ಮಹಾತ್ಮ ಗಾಂಧಿ ಶಾಲೆಯಲ್ಲಿ ಅಭಿವೃದ್ಧಿಯೇ ಮೌನ!

| Published : May 26 2024, 01:31 AM IST

ಮಹಾತ್ಮ ಗಾಂಧಿ ಶಾಲೆಯಲ್ಲಿ ಅಭಿವೃದ್ಧಿಯೇ ಮೌನ!
Share this Article
  • FB
  • TW
  • Linkdin
  • Email

ಸಾರಾಂಶ

ಗಂಡ-ಹೆಂಡತಿ ನಡುವೆ ಕೂಸು ಬಡವಾಯಿತು ಎಂಬಂತೆ ಶಿಕ್ಷಣ ಇಲಾಖೆ-ಪುರಸಭೆಯ ನಡುವಿನ ತಾತ್ಸಾರ ಮನೋಭಾವದಿಂದ 200 ವರ್ಷಗಳ ಇತಿಹಾಸ ಹೊಂದಿರುವ ಅಂಬೇಡ್ಕರ್ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಶತಾಬ್ಧಿ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿದೆ.

ಖಾಜು ಸಿಂಗೆಗೋಳ

ಕನ್ನಡಪ್ರಭ ವಾರ್ತೆ ಇಂಡಿಗಂಡ-ಹೆಂಡತಿ ನಡುವೆ ಕೂಸು ಬಡವಾಯಿತು ಎಂಬಂತೆ ಶಿಕ್ಷಣ ಇಲಾಖೆ-ಪುರಸಭೆಯ ನಡುವಿನ ತಾತ್ಸಾರ ಮನೋಭಾವದಿಂದ 200 ವರ್ಷಗಳ ಇತಿಹಾಸ ಹೊಂದಿರುವ ಅಂಬೇಡ್ಕರ್‌ ವೃತ್ತದಲ್ಲಿರುವ ಮಹಾತ್ಮ ಗಾಂಧಿ ಶತಾಬ್ಧಿ ಸರ್ಕಾರಿ ಹಿರಿಯ ಕನ್ನಡ ಗಂಡು ಮಕ್ಕಳ ಪ್ರಾಥಮಿಕ ಶಾಲೆಯ ಸ್ಥಿತಿ ಶೋಚನೀಯವಾಗಿದೆ.

1826ರಲ್ಲಿ ಪ್ರಾರಂಭಗೊಂಡ ಈ ಶಾಲೆಯ ಜಾಗ ಪುರಸಭೆಗೆ ಸೇರಿದ್ದು. ಅಂದಿನ ಪುರಸಭೆಯ ಅಧ್ಯಕ್ಷರು, ಸದಸ್ಯರು, ಪಟ್ಟಣದ ಮಕ್ಕಳಿಗೆ ಶಿಕ್ಷಣ ಸಿಗಲಿ ಎಂಬ ಉದ್ದೇಶದಿಂದ ಪುರಸಭೆ ವತಿಯಿಂದ ಜಾಗ ನೀಡಿ, ಕಟ್ಟಡ ನಿರ್ಮಿಸಿ ಶಿಕ್ಷಣ ಇಲಾಖೆಯಿಂದ ಶಾಲೆ ನಡೆಸಲು ಅನುಕೂಲ ಕಲ್ಪಿಸಿಕೊಡಲಾಗಿತ್ತು. ಆದರೆ ಇಂದು ಪುರಸಭೆಯ ಶೈಕ್ಷಣಿಕ ಚಿಂತನೆ ಇಲ್ಲದ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದ ಈ ಶಾಲೆ ಮೂಲಸೌಕರ್ಯಗಳಿಂದ ನರಳುತ್ತಿದೆ. ಕಟ್ಟಡದ ಸುತ್ತಲಿನ ಗೋಡೆಗಳು ಗಟ್ಟಿಯಾಗಿದ್ದು, ಚಾವಣಿ ಮಾತ್ರ ಬಿರುಕು ಬಿಟ್ಟಿದೆ. ಮಳೆ ಬಂದರೆ ಶಾಲಾ ಕೋಣೆಗಳು ಜಲಾವೃತ್ತವಾಗುತ್ತವೆ.

55 ವರ್ಷಗಳಿಂದ ದುರಸ್ತಿ:

ಸ್ವತಂತ್ರ್ಯ ಪೂರ್ವದಲ್ಲಿ 1826 ರಲ್ಲಿ ಪ್ರಾರಂಭವಾದ ಈ ಶಾಲೆ ದ್ವಿಶತಮಾನ ಪೊರೈಸುತ್ತಿದೆ. ಮೊದಲು ಈ ಶಾಲೆ ಪಟ್ಟಣದ ಬಜಾರದಲ್ಲಿರುವ ಮಹಾತ್ಮ ಗಾಂಧಿ ವೃತ್ತದಲ್ಲಿತ್ತು. ಅಲ್ಲಿನ ಶಾಂತೇಶ್ವರ ಟ್ರಸ್ಟ್‌ನ ಕೋಣೆಗಳಲ್ಲಿ ತರಗತಿ ಆರಂಭಿಸಲಾಗಿತ್ತು. ನಂತರ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿದ್ದರಿಂದ ಅಲ್ಲಿನ ಶಾಲೆಯನ್ನು ಅಂಬೇಡ್ಕರ್‌ ವೃತ್ತದಲ್ಲಿರುವ ಪುರಸಭೆಯ ಜಾಗದಲ್ಲಿ ಪುರಸಭೆಯಿಂದ ಶಾಲಾ ಕೋಣೆಗಳನ್ನು ನಿರ್ಮಿಸಿ ಈ ಶಾಲೆ ನಡೆಸಲು ಅನುಕೂಲ ಕಲ್ಪಿಸಲಾಗಿದೆ.

1969 ರಲ್ಲಿ ಅಂದಿನ ಮೈಸೂರು ರಾಜ್ಯದ ಕಂದಾಯ ಸಚಿವರಾಗಿದ್ದ ಎಚ್‌.ವಿ.ಕೌಜಲಗಿ ಅವರು ಈ ಶಾಲೆಯ ಒಟ್ಟು 16 ಕೋಣೆಗಳನ್ನು ಉದ್ಘಾಟಿಸಿದ್ದಾರೆ. ಅಂದು ನಿರ್ಮಾಣ ಮಾಡಿದ ಈ ಶಾಲೆ ಕೋಣೆ ಇಂದಿನವರೆಗೂ ದುರಸ್ತಿಗೊಳಿಸುವ ಕೆಲಸ ನಡೆಯದೇ ಇರುವುದು ಜನರ ಆಕ್ರೋಶಕ್ಕೂ ಕಾರಣವಾಗಿದೆ.

ಶಿಥಿಲ ಕೋಣೆಗಳು:

ಸದ್ಯ ಇರುವ 16 ಕೋಣೆಗಳಲ್ಲಿ 10 ಕೋಣೆಗಳು ಶಿಥಿಲಗೊಂಡಿವೆ. ಚಾವಣಿಗೆ ಹಾಕಿದ ಕಬ್ಬಿಣದ ರಾಡ್‌ಗಳು ಕಾಣುವಂತಾಗಿವೆ. ಕೆಲವೊಂದು ಕೋಣೆಗಳ ಚಾವಣಿ ಬಿದ್ದಿವೆ. ಸಿಮೆಂಟ್‌ ಕಿತ್ತು ಹೋಗಿದ್ದು, ಮಳೆ ನೀರು ಶಿಥಿಲಗೊಂಡ ಕೋಣೆಯಲ್ಲಿ ನುಗ್ಗುತ್ತವೆ. ಇರುವ 6 ಕೋಣೆಯಲ್ಲಿಯೇ ಸ್ವಲ್ಪಮಟ್ಟಿಗೆ ನಾಲ್ಕು ಕೋಣೆಗಳು ಮಕ್ಕಳು ಕುಳಿತುಕೊಳ್ಳಲು ಸರಿಯಾಗಿದ್ದಿರುವುದರಿಂದ ಭಯದಲ್ಲಿಯೇ ಶಿಕ್ಷಕರು ಮಕ್ಕಳಿಗೆ ಪಾಠ ಬೋಧನೆ ಮಾಡುತ್ತಿದ್ದಾರೆ.

ಇರುವ 6 ಕೋಣೆಗಳಲ್ಲಿ ಒಂದು ಕೋಣೆಯಲ್ಲಿ 1 ರಿಂದ 3ನೇ ತರಗತಿವರೆಗೆ ನಲಿಕಲಿ ಪಾಠಬೋಧನೆ, 4 ಮತ್ತು 5 ತರಗತಿ ಒಂದು ಕೋಣೆಯಲ್ಲಿ, ಇನ್ನೊಂದು ಕೋಣೆಯಲ್ಲಿ 6 ಮತ್ತು 7 ನೇ ತರಗತಿ ನಡೆಯುತ್ತವೆ. ಇನ್ನೊಂದು ಕೋಣೆಯಲ್ಲಿ 8 ನೇ ತರಗತಿ ನಡೆಯುತ್ತಿದೆ. ಸುಮಾರು 1 ರಿಂದ 8ನೇ ತರಗತಿಯವರೆಗೆ ಸದ್ಯ 226 ಮಕ್ಕಳು ಪ್ರವೇಶ ಪಡೆದಿದ್ದಾರೆ. ಜೂನ್‌ ತಿಂಗಳಲ್ಲಿ 1 ನೇ ತರಗತಿಗೆ ಮತ್ತೆ ಪ್ರವೇಶ ಪ್ರಾರಂಭವಾಗುತ್ತದೆ. ಆಗ ಮಕ್ಕಳ ಶಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ. 11 ಜನ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ.

ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಚಾವಣಿ ಮುರಿದು ಮಕ್ಕಳ ಮೇಲೆ ಬಿದ್ದು ಅಪಾಯ ತರುವ ಮುನ್ನ ಕೋಣೆಗಳ ದುರಸ್ತಿ ಮಾಡಿಸಲು ಮುಂದಾಗಬೇಕು. ಇಲ್ಲವೇ ಜಾಗವನ್ನು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ಕೆಲಸ ಆಗಬೇಕು. ಇನ್ನಾದರೂ

---

ಬಾಕ್ಸ್‌

ಶಿಕ್ಷಣ ಇಲಾಖೆಯಿಂದ ಬಾಡಿಗೆ ಪಡೆಯುವ ಪುರಸಭೆ?

ಮಳೆ ಬರುವ ಮುನ್ಸೂಚನೆ ಕಂಡರೆ ಮಕ್ಕಳನ್ನು ಶಾಲಾ ಕೋಣೆಯಿಂದ ಹೊರಗೆ ಹಾಕಿ, ಶಾಲಾ ಮುಂದಿನ ಆಸರೆಯಲ್ಲಿ ನಿಲ್ಲಿಸಬೇಕು. ಮಳೆಗಾಲ ಬಂದರೆ ಶಿಕ್ಷಕರು, ಮಕ್ಕಳು, ಪಾಲಕರಿಗೆ ಭಯವೇ ಆವರಿಸುತ್ತದೆ. ಪುರಸಭೆಯ ಜಾಗದಲ್ಲಿ ಶಾಲಾ ನಿರ್ಮಾಣವಾಗಿರುವುದರಿಂದ ಪುರಸಭೆ ಪ್ರತಿ ತಿಂಗಳು ಈ ಶಾಲೆಯ ಬಾಡಿಗೆ ಎಂದು ಶಿಕ್ಷಣ ಇಲಾಖೆಯಿಂದ ಪಡೆಯುತ್ತಿದೆ ಎಂದು ಹೇಳಲಾಗುತ್ತದೆ.

----

ಅಧಿಕಾರಿಗಳ ಬೇಜವಾಬ್ದಾರಿಗೆ ನಲುಗಿದ ಮಕ್ಕಳು

ಶಾಲಾ ಚಾವಣಿ ಬೀಳುವ ಹಂತ ತಲುಪಿದರೂ ಪುರಸಭೆಯಿಂದಾಗಲಿ, ಶಿಕ್ಷಣ ಇಲಾಖೆಯಿಂದಾಗಲಿ, ಶಾಲಾ ಕೋಣೆಗಳ ದುರಸ್ತಿ ಕೆಲಸ ಆಗಿರುವುದಿಲ್ಲ. ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಕೇಳಿದರೆ ಆ ಶಾಲೆಯ ಜಾಗ ಪುರಸಭೆಯ ಹೆಸರಿನಲ್ಲಿ ಇದೆ. ಶಿಕ್ಷಣ ಇಲಾಖೆಗೆ ಬಿಟ್ಟು ಕೊಟ್ಟರೆ ಕಟ್ಟಡ ನಿರ್ಮಿಸಲು ಅನುದಾನ ಬರುತ್ತದೆ ಎಂದು ಹೇಳುತ್ತಾರೆ. ಇತ್ತ ಪುರಸಭೆ ಅಧಿಕಾರಿಗಳಿಗೆ ಕೇಳಿದರೆ, ಹಲವು ಬಾರಿ ಶಾಲಾ ಕಟ್ಟಡದ ಕುರಿತು ಸಾಮಾನ್ಯ ಸಭೆಯಲ್ಲಿ ಇಟ್ಟರೂ ಆಡಳಿತ ಮಂಡಳಿ ಅದರ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎನ್ನುತ್ತಾರೆ. ಎರಡು ಇಲಾಖೆಗಳ ಮಧ್ಯ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ.

---

ಕೋಟ್‌

ಶಾಲೆಯ ಚಾವಣಿ ಸಂಪೂರ್ಣ ಶಿಥಿಲಗೊಂಡಿವೆ. 16 ಕೋಣೆಗಲ್ಲಿ ಕೇವಲ 6 ಕೋಣೆಗಳು ಪಾಠ ಬೋಧನೆಗೆ ಅನುಕೂಲವಾಗಿವೆ. ಶಿಥಿಲಗೊಂಡ ಚಾವಣಿ ಮಕ್ಕಳ ಮೇಲೆ ಬಿದ್ದಿ ಅಪಾಯ ತರುತ್ತದೆ ಎಂಬ ಭಯ ಕಾಡುತ್ತಿದೆ. ಈ ಕುರಿತು ಮೇಲಧಿಕಾರಿಗಳಿಗೆ ವರದಿ ನೀಡಿದ್ದೇವೆ. ಶಾಲೆಯ ಕಟ್ಟಡದ ಗೋಡೆಗಳು ಕಟ್ಟಿಯಾಗಿವೆ. ಚಾವಣಿ ಮಾತ್ರ ಶಿಥಿಲಗೊಂಡು ಮಕ್ಕಳಿಗೆ ಕುಳಿತುಕೊಳ್ಳಲು ತೊಂದರೆಯಾಗಿದೆ.

-ಜಯಶ್ರೀ ಕಟಕದೊಂಡ, ಮುಖ್ಯಶಿಕ್ಷಕಿ, ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ, ಇಂಡಿ.

---

ಇಂಡಿ ಶೈಕ್ಷಣಿಕ ವಲಯದ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಪ್ರಾಥಮಿಕ,ಪ್ರೌಢಶಾಲೆ ಕೋಣೆಗಳಲ್ಲಿ ದುರಸ್ತಿ ಮಾಡುವಂತ ಕೋಣೆಗಳ ಸಂಖ್ಯೆ, ಗ್ರಾಮವಾರು ಶಾಲೆಗಳ ಮಾಹಿತಿಯನ್ನು ವಿಜಯಪುರದ ಜಿಪಂ ಕಾರ್ಯಾಲಯಕ್ಕೆ ಮೇಲಧಿಕಾರಿಗಳ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿದೆ. ಇಂಡಿ ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿನ ಶಾಲೆ ಜಾಗ ಹಾಗೂ ಕಟ್ಟಡ ಪುರಸಭೆಯದ್ದಾಗಿರುವುದರಿಂದ ಈ ಶಾಲೆಗಳ ಕೋಣೆಗಳು ದುರಸ್ತಿ ಕಾರ್ಯ ಶಿಕ್ಷಣ ಇಲಾಖೆಗೆ ಬರುವುದಿಲ್ಲ. ಪುರಸಭೆಯಿಂದ ಜಾಗ, ಕಟ್ಟಡ ಶಿಕ್ಷಣ ಇಲಾಖೆಗೆ ಹಸ್ತಾಂತರಿಸಿದರೆ ದುರಸ್ತಿಗೆ ಕ್ರಮ ಕೈಕೊಳ್ಳಲು ಅನುಕೂಲವಾಗುತ್ತದೆ.

ಟಿ.ಎಸ್.ಆಲಗೂರ, ಬಿಇಒ, ಇಂಡಿ

---

ನಾನು ಪುರಸಭೆಯ ಆಡಳಿತಾಧಿಕಾರಿ ಇರುವುದರಿಂದ ಈ ಶಾಲೆ ದುರಸ್ತಿ ಅಥವಾ ನೂತನ ಚಾವಣೆ ಅಳವಡಿಸಲು ಪುರಸಭೆಯಿಂದ ಅನುದಾನಕ್ಕೆ ಪ್ರಯತ್ನಿಸುತ್ತೇವೆ. ಇಲ್ಲವೇ ಸದಸ್ಯರ ಸಹಕಾರದಿಂದ ಈ ಕಟ್ಟಡಕ್ಕೆ ಪುರಸಭೆಯಿಂದ ಹಣ ನೀಡಲು ಪ್ರಯತ್ನಿಸಲಾಗುತ್ತಿದೆ.

-ಅಬೀದ್ ಗದ್ಯಾಳ ಎಸಿ, ಪುರಸಭೆ ಆಡಳಿತಾಧಿಕಾರಿಗಳು ಇಂಡಿ