ಕುಡಿಯುವ ನೀರಿನ ಸಮಸ್ಯೆ ಬಾರದಂತೆ ಎಚ್ಚರವಹಿಸಿ

| Published : Apr 12 2025, 12:46 AM IST

ಸಾರಾಂಶ

ಕುಡಿಯುವ ನೀರು ಪೂರೈಕೆ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಬೇಕು. ಇದರಲ್ಲಿ ವಿಳಂಬ ಧೋರಣೆ ಸಹಿಸೋಲ್ಲ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದಿದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು.

ಕನ್ನಡಪ್ರಭ ವಾರ್ತೆ ಕೋಲಾರಜಿಲ್ಲೆಯಲ್ಲಿ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ಅಗತ್ಯವಿರುವ ಎಲ್ಲ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅಧಿಕಾರಿಗಳಿಗೆ ಸೂಚಿಸಿದರು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಮಾತನಾಡಿ, ಕುಡಿಯುವ ನೀರಿನ ಪೂರೈಕೆಗೆ ಸಂಬಂಧಿಸಿದಂತೆ ಆಯಾ ವಿಧಾನಸಭಾ ಕ್ಷೇತ್ರಗಳ ಶಾಸಕರ ಅಧ್ಯಕ್ಷತೆಯಲ್ಲಿ ನಡೆಯುವ ಟಾಸ್ಕ್ ಫೋರ್ಸ್ ಸಭೆಯ ನಡಾವಳಿ ಅನುಮೋದನೆ ಪಡೆದು ಕೂಡಲೆ ಕಾರ್ಯಪ್ರವೃತ್ತರಾಗಬೇಕು ಎಂದು ಸೂಚಿಸಿದರು.ನೀರು ಪೂರೈಕೆಗೆ ಆದ್ಯತೆ

ಕುಡಿಯುವ ನೀರು ಪೂರೈಕೆ ನಮ್ಮೆಲ್ಲರ ಮೊದಲ ಆದ್ಯತೆಯಾಗಿರಬೇಕು. ಇದರಲ್ಲಿ ವಿಳಂಬ ಧೋರಣೆ ಸಹಿಸೋಲ್ಲ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಕರೆಗಳಿಗೆ ಸ್ಪಂದಿಸದಿದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು. ಕೋಲಾರ ನಗರಸಭೆ ವ್ಯಾಪ್ತಿಯಲ್ಲಿ ಈಗಾಗಲೇ ಯರಗೋಳ್ ಯೋಜನೆಯ ಕುಡಿಯುವ ನೀರನ್ನು ವಾರದಲ್ಲಿ ೨ ದಿನಗಳ ಬದಲಿಗೆ ಪ್ರತಿ ೨ ದಿನಕ್ಕೊಮ್ಮೆ ಸರಬರಾಜು ಮಾಡಲಾಗುತ್ತಿದೆ. ಸಾರ್ವಜನಿಕರಿಗೆ ನೀರಿನ ಮಿತಬಳಕೆ ಕುರಿತಂತೆ ಜಾಗೃತಿ ಮೂಡಿಸಬೇಕು. ನಗರಸಭೆ ವಾಹನಗಳಲ್ಲಿ ಜಿಂಗಲ್ಸ್ ಮಾಡಿಸಿ ಪ್ರಚಾರ ಮಾಡಬೇಕು ಎಂದು ಅಧಿಕಾರಿಗಳಿಗೆ ತಿಳಿಸಿದರು.ಗ್ರಾಮಗಳ ಸಮಸ್ಯೆಗೂ ಗಮನ

ಹಳ್ಳಿಗಳಲ್ಲಿ ಕುಡಿಯುವ ನೀರಿನ ಚರ್ಚೆ ಸಂದರ್ಭದಲ್ಲಿ ಜಿಪಂ ಉಪಕಾರ್ಯದರ್ಶಿ ಶಿವಕುಮಾರ್ ಮಾತನಾಡಿ, ಪ್ರಸ್ತುತ ಜಿಲ್ಲೆಯಲ್ಲಿ ಯಾವುದೇ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿಲ್ಲ. ಮುಂದಿನ ದಿನಗಳಲ್ಲಿ ಸಮಸ್ಯೆ ಉಂಟಾದರೆ ಖಾಸಗಿ ಕೊಳವೆ ಬಾವಿಗಳನ್ನು ಗುರುತಿಸಿಟ್ಟುಕೊಳ್ಳಲಾಗಿದೆ. ಅವುಗಳ ಮೂಲಕ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಿಕೊಳ್ಳಲಾಗಿದೆ ಎಂದರು.ಮೇವಿನ ಕೊರತೆ ಇಲ್ಲ

ಪ್ರಸ್ತುತ ಮಾಲೂರು ತಾಲ್ಲೂಕಿನ ಐದು ಗ್ರಾಪಂಗಳು ಮಾತ್ರ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದ್ದು, ೮ ಖಾಸಗಿ ಕೊಳವೆ ಬಾವಿಗಳನ್ನು ಬಾಡಿಗೆಗೆ ಪಡೆಯಲಾಗಿದೆ. ಜಿಲ್ಲೆಯಲ್ಲಿ ೨೨ ವಾರಗಳಿಗೆ ಸಾಕಾಗುವಷ್ಟು ೨೬೦೨೫೯ ಟನ್‌ಗಳಷ್ಟು ಮೇವು ಲಭ್ಯವಿದೆ ಹಾಗೂ ಪ್ರಸ್ತುತ ಮೇವಿನ ಕೊರತೆ ಇಲ್ಲ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.

ನಗರ/ಪಟ್ಟಣ ಪ್ರದೇಶಗಳ ಕೋಲಾರದ ೭ ವಾರ್ಡ್ ಹಾಗೂ ಮುಳಬಾಗಲಿನ ೮ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉದ್ಬವವಾಗಿದ್ದು, ಒಟ್ಟು ೬೮ ಟ್ರಿಪ್‌ಗಳಲ್ಲಿ ನಗರಸಭೆ, ಪುರಸಭೆ ಟ್ಯಾಂಕರ್‌ಗಳಲ್ಲಿ ಕುಡಿಯುವ ನೀರನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ತಿಳಿಸಿದರು. 333 ಹಳ್ಳಿಗೆ ನೀರಿನ ಸಮಸ್ಯೆ ಸಾಧ್ಯತೆ

ಮುಂದಿನ ಮೂರು ತಿಂಗಳಲ್ಲಿ ಸಂಭಾವ್ಯ ನೀರಿನ ಸಮಸ್ಯಾತ್ಮಕ ಹಳ್ಳಿಗಳ ಪಟ್ಟಿ ಮಾಡಲಾಗಿದ್ದು, ಜಿಲ್ಲೆಯ ೩೩೩ ಹಳ್ಳಿಗಳು ಹಾಗೂ ೨೬ ವಾರ್ಡ್‌ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರಲಿದೆ. ಈಗಾಗಲೆ ಈ ಗ್ರಾಮಗಳಿಗಾಗಿ ಖಾಸಗಿ ಬೋರವೆಲ್ ಬಾಡಿಗೆ ಪಡೆಯಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಾಂಕ್ರಾಮಿಕ ರೋಗಗಳ ಬಗ್ಗೆ ಎಚ್ಚರಿಕೆ

ಸಾಂಕ್ರಾಮಿಕ ರೋಗಗಳಾದ ಮಲೇರಿಯಾ, ಡೆಂಘೀ, ಚಿಕುನ್‌ಗೂನ್ಯ ಹಾಗೂ ಜೆ.ಇ ಖಾಯಿಲೆಗಳು ಬೆಸಿಗೆಯಲ್ಲಿ ಹೆಚ್ಚು ಹರಡಬಹುದಾಗಿದ್ದು, ಸೂಕ್ತ ರಕ್ಷಣಾ ವ್ಯವಸ್ಥೆ ಸಿದ್ಧಪಡಿಸಿಟ್ಟುಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು.

ಬೇಸಿಗೆಯ ಬಿಸಿಲಿನಿಂದ ರಕ್ಷಣೆಯ ಮಾರ್ಗೋಪಾಯಗಳು ಕುರಿತು ಜಿಲ್ಲಾ ವಿಪತ್ತು ನಿರ್ವಹನಾ ಪ್ರಾಧಿಕಾರವು ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಿದ್ದಪಡಿಸಿರುವ ಪ್ರಚಾರ ಸಾಮಗ್ರಿ ಬಿಡುಗಡೆಗೊಳಿಸಿ ಗ್ರಾಪಂ ಮಟ್ಟದಲ್ಲಿ ಈ ಕುರಿತು ಹೆಚ್ಚಿನ ಪ್ರಚಾರ ಕಾರ್ಯ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಈ ಸಂದರ್ಭದಲ್ಲಿ ಎಸ್ಪಿ ಬಿ.ನಿಖಿಲ್, ಎಸಿ ಡಾ.ಮೈತ್ರಿ, ಜಿಪಂ ಡಿಎಸ್ ಶಿವಕುಮಾರ್ ಇದ್ದರು.