ತೀವ್ರ ಬರಗಾಲವಿದ್ದರೂ ಮೇವಿಗೆ ಬೇಡಿಕೆಯಿಲ್ಲ!

| Published : Mar 26 2024, 01:20 AM IST

ಸಾರಾಂಶ

ಜಿಲ್ಲೆಯ ವಿವಿಧ ತಾಲೂಕಿನಲ್ಲಿ ರೈತರಿಗಾಗಿ ಒಟ್ಟು 11 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ. ಆದರೆ, ರೈತರಿಂದ ಮೇವಿಗೆ ಬೇಡಿಕೆ ಇಲ್ಲ.

ಶಿವಕುಮಾರ ಕುಷ್ಟಗಿ

ಕನ್ನಡಪ್ರಭ ವಾರ್ತೆ ಗದಗ

ಜಿಲ್ಲಾದ್ಯಂತ ತೀವ್ರ ಬರಗಾಲವಿದೆ, ರೈತರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಪ್ರಸಕ್ತ ಸಾಲಿನ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ತೀವ್ರ ಮಳೆ ಕೊರೆಯಿಂದಾಗಿ ಮೇವು ಕೊರತೆಯಾಗಿದೆ ಎನ್ನುವುದು ವಾಸ್ತವ. ಈ ಕಾರಣಕ್ಕಾಗಿಯೇ ಜಿಲ್ಲಾಡಳಿತ ಮೇವು ಬ್ಯಾಂಕ್ ಸ್ಥಾಪನೆ ಮಾಡಿದೆ. ಆದರೆ, ಮೇವಿಗೆ ಯಾವುದೇ ಬೇಡಿಕೆ ಕಂಡು ಬರುತ್ತಿಲ್ಲ!

ಜಿಲ್ಲೆಯ 7 ತಾಲೂಕುಗಳನ್ನು ಸರ್ಕಾರ ಸಂಪೂರ್ಣ ಬರಪೀಡಿತ ಎಂದು ಘೋಷಣೆ ಮಾಡಿದ ನಂತರ, ಉದ್ಯೋಗ ಖಾತ್ರಿ ಸೇರಿದಂತೆ ಕಾರ್ಮಿಕರ ಕೈಗಳಿಗೆ ಕೆಲಸ ಕೊಡುವುದರೊಟ್ಟಿಗೆ ಅವರು ನಂಬಿಕೊಂಡಿರುವ ಜಾನುವಾರುಗಳಿಗಾಗಿ ಗದಗ ತಾಲೂಕಿನ ಬಿಂಕದಕಟ್ಟಿ, ಕುರ್ತಕೋಟಿ, ಮುಳಗುಂದದಲ್ಲಿ, ರೋಣ ತಾಲೂಕಿನ ರೈತರಿಗಾಗಿ ಕೊತಬಾಳ ಗ್ರಾಮದಲ್ಲಿ, ಗಜೇಂದ್ರಗಡ ತಾಲೂಕಿನ ರೈತರಿಗಾಗಿ ರಾಜೂರ ಗ್ರಾಮದಲ್ಲಿ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕು ವ್ಯಾಪ್ತಿಯ ರೈತರಿಗೆ ಲಕ್ಷ್ಮೇಶ್ವರ, ಬಾಲೇಹೊಸೂರು, ಶಿಗ್ಲಿ, ಬಟ್ಟೂರ, ಅಡರಕಟ್ಟಿ, ಮುಂಡರಗಿ ತಾಲೂಕಿನ ರೈತರಿಗಾಗಿ ಡಂಬಳ ಗ್ರಾಮ ಸೇರಿದಂತೆ ಜಿಲ್ಲಾದ್ಯಂತ ಒಟ್ಟು 11 ಸ್ಥಳಗಳಲ್ಲಿ ಮೇವು ಬ್ಯಾಂಕ್ ಸ್ಥಾಪನೆ ಮಾಡಲಾಗಿದೆ.

40 ಟನ್ ಮೇವು ಲಭ್ಯ

ಸದ್ಯ ಸ್ಥಾಪನೆ ಮಾಡಲಾಗಿರುವ ಮೇವು ಬ್ಯಾಂಕ್ ಒಂದರಲ್ಲಿ ಸರಾಸರಿ 4 ಟನ್ ನಂತೆ ಒಟ್ಟು 40 ಟನ್ ಗೂ ಅಧಿಕ ಮೇವು ಸಂಗ್ರಹವಿದೆ. ಪ್ರತಿ ರೈತ ಒಂದು ದಿನಕ್ಕೆ 6 ಕೆಜಿ ಮೇವನ್ನು, ಪ್ರತಿ ಕೆಜಿಗೆ 2 ರುಪಾಯಿಯಂತೆ ಪಾವತಿಸಿ ಖರೀದಿಸಬೇಕು. ವಾರಕ್ಕೆ 40 ಕೆಜಿವರೆಗೂ ಒಬ್ಬ ರೈತರು ಮೇವು (ರಿಯಾಯ್ತಿ ದರದಲ್ಲಿ) ಖರೀದಿಸಬಹುದಾಗಿದೆ. ಆದರೆ, ಜಿಲ್ಲೆಯ ಯಾವುದೇ ಮೇವು ಬ್ಯಾಂಕ್ ನಲ್ಲಿ ಪ್ರಾರಂಭಿಸಿದ ದಿನದಿಂದ ಇಲ್ಲಿ ವರೆಗೂ ರೈತರು ಮೇವು ಖರೀದಿಸಿದ ಉದಾಹರಣೆಯೇ ಇಲ್ಲ.

ಉಚಿತವಾಗಿ ನೀಡಬೇಕು

ಮೇವು ಬ್ಯಾಂಕಿನ ಅವಶ್ಯಕತೆ ಉಂಟಾಗುವುದು ಸಣ್ಣ, ಅತೀ ಸಣ್ಣ ರೈತರಿಗೆ ಹಾಗೂ ಯಾವುದೇ ಕೃಷಿ ಜಮೀನುಗಳಿಲ್ಲದೇ ಕೃಷಿ ಕಾರ್ಮಿಕರಾಗಿ ಕೆಲಸ ಮಾಡುತ್ತ, ಕುಟುಂಬ ನಿರ್ವಹಣೆಗಾಗಿ ಎಮ್ಮೆ, ಆಕಳು ಸಾಕಿಕೊಂಡು ಹೈನುಗಾರಿಕೆ ಮಾಡುವವರಿಗೆ ಮಾತ್ರ. ಪ್ರಸ್ತುತ ಬರಗಾಲದ ದಿನಗಳಲ್ಲಿ ಅವರಿಗೆ ಕೂಲಿ ಕೆಲಸವೇ ಸಿಗುತ್ತಿಲ್ಲ. ಹೀಗಿರುವಾಗ ಹಣ ನೀಡಿ ಅವರು ಮೇವು ಖರೀದಿಸಲು ಸಾಧ್ಯವೇ ಇಲ್ಲ. ದೊಡ್ಡ ಮತ್ತು ಮಧ್ಯಮ ರೈತರು ಮನೆಯಲ್ಲಿನ ಜಾನುವಾರುಗಳನ್ನು ಮಾರಾಟ ಮಾಡಿ ಹಲವಾರು ವರ್ಷಗಳೇ ಕಳೆದಿದ್ದು, ಅವರೆಲ್ಲಾ ಟ್ರ್ಯಾಕ್ಟರ್ ಮತ್ತು ಯಂತ್ರೋಪಕರಣಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ, ಅವರಿಗೆ ಮೇವಿನ ಅವಶ್ಯಕತೆಯೇ ಇಲ್ಲ, ಹಾಗಾಗಿ ಬರಗಾಲದಂತಹ ಸಂದರ್ಭದಲ್ಲಿ ಸಣ್ಣ ರೈತರಿಗೆ ಉಚಿತವಾಗಿ ಮೇವು ನೀಡುವುದು ಸೂಕ್ತ ಎನ್ನುತ್ತಾರೆ ಹಲವಾರು ರೈತರು.

ಕಡ ಬಲು ಜೋರು

ಗದಗ ಜಿಲ್ಲೆಯ ಯರಿ ಮತ್ತು ಕೆಂಪು ಮಣ್ಣಿನ ಅತ್ಯುತ್ತಮ ಕೃಷಿ ಭೂಮಿಯನ್ನು ಹೆಚ್ಚಾಗಿ ಹೊಂದಿರುವ ಸಮೃದ್ಧ ಜಿಲ್ಲೆಯಾಗಿದೆ. ಜಿಲ್ಲೆಯ ಜನರು ಅಕ್ಕಪಕ್ಕದ ಜಿಲ್ಲೆ ಮತ್ತು ತಾಲೂಕುಗಳೊಂದಿಗೆ ತಮ್ಮ ನೆಂಟಸ್ಥಿಕೆಯನ್ನು ಹೊಂದಿದ್ದು, ಈ ಬಾರಿ ನಮ್ಮ ತಾಲೂಕಿನಲ್ಲಿ ಬರಗಾಲ ಬಿದ್ದರೆ, ಪಕ್ಕದ ತಾಲೂಕಿನಲ್ಲಿ ಬೆಳೆದ ಮೇವವನ್ನು (ಬೀಗರ ಬಳಿ) ಕಡ ರೂಪದಲ್ಲಿ ತರುತ್ತಾರೆ. ಮುಂದಿನ ವರ್ಷ ತಾವು ಬೆಳೆದಾಗ ಅವರಿಗೆ ನೀಡುತ್ತಾರೆ. ಇಲ್ಲಿ ಹಣದ ವ್ಯವಹಾರ ಇರುವುದಿಲ್ಲ, ಬರೀ ಕೊಟ್ಟು, ಮರಳಿ ಪಡೆಯುವುದು ಮಾತ್ರ ನಡೆಯುತ್ತದೆ. ಹಾಗಾಗಿ, ಜಿಲ್ಲೆಯ ಕೆಲ ತಾಲೂಕುಗಳಲ್ಲಿ ಮೇವು ಕೊರತೆ ಉಂಟಾಗಿದ್ದರೂ ಬೀಗರ ಸಂಬಂಧಿಕರಿಂದ ದೊಡ್ಡ ದೊಡ್ಡ ರೈತರು ಮೇವು ಪಡೆದುಕೊಂಡಿದ್ದಾರೆ. ತೊಂದರೆಯಾಗುತ್ತಿರುವುದು ಸಣ್ಣ ರೈತರಿಗೆ ಮಾತ್ರ.

ಮೇವು ವಿತರಣೆಗೆ ಕ್ರಮ

ಸರ್ಕಾರದ ನಿಯಮಗಳಂತೆ ಜಿಲ್ಲೆಯ 11 ಸ್ಥಳಗಳಲ್ಲಿ ಮೇವು ಬ್ಯಾಂಕ್ ಗಳನ್ನು ಸ್ಥಾಪನೆ ಮಾಡಲಾಗಿದೆ. ಅಲ್ಲಿ ಮೇವು ಸಂಗ್ರಹವಿದೆ. ರೈತರ ಬೇಡಿಕೆ ಅನುಸಾರವಾಗಿ ವಿತರಣೆ ಮಾಡಲು ಎಲ್ಲ ಕ್ರಮ ತೆಗೆದುಕೊಳ್ಳಲಾಗಿದೆ.

ಡಾ. ಎಚ್.ಬಿ. ಹುಲಣ್ಣವರ. ಉಪನಿರ್ದೇಶಕರ ಪಶು ಸಂಗೋಪನಾ ಇಲಾಖೆ ಗದಗ