ದುಡಿಯುವ ಜನರ ಜ್ವಲಂತ ಸಮಸ್ಯೆ ಪರಿಹರಿಸಿ

| Published : Feb 18 2025, 12:34 AM IST

ಸಾರಾಂಶ

ಸರ್ಕಾರಗಳ ನೀತಿಗಳ ಫಲವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವವರು ತೀವ್ರವಾದ ಭಾದೆಗೆ ತುತ್ತಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಮೈಸೂರುದೇಶದಾದ್ಯಂತ ದುಡಿಯುವ ಜನರು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಆಲ್ ಇಂಡಿಯಾ ಯುನೈಟೆಡ್ ಟ್ರೇಡ್ ಯೂನಿಯನ್ ಸೆಂಟರ್ (ಎಐಯುಟಿಯುಸಿ) ಜಿಲ್ಲಾ ಸಮಿತಿಯವರು ನಗರದ ರಾಮಸ್ವಾಮಿ ವೃತ್ತದಲ್ಲಿ ಸೋಮವಾರ ಪ್ರತಿಭಟಿಸಿದರು.ಸರ್ಕಾರಗಳ ನೀತಿಗಳ ಫಲವಾಗಿ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ದುಡಿಯುವವರು ತೀವ್ರವಾದ ಭಾದೆಗೆ ತುತ್ತಾಗಿದ್ದಾರೆ. ತ್ಯಾಗ ಬಲಿದಾನಗಳಿಂದ ಗಳಿಸಿದ ಅವರ ಎಲ್ಲಾ ಹಕ್ಕುಗಳು ಇನ್ನಿಲ್ಲವಾಗುತ್ತಿದೆ. ಕಾಯಂ ಉದ್ಯೋಗಗಳು ತೀವ್ರವಾಗಿ ಕಡಿತವಾಗುತ್ತಿವೆ. ಹೊರ ಗುತ್ತಿಗೆ, ವಿವಿಧ ರೀತಿಯ ಗುತ್ತಿಗೆ ಕೆಲಸಗಳು, ನಿಗದಿತ ಅವಧಿಗೆ ಮಾತ್ರ ಉದ್ಯೋಗ, ಗೀಗ್ ಕೆಲಸ ಇತ್ಯಾದಿಗಳು ಈಗ ಸರ್ವೇಸಾಮಾನ್ಯ ಎಂಬಂತಾಗಿದೆ. ಸಾರ್ವಜನಿಕ ಉದ್ಯಮಗಳನ್ನು ಜನಹಿತಕ್ಕೆ ವಿರುದ್ಧವಾಗಿ ಖಾಸಗೀಕರಿಸಲಾಗುತ್ತಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದರು.ದುಡಿಯುವ ಜನರ ವೇತನ ಜೀವನ ವೆಚ್ಚಕ್ಕೆ ಹೋಲಿಸಿದರೆ ಕ್ಷೀಣಿಸುತ್ತಿದೆ. ಸೇವಾ ಭದ್ರತೆ ಮಾಯವಾಗುತ್ತಿದೆ. ಸಾರ್ವಜನಿಕ ಕ್ಷೇತ್ರದ ಆಸ್ತಿಯನ್ನು ಯಾವುದೇ ಹೂಡಿಕೆ ಮಾಡದ ದೈತ್ಯ ಕಾರ್ಪೊರೇಟ್ ಕಂಪನಿಗಳಿಗೆ ಹಸ್ತಾಂತರಿಸಲಾಗುತ್ತಿದೆ. ವಿಮಾನ ನಿಲ್ದಾಣಗಳು, ಹೆದ್ದಾರಿಗಳು, ಬಂದರುಗಳು, ರೈಲ್ವೆ ಹಳಿಗಳು, ನಿಲ್ದಾಣಗಳು ಹೀಗೆ ಎಲ್ಲವನ್ನೂ ಮಾಲೀಕರಿಗೆ ಒಪ್ಪಿಸಲಾಗುತ್ತಿದೆ. ಸಾರ್ವಜನಿಕ ಬ್ಯಾಂಕ್‌ ಗಳನ್ನು ವಿಲೀನಗೊಳಿಸುತ್ತಾ, ಖಾಸಗೀಕರಿಸಲು ಸಿದ್ಧತೆ ನಡೆಸಲಾಗುತ್ತಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿದೇಶಿ ಬಹುರಾಷ್ಟ್ರೀಯ ಕಂಪನಿಗಳ ಮರ್ಜಿಗೆ ಒಳಗಾಗಿ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ಹೆಚ್ಚಳ ಮಾಡಿವೆ. ಅಲ್ಲದೇ, ಯಾವುದೇ ಚರ್ಚೆ, ಸಮಾಲೋಚನೆ ಇಲ್ಲದೇ ಎಲ್ಲಾ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಿ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ಕಾರ್ಮಿಕರ ದುಡಿಮೆಯ ಆರೋಗ್ಯ ಹಾಗೂ ಸುರಕ್ಷತೆಯನ್ನು ಖಾತರಿ ಪಡಿಸುವ ಬದಲಿಗೆ ಸರ್ಕಾರವು ಕೆಲಸದ ಸ್ಥಳಗಳನ್ನು ಪರಿಶೀಲಿಸುವ ಕಾರ್ಯದಿಂದ ದೂರ ಸರಿಯುತ್ತಿದೆ ಎಂದು ಅವರು ಕಿಡಿಕಾರಿದರು.ಹಕ್ಕೊತ್ತಾಯಗಳುಕಾರ್ಮಿಕ ವಿರೋಧಿ 4 ಲೇಬರ್ ಕೋಡ್ ಗಳನ್ನು ರದ್ದುಗೊಳಿಸಿ. ಲೇಬರ್ ಕೋಡ್ ಗಳ ಹೊಸ ನಿಯಮಗಳ ರಚನೆಯನ್ನು ನಿಲ್ಲಿಸಿ. ಎಲ್ಲರಿಗೂ ಕಾಯಂ ಉದ್ಯೋಗವನ್ನು ಒದಗಿಸಿ ಹಾಗೂ ಉದ್ಯೋಗದ ಹಕ್ಕನ್ನು ಸಂವಿಧಾನದ ಮೂಲಭೂತ ಹಕ್ಕನ್ನಾಗಿಸಿ. ರಾಷ್ಟ್ರೀಯ ಕನಿಷ್ಠ ವೇತನವನ್ನು ತಿಂಗಳಿಗೆ 28000ಕ್ಕೆ ಹೆಚ್ಚಿಸಿ ಎಂದು ಅವರು ಒತ್ತಾಯಿಸಿದರು.ಸ್ಕೀಮ್ ಕಾರ್ಯಕರ್ತರನ್ನು ಸರ್ಕಾರಿ ನೌಕರರನ್ನಾಗಿ ಕಾಯಂಗೊಳಿಸಲು ಐಎಲ್ ಸಿಯ 45, 46ನೇ ಶಿಫಾರಸುಗಳನ್ನು ಜಾರಿಗೊಳಿಸಬೇಕು. ಎಲ್ಲಾ ಸ್ಕೀಮ್ ಕಾರ್ಯಕರ್ತರಿಗೆ ಮಾಸಿಕ ಕನಿಷ್ಠ ವೇತನ 28000 ರು., ಪಿಂಚಣಿ 10000 ರು. ಹಾಗೂ ಇಎಸ್‌ಐ ಮತ್ತು ಪಿಎಫ್ ಒದಗಿಸಿ. ಎಲ್ಲಾ ಗುತ್ತಿಗೆ ಕಾರ್ಮಿಕರ ಸೇವೆಗಳನ್ನು ಕಾಯಂಗೊಳಿಸಿ, ಸಮಾನ ಕೆಲಸಕ್ಕೆ ಸಮಾನ ವೇತನವನ್ನು ಖಾತ್ರಿಪಡಿಸುವಂತೆ ಅವರು ಆಗ್ರಹಿಸಿದರು.ಪಿಎಫ್ ಮತ್ತು ಇಎಸ್‌ಐ ಸೌಲಭ್ಯಗಳಿಗೆ ವೇತನ ಮಿತಿ ನಿರ್ಬಂಧವನ್ನು ತೆಗೆದು ಹಾಕಿ, ಎಲ್ಲಾ ಕಾರ್ಮಿಕರಿಗೂ ಈ ಸಾಮಾಜಿಕ ಭದ್ರತೆ ಸೌಲಭ್ಯಗಳನ್ನು ಖಾತ್ರಿಪಡಿಸಿ. ಹೊಸ ಪಿಂಚಣೆ ವ್ಯವಸ್ಥೆ (ಎನ್ ಪಿಎಸ್) ಹಿಂತೆಗೆದುಕೊಳ್ಳಿ ಮತ್ತು ಪಿಂಚಣಿಯನ್ನು ಮೂಲಭೂತ ಹಕ್ಕು ಎಂದು ಪರಿಗಣಿಸಿ ಹಳೆಯ ಪಿಂಚಣಿ ಯೋಜನೆಯನ್ನು (ಒಪಿಎಸ್) ಪುನ: ಜಾರಿಗೊಳಿಸಬೇಕು ಎಂದು ಅವರು ಒತ್ತಾಯಿಸಿದರು.ಬೆಲೆ ಏರಿಕೆಯನ್ನು ನಿಯಂತ್ರಿಸಿ ಮತ್ತು ಆಹಾರದಂತಹ ಅಗತ್ಯ ವಸ್ತುಗಳ ಮೇಲಿನ ಜಿಎಸ್ಟಿಯನ್ನು ಹಿಂಪಡೆಯಿರಿ. ವಿದ್ಯುತ್ (ತಿದ್ದುಪಡಿ) ಮಸೂದೆ 2023 ಅನ್ನು ಹಿಂಪಡೆಯಿರಿ. ಪ್ರಿಪೇಯ್ಡ್ ಸ್ಮಾರ್ಟ್ ಮೀಟರ್ ಅಳವಡಿಸುವುದನ್ನು ನಿಲ್ಲಿಸಿ. ರೈಲ್ವೆ, ರಕ್ಷಣಾ ಕೈಗಾರಿಕೆಗಳು, ಬ್ಯಾಂಕ್, ವಿಮೆ, ಬಂದರುಗಳು, ಏರ್ ವೇಸ್, ಬಿಎಸ್ಎನ್ಎಲ್, ಸಾರಿಗೆ, ಅಂಚೆ- ಸಂಪರ್ಕ, ವಿದ್ಯುತ್, ಪೆಟ್ರೋಲಿಯಂ, ಉಕ್ಕು, ಕಲ್ಲಿದ್ದಲು ಇತ್ಯಾದಿ ಸಾರ್ವಜನಿಕ ವಲಯ, ಸರ್ಕಾರದ ಘಟಕಗಳಲ್ಲಿ ಬಂಡವಾಳ ಹಿಂತೆಗೆತ, ಖಾಸಗೀಕರಣ ಮತ್ತು ಕಾರ್ಪೊರೇಟೀಕರಣವನ್ನು ನಿಲ್ಲಿಸಬೇಕು ಎಂದು ಅವರು ಆಗ್ರಹಿಸಿದರು.ಅಸಂಘಟಿತ ವಲಯದ ಕಾರ್ಮಿಕರು, ವಲಸೆ ಕಾರ್ಮಿಕರು, ಗುತ್ತಿಗೆ ಕಾರ್ಮಿಕರು, ಗಿಗ್ ಪ್ಲಾಟ್ ಫಾರ್ಮ್ ಕಾರ್ಮಿಕರಿಗೆ ಕಲ್ಯಾಣ ಮಂಡಳಿಯನ್ನು ಜಾರಿಗೊಳಿಸಿ. ಉದ್ಯೋಗ, ಸಾಮಾಜಿಕ ಭದ್ರತಾ ಕ್ರಮಗಳನ್ನು ಖಾತ್ರಿಪಡಿಸಿ ಮತ್ತು ಎಲ್ಲಾ ಕಾರ್ಮಿಕರಿಗೆ ವಿಮಾ ರಕ್ಷಣೆ, ಇಎಸ್‌ಐ, ಪಿಎಫ್ ಸೌಲಭ್ಯಗಳನ್ನು ಒದಗಿಸಿ. ಗಾರ್ಮೆಂಟ್ಸ್, ಜವಳಿ, ಸೆಣಬು ಮತ್ತು ಇತರ ಸಣ್ಣ ಪ್ರಮಾಣದ ರೋಗಗ್ರಸ್ತ ಕೈಗಾರಿಕೆಗಳ ಪುನರುಜ್ಜೀವನಕ್ಕಾಗಿ ಪರಿಣಾಮಕಾರಿ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಅವರು ಒತ್ತಾಯಿಸಿದರು.ಕೈಗಾರಿಕೆಗಳ ಮುಚ್ಚುವಿಕೆ, ಹಿಂಬಡ್ತಿ, ಲೇ-ಆಫ್, ಲಾಕ್-ಔಟ್ ನಿಲ್ಲಿಸಿ, ಕೆಲಸದ ಸ್ಥಳಗಳಲ್ಲಿ ಉದ್ಯೋಗ ಭದ್ರತೆ ಮತ್ತು ಸುರಕ್ಷತಾ ಕ್ರಮಗಳನ್ನು ಖಚಿತಪಡಿಸಿಕೊಳ್ಳಿ. ಕೆಲಸದ ಸಮಯವನ್ನು 8 ಗಂಟೆಗಳಿಂದ 12 ಗಂಟೆಗಳವರೆಗೆ ವಿಸ್ತರಿಸುವುದನ್ನು ನಿಲ್ಲಿಸಿ ಎಂದು ಅವರು ಆಗ್ರಹಿಸಿದರು.ಎಲ್ಲರಿಗೂ ಆಹಾರ, ಶಿಕ್ಷಣ ಮತ್ತು ಸಾರ್ವತ್ರಿಕ ಆರೋಗ್ಯ ರಕ್ಷಣೆಯ ಹಕ್ಕಿಗಾಗಿ ಕಾನೂನನ್ನು ಜಾರಿಗೊಳಿಸಿ. ಎಲ್ಲಾ ಪಿಂಚಣಿದಾರರಿಗೆ ಬೆಲೆ ಸೂಚ್ಯಂಕ ಅನುಗುಣವಾದ ಪಿಂಚಣಿಯನ್ನು ಖಾತ್ರಿಪಡಿಸಿ ಮತ್ತು ಕನಿಷ್ಠ 10000 ಪಿಂಚಣಿಯನ್ನು ಒದಗಿಸಿ. ಈ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದನ್ನು ನಿಲ್ಲಿಸಿ ಎಂದು ಅವರು ಒತ್ತಾಯಿಸಿದರು.ಎಐಯುಟಿಯುಸಿ ಜಿಲ್ಲಾಧ್ಯಕ್ಷ ವಿ. ಯಶೋದರ್, ಕಾರ್ಯದರ್ಶಿ ಚಂದ್ರಶೇಖರ ಮೇಟಿ, ಜಂಟಿ ಕಾರ್ಯದರ್ಶಿ ಮುದ್ದುಕೃಷ್ಣ, ಜಿಲ್ಲಾ ಸಮಿತಿಯ ಸದಸ್ಯರಾದ ಪಿ.ಎಸ್. ಸಂಧ್ಯಾ, ಎಚ್.ಎಸ್. ಹರೀಶ್, ಪುಟ್ಟರಾಜು ಮೊದಲಾದವರು ಇದ್ದರು.