ಮನುಷ್ಯನ ಮೂಲಗುಣವೇ ಜಾನಪದ

| Published : Mar 27 2025, 01:02 AM IST

ಸಾರಾಂಶ

ಜಾನಪದ ಬಹುಮುಖಿ ನೆಲೆಗಳು ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುಸ್ತಕ ಬಿಡುಗಡೆಗೊಳಿಸಿ

ಕನ್ನಡಪ್ರಭ ವಾರ್ತೆ ಮೈಸೂರುಜನಪದ ವಿಶ್ವವ್ಯಾಪಿ ಮತ್ತು ಮಹಿಳೆಯರ ದನಿ. ನಮ್ಮೆಲ್ಲರ ಬೇರು. ಮನುಷ್ಯನ ಮೂಲಗುಣವೇ ಜಾನಪದ ಎಂದು ವಿದ್ವಾಂಸ ಪ್ರೊ. ಕೃಷ್ಣಮೂರ್ತಿ ಹನೂರು ಅಭಿಪ್ರಾಯಪಟ್ಟರು.ಮೈಸೂರು ವಿವಿ ಜಾನಪದ ವಿಭಾಗ, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮಹಾರಾಜ ಕಾಲೇಜು ಜಾನಪದ ವಿಭಾಗ, ಬೆಳಗಾವಿಯ ಶ್ರೀಮತಿ ಕುಸುಮಾವತಿ ಮಿರಜಿ ಕಲಾ, ವಾಣಿಜ್ಯ ಮಹಾವಿದ್ಯಾಲಯದ ಕನ್ನಡ ವಿಭಾಗ ಹಾಗೂ ಕರ್ನಾಟಕ ಜಾನಪದ ಸಂಶೋಧಕರ ಒಕ್ಕೂಟ ಸಹಯೋಗದಲ್ಲಿ ಬಿಎಂಶ್ರೀ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಜಾನಪದ ಬಹುಮುಖಿ ನೆಲೆಗಳು ಅಂತಾರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಪುಸ್ತಕ ಬಿಡುಗಡೆಗೊಳಿಸಿ ಮಾತನಾಡಿದರು.ಬಿಜಾಪುರದ ಹಲಸಂಗಿ ಗೆಳೆಯರು 1934ರಲ್ಲಿ ಸಂಗ್ರಹಿಸಿದ ಗರತಿಯರ ಹಾಡು ಪುಸ್ತಕ ಸತಿ ಪದ್ಧತಿಯನ್ನು ವಿರೋಧಿಸಿದ ಕಥನಗೀತೆ. ಅಮೆರಿಕದ ಬಾಸ್ಟನ್‌ ನ ದೊಡ್ಡ ಹೋಟೆಲ್‌ ನಲ್ಲಿ ತಮಟೆ ಬಾರಿಸುತ್ತ ಕಲಾವಿದರು ನೃತ್ಯ ನೋಡಿದೆ. ಹಾಗಾಗಿ ಜನಪದ ಇಡೀ ಜಗತ್ತಿನಲ್ಲಿದೆ ಎಂದರು.ಜನಪದ ನಮ್ಮ ಬೇರು. ಪ್ರಕೃತಿಗೆ ಹತ್ತಿರವಾದದ್ದು. ನಾಗರಿಕರಾಗಿ ದೂರು ದೂರ ಸಾಗುತ್ತ ಕಲುಷಿತರಾಗುತ್ತಿದ್ದೇವೆ. ಆದರೆ, ಜಾನಪದ ನಮ್ಮೆಲ್ಲರ ಅಂತರಂಗದಲ್ಲಿಯೇ ಇದೆ ಎಂದು ಅವರು ಹೇಳಿದರು. ಭಾರತದ ಮೊಟ್ಟ ಮೊದಲ ಜಾನಪದ ಅಧ್ಯಯನ ವಿಭಾಗ ಮೈಸೂರು ವಿವಿಯಲ್ಲಿ ಆರಂಭಗೊಂಡಿತು. ದೇಜಗೌ ಜಾನಪದ ವಸ್ತು ಸಂಗ್ರಹಾಲಯ ಸಂಗ್ರಹಿಸಿದರು. ಹಾ.ಮಾ. ನಾಯಕ, ಜಿ.ಶಂ. ಪರಮಶಿವಯ್ಯ, ಪಿ.ಕೆ. ರಾಜಶೇಖರ್, ಎಚ್.ಎಲ್. ನಾಗೇಗೌಡ ಅವರು ಈ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.ಮೈಸೂರು ವಿವಿ 22 ಗಂಟೆಯ ಮಂಟೇಸ್ವಾಮಿ ಕಾವ್ಯ ಸಂಗ್ರಹ ಮಾಡಿದೆ. ಅದನ್ನು ಬಿಡುಗಡೆ ಮಾಡಬೇಕು. ಸಿರಿಯಜ್ಜಿ 10 ಸಾವಿರ ತ್ರಿಪದಿ ಹಾಡುತ್ತಿದ್ದರು. ಜಾನಪದ ವಿಚಾರವೇ ಗೊತ್ತಿಲ್ಲದವರ ಕೊಡುಗೆ ಅಪಾರ. ಇದು ಭಾರತದ ಜನಪದದ ಶಕ್ತಿ ಎಂದು ಅವರು ಹೇಳಿದರು. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ. ಲೋಕನಾಥ್, ಧಾನ್ಯ ರಾಶಿಗೆ ಪೂಜೆ ಸಲ್ಲಿಸಿ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಜನಪದ ಎಂದರೆ ನಂಬಿಕೆ. ಶಿಸ್ತು, ಜ್ಞಾನ. ಸಮಾಜಕ್ಕೆ ಉತ್ತಮ ಜೀವನ ರೂಪಿಸುವುದೇ ಜನಪದ ಎಂದರು.ಕಾಂತಾರ ಸಿನಿಮಾ ಕರಾವಳಿಯ ಹಳ್ಳಿಯಲ್ಲಿ ನಡೆಯುವ ದೈವ ಪೂಜೆಯನ್ನು ಅತ್ಯುತ್ತಮವಾಗಿ ನಿರೂಪಿಸಿದರು. ಅದಕ್ಕೆ ಜಗತ್ತು ಮೆಚ್ಚಿತು. ಜನುಮದ ಜೋಡಿ ಸಿನಿಮಾ ಸಾಮಾನ್ಯ ಜೀವನದ ಕತೆ. ಹಳ್ಳಿಗಳಿಲ್ಲದೇ ದೇಶ ಇಲ್ಲ ಎಂದ ಅವರು, ಜಾನಪದ ವಸ್ತುಸಂಗ್ರಹಾಲಯ ನವೀಕರಣ ಕಾಮಗಾರಿ ಆರಂಭಗೊಂಡಿದೆ. ಮೈಸೂರು ವಿವಿಗೆ ಮಾದರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.ಪ್ರಸಾರಾಂಗದ ನಿರ್ದೇಶಕ ನಂಜಯ್ಯ ಹೊಂಗನೂರು ಸ್ವಾಗತಿಸಿ ಪ್ರಸ್ತಾವಿಕ ನುಡಿಗಳನ್ನಾಡಿ, ಭಾರತ ದೇಶದಲ್ಲಿ ಮೈಸೂರು ವಿವಿ ಜಾನಪದ ಅಧ್ಯಯನಕ್ಕೆ ತಳಹದಿ ಆಗಿದೆ. ವಿಶ್ವವಿದ್ಯಾನಿಲಯ ಇಲ್ಲಿಯ ಜಾನಪದ ಅಧ್ಯಯನದ ಸರಣಿ ಶೈಕ್ಷಣಿಕ ಕಾರ್ಯಕ್ರಮಗಳಿಂದ ಕರ್ನಾಟಕದ ಎಲ್ಲಾ ವಿವಿಗಳಲ್ಲಿ ಜನಪದ ಅಧ್ಯಯನ ಆರಂಭಗೊಂಡಿತು. ಜಗದ ಮೊದಲ ಜಾನಪದ ವಿವಿ ಕರ್ನಾಟಕದಲ್ಲಿ ಆರಂಭವಾಯಿತು ಎಂದರು. ಪ್ರಶಸ್ತಿ ಪ್ರದಾನ: ಸ.ಚ. ಮಹದೇವ ನಾಯಕ ಜಾನಪದ ಕ್ಷೇತ್ರಕಾರ್ಯ ರತ್ನ, ಎನ್.ಕೆ. ಮಹದೇವನ್, ಚಿಕ್ಕಾಳು ಜನಪದ ವೈದ್ಯ ರತ್ನ, ಮಹೇಶ್ ನಿಲಸೋಗೆ ಅವರಿಗೆ ಜನಪದ ಮಾಧ್ಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕಿ ಪ್ರೊ.ಎನ್.ಕೆ. ಲೋಲಾಕ್ಷಿ ಅಧ್ಯಕ್ಷತೆ ವಹಿಸಿದ್ದರು. ಸಾಮಾಜಿಕ ಹೋರಾಟಗಾರ ಅಹಿಂದ ಜವರಪ್ಪ, ಡಾ. ಹೊಂಬಯ್ಯ ಹೊನ್ನಲಗೆರೆ, ಪ್ರೊ. ವಿಜಯಲಕ್ಷ್ಮೀ ಮನಾಪುರ, ಪ್ರೊ.ಎಚ್.ಆರ್. ಚೇತನ್ ಇದ್ದರು.--- ಬಾಕ್ಸ್‌ಮಾನಸ ಗಂಗೋತ್ರಿ ಜಾನಪದ ಗಂಗೋತ್ರಿಕನ್ನಡಪ್ರಭ ವಾರ್ತೆ ಮೈಸೂರು

ಮಾನಸ ಗಂಗೋತ್ರಿ ಜಾನಪದ ಗಂಗೋತ್ರಿಯಾಗಿದೆ ಎಂದು ಪ್ರೊ. ಕೃಷ್ಣಮೂರ್ತಿ ಹನೂರು ಮೆಚ್ಚುಗೆ ವ್ಯಕ್ತಪಡಿಸಿದರು. ಜನಪದದ ಕೆಲಸಗಳು ಒಮ್ಮೊಮ್ಮೆ ಹಿನ್ನಡೆಯಾಯಿತೇ ಅನಿಸುತ್ತದೆ. ಆದರೆ, ಡಾ. ನಂಜಯ್ಯ ಹೊಂಗನೂರು ಕಾರಣದಿಂದ ಒಮ್ಮೊಮ್ಮೆ ಜನಪದ ಗಂಗೋತ್ರಿಯಾಗುತ್ತದೆ. ಜನಪದದ ಪರಿಸರವೇ ನಿರ್ಮಾಣವಾಗುತ್ತದೆ ಎಂದರು. ಬಿಡುಗಡೆಯಾದ ಕೃತಿಯಲ್ಲಿ 80 ಲೇಖನಗಳು ವೈವಿಧ್ಯಮಯವಾಗಿವೆ. ಹೆಚ್ಚಿನ ಸಂಖ್ಯೆಯ ಹೆಣ್ಣು ಮಕ್ಕಳು ಬರೆದಿದ್ದಾರೆ. ಈ ಬಗೆಯ ಕೆಲಸಗಳು ಜಾನಪದ ಬೆಳವಣಿಗೆಗೆ ಪೂರಕವಾಗಿವೆ. ಅದಕ್ಕೆ ಸಾವಿಲ್ಲ ಎಂದರು.