ಕೆಎಫ್‍ಡಿಗೆ ಮೃತಪಟ್ಟವರಿಗೆ ಪರಿಹಾರ ನೀಡಲು ಸಂಪುಟ ಸಭೆಯಲ್ಲಿ ಚರ್ಚೆ

| Published : Feb 10 2024, 01:45 AM IST / Updated: Feb 10 2024, 04:59 PM IST

ಕೆಎಫ್‍ಡಿಗೆ ಮೃತಪಟ್ಟವರಿಗೆ ಪರಿಹಾರ ನೀಡಲು ಸಂಪುಟ ಸಭೆಯಲ್ಲಿ ಚರ್ಚೆ
Share this Article
  • FB
  • TW
  • Linkdin
  • Email

ಸಾರಾಂಶ

ಫೆ.12ರಿಂದ ಆರಂಭವಾಗುವ ಸಚಿವ ಸಂಪುಟ ಸಭೆಯಲ್ಲಿ ಕೆಎಫ್‌ಡಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ 

ಫೆ.12ರಿಂದ ಆರಂಭವಾಗುವ ಸಚಿವ ಸಂಪುಟ ಸಭೆಯಲ್ಲಿ ಕೆಎಫ್‌ಡಿಯಿಂದ ಸಾವನ್ನಪ್ಪಿದ ವ್ಯಕ್ತಿಯ ಕುಟುಂಬಕ್ಕೆ ಪರಿಹಾರ ನೀಡುವ ಕುರಿತು ಚರ್ಚಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಭರವಸೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಏರ್ಪಡಿಸಿದ್ದ ಮಂಗನ ಕಾಯಿಲೆ (ಕೆಎಫ್‍ಡಿ) ಕುರಿತ ಸಭೆಯಲ್ಲಿ ಅವರು ಮಾತನಾಡಿ, ಕೆಎಫ್‌ಡಿಯಿಂದ ಯಾವುದೇ ಸಾವು ನೋವು ಸಂಭವಿಸಬಾರದು. 

ಆ ರೀತಿ ಕ್ರಮ ವಹಿಸಲು ಸೂಚಿಸಲಾಗಿದೆ. ಇದುವರೆಗೆ ಕೆಎಫ್‍ಡಿಯಿಂದ ಮರಣ ಹೊಂದಿದವರಿಗೆ ಯಾವುದೇ ರೀತಿಯ ಪರಿಹಾರ ಇಲ್ಲ. ಕೆಎಫ್‍ಡಿ ಶಾಶ್ವತ ಪರಿಹಾರ ಹಾಗೂ ಲಸಿಕೆ ಬಗ್ಗೆ ಚರ್ಚಿಸಲು ಏಪ್ರಿಲ್ 13 ಮತ್ತು 14ರಂದು ಅಧಿಕಾರಿಗಳು, ತಜ್ಞರ ತಂಡ ಹಾಗೂ ಶಾಸಕರು, ಆರೋಗ್ಯ ಸಚಿವರೊಂದಿಗೆ ಎರಡು ಹಂತದ ಸಭೆ ನಡೆಸಲಾಗುವುದು ಎಂದು ತಿಳಿಸಿದರು.

ಕೆಎಫ್‌ಡಿ ಬಾಧಿತ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು ನಿಯಮಿತವಾಗಿ ಮನೆ ಮನೆ ಭೇಟಿ ನೀಡಿ, ಜ್ವರ ಪ್ರಕರಣಗಳನ್ನು ಪತ್ತೆ ಹಚ್ಚುವ ಕೆಲಸ ಮಾಡಬೇಕು. ಪ್ರತಿ ಗ್ರಾ.ಪಂ.ಗಳಲ್ಲಿ, ಬಸ್‍ ನಿಲ್ದಾಣಗಳಲ್ಲಿ ಜನರಿಗೆ ಕಾಣುವಂತಹ ಕೆಎಫ್‍ಡಿ ಬಗ್ಗೆ ಅರಿವು ಮೂಡಿಸುವ ಪೋಸ್ಟರ್‌ಗಳನ್ನು ಅಂಟಿಸುವುದು, ಕರಪತ್ರಗಳನ್ನು ನೀಡುವ ಕೆಲಸ ಶೀಘ್ರದಲ್ಲೇ ಆಗಬೇಕು. ಈ ಪ್ರದೇಶದ ಜನರಲ್ಲಿ ಹೆಚ್ಚೆಚ್ಚು ಅರಿವು ಮೂಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜನರಿಗೆ ಜ್ವರ ಇತರೆ ಲಕ್ಷಣಗಳು ಕಂಡುಬಂದಲ್ಲಿ ಶೀಘ್ರವಾಗಿ ಆಸ್ಪತ್ರೆಗೆ ಹೋಗಬೇಕು. ಹೆಚ್ಚಿನ ಸಹಾಯ ಅಗತ್ಯವಿದ್ದಲ್ಲಿ ಡಿಎಚ್‌ಒ ಹೆಲ್ಪ್‌ಲೈನ್ ಸಂಖ್ಯೆಗೆ 08182- 222382 ಇಲ್ಲಿಗೆ ಕರೆ ಮಾಡಿ ಆಂಬ್ಯುಲೆನ್ಸ್, ಚಿಕಿತ್ಸೆ ಸೇರಿದಂತೆ ಅಗತ್ಯ ಸೇವೆ ಪಡೆಯಬಹುದು ಎಂದು ತಿಳಿಸಿದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೆಎಫ್‍ಡಿಗೆ ಲಸಿಕೆ ಅಗತ್ಯವಾಗಿ ಬೇಕು. ಮುಂದೆ ಉಷ್ಣತೆ ಹೆಚ್ಚುತ್ತಿದ್ದಂತೆ ಸೋಂಕು ಹೆಚ್ಚುತ್ತದೆ. ಅದನ್ನು ಊಹಿಸಲೂ ಕಷ್ಟ. 

ಮಲೆನಾಡು ಭಾಗದಲ್ಲಿ ಕೆಎಫ್‍ಡಿ ಬಗ್ಗೆ ಕೋವಿಡ್‍ಗಿಂತ ಹೆಚ್ಚು ಭಯ ಇದೆ. ಆರೋಗ್ಯ ಇಲಾಖೆ ಉನ್ನತಮಟ್ಟದ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಲಸಿಕೆ ನೀಡಬೇಕು. ಸಕ್ರಿಯ ಸಮೀಕ್ಷೆ ನಡೆಯಬೇಕು. ಕೆಎಫ್‌ಡಿ ಬಾಧಿತ ಪ್ರದೇಶಗಳಲ್ಲಿ ಇನ್ನು 2-3 ತಿಂಗಳು ಕಾಲ ಆಂಬುಲೆನ್ಸ್ಮೊ, ಬೈಲ್ ವಾಹನ ಸೇವೆಯನ್ನು ಒದಗಿಸಿ, ಜ್ವರದಂತಹ ಪ್ರಕರಣಗಳನ್ನು ಶೀಘ್ರವಾಗಿ ಉಪಚರಿಸಲು ಅನುಕೂಲ ಮಾಡಿಕೊಡಬೇಕು ಎಂದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಕೇವಲ ಆರೋಗ್ಯ ಇಲಾಖೆ ಮಾತ್ರವಲ್ಲ, ಪಶುಪಾಲನಾ ಇಲಾಖೆ, ಅರಣ್ಯ, ಗ್ರಾಮೀಣಾಭಿವೃದ್ದಿ, ಕಂದಾಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಕ್ಷಣ ಇಲಾಖೆಗಳು ಸಮನ್ವಯದೊಂದಿಗೆ ಕೆಎಫ್‍ಡಿ ನಿಯಂತ್ರಣದಲ್ಲಿ ಸಕ್ರಿಯವಾಗಿ ಕಾರ್ಯನಿರತರಾಗಬೇಕು. ತಮ್ಮ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂದರು.

ಡಿಎಚ್‍ಒ ಡಾ.ರಾಜೇಶ್ ಸುರಗಿಹಳ್ಳಿ ಮಾತನಾಡಿ, ಅರಣ್ಯ ಭಾಗದಲ್ಲಿ ಇರುವವರೆಲ್ಲ ಸರ್ಕಾರಿ ಆಸ್ಪತ್ರೆಗಳಿಂದ ನೀಡಲಾಗುವ ಡಿಇಪಿಎ ತೈಲವನ್ನು ಹಚ್ಚಿಕೊಳ್ಳಬೇಕು. 2022 ರವರೆಗೆ ಕೆಎಫ್‍ಡಿ ನಿಯಂತ್ರಣ ಲಸಿಕೆ ಇತ್ತು. ಇದೀಗ ಹೊಸ ಲಸಿಕೆ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲೇ ಲಭ್ಯವಾಗಲಿದೆ ಎಂದರು.

ರಾಜ್ಯದಲ್ಲಿ 70 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲೆ 25 ಪಾಸಿಟಿವ್ ಪ್ರಕರಣಗಳಿವೆ. 1 ಸಾವು ಸಂಭವಿಸಿದೆ. ಕೆಎಫ್‍ಡಿ ನಿಯಂತ್ರಣಕ್ಕೆ ಅಗತ್ಯವಾದ ಎಲ್ಲ ರೀತಿಯ ಕ್ರಮಗಳನ್ನು ಇತರೆ ಇಲಾಖೆಗಳ ಸಮನ್ವಯದೊಂದಿಗೆ ಕೈಗೊಳ್ಳಲಾಗುತ್ತಿದೆ. ತಾಲೂಕು ಆಸ್ಪತ್ರೆಗಳಲ್ಲಿ ಕೆಎಫ್‍ಡಿಗೆ ಚಿಕಿತ್ಸೆ ನೀಡಲು ಹಾಸಿಗೆಗಳನ್ನು ಮೀಸಲಿರಿಸಲಾಗಿದೆ. ಉನ್ನತ ರೆಫರಲ್ ಸೆಂಟರ್‌ಗೆ ಸಾಗಿಸಲು ಉಚಿತ ಆಂಬುಲೆನ್ಸ್ ಸೌಲಭ್ಯ ಮತ್ತು ಔಷಧಿಗಳ ಲಭ್ಯತೆ ಇದೆ ಎಂದು ತಿಳಿಸಿದರು.

ಸಭೆಯಲ್ಲಿ ಜಿಪಂ ಸಿಇಒ ಸ್ನೇಹಲ್ ಸುಧಾಕರ ಲೋಖಂಡೆ, ಅರಣ್ಯ ಸಂರಕ್ಷಣಾಧಿಕಾರಿ ಶಿವಶಂಕರ್, ಜಿಲ್ಲಾ ಎಸ್‌ಪಿ ಜಿ.ಕೆ.ಮಿಥುನ್ ಕುಮಾರ್, ವಿಡಿಎಲ್ ಅಧಿಕಾರಿ ಡಾ.ಹರ್ಷವರ್ಧನ್, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಶಿವಯೋಗಿ ಯಲಿ ಮತ್ತಿತರರು ಇದ್ದರು.