ಸಾರಾಂಶ
ಎಸ್.ಎಂ,ಸೈಯದ್ ಗಜೇಂದ್ರಗಡ
ತಾಲೂಕಿನ ರಾಜೂರು ಗ್ರಾಪಂ ವ್ಯಾಪ್ತಿಯ ಕಾಲಕಾಲೇಶ್ವರ ಗ್ರಾಮದಲ್ಲಿರುವ ಕಲ್ಯಾಣಿ ಪಾಳು ಬಿದ್ದು, ಹಾಳಾಗಿ, ಹೂಳು ತುಂಬಿಕೊಂಡ ಕಳೆ ಕಳೆದುಕೊಂಡಿದ್ದು, ನರೇಗಾ ಅಡಿ ಅಭಿವೃದ್ಧಿಪಡಿಸಿದ್ದು ಭಕ್ತರು ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.೨೦೨೨-೨೩ನೇ ಸಾಲಿನಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ದಕ್ಷಿಣ ಕಾಶಿ ಎಂದೇ ಪ್ರಸಿದ್ಧಿಯಾಗಿರುವ ಕಾಲಕಾಲೇಶ್ವರ ದೇವಸ್ಥಾನದ ಭಕ್ತರು ಸ್ನಾನ ಮಾಡಲು ಸ್ಥಾಪಿಸಲಾಗಿದ್ದ ಕಲ್ಯಾಣಿ ಹೊಂಡದ ಪುನಶ್ಚೇತನ ಕಾಮಗಾರಿಯನ್ನು ಕೈಗೊಂಡು ಅಂದಾಜು ₹ ೫ ಲಕ್ಷ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗಿದೆ. ಇದಕ್ಕಾಗಿ ಮಾನವ ದಿನಗಳು ಸೃಜನೆಯಾಗಿದ್ದು, ಅಕುಶಲ ಕಾರ್ಮಿಕರಿಗೆ ₹೧.೧೫ ಲಕ್ಷ ಕೂಲಿ ಪಾವತಿಯಾಗಿದೆ.
ದಕ್ಷಿಣ ಕಾಶಿ ಎಂದೇ ಪ್ರಸಿದ್ಧ: ಪಟ್ಟಣದಿಂದ ೬ ಕಿಮಿ ದೂರದಲ್ಲಿರುವ ಕಾಲಕಾಲೇಶ್ವರ ಗ್ರಾಮದ ಕಾಲಕಾಲೇಶ್ವರ ದೇವಸ್ಥಾನವು ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿದೆ. ಈ ದೇವಸ್ಥಾನಕ್ಕೆ ಜಿಲ್ಲೆ, ಹೊರ ಜಿಲ್ಲೆ ಸೇರಿದಂತೆ ಹೊರ ರಾಜ್ಯದ ಲಕ್ಷಾಂತರ ಭಕ್ತರಿದ್ದಾರೆ. ಭಕ್ತರಿಗಾಗಿಯೇ ಹರಿದು ಹೋಗುವ ಸೆಲೆಯ ನೀರನ್ನು ಸಂಗ್ರಹಿಸಲು ಒಂದು ಕುಡಿಯುವ ಹೊಂಡ (ಕಲ್ಯಾಣಿ ), ಇನ್ನೊಂದು ಜಳಕದ ಹೊಂಡ (ಕಲ್ಯಾಣಿ) ಯನ್ನು ಸುಮಾರು ಒಂದು ಶತಮಾನದ ಹಿಂದೆಯೇ ನಿರ್ಮಿಸಿ ಭಕ್ತರಿಗೆ ಅನೂಕೂಲ ಕಲ್ಪಿಸಲಾಗಿತ್ತು. ಅದರಲ್ಲಿ ಜಳಕ ಮಾಡಿ ದೇವಸ್ಥಾನಕ್ಕೆ ಹೋಗುವ ಜಳಕದ ಕಲ್ಯಾಣಿ ನರೇಗಾದಲ್ಲಿ ಅಭಿವೃದ್ಧಿ ಪಡಿಸಲಾಗಿದೆ.ನರೇಗಾ ಅಡಿ ಅಭಿವೃದ್ಧಿ: ಕಾಲಕಾಲೇಶ್ವರ ಗ್ರಾಮದಲ್ಲಿರುವ ಜಳಕದ ಹೊಂಡ (ಕಲ್ಯಾಣಿ)ಯ ಸುತ್ತುಲೂ ಮುಳ್ಳುಕಂಟಿ ಬೆಳೆದು, ಸಂಪೂರ್ಣ ಹೂಳು ತುಂಬಿಕೊಂಡು ನೀರು ಗಲೀಜಾಗಿ ಸ್ನಾನಕ್ಕೆ ಬರದಂತಾಗಿತ್ತು. ಇದನ್ನು ಗ್ರಾಮಸ್ಥರು ನರೇಗಾ ಯೋಜನೆಯಡಿ ಕಲ್ಯಾಣಿ ಅಭಿವೃದ್ಧಿ ಪಡಿಸಲು ಗ್ರಾಪಂಗೆ ಅರ್ಜಿ ಸಲ್ಲಿಸಿದರು. ನಂತರ ಗ್ರಾಮದ ಸದಸ್ಯರು ಅಧ್ಯಕ್ಷರ ಮತ್ತು ಪಿಡಿಒಗಮನಕ್ಕೆ ತಂದು ೨೦೨೨-೨೩ ನೇ ಸಾಲಿನಲ್ಲಿ ಕ್ರಿಯೋಜನೆಯಲ್ಲಿ ಸೇರ್ಪಡೆ ಮಾಡಿಸಿ ಕಲ್ಯಾಣಿ ಅಭಿವೃದ್ಧಿ ಕಾಮಗಾರಿ ಪ್ರಾರಂಭಿಸಿ ಮುಳ್ಳುಕಂಟಿ ಸ್ವಚ್ಛಗೊಳಿಸಿ, ಕೂಲಿಕಾರರಿಂದ ಹೂಳು ಎತ್ತಿಸಿ, ಕಲ್ಯಾಣಿ ಒಳಗೆ ಮಣ್ಣು ಬಿಳದಂತೆ ಸುತ್ತಲೂ ಕಂಪೌಂಡ ಕಟ್ಟಿಸಲಾಗಿದೆ. ಪರಿಣಾಮ ದೇವಸ್ಥಾನದ ಭಕ್ತ ಸಮೂಹಕ್ಕೆ ಜಳಕದ ಹೊಂಡ ಕಲ್ಯಾಣಿಗೆ ಮರುಜೀವ ಸಿಕ್ಕಿದೆ.
ನರೇಗಾ ಯೋಜನೆಯಡಿ ಕಾಲಕಾಲೇಶ್ವರ ಗ್ರಾಮದಲ್ಲಿ ಪಾರಂಪರಿಕವಾಗಿದ್ದ ಜಳಕದ ಕಲ್ಯಾಣಿಯು ಗ್ರಾಮದ ಹೊರ ಭಾಗದಲ್ಲಿರುವ ಕಾರಣ ನಿರ್ವಹಣೆ ಕೊರತೆಯಿಂದ ಸುತ್ತಲೂ ಮುಳ್ಳುಕಂಟಿ ಬೆಳೆದಿದ್ದವು. ಮಳೆಗಾಲದಲ್ಲಿ ನೀರಿನ ಜತೆಗೆ ಮಣ್ಣು ತುಂಬಿ ಜಳಕಕ್ಕೆ ಯೋಗ್ಯವಿಲ್ಲದ ನೀರಾಗಿತ್ತು. ಭಕ್ತರ ಸ್ನಾನ ಮಾಡುವಾಗ ಮಧ್ಯದಲ್ಲಿ ಸಿಲುಕಿರುವ ಘಟನೆ ನಡೆದಿವೆ. ಇದರಿಂದ ಅಪಾಯಕ್ಕೆ ಆಹ್ವಾನಿಸುತ್ತಿತ್ತು. ಇದಕ್ಕೆ ಸರಿಯಾದ ಕಾಯಕಲ್ಪ ನೀಡಿ ನರೇಗಾ ಯೋಜನೆಯಡಿ ಸುಂದರವಾಗಿ ನಿರ್ಮಾಣ ಮಾಡಿ ಆಕರ್ಷಣೆಯಾಗುವಂತೆ ಮಾಡಿದ್ದಾರೆ. ಕಲ್ಯಾಣಿಯ ಸುತ್ತಲೂ ಸ್ವಚ್ಛಗೊಳಿಸಿ ಸುತ್ತಲೂ ೨ ಫೀಟ್ ಕಟ್ಟೆ ಕಟ್ಟಿ ಜಳಕಕ್ಕೆ ಸೂಕ್ತ ಸ್ಥಳ ಕಲ್ಪಿಸಿದ್ದು, ಭಕ್ತರು ಹಾಗೂ ಪ್ರವಾಸಿಗರಿಗೆ ಅನುಕೂಲವಾಗಿದೆ ಎನ್ನುತ್ತಾರೆ ಗ್ರಾಪಂ ಸದಸ್ಯರಾದ ಮುತ್ತು ತಳವಾರ ಹಾಗೂ ಕಾವ್ಯಾ ಚಿಲಝರಿ.ಮುಳ್ಳುಕಂಟಿ, ವಿಷ ಜಂತುಗಳು, ಕೆಸರು ತುಂಬಿ ತೆಪ್ಪೆ ಗುಂಡಿಯಂತ್ತಾಗಿದ್ದ ಜಳಕದ ಕಲ್ಯಾಣಿಗೆ ನರೇಗಾ ಯೋಜನೆಯಡಿ ಅಭಿವೃದ್ಧಿ ಪಡಿಸುವ ಮೂಲಕ ಕಲ್ಯಾಣಿಗೆ ಮರು ಜೀವನ ನೀಡಲಾಗಿದೆ. ಕಾಲಕಾಲೇಶ್ವರ ದೇವಸ್ಥಾನ ಇರುವ ಕಾರಣ ಜಳಕದ ಕಲ್ಯಾಣಿ ಅಭಿವೃದ್ಧಿ ಪಡಿಸಿರುವುದರಿಂದ ಲಕ್ಷಾಂತರ ಭಕ್ತರ ಸ್ನಾನಕ್ಕೆ ಅನೂಕೂಲವಾಗಿದೆ ಎಂದು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಬಸವರಾಜ ಬಡಿಗೇರ ತಿಳಿಸಿದ್ದಾರೆ.