ಜಾನಪದ ಕಲೆಗಳಲ್ಲಿ ಜನ-ಸಾಮಾನ್ಯರ ಬದುಕು ಚಿತ್ರಣ: ಡಾ.ಪಿ.ನಾಗರಾಜು

| Published : Feb 19 2025, 12:46 AM IST

ಜಾನಪದ ಕಲೆಗಳಲ್ಲಿ ಜನ-ಸಾಮಾನ್ಯರ ಬದುಕು ಚಿತ್ರಣ: ಡಾ.ಪಿ.ನಾಗರಾಜು
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಕಲೆಗಳು ಜನ-ಸಾಮಾನ್ಯರ ಬದುಕನ್ನು ಚಿತ್ರಿಸುತ್ತವೆ. ಜಾನಪದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ

ಕನ್ನಡಪ್ರಭ ವಾರ್ತೆ ಸಂಕೇಶ್ವರ

ಕರ್ನಾಟಕದ ಐತಿಹಾಸಿಕ ಪರಂಪರೆಗೆ ಜಾನಪದದ ಕೊಡುಗೆ ಬಹು ದೊಡ್ಡದು. ಉತ್ತರ ಕರ್ನಾಟಕದ ಬಯಲಾಟಗಳು, ಸೋಬಾನ ಪದ, ಜಾನಪದ ಗೀತೆಗಳು, ಹಂತಿ ಹಾಡುಗಳು ಬಹು ವಿಶಿಷ್ಟತೆ ಪಡೆದಿವೆ ಎಂದು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯ ಸಹಾಯಕ ಪ್ರಾದ್ಯಾಪಕ ಡಾ.ಪಿ.ನಾಗರಾಜು ಹೇಳಿದರು.

ಕೇಂದ್ರ ಸಂಸ್ಕೃತಿ ಸಚಿವಾಲಯ ಹಾಗೂ ಶಿವನಂದಾ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘಗಳು ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಜಾನಪದ ಕಲಾ ಮೇಳ ಉದ್ಘಾಟಿಸಿ ಮಾತನಾಡಿದ ಅವರು, ಕರಾವಳಿ ಭಾಗದ ಯಕ್ಷಗಾನವು ಇಡೀ ಜಗತ್ತಿಗೆ ಮೋಡಿ ಮಾಡಿದೆ. ದಕ್ಷಿಣ ಕರ್ನಾಟಕದ ನಂದಿ ಕೋಲು ಕುಣಿತ, ದಟ್ಟೆ ಕುಣಿತ ಮುಂತಾದ ಜಾನಪದ ಕಲೆಗಳು ಜನ-ಸಾಮಾನ್ಯರ ಬದುಕನ್ನು ಚಿತ್ರಿಸುತ್ತವೆ. ಜಾನಪದ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವುದು ಇಂದಿನ ತುರ್ತು ಅಗತ್ಯವಾಗಿದೆ ಎಂದರು.

ಜನಪದ ಸಾಹಿತ್ಯದಲ್ಲಿ ಮಹಿಳಾ ಸಂಸ್ಕೃತಿ ಕುರಿತು ಉಪನ್ಯಾಸ ನೀಡಿದ ಆಶಾ ಯಮಕನಮರಡಿ, ಬದುಕಿನ ಬಗೆಗೆ ಮಹಿಳೆಯರು ಏನು ಹೇಳಬೇಕೊ ಅದನ್ನು ತ್ರಿಪದಿಯಲ್ಲಿ ಹೇಳಿ ಅಚ್ಚರಿಗೊಳಿಸಿದ್ದಾರೆ. ಮಹಿಳೆಯರ ಬದುಕಿನ ಭಾಗವೇ ಆಗಿರುವ ಜನಪದವನ್ನು ಉಳಿಸಿ ಬೆಳೆಕೊಂಡು ಹೋಗುವುದು ತಾಯಂದಿರ ಕರ್ತವ್ಯವಾಗಿದೆ ಎಂದರು.

ಜನಪದ ಸಾಹಿತ್ಯದಲ್ಲಿ ಗ್ರಾಮೀಣ ಸಂಸ್ಕೃತಿ ಕುರಿತು ಮಾತನಾಡಿದ ಜಯಾನಂದ ಮಾದರ, ನಗರೀಕರಣದ ಈ ಸಂದರ್ಭದಲ್ಲಿ ರೈತರು ಬಿತ್ತುವಾಗ, ರಾಶಿ ಮಾಡುವಾಗ ಜನಪದ ಹಾಡುಗಳನ್ನು ಹೇಳುತಿದ್ದರು. ಗ್ರಾಮೀಣ ಭಾಗದಲ್ಲಿ ಇನ್ನೂ ಜನಪದವು ನೆಲೆಯೂರಿದ್ದು ಅದನ್ನು ಪೋಷಿಸಿಕೊಂಡು ಬರುವ ಜವಾಬ್ದಾರಿ ಯುವಕರ ಮೇಲಿದೆ ಎಂದರು.

ಎರಡನೇ ದಿನದ ಕಾರ್ಯಕ್ರಮ ಉದ್ಘಾಟಿಸಿದ ಡಾ.ರಾಜಶೇಖರ ಇಚ್ಚಂಗಿ ಅವರು, ಜನಪದ ಕಲೆ ಮತ್ತು ಸಾಹಿತ್ಯಕ್ಕೆ ಬೆಳಗಾವಿ ಜಿಲ್ಲೆಯ ಕೊಡುಗೆ ಅಪಾರ ಎಂದರು. ಹಿರಿಯ ಜನಪದ ಕಲಾವಿದ ಈಶ್ವರ ಚಂದ್ರ ಬೆಟಗೇರಿ ಮಾತನಾಡಿ, ಮನುಷ್ಯ ಜೀವನದ ಪ್ರತಿಯೊಂದು ಹಂತದಲ್ಲಿಯೂ ಜನಪದದ ಛಾಪು ಇದೆ. ಶ್ರೀಕೃಷ್ಣ ಪಾರಿಜಾತ, ಸಂಗ್ಯಾ ಬಾಳ್ಯಾದಂಥ ಆಟಗಳು ಜೀವನಕ್ಕೆ ಮಾರ್ಗದರ್ಶಿಯಾಗಿವೆ. ಉತ್ತರ ಕರ್ನಾಟಕದ ಜಾನಪದ ಕಲೆಗಳು ನೈಜ ಬದುಕನ್ನು ಪ್ರತಿಬಿಂಬಿಸುತ್ತವೆ ಎಂದರು.

ಮೂರನೇಯ ದಿನದಕಾರ್ಯಕ್ರಮ ಉದ್ಘಾಟಿಸಿದ ಡಾ.ಶ್ರೀಶೈಲ ಮಠಪತಿ, ಮಕ್ಕಳ ಭವಿಷ್ಯ ಉಜ್ವಲವಾಗಲು ತಾಯಂದಿರು ಉತ್ತಮ ಸಂಸ್ಕೃತಿ ನೀಡಿ ಬೆಳೆಸಬೇಕೆಂದರು. ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣುರ ಮಾತನಾಡಿ, ಜನಪದ ಕಲೆ ಉಳಿದು ಬೆಳೆಯಲು ಅದಕ್ಕೆ ಆಧುನಿಕ ತಂತ್ರಜ್ಞಾನದ ಸ್ಪರ್ಶ ಕೊಡಬೇಕು ಎಂದರು.

ಜಾನಪದ ಗೀತಗಾಯನ, ಸೋಬಾನ ಪದ, ತತ್ವ ಪದ, ಶಾಹಿರಕಿ, ಭರತ ನಾಟ್ಯ, ಪುರವಂತಿಕೆ ಪರಾಕು, ಶಿವ ಭಜನೆ, ಸಮೂಹ ನೃತ್ಯ. ಶ್ರೀಕೃಷ್ಣ ಪಾರಿಜಾತ ಪ್ರದರ್ಶನ ಹಾಗೂ ಜಾನಪದ ಕಲೆ ಮತ್ತು ಸಾಹಿತ್ಯದ ಕುರಿತು ಉಪನ್ಯಾಸ ಮುಂತಾದವುಗಳನ್ನು ಪ್ರಸ್ತುತ ಪಡಿಸುವ ಮೂಲಕ 3 ದಿನಗಳ ಕಾಲವೂ ಜಾನಪದ ಕಲಾಮೇಳ ಶಿರಗಾವಿಯಲ್ಲಿ ಹಬ್ಬದ ವಾತಾವರಣ ನಿರ್ಮಿಸಿತ್ತು.

3 ದಿನಗಳ ಕಾಲ ಗೋಪಾಲ ಚಿಪನಿ, ಶಾಂತಲಾ ಉದೋಶಿ, ಶ್ರವಣಕುಮಾರ ಕಾಂಬಳೆ, ರಾಜಶ್ರೀ ಕೆಳಗಡೆ, ಕಲ್ಲಪ್ಪಾ ಸೊಡ್ಡನ್ನವರ, ಪ್ರಶಾಂತ ಘೋಡಗೇರಿ, ಗಂಗೋತ್ರಿ ಚೌಗಲಾ, ಅಶ್ವಿನಿ ಘೋಡಗೇರಿ, ಪ್ರಕಾಶ ಹೊಸಮನಿ, ಸರೋಜನಿ ಬಡಿಗೇರ, ಈಶ್ವರ ಚೌಗಲಾ, ಸತ್ಯವ್ವಾ ಮಾದರ, ಪುರುಷೊತ್ತಮ ಚಿತ್ತರಗಿ, ಸ್ಪಂದನಾ ಮಾದರ, ಅಲ್ಲಪ್ಪಾ ಚೌಗಲಾ, ಶೋಭಾ ಸೊಡ್ಡನ್ನವರ ಮುಂತಾದ ತಂಡಗಳು ವಿವಿಧ ಜಾನಪದ ಕಲೆಗಳ ಪ್ರದರ್ಶನ ನೀಡಿದವು. ಕೊನೆಯಲ್ಲಿ ಶಿವನಂದಾ ಕಲಾ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಸುರೇಶ ಮಂಜರಗಿ ವಂದಿಸಿದರು. ಮಹಾಂತೇಶ ಹೊಸಮನಿ ನಿರೂಪಿಸಿದರು.