ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ
ಅಂಗನವಾಡಿ ಮಕ್ಕಳಿಗೆ ಹಾಲು, ಮೊಟ್ಟೆ, ಸಿರಿಧಾನ್ಯಯುಕ್ತ ಚಿಕ್ಕಿ, ಕಡ್ಲೇಕಾಳು (ನ್ಯೂಟ್ರೀಷಿಯನ್ ಫುಡ್) ಆಹಾರಗಳನ್ನು ಸಮರ್ಪಕವಾಗಿ ಪೂರೈಸಿ ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಶಿಲ್ಪಾನಾಗ್ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅನುಷ್ಠಾನಗೊಳಿಸುತ್ತಿರುವ ಅಪೌಷ್ಠಿಕತೆ ನಿವಾರಣೆ, ಬಾಲ್ಯವಿವಾಹ ನಿಷೇಧ ಕಾಯ್ದೆ, ಒನ್‌ಸ್ಟಾಪ್ ಸೆಂಟರ್ ಸಖಿ ಕೇಂದ್ರ, ಸ್ತ್ರೀಶಕ್ತಿ ಯೋಜನೆ, ಸಾಂತ್ವನ ಹಾಗೂ ಸ್ವಾಧಾರ ಗೃಹ ಯೋಜನೆ ಸಮಿತಿಗಳ ಏಕೀಕೃತ ಜಿಲ್ಲಾಮಟ್ಟದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ತೀವ್ರ ಅಪೌಷ್ಠಿಕತೆಯಿಂದ ಕೂಡಿರುವ 63 ಹಾಗೂ ಸಾಧಾರಣ ಕಡಿಮೆ ತೂಕದ 948 ಮಕ್ಕಳು ಸೇರಿದಂತೆ ಒಟ್ಟು 1011 ಮಕ್ಕಳು ಅಪೌಷ್ಠಿಕತೆಯಿಂದ ಕೂಡಿದ್ದಾರೆ. ಮಕ್ಕಳ ಅಪೌಷ್ಠಿಕತೆ ನಿವಾರಣೆಗೆ ಜಿಲ್ಲೆಯಲ್ಲಿ 5 ಶಿಶು ಅಭಿವೃದ್ಧಿ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಗ್ರೋಥ್ ಚಾರ್ಟ್ ಮೆನು ಪ್ರಕಾರವೇ ಮಕ್ಕಳಿಗೆ ಪೌಷ್ಠಿಕ ಆಹಾರವನ್ನು ಸಮರ್ಪಕವಾಗಿ ವಿತರಿಸಬೇಕು. ಪ್ರತಿ ತಿಂಗಳು ಮಕ್ಕಳ ತೂಕವನ್ನು ಪರಿಶೀಲಿಸಿ ಅಪೌಷ್ಠಿಕತೆಯಿಂದ ಹೊರಬರುವ ಮಕ್ಕಳ ಪಟ್ಟಿಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.ಚಾ.ನಗರ ತಾಲೂಕಿನ ಕಾಡಂಚಿನ ಹಾಗೂ ಹನೂರು ಮತ್ತು ಕೊಳ್ಳೇಗಾಲ ತಾಲೂಕಿನ ಗಿರಿಜನ ಹಾಡಿ ಪ್ರದೇಶಗಳ ಕೆಲ ಅಂಗನವಾಡಿಗಳಿಗೆ ಪೌಷ್ಠಿಕ ಆಹಾರ ಸಮರ್ಪಕವಾಗಿ ಪೂರೈಕೆಯಾಗದಿರುವುದು ಕಂಡುಬಂದಿದೆ. ಈ ನಿಟ್ಟಿನಲ್ಲಿ ಎಲ್ಲಾ ತಾಲೂಕುಮಟ್ಟದ ಅಧಿಕಾರಿಗಳು ಅಂಗನವಾಡಿಗಳಿಗೆ ಖುದ್ದು ಭೇಟಿ ನೀಡಿ ತಪಾಸಣೆ ನಡೆಸಬೇಕು. ಮಕ್ಕಳ ಹಾಜರಾತಿ ಪರಿಶೀಲಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಮಕ್ಕಳ ಆರೋಗ್ಯ ತಪಾಸಣೆ ನಡೆಸಬೇಕು. ಈ ಸಂಬಂಧ ತಾಲೂಕು ಆರೋಗ್ಯಾಧಿಕಾರಿಗಳೊಂದಿಗೆ ಸಮನ್ವಯ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅಂಗನವಾಡಿಗಳಲ್ಲಿ ಕುಡಿಯುವ ನೀರು, ಶೌಚಾಲಯ, ಕಟ್ಟಡ ಸುತ್ತುಗೋಡೆ, ಸ್ವಚ್ಛತೆ, ವಿದ್ಯುತ್ ವ್ಯವಸ್ಥೆ ಸಮರ್ಪಕವಾಗಿರಬೇಕು. ಅಂಗನವಾಡಿ ಕಟ್ಟಡಕ್ಕೆ ನಿವೇಶನ ಅವಶ್ಯವಿದ್ದಲ್ಲಿ ಊರಾಚೆ ಹೊರತುಪಡಿಸಿ ಊರಿನ ಮಧ್ಯಭಾಗದಲ್ಲಿ ಸೂಕ್ತಸ್ಥಳ ನೀಡಲಾಗುವುದು. ಯಾವುದೇ ವಿದ್ಯಾರ್ಥಿನಿಲಯಗಳಿಗೂ ಊರಿನ ಮಧ್ಯಭಾಗದಲ್ಲಿಯೇ ನಿವೇಶನ ನೀಡುವಂತೆ ಸೂಚಿಸಲಾಗಿದೆ. ಶಿಥಿಲ ಅಂಗನವಾಡಿ ಕಟ್ಟಡಗಳನ್ನು ಪರಿಶೀಲಿಸಬೇಕು. ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು. ಅಂದಾಜುಪಟ್ಟಿಯಲ್ಲಿ ಏನೇನು ಸೌಲಭ್ಯಗಳ ಪಟ್ಟಿ ಮಾಡಲಾಗಿದೆಯೋ ಅದೆಲ್ಲವೂ ತ್ವರಿತವಾಗಿ ಆಗುವಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು.ವಿದ್ಯುತ್ ಶುಲ್ಕ ಪಾವತಿಸದ ಕೆಲ ಅಂಗನವಾಡಿಗಳಲ್ಲಿ ವಿದ್ಯುತ್ ಕಡಿತಗೊಳಿಸಿರುವ ಸೆಸ್ಕಾಂ ಅಧಿಕಾರಿಗಳ ಬಗ್ಗೆ ಕಾರ್ಯವೈಖರಿಯನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಜಿಲ್ಲೆಯಲ್ಲಿ ಈಗಾಗಲೇ ಕೆಲ ಆಶ್ರಮ ಶಾಲೆಗಳಿಗೆ ಉಚಿತ ವಿದ್ಯುತ್ ಪೂರೈಕೆಗೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಅದೇ ಮಾದರಿಯಲ್ಲಿ ಅಂಗನವಾಡಿಗಳಿಗೂ ಉಚಿತ ವಿದ್ಯುತ್ ನೀಡಬೇಕು. ಈ ಬಗ್ಗೆ ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಪರಿಹರಿಸಲು ಪ್ರಸ್ತಾವನೆ ಸಿದ್ದಪಡಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಈಶ್ವರ್ ಮಾತನಾಡಿ, ಅಧಿಕಾರಿಗಳು ನಗರ ಪ್ರದೇಶಗಳಲ್ಲಿರುವ ಅಂಗನವಾಡಿಗಳನ್ನು ಮಾತ್ರ ನೋಡಿಕೊಳ್ಳುವುದಲ್ಲ. ಗ್ರಾಮೀಣ ಭಾಗದ ಹಾಗೂ ಆದಿವಾಸಿ ಪ್ರದೇಶಗಳಲ್ಲಿರುವ ಅಂಗನವಾಡಿಗಳಿಗೆ ಭೇಟಿ ನೀಡಿ ಅಲ್ಲಿನ ಮೂಲಸೌಲಭ್ಯ ವ್ಯವಸ್ಥೆಗಳನ್ನು ಪರಿಶೀಲಿಸಬೇಕು ಎಂದರು.
ಜಿಪಂ ಸಿಇಒ ಮೋನಾರೋತ್ ಮಾತನಾಡಿ, ಅಂಗನವಾಡಿಗಳಿಗೆ ಪರಿಶೀಲನೆಗಾಗಿ ಭೇಟಿ ನೀಡಿದ ಸಂದರ್ಭದಲ್ಲಿ ಮಕ್ಕಳು ಹಲ್ಲುಜ್ಜದೆ ಇರುವುದು, ಉಗುರು ಕತ್ತರಿಸದೇ ಕೊಳೆ ತುಂಬಿರುವುದು ಕಂಡುಬಂದಿದ್ದು, ಅಂಗನವಾಡಿ ಶಿಕ್ಷಕರು ಮಕ್ಕಳಿಗೆ ಈ ಬಗ್ಗೆ ತಿಳಿಹೇಳಬೇಕು. ಸ್ವಚ್ಛತೆ ಬಗ್ಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು. ಬಾಲ್ಯವಿವಾಹ ನಿಷೇಧ ಕಾಯ್ದೆ ಬಗ್ಗೆ ಪ್ರಗತಿ ಪರಿಶೀಲಿಸಿದ ಡೀಸಿ ಶಿಲ್ಪಾನಾಗ್ ಪ್ರಸಕ್ತ ಸಾಲಿನಲ್ಲಿ ಇದುವರೆಗೆ ಜಿಲ್ಲೆಯಲ್ಲಿ ೭೮ ಬಾಲ್ಯವಿವಾಹ ಪ್ರಕರಣಗಳನ್ನು ತಡೆಹಿಡಿಯಲಾಗಿದೆ. ಇದು ಇನ್ನೂ ಹೆಚ್ಚಿನ ಪರಿಣಾಮಕಾರಿಯಾಗಬೇಕು. ಪಂಚಾಯಿತಿ ಮಟ್ಟದಲ್ಲಿ ಕಾವಲು ಪಡೆಯನ್ನು ಚುರುಕುಗೊಳಿಸಬೇಕು. ಬಾಲ್ಯವಿವಾಹ ಮುಕ್ತ ಗ್ರಾಪಂ ಆಗಿ ಘೋಷಿಸಲು ಅರಿವು ಕಾರ್ಯಕ್ರಮಗಳನ್ನು ತೀವ್ರಗೊಳಿಸಬೇಕು. ಪಂಚಾಯಿತಿ ಅಧ್ಯಕ್ಷರು, ಸದಸ್ಯರು, ಆಶಾಕಾರ್ಯಕತೆಯರು ಸೇರಿದಂತೆ 13 ಜನರನ್ನೊಳಗೊಂಡ ಸಮಿತಿ ರಚಿಸಬೇಕು ಎಂದು ಡೀಸಿ ಅಧಿಕಾರಿಗಳಿಗೆ ಮನವರಿಕೆ ಮಾಡಿದರು.ಇನ್ನುಳಿದಂತೆ ಸ್ತ್ರೀಶಕ್ತಿ ಯೋಜನೆ, ಒನ್‌ಸ್ಟಾಪ್ ಸೆಂಟರ್ ಸಖಿ ಕೇಂದ್ರ, ಸಾಂತ್ವನ ಹಾಗೂ ಸ್ವಾಧಾರ ಗೃಹ ಯೋಜನೆ ಸಮಿತಿಗಳ ಕುರಿತ ಪ್ರಗತಿಯನ್ನು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರು ಪರಿಶೀಲಿಸಿ ಅಗತ್ಯ ಸಲಹೆ ಸೂಚನೆಗಳನ್ನು ನೀಡಿದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಮಂಜುನಾಥ್, ಶಾಲಾ ಮತ್ತು ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಾಮಚಂದ್ರರಾಜೇ ಅರಸ್, ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಚಲುವರಾಜು, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಬಿಂದ್ಯಾ, ಲೀಡ್ ಬ್ಯಾಂಕ್ ವ್ಯವಸ್ಥಾಪಕರಾದ ಸುರೇಖಾ, ಎಲ್ಲಾ ತಾಲೂಕುಗಳ ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳು, ಜಿಲ್ಲಾ ಹಾಗೂ ತಾಲೂಕು ಮಟ್ಟದ ಮಹಿಳಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷರು, ಪದಾಧಿಕಾರಿಗಳು, ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.