ಧಾರವಾಡಕ್ಕೆ ಬೇಕಿದೆ ಸುಸಜ್ಜಿತ ಮಾವು ಮಾರುಕಟ್ಟೆ!

| Published : May 21 2024, 12:31 AM IST / Updated: May 21 2024, 12:32 AM IST

ಸಾರಾಂಶ

ಧಾರವಾಡದ ಆಪೂಸ್‌ ಮಾವಿಗೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು, ಗುಜರಾತ ಮತ್ತು ಮಹಾರಾಷ್ಟ್ರಗಳಿಂದ ಮಧ್ಯವರ್ತಿಗಳು ಬಂದು ತೀರಾ ಕಡಿಮೆ ಬೆಲೆಗೆ ಮಾವಿನ ಕಾಯಿ ಮತ್ತು ಹಣ್ಣು ಖರೀದಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ.

ಬಸವರಾಜ ಹಿರೇಮಠ

ಧಾರವಾಡ:

ರಾಜ್ಯದ ಕೋಲಾರ, ರಾಮನಗರ ಹೊರತುಪಡಿಸಿದರೆ ಧಾರವಾಡದಲ್ಲಿಯೇ ಅತಿ ಹೆಚ್ಚು ಮಾವು ಬೆಳೆಯಲಾಗುತ್ತಿದೆ. ಒಂದು ಜಿಲ್ಲೆ ಒಂದು ಉತ್ಪನ್ನ ಎಂಬ ಕೇಂದ್ರ ಸರ್ಕಾರದ ಈ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಗೆ ಮಾವು ಆಯ್ಕೆಯಾಗಿದೆ. ಇಷ್ಟಾಗಿಯೂ ಧಾರವಾಡದಲ್ಲಿ ಮಾವು ಸೇರಿದಂತೆ ತೋಟಗಾರಿಕೆ ಬೆಳೆಗಳ ಮಾರಾಟಕ್ಕೆ ಒಂದು ಸುಸಜ್ಜಿತ ಮಾರುಕಟ್ಟೆಯೇ ಇಲ್ಲ!

2017ರಲ್ಲಿ ಆಗಿನ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ವಿನಯ ಕುಲಕರ್ಣಿ ಅವರ ಸಲಹೆ ಮೇರೆಗೆ ಧಾರವಾಡ ಜಿಲ್ಲಾಡಳಿತ ಮತ್ತು ತೋಟಗಾರಿಕೆ ಇಲಾಖೆ ಈ ಭಾಗದಲ್ಲಿ ಮಾವಿನ ಹಣ್ಣು ಸೇರಿದಂತೆ ಇತರೆ ತೋಟಗಾರಿಕಾ ಬೆಳೆಗಳ ಮಾರಾಟಕ್ಕಾಗಿ ಸಮಗ್ರ, ಸುಸಜ್ಜಿತ ಮಾರುಕಟ್ಟೆಯೊಂದನ್ನು ಸ್ಥಾಪಿಸುವ ಬಗ್ಗೆ ಮಾವು ಮಂಡಳಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಏಳು ವರ್ಷಗಳು ಗತಿಸಿದರೂ ಈ ಪ್ರಸ್ತಾವನೆ ಸರ್ಕಾರದ ಕಪಾಟುಗಳಲ್ಲಿ ಧೂಳು ತಿನ್ನುತ್ತಿದ್ದು ಸರ್ಕಾರದ ನಿರಾಸಕ್ತಿಯಿಂದಾಗಿ ಮಾರುಕಟ್ಟೆ ಸ್ಥಾಪನೆ ಮರೀಚಿಕೆಯಾಗಿ ಉಳಿದಿದೆ.

ಒಂದು ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಮತ್ತು ಶಿತಾಗಾರ ಇಲ್ಲದಿರುವುದರಿಂದಾಗಿ ಮಾವು ಬೆಳೆಗಾರರು ಸೇರಿದಂತೆ ತೋಟಗಾರಿಕೆ ಬೆಳೆಗಾರರು ಬಹಳ ದಿನ ತಮ್ಮ ಉತ್ಪನ್ನವನ್ನು ಸಂರಕ್ಷಿಸಿ ಇಡಲಾಗಿದೆ ಕೈಗೆ ಬಂದ ಬೆಲೆಗೆ ಮಧ್ಯವರ್ತಿಗಳಿಗೆ ಮಾರುತ್ತಿದ್ದಾರೆ. ಇದರಿಂದಾಗಿ ಬೆಳೆಗಾರರಿಗೆ ಲಾಭಕ್ಕಿಂತ ನಷ್ಟವೇ ಹೆಚ್ಚಾಗುತ್ತಿದ್ದು, ಮಧ್ಯವರ್ತಿಗಳು ದುಂಡಗಾಗುತ್ತಿದ್ದಾರೆ. ಸದ್ಯ ಧಾರವಾಡದಲ್ಲಿ ಮಾವಿನ ಹಣ್ಣಿನ ಸುಗ್ಗಿ. ಬೆಳೆಗಾರರಿಗೆ ಸರಿಯಾದ ಮಾರುಕಟ್ಟೆ ಇಲ್ಲದೇ ಎಲ್ಲೆಂದರಲ್ಲಿ ಮಾರಾಟ ಮಾಡುವಂತಾಗಿದೆ. ತೋಟಗಾರಿಕೆ ಇಲಾಖೆ ನಾಲ್ಕೈದು ವರ್ಷಗಳಿಗೊಮ್ಮೆ ಮಾವು ಮೇಳ ಮಾಡುತ್ತಿದ್ದು ಕೆಲವೇ ದಿನಗಳಿಗೆ ಸೀಮಿತ ಇರುವುದರಿಂದ ಬೆಳೆಗಾರರು ಸರಿಯಾಗಿ ತಮ್ಮ ಉತ್ಪನ್ನ ಮಾರಾಟ ಮಾಡಲು ಸಾಧ್ಯವಾಗುತ್ತಿಲ್ಲ.

ಸ್ಟೋರೆಜ್‌ ಇಲ್ಲ:

ಧಾರವಾಡದ ಆಪೂಸ್‌ ಮಾವಿಗೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆ ಇದ್ದು, ಗುಜರಾತ ಮತ್ತು ಮಹಾರಾಷ್ಟ್ರಗಳಿಂದ ಮಧ್ಯವರ್ತಿಗಳು ಬಂದು ತೀರಾ ಕಡಿಮೆ ಬೆಲೆಗೆ ಮಾವಿನ ಕಾಯಿ ಮತ್ತು ಹಣ್ಣು ಖರೀದಿಸಿ ಹಣ ಮಾಡಿಕೊಳ್ಳುತ್ತಿದ್ದಾರೆ. ಮಾವಿನ ಕಾಯಿ ಅಥವಾ ಹಣ್ಣು ಕೆಡದಂತೆ ಸಂಗ್ರಹಿಸಿಡಲು ಅನುಕೂಲತೆ ಇಲ್ಲದಿರುವುದರಿಂದ ಬೆಳೆಗಾರರು ಮಧ್ಯವರ್ತಿಗಳಿಗೆ ಮತ್ತು ಚಿಲ್ಲರೆ ವ್ಯಾಪಾರಸ್ಥರಿಗೆ ಮಾರಿ ಕೈ ತೊಳೆದುಕೊಳ್ಳುತ್ತಿದ್ದಾರೆ. ಆಪೂಸ್ ಮಾವನ್ನು ಬೆಳೆಯುವುದು, ನಿರ್ವಹಿಸುವುದು ದುಬಾರಿ ಕಾರ್ಯವಾಗಿದ್ದು, ವರ್ಷಕ್ಕೆ ಒಂದೇ ಇಳುವರಿ. ಇತ್ತೀಚೆಗೆ ಹವಾಮಾನ ವೈಪರೀತ್ಯದಿಂದ ಇಳುವರಿ ಕಡಿಮೆಯಾಗುತ್ತಿದೆ. ನಿರೀಕ್ಷಿತ ಪ್ರಮಾಣದಲ್ಲಿ ಇಳುವರಿ ಹಾಗೂ ಲಾಭ ಬರದೇ ಇದ್ದಲ್ಲಿ ಬೆಳೆಗಾರರು ನಷ್ಟ ಹೊಂದುವುದು ನಿಶ್ಚಿತ. ಧಾರವಾಡ ತಾಲೂಕಿನಲ್ಲಿ 15 ಸಾವಿರ ಹೆಕ್ಟೇರ್‌ನಷ್ಟು ಭೂಮಿಯಲ್ಲಿ ಮಾವು ಬೆಳೆಯಲಾಗುತ್ತಿದ್ದು ಉತ್ತಮ ದರ್ಜೆಯ ಸಾವಯವ ಹಣ್ಣುಗಳು ವಿದೇಶಿ ಮಾರುಕಟ್ಟೆಯಲ್ಲಿ ಅಪಾರ ಬೇಡಿಕೆ ಹೊಂದಿವೆ. ಆದರೆ, ಮಾರಾಟ ಕೌಶಲ್ಯ ಹೊಂದಿದ ಕೆಲವೇ ಕೆಲವು ಬೆಳೆಗಾರರು ಈ ಅವಕಾಶ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಉಳಿದವರು ಕಡಿಮೆ ಬೆಲೆಗೆ ಮಾವು ಮಾರಾಟ ಮಾಡಿ ಲಾಭಾಂಶದಿಂದ ವಂಚಿತರಾಗುತ್ತಿದ್ದಾರೆ.

30 ಎಕರೆಗೆ ಪ್ರಸ್ತಾವನೆ:

ವಿನಯ ಕುಲಕರ್ಣಿ ಅವರ ಸಲಹೆ ಮೇರೆಗೆ ಧಾರವಾಡ ಸಮೀಪ ಇಟಿಗಟ್ಟಿ ಬಳಿ 30 ಎಕರೆ ಭೂಮಿಯಲ್ಲಿ ಮಾವು ಮತ್ತು ಇತರೆ ತೋಟಗಾರಿಕೆ ಬೆಳೆಗಳ ಮಾರಾಟಕ್ಕಾಗಿ ಸಮಗ್ರ ಮಾರುಕಟ್ಟೆ ಸ್ಥಾಪನೆಯ ಪ್ರಸ್ತಾವನೆಯನ್ನು ಕಳುಹಿಸಲಾಗಿತ್ತು. ಆದರೆ, ನಂತರ ಬಂದ ಸರ್ಕಾರಗಳು ಈ ಬಗ್ಗೆ ಆಸಕ್ತಿ ವಹಿಸಲಿಲ್ಲ. ಈಗಲಾದರೂ ಧಾರವಾಡಕ್ಕೆ ಮಾವು ಸೇರಿದಂತೆ ತೋಟಗಾರಿಕಾ ಬೆಳೆಗಳ ಮಾರಾಟಕ್ಕೆ ಶಾಶ್ವತ ಮಾರುಕಟ್ಟೆ ಸ್ಥಾಪನೆಗೆ ಸರ್ಕಾರ ಮುಂದಾಗಲಿದೆಯೇ ಕಾದು ನೋಡಬೇಕಿದೆ.

ಬೆಳೆಗಾರರಿಗೆ ಕಹಿಯಾದ ಮಾವು:

ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ ಅಡಿಯಲ್ಲಿ ಧಾರವಾಡ ಜಿಲ್ಲೆಗೆ ಮಾವು ಆಯ್ಕೆಯಾದರೂ ಈವರೆಗೂ ಮಾವು ಬೆಳೆಗಾರರಿಗೆ ಯಾವುದೇ ಪ್ರಯೋಜನವಾಗಿಲ್ಲ. ಈ ಬಾರಿಯಂತೂ ನಾವು ತುಂಬಿದಷ್ಟೂ ವಿಮೆ ಹಣ ಬಂದಿಲ್ಲ. ಮಾವಿನ ಕಾಯಿ ಹಾಗೂ ಹಣ್ಣಿಗೆ ಹೇಳಿಕೊಳ್ಳುವ ದರವೂ ಇಲ್ಲ. ಹೀಗಾಗಿ ಪ್ರತಿ ವರ್ಷ ಬೆಳೆಗಾರರಿಗೆ ಮಾವು ಬೆಳೆ ಕಹಿಯಾಗುತ್ತಿದೆ. ಸರ್ಕಾರದಿಂದ ಸುಸಜ್ಜಿತ ಮಾರುಕಟ್ಟೆ ವ್ಯವಸ್ಥೆ ಮತ್ತು ಸಂಸ್ಕರಣಾ ಘಟಕ ಸ್ಥಾಪನೆ ಮಾಡಿದರೆ ಬೆಳೆಗಾರರು ಬದುಕುತ್ತಾರೆ ಎಂದು ಕೆಲಗೇರಿಯ ಮಾವು ಬೆಳೆಗಾರ ಶಾಂತಯ್ಯ ಹಿರೇಮಠ ಆಗ್ರಹಿಸಿದರು.ರಾಜ್ಯದ ಹೆಚ್ಚು ಮಾವು ಬೆಳೆಯುವ ಪ್ರದೇಶಗಳಲ್ಲಿ ಧಾರವಾಡ ಸಹ ಒಂದು. ಹೀಗಾಗಿ ಮಾವು ಅಭಿವೃದ್ಧಿ ಕೇಂದ್ರ ಮಾಡುವ ಕುರಿತ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಈ ಕೇಂದ್ರ ಸ್ಥಾಪನೆಯಾದರೆ ಮಾವು ಮಾರಾಟ, ಸಂಸ್ಕರಣೆ ಸೇರಿದಂತೆ ಮಾವು ಬೆಳೆಗಾರರಿಗೆ ಅನುಕೂಲ ಆಗಲಿದೆ ಎಂದು ತೋಟಗಾರಿಕೆ ಇಲಾಖೆ ಉಪನಿರ್ದೇಶಕ