ಬರ ಪರಿಹಾರ ಸಾಲಕ್ಕೆ ಜಮೆ; ಹಣ ಮರಳಿಸುವ ಬಗ್ಗೆ ಬ್ಯಾಂಕ್‌ಗಳಲ್ಲಿ ಗೊಂದಲ

| Published : May 21 2024, 12:33 AM IST

ಬರ ಪರಿಹಾರ ಸಾಲಕ್ಕೆ ಜಮೆ; ಹಣ ಮರಳಿಸುವ ಬಗ್ಗೆ ಬ್ಯಾಂಕ್‌ಗಳಲ್ಲಿ ಗೊಂದಲ
Share this Article
  • FB
  • TW
  • Linkdin
  • Email

ಸಾರಾಂಶ

ಭಾಗ್ಯಲಕ್ಷ್ಮೀ, ಪಿಂಚಣಿ, ನರೇಗಾ ಕೂಲಿ, ವೃದ್ದಾಪ್ಯ ವೇತನ, ಗ್ಯಾಸ್‌ ಸಬ್ಸಿಡಿಯೂ ಸಾಲಕ್ಕೆ ಜಮೆ ಮಾಡಲಾಗಿದ್ದು, ಬ್ಯಾಂಕುಗಳ ಕ್ರಮದ ಬಗ್ಗೆ ರೈತಾಪಿ ವಲಯದಿಂದ ತೀವ್ರ ಆಕ್ರೋಶ, ಸಾಲಕ್ಕೆ ಜಮೆ ಮಾಡಿಕೊಂಡ ಬ್ಯಾಂಕುಗಳಿಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಕಾರಣ ಕೇಳಿ ನೋಟೀಸ್‌ ನೀಡಿದ್ದಾರೆ.

ಆನಂದ್‌ ಎಂ. ಸೌದಿ

ಕನ್ನಡಪ್ರಭ ವಾರ್ತೆ ಯಾದಗಿರಿ

ಬರ ಪರಿಹಾರ ಹಾಗೂ ಸಾಮಾಜಿಕ ಪಿಂಚಣಿ ಹಣವನ್ನು ಸಾಲಕ್ಕೆ ಜಮೆ ಮಾಡಿಕೊಂಡಿದ್ದ ಬ್ಯಾಂಕುಗಳ ಕ್ರಮದ ಬಗ್ಗೆ ರೈತಾಪಿ ವಲಯದಿಂದ ತೀವ್ರ ವಿರೋಧ ವ್ಯಕ್ತವಾದ ಜೊತೆಗೆ, ಸರ್ಕಾರವೂ ಆದೇಶಿಸಿದ್ದರಿಂದ ಹಣ ಮರಳಿ ಜಮೆ ಮಾಡುವ ಬಗ್ಗೆ ಬ್ಯಾಂಕು ವಲಯಗಳಲ್ಲಿ ಭಾರಿ ಗೊಂದಲ ಮೂಡಿದೆ.

ಬರ ಪರಿಹಾರ ಹಣ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಎಲ್ಲ ಬ್ಯಾಂಕುಗಳ ವ್ಯವಸ್ಥಾಪಕರಿಗೆ ಲೀಡ್‌ ಬ್ಯಾಂಕ್‌ ಅಧಿಕಾರಿಗಳ ಮೂಲಕ ಸೂಚಿಸಲಾಗಿದ್ದರೂ, ಈಗಾಗಲೇ ಸಾಲಕ್ಕೆ ಜಮೆ ಮಾಡಿಕೊಂಡ ಹಣವನ್ನು ಮರು ಪಾವತಿಸುವ ಬಗ್ಗೆ ಚಿಂತನೆಗೆ ಇಳಿದಿದ್ದಾರೆ. ಇಂತಹ ಕುರಿತು, ಆರ್‌ಬಿಐ (ರಿಜರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ) ಮಾರ್ಗಸೂಚಿಗಳು ಏನು ಹೇಳುತ್ತವೆ ಎನ್ನುವುದರ ಬಗ್ಗೆ ಬ್ಯಾಂಕ್‌ ಅಧಿಕಾರಿಗಳು ಲೆಕ್ಕಾಚಾರಕ್ಕಿಳಿದಿದ್ದಾರೆ.

ಜಿಲ್ಲೆಯ ಸುರಪುರ, ಶಹಾಪುರ ಸೇರಿದಂತೆ ಅನೇಕ ಕಡೆಗಳಲ್ಲಿ ಕೇವಲ ಬರ ಪರಿಹಾರ ಹಣವಷ್ಟೇ ಅಲ್ಲ, ವೃದ್ಧಾಪ್ಯ-ವಿಧವಾ ವೇತನ, ಅಂಗವಿಕಲ ಮಾಸಾಶಾನ, ಗೃಹಲಕ್ಷ್ಮೀ ಹಣ, ಪಿಎಂ ಕಿಸಾನ್‌, ನರೇಗಾ ಕೂಲಿ ಹಣ, ಗ್ಯಾಸ್ ಸಬ್ಸಿಡಿ, ಪಡಿತರ ದುಡ್ಡನ್ನೂ ಸಾಲದ ಖಾತೆಗಳಿಗೆ ಜಮೆ ಮಾಡಲಾಗಿತ್ತು. ಜೊತೆಗೆ, ಹಣ ನಗದೀಕರಣವಾಗದಂತೆ (ಡ್ರಾ) ಉಳಿತಾಯ ಖಾತೆಗಳನ್ನು "ಹೋಲ್ಡ್‌ " ಮಾಡಲಾಗಿತ್ತು. ಈ ಕುರಿತು ಕನ್ನಡಪ್ರಭ ವಿಶೇಷ ವರದಿಗಳು ಸಂಚಲನ ಮೂಡಿಸಿದ್ದವು. ಬ್ಯಾಂಕುಗಳ ಈ ಕ್ರಮದ ವಿರುದ್ಧ ರೈತರ ಪ್ರತಿಭಟನೆಗಳು, ವಿಪಕ್ಷ ಟೀಕೆಗಿಳಿದಿದ್ದವು.

ಈ ಬಗ್ಗೆ ಮಾಹಿತಿ ಪಡೆದ ಸಿಎಂ ಸಿದ್ದರಾಮಯ್ಯ, ಪರಿಹಾರ, ಪಿಂಚಣಿ ಹಣವನ್ನು ರೈತರ ಅನುಮತಿಯಿಲ್ಲದೆ ಸಾಲಕ್ಕೆ ಜಮೆ ಮಾಡಿಕೊಳ್ಳದಂತೆ ಬ್ಯಾಂಕುಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುವಂತೆ ನಿರ್ದೇಶಿಸಿದ್ದರು. ಸಾಲಕ್ಕೆ ಜಮೆ ಮಾಡಿಕೊಂಡ ಬ್ಯಾಂಕುಗಳಿಗೆ ಯಾದಗಿರಿ ಜಿಲ್ಲಾಧಿಕಾರಿ ಡಾ. ಸುಶೀಲಾ ಕಾರಣ ಕೇಳಿ ನೋಟೀಸ್‌ ನೀಡಿದ್ದಾರೆ.

"ಕನ್ನಡಪ್ರಭ "ಕ್ಕೆ ಲಭ್ಯ, ನೊಂದ ಕೆಲವು ಫಲಾನುಭವಿಗಳ ಬ್ಯಾಂಕ್‌ ವಹಿವಾಟು ಪರಿಶೀಲಿಸಿದಾಗ, ಬರ ಪರಿಹಾರ ಹಣವಷ್ಟೇ ಅಲ್ಲ, ವೃದ್ಧಾಪ್ಯ-ವಿಧವಾ ವೇತನ, ಅಂಗವಿಕಲ ಮಾಸಾಶನ, ಗೃಹಲಕ್ಷ್ಮೀ ಹಣ, ಪಿಎಂ ಕಿಸಾನ್‌, ನರೇಗಾ ಕೂಲಿ ಹಣ, ಗ್ಯಾಸ್ ಸಬ್ಸಿಡಿ, ಪಡಿತರ ದುಡ್ಡನ್ನೂ ಕಳೆದ ಕೆಲವು ತಿಂಗಳುಗಳಿಂದ ‘ಸಾಲಕ್ಕೆ ಜಮೆ’ ಮಾಡಿಕೊಳ್ಳುತ್ತಿರುವ ಪ್ರಕರಣಗಳು ಕಂಡುಬಂದಿವೆ.