ಸಾರಾಂಶ
ದಾಬಸ್‌ಪೇಟೆ: ಮಕ್ಕಳಾಗಿಲ್ಲ ಎಂಬ ಕಾರಣಕ್ಕೆ ಮನನೊಂದ ಗೃಹಿಣೆಯೊಬ್ಬಳು ಮನೆ ಮುಂಭಾಗದ ನೀರಿನ ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ನೆಲಮಂಗಲ ತಾಲೂಕಿನ ಅಪ್ಪೇಗೌಡನಪಾಳ್ಯ ಗ್ರಾಮದ ನಿವಾಸಿ ರವಿ ಪತ್ನಿ ಸವಿತಾ (38) ಮೃತ ಗೃಹಿಣಿ. ಮೂಲತಃ ಹಾಸನ ಜಿಲ್ಲೆ ಹೊಳೆನರಸೀಪುರ ಗ್ರಾಮದ ರವಿ ಕಳೆದ 12 ವರ್ಷಗಳ ಹಿಂದೆ ಚಿತ್ರದುರ್ಗ ಮೂಲದ ಸವಿತಾಳನ್ನು ಪ್ರೇಮ ವಿವಾಹವಾಗಿದ್ದರು. ತಾಲೂಕಿನ ಬೂದಿಹಾಲ್ ಗ್ರಾಮದ ಬಳಿ ಖಾಸಗಿ ಕಂಪನಿಯೊಂದಲ್ಲಿ ಕೆಲಸ ಮಾಡುತ್ತಿದ್ದ ರವಿ ಅಪ್ಪೇಗೌಡನಪಾಳ್ಯ ಗ್ರಾಮದಲ್ಲಿ ಕಳೆದ ಏಳೆಂಟು ವರ್ಷದಿಂದ ಬಾಡಿಗೆ ಮನೆ ಮಾಡಿಕೊಂಡು ತನ್ನ ಪತ್ನಿ ಸವಿತಾ ಜೊತೆ ವಾಸವಾಗಿದ್ದರು. ಇತ್ತೀಚೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸವಿತಾ ತಪಾಸಣೆ ಮಾಡಿಸಿಕೊಂಡಿದ್ದು ವೈದ್ಯರು ಗರ್ಭಕೋಶದಲ್ಲಿ ಸಮಸ್ಯೆಯಿದೆ ಮಕ್ಕಳಾಗಲ್ಲ ಎಂದು ತಿಳಿಸಿದ್ದರು. ಇದ್ದರಿಂದ ಮನವೊಂದ ಸವಿತಾ ಡಿ.1ರಂದು ಮನೆಯಲ್ಲಿ ಯಾರು ಇಲ್ಲದ ವೇಳೆ ಮನೆ ಮುಂಭಾಗದ ಸಂಪ್‌ಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಅದೇ ದಿನ 11 ಗಂಟೆಗೆ ರವಿ ಅತ್ತಿಗೆ ಮಲ್ಲಿಗಮ್ಮ ಮನೆಗೆ ಬಂದು ನೋಡಿದಾಗ ಸವಿತಾ ಕಾಣಿಸಿಲ್ಲ. ಮೊಬೈಲ್ ಕರೆ ಮಾಡಿದ್ದು ಮೊಬೈಲ್ ಮನೆಯಲ್ಲಿದ್ದು ಬಳಿಕ ಕೆಲಸಕ್ಕೆ ತೆರಳಿದ್ದ ರವಿಗೆ ವಿಚಾರ ತಿಳಿಸಿದ್ದಾಳೆ. ರವಿ ಬಂದು ಅಕ್ಕಪಕ್ಕ ವಿಚಾರ ಮಾಡಿದ್ದಾನೆ. ಬಳಿಕ ಮನೆಗೆ ಬಂದು ನೀರಿನ ಸಂಪ್ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.