ಸಾರಾಂಶ
ಕನ್ನಡಪ್ರಭ ವಾರ್ತೆ ಮಂಡ್ಯ
ಮಕ್ಕಳಿಗೆ ಕೇವಲ ಅಂಕಗಳಿಕೆಗೆ ಆದ್ಯತೆ ನೀಡದೇ ಮಾನವೀಯ ಮೌಲ್ಯ, ವೈಚಾರಿಕತೆ ಬೆಳೆಸಲು ಮುಂದಾಗಬೇಕು ಎಂದು ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ತಿಳಿಸಿದರು.ನಗರದ ಶ್ರೀಲಕ್ಷ್ಮೀಜನಾರ್ದನ ಶಿಕ್ಷಣ ಸಮಿತಿ ಟ್ರಸ್ಟ್ ಶಾಲೆ ಆವರಣದಲ್ಲಿ ನಡೆದ ಶಾಲಾ- ಕಾಲೇಜಿನ ವಾರ್ಷಿಕೋತ್ಸವದಲ್ಲಿ ಕೌಸ್ತುಭ ಸಂಚಿಕೆ ಬಿಡುಗಡೆ ಮಾಡಿ ಮಾತನಾಡಿ, ಮಕ್ಕಳು ಸಮಾಜಮುಖಿಯಾಗಿ ವ್ಯಕ್ತಿತ್ವ ರೂಪಿಸಿಕೊಳ್ಳುವುದಕ್ಕೆ ಕೇವಲ ಅತಿ ಹೆಚ್ಚು ಅಂಕ ಪಡೆದರೆ ಸಾಲದು ಎಂದರು.
ಕಲೆ, ಸಾಹಿತ್ಯ, ಸಂಸ್ಕೃತಿ ಕಡೆಗೆ ಮಕ್ಕಳನ್ನು ಸೆಳೆಯುವುದರಿಂದ ಅವರಲ್ಲಿ ಮೌಲ್ಯಗಳು, ಮಾನವೀಯತೆ, ವೈಚಾರಿಕತೆ, ವಿಚಾರವಂತಿಕೆ ಬೆಳೆದು ಬದುಕು ಸಾರ್ಥಕತೆ ಪಡೆಯುತ್ತದೆ ಎಂದು ಪ್ರತಿಪಾದಿಸಿದರು.ಖಾಸಗಿ ಶಿಕ್ಷಣ ಸಂಸ್ಥೆಗಳು ಉಳಿಯಲು ಅಲ್ಲಿನ ಶಿಕ್ಷಕರು ಎಲ್ಲ ವಿದ್ಯಾರ್ಥಿಗಳನ್ನು ಆಧರಿಸಿ ಅರ್ಥ ಆಗುವ ರೀತಿಯಲ್ಲಿ ಪಾಠ ಮಾಡುವುದರ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಅವರನ್ನು ಭಾಗವಹಿಸುವಂತೆ ಮಾಡುವುದು ಸಹ ಮಕ್ಕಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗುತ್ತದೆ ಎಂದರು.
ಶಿಕ್ಷಕರಿಗೆ ಹಲವು ಸಮಸ್ಯೆಗಳು ಕಾಡುತ್ತಿವೆ. ಈ ಬಗ್ಗೆ ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಹೋರಾಟ ಮಾಡುತ್ತಿದ್ದೇವೆ. ಸರ್ಕಾರಗಳು ಸಹ ಸ್ವಲ್ಪ ಮಟ್ಟಿಗೆ ಸಹಕಾರ ನೀಡುತ್ತಿವೆಯಾದರೂ ಅದು ಸಾಲದು. ಶಿಕ್ಷಕರ ಸಮಸ್ಯೆಗಳ ಬಗ್ಗೆ ನಾವು ನಿರಂತರ ಹೋರಾಟ ಮಾಡುತ್ತಲೇ ಇರುತ್ತವೆ ಎಂದರು.ಪಠ್ಯೇತರ ಚಟುವಟಿಕೆ, ಕ್ರೀಡೆ, ವೇದಿಕೆ ಕಾರ್‍ಯಕ್ರಮಗಳು, ಕಲೆ, ಸಾಹಿತ್ಯ, ಸಾಂಸ್ಕೃತಿಕ ಕಾರ್‍ಯಕ್ರಮಗಳ ಬಗ್ಗೆ ಮಕ್ಕಳಿಗೆ ಚನ್ನಾಗಿ ಅರ್ಥ ಮಾಡಿಸಿಬೇಕು. ಅವರನ್ನು ಇಂತಹ ಕಾರ್‍ಯಕ್ರಮಗಳಲ್ಲಿ ಭಾಗವಹಿಸುವಂತೆ ಪ್ರೇರೇಪಿಸಬೇಕು ಎಂದರು.
ಗ್ರಾಮೀಣ ಪ್ರದೇಶದಲ್ಲಿರುವ ಬಡ ವಿದ್ಯಾರ್ಥಿಗಳನ್ನು ಆಧರಿಸಿ ಶಿಕ್ಷಣಕ್ಕೆ ಕೆಲವು ಸಂಸ್ಥೆಗಳು ಹೆಚ್ಚಿನ ಮಹತ್ವ ನೀಡಿವೆ. ಅವರಿಗೆ ಉತ್ತಮ ಶಿಕ್ಷಣ ನೀಡಬೇಕು. ಚೆನ್ನಾಗಿ ಅಭ್ಯಾಸ ಮಾಡಿ ಆ ಮೂಲಕ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.ಇತ್ತೀಚಿನ ದಿನಗಳಲ್ಲಿ ಪೋಷಕರೂ ಸಹ ಮಕ್ಕಳ ಬಗ್ಗೆ ಹೆಚ್ಚಿನ ನಿಗಾ ವಹಿಸುತ್ತಿಲ್ಲ. ಮಕ್ಕಳು ಏನು ಓದುತ್ತಿದ್ದಾರೆ. ಹೇಗೆಲ್ಲಾ ಅಭ್ಯಾಸ ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಕನಿಷ್ಠ ದಿನಕ್ಕೆ 10 ನಿಮಿಷವಾದರೂ ಸಮಯ ನೀಡಬೇಕು. ಆಗ ಅವರಿಗೂ ಈ ಬಗ್ಗೆ ಭಯ ಬರುತ್ತದೆ. ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.
ಇದೇ ವೇಳೆ ಶಿಕ್ಷಕ ರವಿಕುಮಾರ್ ಅವರು ನೀಡಿದ ಲ್ಯಾಪ್‌ಟಾಪ್ ಗಳನ್ನು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಸಮಾರಂಭವನ್ನು ಶಾಸಕ ಪಿ.ರವಿಕುಮಾರ್ ಉದ್ಘಾಟಿಸಿದರು. ಸಂಸ್ಥೆ ಅಧ್ಯಕ್ಷೆ ಅಂಜನಾ ಶ್ರೀಕಾಂತ್ ಅಧ್ಯಕ್ಷತೆ ವಹಿಸಿದ್ದರು. ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸಿ.ಚಲುವಯ್ಯ, ಸಂಸ್ಥೆ ಡಾ. ಬಿ.ಕೆ.ಸುರೇಶ್, ಶಕಿಲಾ ಪ್ರಕಾಶ್, ಮಂಜುನಾಥ್, ಅಶೋಕ್, ಕಸ್ತೂರಿ, ಕಾಲೇಜಿನ ಪ್ರಾಂಶುಪಾಲೆ ಎನ್.ಜಿ. ಲತಾ, ಪ್ರೌಢಶಾಲಾ ಮುಖ್ಯ ಶಿಕ್ಷಕ ಎಚ್.ವಿ. ಧನಲಕ್ಷ್ಮಿ ಇತರರು ಭಾಗವಹಿಸಿದ್ದರು.