ಭೀಮೆಗೆ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸ್ವಾರ್ಥ ಸಾಧನೆ

| Published : Mar 26 2024, 01:20 AM IST / Updated: Mar 27 2024, 02:50 PM IST

ಭೀಮೆಗೆ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸ್ವಾರ್ಥ ಸಾಧನೆ
Share this Article
  • FB
  • TW
  • Linkdin
  • Email

ಸಾರಾಂಶ

ಕುಡಿವ ನೀರಿನ ಭೀಕರ ಬವಣೆಗೆ ತುತ್ತಾಗಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜೀವನಾಡಿ ಭೀಮಾ ನದಿಗೆ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಭಾರಿ ಸ್ವಾರ್ಥ ಮೆರೆದಿದೆ!

ಶೇಷಮೂರ್ತಿ ಅವಧಾನಿ

ಕನ್ನಡಪ್ರಭ ವಾರ್ತೆ ಕಲಬುರಗಿ

ಕುಡಿವ ನೀರಿನ ಭೀಕರ ಬವಣೆಗೆ ತುತ್ತಾಗಿರುವ ಕಲಬುರಗಿ, ವಿಜಯಪುರ, ಯಾದಗಿರಿ ಜಿಲ್ಲೆಗಳ ಜೀವನಾಡಿ ಭೀಮಾ ನದಿಗೆ ಉಜನಿ ಜಲಾಶಯದಿಂದ ನಮ್ಮ ಹಕ್ಕಿನ 5 ಟಿಎಂಸಿ ನೀರು ಹರಿಸುವಲ್ಲಿ ಮಹಾರಾಷ್ಟ್ರ ಸರ್ಕಾರ ಭಾರಿ ಸ್ವಾರ್ಥ ಮೆರೆದಿದೆ!

ಮಾನವೀಯತೆ ಆಧಾರದಲ್ಲಿ ಭೀಮಾ ನದಿಗೆ 5 ಟಿಎಂಸಿ ನೀರು ಬಿಡಿ ಎಂಬ ರಾಜ್ಯ ಸಿಎಂ ಸಿದ್ದರಾಮಯ್ಯ 3 ವಾರಗಳ ಹಿಂದೆಯೇ (ಮಾ.7) ಬರೆದಿದ್ದ ಪತ್ರಕ್ಕೆ ಕ್ಯಾರೆ ಮಹಾರಾಷ್ಟ್ರ ಆಡಳಿತ ಮೌನವಾಗಿತ್ತು.

ಇದೀಗ ತನ್ನೊಡಲಿನ ಭೀಮಾ ತೀರದ ಪಂಢರಪುರ, ಸೊಲ್ಲಾಪುರ, ಟೆಂಭರ್ಣಿ, ಅಕ್ಕಲಕೋಟೆ ಭಾಗದ ನೂರಾರು ಹಳ್ಳಿಗಳಲ್ಲಿ ಏಕಾಏಕಿ ನೀರಿನ ಹಾಹಾಕಾರ ಭುಗಿಲೆದ್ದಿರೋದರಿಂದ ಅದರ ಶಮನಕ್ಕೆ ಮುಂದಾಗಿ ತನ್ನ ಗಡಿಯಲ್ಲಿರೋ ಎಲ್ಲಾ ಬಾಂದಾರುಗಳಿಗೆ ಭೀಮಾ ನೀರು ತುಂಬಿಸಿದೆ.

ಭಯಂಕರ ಬರಗಾಲ, ಹನಿ ನೀರಿಗೂ ಜನ- ಜಾನುವಾರುಗಳು ಕಂಗಾಲಾಗಿರುವ ಈ ಸಂಕಷ್ಟ ಸಮಯದಲ್ಲಿಯೂ ಮಹಾರಾಷ್ಟ್ರ ಸರ್ಕಾರ ಮಾನವೀಯತೆ ಆಧಾರದಲ್ಲಿ ಭೀಮೆಗೆ ನೀರು ಹರಿಸುವಂತೆ ಕರ್ನಾಟಕದ ಮನವಿಯನ್ನೇ ಉಪೇಕ್ಷೆ ಮಾಡಿ ತನ್ನ ಮೂಗಿನ ನೇರಕ್ಕೆ ಮಾತ್ರ ನಡೆಸಿರುವ ಚಿಂತನೆ, ನೀರು ಹರಿಸುವ ವಿಚಾರದಲ್ಲಿ ತಳೆದಿರುವ ಸ್ವಾರ್ಥ ನೀತಿಗಳು ತೀವ್ರ ಟೀಕೆಗೊಳಗಾಗಿವೆ.

10 ದಿನದಿಂದ ಭೀಮೆಗೆ ನಿತ್ಯ 6 ಸಾವಿರ ಕ್ಯುಸೆಕ್‌ ನೀರು: ಮೂಲಗಳ ಪ್ರಕಾರ ಕಳೆದ 10 ದಿನದಿಂದ ನಿತ್ಯ ಭೀಮೆಗೆ 6 ಸಾವಿರ ಕ್ಯುಸೆಕ್‌ ಉಜನಿ ನೀರು ಹರಿಬಿಡಲಾಗುತ್ತಿದ್ದು, ಅದಾಗಲೇ ಈ ನೀರು ಅಫಜಲ್ಪುರ ಗಡಿಯಲ್ಲಿರೋ ಅಕ್ಕಲಕೋಟೆ ತಾಲೂಕು ವ್ಯಾಪ್ತಿಯ ಹಿಳ್ಳಿ ಬಾಂದಾರು ತಲುಪಿದೆ.

ಹಿಳ್ಳಿ ಬಾಂದಾರು ಇದು ಕರ್ನಾಟಾಕ- ಮಹಾರಾಷ್ಟ್ರ ಗಡಿಯಲ್ಲಿ, ಮಹಾರಾಷ್ಟ್ರದ ಮಹತ್ವದ ನೀರಿನ ಸಂಗ್ರಹದ ಘಟಕವಾಗಿದೆ, ಭೀಮಾ ನದಿ ತೀರದಲ್ಲಿ ಮಹಾರಾಷ್ಟ್ರದ ಕೊನೆಯ ಬಾಂದಾರು ಸಹ ಇದಾಗಿದೆ. ಈಗಾಗಲೇ ಉಜನಿ ಜಲಾಶಯದ ನೀರು ಮಾ.25ರ ಬೆಳಗಿನ ಜಾವವೇ ಹಿಳ್ಳಿ ಬಾಂದಾರು ತಲುಪಿದೆ. 10 ಅಡಿ ಆಳವಾಗಿರುವ ಈ ಬಾಂದಾರಲ್ಲಿ ಇದೀಗ 5 ಅಡಿ ನೀರು ತುಂಬಿಕೊಡಿದೆ.

ಹಿಳ್ಳಿ ತಲುಪುತ್ತಿದ್ದಂತೆಯೇ ತಗ್ಗಿದ ನಿರಿನ ರಭಸ: ಮೂಲಗಳ ಪ್ರಕಾರ ನೀರು ಹಿಳ್ಳಿ ಬಾಂದಾರು ತಲುಪುತ್ತಿದ್ದಂತೆಯೇ ಮೇಲಿನಿಂದ ಹರಿದು ಬರುವ ರಭಸ ತುಸು ಕ್ಷೀಣವಾಗಿದೆ. ಏಕೆಂದರೆ ತುಂಬಾ ಲೆಕ್ಕಹಾಕಿಯೇ ಮಹಾ ಸರ್ಕಾರ ತನ್ನ ಗಡಿಯಲ್ಲಿರೋ ಬಾಂದಾರು ತುಂಬಲೆಂದೇ ನೀರು ಹರಿಸಿದ್ದರಿಂದ ಈ ನೀರು ಹಿಳ್ಳಿ ಬಾಂದಾರು ತುಂಬಿಕೊಂಡು ಶೇಷಗಿರಿವಾಡಿ, ಮಣ್ಣೂರ ಮೂಲಕ ಭುಯ್ಯಾಂರ್‌ ಬಾಂದಾರಿಗೆ ತಲುಪೋದು ಅಸಾಧ್ಯದ ಮಾತೇ ಆಗಿದೆ.

ಹೀಗಾಗಿ ಹಿಳ್ಳಿ ಬಾಂದಾರುವರೆಗೂ ನೀರಿನಿಂದ ಕಂಗೊಳಿಸುತ್ತಿರುವ ಭೀಮಾ ನದಿ ಅಲ್ಲಿಂದ ಮುಂದೆ ಬತ್ತಿ ಬರಿದಾಗಿ ಬಣಗುಡುತ್ತಿದೆ. ಒಂದು ವೇಳೆ ಉಜನಿಯಿಂದ ಹರಿದು ಬಂದ ನೀರು ಹಿಳ್ಳಿ ಬಾಂದಾರು ಭರ್ತಿ ಮಾಡಿ ಮುಂದೆ ಹರಿರೂ ಕೂಡಾ ಮಣ್ಣೂರು ಬಳಿಯ ಭೂಯ್ಯಾಂರ್‌ ಬಾಂದಾರು ತಲುಪಬಹುದೆ ಹೊರತು ಮುಂದೆ ಹರಿದು ಹೋಗೋದು ಅಸಾಧ್ಯ!

ಗಡಿಯಲ್ಲಿರೋ 56 ಹಳ್ಳಿ ಮರಾಠಿಗರ ಬಾಯಾರಿಕೆ ನೀಗಿತು: ಹಿಳ್ಳಿ ಬಾಂದಾರುವರೆಗೂ ನೀರು ಹಸಿವು ಮಲೂಕ ಮಹಾರಾಷ್ಟ್ರ ತನ್ನ ಗಡಿಯಲ್ಲಿರುವ ಸೊಲ್ಲಾಪುರ ಜಿಲ್ಲೆ, ಅಕ್ಕಲಕೋಟೆ ತಾಲೂಕಿನ ಕರಡಗಿ, ಪಾನ್‌ ಮಂಗಳೂರು, ತಡವಳ್‌, ಜೇವೂರ್‌ ಬಹು ಗ್ರಾಮ ಕುಡಿಯುವ ನೀರು ಯೋಜನೆಗಳು ಮರು ಚಾಲನೆಗೊಳ್ಳುವಂತೆ ಮಾಡಿದೆ. ಇದರಿಂದಾಗಿ 28 ಕ್ಕೂ ಹೆಚ್ಚು ಹಲ್ಳಿಗಳ ನೀರಿನ ಸಮಸ್ಯೆ ನೀಗಲಿದೆ. ಇದಲ್ಲದೆ ದಕ್ಷಿಣ ಅಕ್ಕಲಕೋಟೆ ವ್ಯಾಪ್ತಿಯ 2 ಜಿಪಂ ಕ್ಷೇತ್ರಗಳಲ್ಲಿ ಬರುವ 28 ಕ್ಕೂ ಹೆಚ್ಚು ಗ್ರಾಮಗಳ ನೀರಿನ ಸಮಸ್ಯೆಗೂ ಭಈಮಾ ನದಿಯ ನೀರು ಪರಿಹಾರವಾಗಲಿದೆ. ಈ ಡಿಯಲ್ಲಿ ಅದಾಗಲೇ ನೀರಾವರಿ ಪಂಪ್‌ ಸೆಟ್‌ ವಿದ್ಯುತ್‌ ಸಂಪರ್ಕ ಕೂಡಾ ಸ್ಥಗಿತಗೊಳಿಸಲಾಗಿದ್ದು ಇವುಗಳಿಗೆ ನಿತ್ಯ 2 ಗಂಟೆ ಮಾತ್ರ ಕರೆಂಟ್‌ ಪೂರೈಸಲಾಗುತ್ತಿದೆ. ಜನ- ಜಾನವಾರು ಕುಡಿಯುವ ನೀರಿಗೆ ಈ ನೀರು ಬಳಕೆಯಾಗಬೇಕು ಎಂದು ಮಹಾರಾಷ್ಟ್ರ ಸರ್ವ ಕ್ರಮ ಕೈಗೊಂಡಿದೆ.

3 ಜಿಲ್ಲೆಗಳ ಸಹಸ್ರಾರು ಕನ್ನಡಿಗರ ದಾಹ ನೀಗಿಸುವಲ್ಲಿ ಮಹಾ ಅಲಕ್ಷತನ!: ತನ್ನೊಡಲಲ್ಲಿರುವ ಮರಾಠಿಗರ ಬಾಯಾರಿಕೆಗೆ ಸ್ಪಂದಿಸಿದ ಮಹಾರಾಷ್ಟ್ರ ಮಾನವೀಯತೆ ಆಾದರದಲ್ಲಿ ತುರ್ತಾಗಿ ಕರ್ನಾಟಕದ ನೀರು ಬಿಡಬೇಕೆಂಬ ಮವಿಗೂ ಸ್ಪಂದಿಸಿ 5 ಟಿಎಂಸಿ ನೀರನ್ನು ಹಂತಹಂತವಾಗಿ ಹಿರಿಬಿಟ್ಟಿದ್ದರೆ ವಿಜಯಪೂರ, ಕಲಬುರಗಿ, ಯಾದಗಿರಿಯ 156ಕ್ಕೂ ಹೆಚ್ಚು ಹಳ್ಳಿಗಳ ಜನ- ಜಾನುವಾರು ನೀರಿನ ಬವಣೆ ನೀಗುತ್ತಿತ್ತು. ಆದರೆ ಮಹಾರಾಷ್ಟ್ರ ಮಾನವೀಯತೆಯಿಂದ ಕರುನಾಡಿನ ಮನವಿಗೆ ಸ್ಪಂದಿಸದೆ ಮಹಾ ಸ್ವಾರ್ಥ ಮೆರೆದಿರೋದು ಇದೀಗ ಗಮನ ಸೆಳೆದಿದೆ.

ಭೀಮಾ ತೀರ ಅಫಜಲ್ಪುರದಲ್ಲಿ ಮುಂದುವರಿದ ನಿರಶನ: ಭೀಮಾ ನದಿಗೆ ಹಕ್ಕಿನ 5 ಟಿಎಂಸಿ ನೀರು ಜನಿಯಿಂದ ಹರಿಸುವಂತೆ ರಾಜ್ಯ ಸರ್ಕಾರ ಮಹಾರಾಷ್ಟ್ರಕ್ಕೆ ಆಗ್ರಹಿಸಬೇಕು ಎಂದು ಒತ್ತಾಯಿಸಿ ಹೋರಾಟಗಾರ ಶಿವಕುಮಾರ್‌ ನಾಟೀಕಾರ್‌ ನೇತೃತ್ವದಲ್ಲಿನ ರೈತರ ಹೋರಾಟ ಕಳೆದ 12 ದಿನದಿಂದ ಮುಂದುವರಿದಿದೆ. ಸಿಂದಗಿ, ಇಂಡಿ, ಅಫಜಲ್ಪುರ, ಕಲಬುರಗಿ ಶಾಸಕರು ಹೋರಾಕ್ಕೆ ಬೆಂಬಲಿಸಿದ್ದಾರೆ, ಲಬುರಗಿ ಜಿಲ್ಲಾಧಿಕಾರಿಗಳು ಸೊಲ್ಲಾಪುರ ಡಿಸಿಗೆ ಪತ್ರ ಬರೆದು ನೀರಿನ ಬವಣೆಯನ್ನು ವಿವರಿಸುತ್ತ ಉಜಯಿನಿಂದ ನೀರು ಬಿಡಲು ಕೋರಿದ್ದರೂ ಮಹಾರಾಷ್ಟ್ರ ಕರ್ನಾಟಕದವರ ಸ್ಪಂದನೆಗೆ ಕ್ಯಾರೆ ಎಂದಿಲ್ಲ.