ಸಾರಾಂಶ
ಹೊಸಪೇಟೆ: ವಿಜಯನಗರ ಜಿಲ್ಲೆಯಲ್ಲಿ ಈಗ ನೇಮಕಾತಿ ಪರ್ವ ಆರಂಭಗೊಂಡಿದ್ದು, ರಾಜ್ಯ ಸರ್ಕಾರ ಹಂಪಿ ವಿಶ್ವಪರಂಪರೆ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಶಾಸಕ ಎಚ್.ಆರ್. ಗವಿಯಪ್ಪ ಅವರನ್ನು ನೇಮಕ ಮಾಡಿದೆ. ಇದೇ ವೇಳೆ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಹನುಮನಹಳ್ಳಿ ನಿವಾಸಿ ಕುರಿ ಶಿವಮೂರ್ತಿ ಅವರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.ಶಾಸಕ ಗವಿಯಪ್ಪ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಸದಸ್ಯರು ಆಗಿದ್ದು, ಈಗ ಅವರಿಗೆ ಹಂಪಿ ವಿಶ್ವಪರಂಪರೆ ಪ್ರದೇಶ ಯೋಜನಾ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ಸರ್ಕಾರ ನೇಮಿಸಿದೆ. ಈ ಮೂಲಕ ಅವರಿಗೆ ಸರ್ಕಾರ ಸ್ಥಾನಮಾನ ನೀಡಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.ಶಿವಮೂರ್ತಿಗೆ ಒಲಿದ ಗ್ಯಾರಂಟಿ ಪ್ರಾಧಿಕಾರ:
ಹನುಮನಹಳ್ಳಿಯ ಕುರಿ ಶಿವಮೂರ್ತಿಗೆ ಸರ್ಕಾರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷರನ್ನಾಗಿ ನೇಮಿಸಿದೆ. ಗ್ಯಾರಂಟಿ ಯೋಜನೆಗಳನ್ನು ಜಿಲ್ಲಾಮಟ್ಟದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಸರ್ಕಾರ ಪ್ರಾಧಿಕಾರ ರಚಿಸಿದೆ. ಎಡಿಸಿ ಜಿ.ಅನುರಾಧ ಸದಸ್ಯ ಕಾರ್ಯದರ್ಶಿಯಾಗಿರಲಿದ್ದು, ಐವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಇನ್ನು ಈ ಸಮಿತಿಗೆ ಸದಸ್ಯರನ್ನು ಕೂಡ ನೇಮಿಸಲಾಗಿದೆ.ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಹುದ್ದೆ ಮೇಲೆ ಕಣ್ಣಿಟ್ಟಿದ್ದ ಶಿವಮೂರ್ತಿಗೆ ವಿಧಾನಸಭೆ ಚುನಾವಣೆ ವೇಳೆ ಈ ಹುದ್ದೆ ಕೈತಪ್ಪಿತ್ತು. ಮಾಜಿ ಶಾಸಕ ಸಿರಾಜ್ ಶೇಕ್ ಜಿಲ್ಲಾಧ್ಯಕ್ಷರಾದರು. ಪಕ್ಷದ ಕಟ್ಟಾ ಕಾರ್ಯಕರ್ತರಾಗಿದ್ದ ಶಿವಮೂರ್ತಿ ಅವರನ್ನು ಗುರುತಿಸುವ ಹೊಣೆಗಾರಿಕೆ ರಾಜ್ಯ ನಾಯಕರ ಮೇಲಿತ್ತು. ಹಾಗಾಗಿ ಈಗ ಈ ಹುದ್ದೆ ಒಲಿದು ಬಂದಿದೆ.
ಸಮಾಜ ಸೇವೆಯಿಂದ:ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಹನುಮನಹಳ್ಳಿಯ ಕುರಿ ಶಿವಮೂರ್ತಿ ಸಮಾಜ ಸೇವೆಯಿಂದ ರಾಜಕೀಯದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದಾರೆ. ಸಾಮೂಹಿಕ ವಿವಾಹ, ಬಡ ರೋಗಿಗಳಿಗೆ ನೆರವು, ಕುಡಿವ ನೀರು, ಕ್ರೀಡಾ ಚಟುವಟಿಕೆಗೆ ಸಹಾಯ, ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೂ ನೆರವು ನೀಡಿದ್ದಾರೆ. ಬಡ ಮಕ್ಕಳಿಗೆ ಲ್ಯಾಪ್‌ಟ್ಯಾಪ್, ನೋಟ್‌ಬುಕ್ ವಿತರಿಸಿದ್ದಾರೆ. ದೇಗುಲಕ್ಕೂ ದೇಣಿಗೆ ನೀಡಿ ಹೆಸರಾಗಿದ್ದಾರೆ.
ಹೊಸಪೇಟೆ ಎಪಿಎಂಸಿ ಅಧ್ಯಕ್ಷ, ಉಪಾಧ್ಯಕ್ಷರಾಗಿಯೂ ಸೇವೆ ಸಲ್ಲಿಸಿರುವ ಕುರಿ ಶಿವಮೂರ್ತಿ ಕೆಪಿಸಿಸಿ ಸದಸ್ಯರು ಆಗಿದ್ದಾರೆ. ಇನ್ನು ಕೊಪ್ಪಳದ ಯಲಬುರ್ಗಾ ಬ್ಲಾಕ್ ಕಾಂಗ್ರೆಸ್‌ನ ವೀಕ್ಷಕ ಸಂಯೋಜಕರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ, ಅವಳಿ ಜಿಲ್ಲೆಗಳ ಸಚಿವರು, ಶಾಸಕರು ಮತ್ತು ಮಾಜಿ ಶಾಸಕರ ಸಹಕಾರದಿಂದ ಈ ಪಟ್ಟ ಒಲಿದಿದೆ. ಕಟ್ಟಾ ಕಾರ್ಯಕರ್ತರನ್ನು ಸರ್ಕಾರ ಖಂಡಿತ ಗುರುತಿಸುತ್ತದೆ ಎನ್ನುತ್ತಾರೆ ವಿಜಯನಗರ ಜಿಲ್ಲಾಮಟ್ಟದ ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕುರಿ ಶಿವಮೂರ್ತಿ.
ಹುಡಾ ಅಧ್ಯಕ್ಷ ಆದೇಶ ವಾಪಸ್!:ಹೊಸಪೇಟೆ: ಕಾಂಗ್ರೆಸ್‌ನ ಪ್ರಚಾರ ಸಮಿತಿ ಜಿಲ್ಲಾಧ್ಯಕ್ಷ ಎಚ್‌ಎನ್‌ಎಫ್ ಮೊಹಮ್ಮದ್ ಇಮಾಮ್ ನಿಯಾಜಿ ಅವರಿಗೆ ಹೊಸಪೇಟೆ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಅಧ್ಯಕ್ಷರನ್ನಾಗಿ ಸರ್ಕಾರ ಮಾ.14ರಂದು ನೇಮಿಸಿ ಆದೇಶಿಸಿತ್ತು. ಆದರೆ ಮಾ.15ರಂದು ಈ ಆದೇಶ ಹಿಂಪಡೆದಿದೆ.
ಈಗ ಈ ಬಗ್ಗೆ ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ನಡೆಯುತ್ತಿದ್ದು, ಶಾಸಕ ಎಚ್.ಆರ್. ಗವಿಯಪ್ಪ ವಿರೋಧದ ಹಿನ್ನೆಲೆಯಲ್ಲಿ ಈ ಆದೇಶ ಹಿಂಪಡೆಯಲಾಗಿದೆ ಎಂದು ಹೇಳಲಾಗುತ್ತಿದೆ. ಶಾಸಕರು ತಮ್ಮ ಬೆಂಬಲಿಗರೊಬ್ಬರಿಗೆ ಶಿಫಾರಸು ಪತ್ರ ನೀಡಿದ್ದು, ಅವರನ್ನು ನೇಮಿಸಬೇಕು ಎಂದು ಪಟ್ಟುಹಿಡಿದಿದ್ದಾರೆ ಎಂದು ಮೂಲಗಳು ತಿಳಿಸಿವೆ.