ಸಾರಾಂಶ
ಕನ್ನಡಪ್ರಭ ವಾರ್ತೆ ಹೊಸದುರ್ಗ
ಸಿರಿಧಾನ್ಯಗಳನ್ನು ಬೆಳೆದು ಮೌಲ್ಯವರ್ಧನೆ ಮಾಡಿ ಬಳಸುವುದರಿಂದ ಅನೇಕ ಕಾಯಿಲೆ ನಿಯಂತ್ರಿಸಬಹುದು ಎಂದು ಹಿರಿಯೂರು ತೋಟಗಾರಿಕೆ ಮಹಾವಿದ್ಯಾಲಯದ ಪ್ರಾಧ್ಯಾಪಕಿ ಶ್ರೀಮತಿ ಡಾ.ಶಶಿಕಲಾ ಬಾಯಿ ಹೇಳಿದರು.ಪಟ್ಟಣದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ಶನಿವಾರ ಆಯೋಜಿಸಲಾಗಿದ್ದ 2023-24ನೇ ಸಾಲಿನ ಆತ್ಮ ಯೋಜನೆಯಡಿ ರಾಷ್ಟ್ರೀಯ ರೈತ ದಿನದ ಅಂಗವಾಗಿ ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ಯಮಿಗಳ ಔಪಚಾರಿಕರಣದ ಬಗ್ಗೆ ಕಿಸಾನ್ ಗೋಷ್ಠಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆಯಲ್ಲಿ ಚಿತ್ರದುರ್ಗ ಜಿಲ್ಲೆಯಲ್ಲಿ ಶೇಂಗಾ ಬೆಳೆ ಆಯ್ಕೆ ಮಾಡಲಾಗಿದ್ದು, ಶೇಂಗಾದಿಂದ ಎಣ್ಣೆ, ಚಿಕ್ಕಿ, ಹಿಂಡಿ, ಕೇಕ್ ಮತ್ತು ಪೀನಟ್ ಬಟರ್ ತಯಾರಿಸಬಹುದು. ಇದರಲ್ಲಿ ಪ್ರೋಟೀನ್ ಅತೀ ಹೇರಳವಾಗಿ ಇರುವುದರಿಂದ ಆರೋಗ್ಯ ಸುಧಾರಿಸುತ್ತದೆ ಎಂದರು.ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ಪ್ರಾಸ್ತಾವಿಕವಾಗಿ ಮಾತನಾಡಿ, ರೈತ ದೇಶದ ಬೆನ್ನೆಲುಬು, ಭಾರತದ 5ನೇ ಪ್ರಧಾನಮಂತ್ರಿಗಳಾದ ಶ್ರೀ ದಿ.ಚೌದರಿ ಚರಣ್ ಸಿಂಗ್ ರೈತರ ಏಳಿಗೆಗಾಗಿ ಹಾಗೂ ರೈತರ ಆದಾಯ ಸ್ಥಿರವಾಗಿರಬೇಕೆಂದು ಶ್ರಮಿಸಿದ ಸ್ಮರಣರ್ಥವಾಗಿ ಇವರ ಹುಟ್ಟು ದಿನವನ್ನು ರಾಷ್ಟೀಯ ರೈತರ ದಿನವನ್ನಾಗಿ ಆಚರಿಸಲಾಗುತ್ತಿದೆ ಎಂದರು.
ಕೃಷಿ ಭಾಗ್ಯ ಯೋಜನೆ, ಕೃಷಿ ಯಾಂತ್ರೀಕರಣ, ಸೂಕ್ಷ್ಮ ನೀರಾವರಿ ಘಟಕಕ್ಕೆ ಅರ್ಜಿ ಸಲ್ಲಿಸುವುದರ ಜೊತೆಗೆ ಪಿ.ಎಂ.ಕಿಸಾನ್ ಯೋಜನೆಗೆ ಇ-ಕೆವೈಸಿ ಮತ್ತು ರೈತರು ತಮ್ಮ ಎಲ್ಲಾ ಪಹಣಿಗಳನ್ನು ಫ್ರೊಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಳ್ಳಲು ತಿಳಿಸಿದರು.ಪಿಎಂಎಫ್‌ಎಎಫ್ ಜಿಲ್ಲಾ ಸಂಪನ್ಮೂಲ ವ್ಯಕ್ತಿ ಮೋಹನ್ ಕುಮಾರ್ ಮಾತನಾಡಿ, ಬ್ಯಾಂಕ್ ಗಳ ಲೋನ್ ಸಹಾಯದಿಂದ ಪಿಎಂಎಫ್‌ಎಎಫ್ ಯೋಜನೆಯಡಿ ಸೌಲಭ್ಯ ಪಡೆದುಕೊಂಡು ಹಿಟ್ಟಿನ ಗಿರಣಿ, ಎಣ್ಣೆ ಗಾಣ, ಬೇಕರಿ ಉತ್ಪನ್ನಗಳು, ಸಾಂಬಾರ್ ಪದಾರ್ಥಗಳು, ಸಿರಿಧಾನ್ಯ ಪೌಡರ್, ಶಾವಿಗೆ ಮತ್ತು ತೆಂಗಿನಕಾಯಿ ಪೌಡರ್ ಮಾಡುವ ಉಪಕರಣಗಳನ್ನು ಯಾವುದೇ ಅಡಮಾನವಿಲ್ಲದೇ ಹತ್ತು ಲಕ್ಷದವರೆಗೂ ಲೋನ್ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವ ಮುಖಂಡ ಬಿಜಿ ಅರುಣ್, ರೈತ ಮುಖಂಡರಾದ ಮಹೇಶ್ವರಪ್ಪ, ಬಯಲಪ್ಪ ಮಾತನಾಡಿದರು.ಈ ವೇಳೆ ಜಿಲ್ಲಾ ಮತ್ತು ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಕೆ.ಬಿ.ಚಂದ್ರಶೇಖರಪ್ಪ, ಕೃಷಿಕ ಸಮಾಜದ ನಿರ್ದೇಶಕರು ಹಾಗೂ ಸದಸ್ಯರುಗಳು, ಕೃಷಿ ಇಲಾಖೆಯ ಆತ್ಮ ಯೋಜನೆಯ ಸಿಬ್ಬಂದಿ ನಟರಾಜ್, ತುಳಸಿರಾಮು, ಲೋಹಿತ್ & ಕವಿತಾ, ಕೃಷಿ ಸಂಜೀವಿನಿ ತಾಂತ್ರಿಕ ಸಹಾಯಕ ಸಂತೋಷ್.ಎ.ಎನ್, ದುರ್ಗದ ಸಿರಿಧಾನ್ಯ ಕಂಪನಿ ಸಿಇಓ ಬಿ.ಜಿ ಗಿರೀಶ್ ಹಾಗೂ ಕೃಷಿ ಇಲಾಖೆಯ ಸಿಬ್ಬಂದಿವರ್ಗದವರಿದ್ದರು.