಗೆ ಸ್ಪಂಧಿಸಲು ಒತ್ತಾಯಿಸುತ್ತೇವೆ. ಒಂದು ವೇಳೆ ಜನತೆಯ ತುರ್ತು ಅವಶ್ಯಕವಾಗಿರುವ ಬೇಡಿಕೆ ಈಡೇರದಿದ್ದಲ್ಲಿ ಮುಂದೆ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ಮನವಿ ಪತ್ರವನ್ನು ಕಲಬುರಗಿ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸಲ್ಲಿಸಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ವಾಡಿ ಸ್ಥಳೀಯ ಸಮಿತಿ ಸದಸ್ಯರಾದ ಗೌತಮ ಪರತೂರಕರ್, ಸಾಬು ಸ್ಮಣಗಾರ, ಭೀಮಾಶಂಕರ ನಾಲವಾರ, ಸಿದ್ದಾರ್ಥ ತಿಪ್ಪನೊರ ಇದ್ದರು.