ಸಾರಾಂಶ
- ಧರ್ಮ ಕಾಲಂನಲ್ಲಿ ಏನು ಬರೆಸಬೇಕೆಂಬುದು ಜನರಿಚ್ಛೆ- ಜಾತಿ ಮಾತ್ರ ‘ವೀರಶೈವ-ಲಿಂಗಾಯತ’ ಅಂತ ಬರೆಸಿ- ಹುಬ್ಬಳ್ಳಿಯಲ್ಲಿ ನಡೆದ ಏಕತಾ ಸಮಾವೇಶ ತೀರ್ಮಾನ
---ಕನ್ನಡಪ್ರಭ ವಾರ್ತೆ ಹುಬ್ಬಳ್ಳಿ
ಇದೇ ಮೊದಲ ಬಾರಿಗೆ ಗುರು-ವಿರಕ್ತರನ್ನು ಒಂದೇ ವೇದಿಕೆಯಲ್ಲಿ ಸಮಾನವಾಗಿ ಕೂರಿಸುವಲ್ಲಿ ಯಶಸ್ವಿಯಾದ ‘ವೀರಶೈವ-ಲಿಂಗಾಯತ ಏಕತಾ ಸಮಾವೇಶ’, ಜಾತಿ ಕಾಲಂನಲ್ಲಿ ‘ವೀರಶೈವ ಲಿಂಗಾಯತ’ ಎಂದು ಬರೆಸುವಂತೆ ಮಾತ್ರ ಸಂದೇಶ ನೀಡಿತು. ಧರ್ಮದ ಬಗ್ಗೆ ಯಾವುದೇ ಸ್ಪಷ್ಟ ನಿರ್ಧಾರಕ್ಕೆ ಬರದೇ ಅವರವರ ವಿವೇಚನೆಗೆ ಬಿಟ್ಟಿತು.ರಾಜ್ಯ ಸರ್ಕಾರ ಸೆ.22ರಿಂದ ಅಕ್ಟೋಬರ್ 7ರವರೆಗೆ ಆರ್ಥಿಕ, ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಗೆ ಮುಂದಾಗಿರುವ ಹಿನ್ನೆಲೆಯಲ್ಲಿ ವೀರಶೈವ-ಲಿಂಗಾಯತರು ಜಾತಿ ಮತ್ತು ಧರ್ಮದ ಕಾಲಂನಲ್ಲಿ ಏನು ಬರೆಸಬೇಕು ಎಂಬ ಗೊಂದಲದಲ್ಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ ಶುಕ್ರವಾರ ಹುಬ್ಬಳ್ಳಿಯಲ್ಲಿ ಏಕತಾ ಸಮಾವೇಶ ಆಯೋಜಿಸಿತ್ತು.
ನಿರೀಕ್ಷೆಯಂತೆ ನೂರಾರು ಸಂಖ್ಯೆಯಲ್ಲಿ ವಿವಿಧ ಮಠಾಧೀಶರು ಪಾಲ್ಗೊಂಡಿದ್ದರು. ಪಂಚಪೀಠಗಳ ಪೈಕಿ ನಾಲ್ಕು ಪೀಠಗಳ ಜಗದ್ಗುರುಗಳು, ವಿವಿಧ ಪಕ್ಷಗಳ ಮಾಜಿ ಹಾಗೂ ಹಾಲಿ ಜನಪ್ರತಿನಿಧಿಗಳು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.ನಾವು ಬೇರೆ, ಬೇರೆ ಅಲ್ಲ:
ವೀರಶೈವ-ಲಿಂಗಾಯತ ಎರಡೂ ಬೇರೆ, ಬೇರೆ ಅಲ್ಲ. ಬಸವಣ್ಣ ಹಾಗೂ ರೇಣುಕಾಚಾರ್ಯರು ಹೇಳಿರುವ ನುಡಿಗಳು ಒಂದೇ ಆಗಿವೆ. ವೀರಶೈವ-ಲಿಂಗಾಯತ ಎನ್ನುವುದು ಸಮಾನಾರ್ಥಕ ಪದಗಳು. ಬೇರೆ, ಬೇರೆ ಅಲ್ಲ. ಎಲ್ಲರೂ ಒಗ್ಗಟ್ಟಾಗಿರಬೇಕು. ಒಗ್ಗಟ್ಟಾಗಿದ್ದರೆ ಶಕ್ತಿ ಜಾಸ್ತಿ ಎಂಬುದನ್ನು ಸಮಾವೇಶದಲ್ಲಿ ಮಾತನಾಡಿದ ಎಲ್ಲರೂ ಒತ್ತಿ ಹೇಳಿದರು.ಜತೆಗೆ, ರಾಜ್ಯ ಸರ್ಕಾರ ನಡೆಸಲು ಉದ್ದೇಶಿಸಿರುವ ಜಾತಿಗಣತಿಯ ಜಾತಿ ಕಾಲಂನಲ್ಲಿ ‘ವೀರಶೈವ-ಲಿಂಗಾಯತ’ ಎಂದೇ ಬರೆಸಬೇಕು. ಉಪಜಾತಿ ಕಾಲಂನಲ್ಲಿ ಒಳಪಂಗಡ ಬರೆಸುವಂತೆ ಮನವರಿಕೆ ಮಾಡಿದರು.
ಮಾನ್ಯತೆ ಇಲ್ಲದ ಧರ್ಮ:ಆದರೆ, ಧರ್ಮದ ಕಾಲಂನಲ್ಲಿ ಏನೆಂದು ಬರೆಸಬೇಕು ಎಂಬುದನ್ನು ಯಾರೂ ಸ್ಪಷ್ಟಪಡಿಸಲಿಲ್ಲ. ಸದ್ಯ ಭಾರತದಲ್ಲಿ ಆರು ಧರ್ಮಗಳಿಗೆ ಮಾತ್ರ ಮಾನ್ಯತೆ ಇದೆ. ಹಾಗಾಗಿ, ವೀರಶೈವ-ಲಿಂಗಾಯತ ಎಂದು ಬರೆಸಿದರೆ ಧರ್ಮದ ಮಾನ್ಯತೆ ಸಿಗುವುದಿಲ್ಲ ಎಂದು ಕೆಲವರು ಅಭಿಪ್ರಾಯ ವ್ಯಕ್ತಪಡಿಸಿದರು. ಇನ್ನು ಕೆಲವರು, ವೀರಶೈವ-ಲಿಂಗಾಯತ ಧರ್ಮ ಬರೆದರೆ ತಪ್ಪೇನು? ಎಂಬ ಪ್ರಶ್ನೆಯನ್ನೂ ಮುಂದಿಟ್ಟರು. ಹಾಗಾಗಿ, ಧರ್ಮದ ಕಾಲಂ ಅವರವರ ವಿವೇಚನೆಗೆ ಬಿಟ್ಟು, ಜಾತಿ ಕಾಲಂನಲ್ಲಿ ‘ವೀರಶೈವ-ಲಿಂಗಾಯತ’ ಎಂದೇ ನಮೂದಿಸುವ ಸಂದೇಶ ನೀಡಲಾಯಿತು.
ಕೊನೆಯಲ್ಲಿ ಮಾತನಾಡಿದ ರಂಭಾಪುರಿ ಶ್ರೀಗಳು, ಕೇಂದ್ರದಲ್ಲಿ ಮಾನ್ಯತೆ ಇಲ್ಲದ ಧರ್ಮದ ಹೆಸರನ್ನು ಬರೆಸಿದರೆ ಅದು ಪರಿಗಣನೆಗೆ ಬರುವುದಿಲ್ಲ. ಹೀಗಾಗಿ, ಅಖಿಲ ಭಾರತ ಮಹಾಸಭಾದವರು ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು, ನಿರ್ಣಯಕ್ಕೆ ಬರುವುದು ಸೂಕ್ತ ಎಂದು ಸಲಹೆ ನೀಡಿದರು.ಒಗ್ಗಟ್ಟು ಪ್ರದರ್ಶನ:
ಸಮಾವೇಶದಲ್ಲಿ ಪಾಲ್ಗೊಂಡಿದ್ದ ವಿವಿಧ ಮಠಾಧೀಶರು, ಜನಪ್ರತಿನಿಧಿಗಳು ಒಗ್ಗಟ್ಟು ಪ್ರದರ್ಶಿಸಿದರು. ನಮ್ಮಲ್ಲಿ ಸಾಕಷ್ಟು ಭಿನ್ನಾಭಿಪ್ರಾಯಗಳಿರಬಹುದು. ಅವುಗಳನ್ನೆಲ್ಲ ಬದಿಗಿಟ್ಟು ಎಲ್ಲರೂ ಒಂದಾಗಬೇಕು. ಒಡಕು ವಿನಾಶ-ಒಗ್ಗಟ್ಟು ಶಕ್ತಿ ಎಂಬುದನ್ನು ಮನಗಾಣಬೇಕು ಎಂಬ ಸಂದೇಶ ನೀಡಿದರು.ಈ ಬಾರಿ, ಜಾತಿಗಣತಿಯ ಪಟ್ಟಿಯಲ್ಲಿ ಎಂದೂ ಕೇಳದೆ ಇರುವ ಜಾತಿಗಳನ್ನು ಸೇರಿಸಲಾಗಿದೆ. ಬಹುಸಂಖ್ಯಾತರಾದ ವೀರಶೈವ-ಲಿಂಗಾಯತರನ್ನು ಕಡಿಮೆ ತೋರಿಸುವ ಹುನ್ನಾರದಿಂದ ಈ ರೀತಿ ಮಾಡಲಾಗುತ್ತಿದೆ ಎಂದು ವಿವಿಧ ಮಠಾಧೀಶರು ಅಸಮಾಧಾನ ವ್ಯಕ್ತಪಡಿಸಿದರು. ಜನಗಣತಿ, ಜಾತಿಗಣತಿ ಮಾಡುವುದು ಕೇಂದ್ರ ಸರ್ಕಾರದ ಅಧಿಕಾರ. ಹೀಗಾಗಿ, ರಾಜ್ಯ ಸರ್ಕಾರ ಇದನ್ನು ಮಾಡುವ ಅಗತ್ಯವಿರಲಿಲ್ಲ ಎಂಬ ಅಭಿಪ್ರಾಯವೂ ಕೇಳಿ ಬಂತು.
ಪಂಚ ಪೀಠಾಧಿಪತಿಗಳಾದ ಬಾಳೆಹೊನ್ನೂರಿನ ವೀರಸೋಮೇಶ್ವರ ರಂಭಾಪುರಿ ಶ್ರೀಗಳು, ಕಾಶಿ ಪೀಠದ ಕಿರಿಯ ಶ್ರೀಗಳು, ಉಜ್ಜಯಿನಿ ಪೀಠದ ಶ್ರೀಗಳು, ಶ್ರೀಶೈಲ ಪೀಠದ ಶ್ರೀಗಳು, ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಶ್ರೀಗಳು, ಮುಂಡರಗಿ ಅನ್ನದಾನ ಶ್ರೀಗಳು, ಸಿದ್ದಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ, ಶಿರಹಟ್ಟಿಯ ಸಿದ್ಧರಾಮ ಮಹಾಸ್ವಾಮೀಜಿ ಸೇರಿದಂತೆ ನೂರಾರು ಮಠಾಧೀಶರು, ಮಾಜಿ ಮುಖ್ಯಮಂತ್ರಿಗಳಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಸಚಿವ ಈಶ್ವರ ಖಂಡ್ರೆ ಸೇರಿ ಹಲವರು ಈ ಸಮಾವೇಶದಲ್ಲಿ ಭಾಗವಹಿಸಿದ್ದರು.===ಎಲ್ಲ ಜಾತಿಗಳೂ ಧರ್ಮ
ಹಿಂದು ಎಂದೇ ಬರೆಸಿ:ಬಿಜೆಪಿಯಿಂದ ನಿರ್ಣಯ
---- ಜಾತಿ, ಉಪಜಾತಿ ವಿಷಯ ಜನರಿಗೇ ಬಿಟ್ಟದ್ದು
---ಕನ್ನಡಪ್ರಭ ವಾರ್ತೆ ಬೆಂಗಳೂರು‘ಜಾತಿ ಸಮೀಕ್ಷೆ ವೇಳೆ ಯಾವುದೇ ಜಾತಿ ಅಥವಾ ಸಮಾಜದವರಿರಲಿ ಧರ್ಮದ ಕಾಲಂನಲ್ಲಿ ಹಿಂದು ಎಂಬುದಾಗಿಯೇ ನಮೂದಿಸಬೇಕು’ ಎಂದು ಬಿಜೆಪಿ ಶಾಸಕರು, ಸಂಸದರನ್ನು ಒಳಗೊಂಡ ರಾಜಕೀಯ ಚಿಂತನಾ ಶಿಬಿರ ಒಕ್ಕೊರಲಿನ ನಿರ್ಣಯ ಕೈಗೊಂಡಿದೆ.
ಶುಕ್ರವಾರ ನಗರದ ಯಲಹಂಕ ಬಳಿಯ ರೆಸಾರ್ಟ್‌ವೊಂದರಲ್ಲಿ ನಡೆದ ಎರಡು ದಿನಗಳ ರಾಜಕೀಯ ಚಿಂತನಾ ಶಿಬಿರದ ಸಮಾರೋಪದಲ್ಲಿ ಈ ಸಂಬಂಧ ನಿರ್ಣಯ ಕೈಗೊಳ್ಳಲಾಯಿತು.ಬಳಿಕ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ರಾಜ್ಯ ಸರ್ಕಾರ ಧರ್ಮ ಒಡೆಯುವ ಕೆಲಸಕ್ಕೆ ಕೈಹಾಕಿದೆ. ಇದೊಂದು ದುರಂತ. ರಾಜ್ಯದ ಕಾಂಗ್ರೆಸ್ ಸರ್ಕಾರ ಸಾಮಾಜಿಕ ಸಮೀಕ್ಷೆ (ಜಾತಿಗಣತಿಯ) ಮೂಲಕ ಜಾತಿಗಳನ್ನು ಒಡೆಯುವ ಹುನ್ನಾರವನ್ನು ಬಯಲಿಗೆಳೆಯಬೇಕು ಎಂದು ಹೇಳಿದರು.ಬಿಜೆಪಿಯ ರಾಜಕೀಯ ಚಿಂತನಾ ಶಿಬಿರ ಅತ್ಯಂತ ಯಶಸ್ವಿಯಾಗಿ ನಡೆದಿದೆ. ಜಾತಿ, ಉಪ ಜಾತಿ ಆಯಾ ಸಮುದಾಯಕ್ಕೆ ಬಿಟ್ಟ ವಿಚಾರ. ಅದನ್ನು ಅವರು ತೀರ್ಮಾನಿಸಬೇಕು. ಆದರೆ, ದೇಶ ಮತ್ತು ರಾಜ್ಯದ ಹಿತದೃಷ್ಟಿಯಿಂದ ಧರ್ಮದ ಕಾಲಂನಡಿ ‘ಹಿಂದು’ ಎಂದು ಬರೆಸಬೇಕು ಎಂದು ಮನವಿ ಮಾಡಿದರು.ರಾಜ್ಯಗಳಿಗೆ ಜಾತಿ ಜನಗಣತಿ ಅಧಿಕಾರ ಇಲ್ಲದಿದ್ದರೂ ಕಾಂಗ್ರೆಸ್ ಸರ್ಕಾರ 47 ಹೊಸ ಜಾತಿಗಳನ್ನು ಸೃಷ್ಟಿಸಿದೆ. ಕ್ರಿಶ್ಚಿಯನ್ ಲಿಂಗಾಯತ, ಕ್ರಿಶ್ಚಿಯನ್ ಒಕ್ಕಲಿಗ, ಕ್ರಿಶ್ಚಿಯನ್ ನೇಕಾರ, ಕ್ರಿಶ್ಚಿಯನ್ ಪರಿಶಿಷ್ಟ ಜಾತಿ, ಪಂಗಡ ಎಂಬಿತ್ಯಾದಿ ಗೊಂದಲಗಳನ್ನು ಸೃಷ್ಟಿಸಿದೆ ಎಂದು ಕಿಡಿಕಾರಿದರು.ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಕಾಂತರಾಜು ವರದಿ ಬಗ್ಗೆ ಸಾಕಷ್ಟು ಚರ್ಚೆಗಳಾಗಿವೆ. ಈ ವರದಿ ಅವೈಜ್ಞಾನಿಕ ಎಂದು ನಾವು ವಿರೋಧಿಸಿದ್ದೆವು. ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆಂಬ ಕಾರಣಕ್ಕೆ ಕಾಂತರಾಜು ವರದಿಯನ್ನು ಸಿದ್ದರಾಮಯ್ಯ ಅವರ ಸರ್ಕಾರ ಕಸದ ಬುಟ್ಟಿಗೆ ಹಾಕಿತ್ತು. ಹಿಂದೆಯೂ ಸಿದ್ದರಾಮಯ್ಯ ಅವರ ಸರ್ಕಾರ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಎಂಬ ಗೊಂದಲ ಸೃಷ್ಟಿಸಿ ಸಮಾಜದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡಿತ್ತು ಎಂದು ವಿಜಯೇಂದ್ರ ಟೀಕಿಸಿದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನಸಭೆ ಪ್ರತಿಪಕ್ಷದ ನಾಯಕ ಆರ್.ಅಶೋಕ್, ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಸಂಸದರಾದ ಗೋವಿಂದ ಕಾರಜೋಳ, ವಿಶ್ವೇಶ್ವರ ಹೆಗಡೆ ಕಾಗೇರಿ, ಶಾಸಕರಾದ ವಿ.ಸುನೀಲ್ ಕುಮಾರ್, ಭೈರತಿ ಬಸವರಾಜ್ ಮತ್ತಿತರರು ಉಪಸ್ಥಿತರಿದ್ದರು.