ಸಾರಾಂಶ
ಕಾರವಾರ: ದಾಂಡೇಲಿಯಿಂದ ಬೆಂಗಳೂರಿಗೆ ಪ್ರಯಾಣಿಕರ ರೈಲು ಪ್ರಾರಂಭಿಸಬೇಕೆಂದು ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಮನವಿ ಮಾಡಿದೆ.
ಈ ಕುರಿತು ಇಲ್ಲಿನ ರೈಲು ನಿಲ್ದಾಣದಲ್ಲಿ ಅಧಿಕಾರಿಗಳ ಮೂಲಕ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಬಳಿಕ ಮಾತನಾಡಿದ ಮುಖಂಡರು, ಜಿಲ್ಲೆಯಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಮೊದಲು ರೈಲು ಸಂಪರ್ಕ ಇತ್ತು. ಪ್ರಯಾಣಿಕರ ರೈಲನ್ನು ರಾಜಕೀಯ ಇಚ್ಛಾಶಕ್ತಿ ಕೊರತೆ ಮತ್ತು ಅಧಿಕಾರಿಗಳ ನಿರ್ಲಕ್ಷ್ಯದಿಂದ ರೈಲು ಸೇವೆ ಸ್ಥಗಿತಗೊಂಡಿತ್ತು.ಬಳಿಕ ರೈಲ್ವೆ ಸಚಿವರಾಗಿದ್ದ ಸುರೇಶ ಅಂಗಡಿ ಅವರು ದಾಂಡೇಲಿಯಿಂದ ಪ್ರಯಾಣಿಕ ರೈಲು ಪ್ರಾರಂಭಿಸಿದ್ದರು. ದೇಶದಲ್ಲಿ ಕೊರೋನಾ ವೇಳೆ ಎಲ್ಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಆದರೆ ದಾಂಡೇಲಿಯಲ್ಲಿ ರೈಲುಗಳ ಸಂಚಾರ ಇನ್ನೂ ಪ್ರಾರಂಭಿಸಿಲ್ಲ ಎಂದರು.ನಿತ್ಯ ದಾಂಡೇಲಿಯಿಂದ ನೂರಾರು ಪ್ರಯಾಣಿಕರು ಸರ್ಕಾರಿ ಹಾಗೂ ಖಾಸಗಿ ಬಸ್‌ಗಳು ಮೂಲಕ ಬೆಂಗಳೂರಿಗೆ ಪ್ರಯಾಣಿಸುತ್ತಾರೆ. ಅದೇ ರೀತಿ ದಾಂಡೇಲಿಯಿಂದ ನೇರವಾಗಿ ಬೆಂಗಳೂರಿಗೆ ನೇರವಾಗಿ ರೈಲು ಸಂಪರ್ಕ ವ್ಯವಸ್ಥೆ ಕಲ್ಪಿಸಿದರೆ ಪ್ರಯಾಣಿಕರಿಗೆ ಸಾಕಷ್ಟು ಅನುಕೂಲವಾಗುತ್ತದೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಈ ವೇಳೆ ದಾಂಡೇಲಿ ಸಮಗ್ರ ಅಭಿವೃದ್ಧಿ ಹೋರಾಟ ಸಮಿತಿ ಅಧ್ಯಕ್ಷ ಅಕ್ರಂಖಾನ್ ಉಪಾಧ್ಯಕ್ಷರಾದ ಅಶೋಕ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ರಾಘವೇಂದ್ರ ಗಡಪನವರ್, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರೋಷನ್ ಬಾವಾಜಿ, ಮಹಮ್ಮದ್ ಗೌಸ್ ಬೆಟಗೇರಿ, ಧನಂಜಯ ಕಲ್ಗುಟ್ಕರ, ಶಾಮ ಬೆಂಗಳೂರು, ಮುಜಿ ಬಾ. ಛಬ್ಬಿ, ಮಮ್ಮದ್ ಗೌಸ್ ಪಟೇಲ್, ಫಾರುಕ್ ಸಲೀಂ ಶೇಕ್, ಇನ್ನಾಯತ್ ಶೇಕ್, ಸಮೀರ ಶೇಕ್ ಇತರರು ಇದ್ದರು.ಗೊಂಡ ಸಮಾಜ ವಿರುದ್ಧದ ವ್ಯವಸ್ಥಿತ ಪಿತೂರಿಗೆ ಖಂಡನೆ
ಭಟ್ಕಳ: ಪರಿಶಿಷ್ಟ ಪಂಗಡದ ಬುಡಕಟ್ಟು ಜನಾಂಗವಾದ ಗೊಂಡರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ಸಿಗದಂತೆ ಕೆಲವರು ನಮ್ಮ ಜನಾಂಗದವರ ಮೇಲೆ ಮಾನಸಿಕ ಕಿರುಕುಳ, ದೌರ್ಜನ್ಯ ಮತ್ತು ವ್ಯವಸ್ಥಿತ ಪಿತೂರಿ ನಡೆಸುತ್ತಿದೆ ಎಂದು ಗೊಂಡ ಸಮಾಜದ ಅಭಿವೃದ್ಧಿ ಸಂಘದ ಅಧ್ಯಕ್ಷ ನಾರಾಯಣ ಗೊಂಡ ಆರೋಪಿಸಿದರು.ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಭಟ್ಕಳದಲ್ಲಿ 15 ಸಾವಿರದಷ್ಟು ಗೊಂಡ ಸಮುದಾಯದ ಜನರಿದ್ದಾರೆ. ಗೊಂಡರು ಗುಡ್ಡಗಾಡು ಪ್ರದೇಶದಲ್ಲಿ ವಾಸಿಸುತ್ತಿದ್ದು, ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ದುರ್ಬಲರಾಗಿದ್ದಾರೆ. ಗೊಂಡರು ಬುಡಕಟ್ಟಿನವರು ಎನ್ನುವ ಬಗ್ಗೆ ಅವರ ಆಚಾರ, ವಿಚಾರ, ಸಂಸ್ಕೃತಿಯ ಬಗ್ಗೆ ಪಿಎಚ್‌ಡಿ ಪ್ರಬಂಧ ಮುಂಡನೆಯಾಗಿದೆ ಎಂದರು.ಪ್ರಾದೇಶಿಕ ನಿರ್ಬಂಧ ಇದ್ದರೂ ಜಿಲ್ಲೆಯಲ್ಲಿ ಗೊಂಡರೆಲ್ಲರೂ ಪರಿಶಿಷ್ಟ ವರ್ಗದ ಗೊಂಡರು ಎಂದು ಸಂವಿಧಾನದಲ್ಲಿನ ಮೀಸಲು ಪ್ರಕಾರ ಪರಿಶಿಷ್ಟ ವರ್ಗದ ಪ್ರಮಾಣಪತ್ರ ನೀಡುವಂತೆ ಆದೇಶ ಆಗಿದೆ. ಗೊಂಡರಿಗೆ ಪರಿಶಿಷ್ಟ ಪಂಗಡದ ಜಾತಿ ಪ್ರಮಾಣಪತ್ರವನ್ನು ಕೇವಲ ಶಾಲಾ ದಾಖಲೆಗಳ ಲಭ್ಯತೆಯನ್ನು ಅವಲಂಬಿಸದೇ, ಅರ್ಜಿದಾರರ ಆಚಾರ- ವಿಚಾರ, ಸಾಂಪ್ರದಾಯಿಕ ಆಚರಣೆ, ಸಾಮಾಜಿಕ ವ್ಯವಸ್ಥೆ, ಹಬ್ಬ ಹರಿದಿನಗಳನ್ನು ಗಣನೆಗೆ ತೆಗೆದುಕೊಂಡು ನೀಡಬೇಕಿದೆ ಎಂದರು.ನ್ಯಾಯವಾದಿ ಮಂಜುನಾಥ ಗೊಂಡ ಮಾತನಾಡಿ, ಗೊಂಡ ಸಮಾಜದ ಪರಿಶಿಷ್ಟ ಪಂಗಡ ಜಾತಿ ಪ್ರಮಾಣಪತ್ರದ ವಿಚಾರಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ಯಾವುದೇ ಪ್ರಕರಣವಿಲ್ಲ. ಆದರೆ ಗೊಂಡರು ಸುಳ್ಳು ಜಾತಿ ಪ್ರಮಾಣಪತ್ರ ಪಡೆದಿದ್ದಾರೆ ಎಂದು ಸುಮಾರು 50ರಷ್ಟು ಕೇಸು ದಾಖಲಾಗಿತ್ತು. ಆದರೆ ನಮ್ಮ ಪರವಾಗಿ ಜಯ ಸಿಕ್ಕಿದೆ ಎಂದರು.ಸಮಾಜದ ಪ್ರಮುಖರಾದ ಸೋಮಯ್ಯ ಗೊಂಡ, ಬಡಿಯಾ ಗೊಂಡ, ವೆಂಕಟೇಶ ಗೊಂಡ, ಹೊನ್ನಯ್ಯ ಗೊಂಡ, ರಾಘವೇಂದ್ರ ಗೊಂಡ, ಸುಕ್ರ ಗೊಂಡ, ಮಾಸ್ತಿ ಗೊಂಡ, ಮೋಹನ ಗೊಂಡ, ನಾಗಪ್ಪ ಗೊಂಡ, ಮಾರುತಿ ಗೊಂಡ, ಜಯಂತ ಗೊಂಡ, ರಮೇಶ ಗೊಂಡ, ಜನಾರ್ದನ ಗೊಂಡ, ನಾಗಮ್ಮ ಗೊಂಡ ಮುಂತಾದವರಿದ್ದರು.