ರಾಜ್ಯಾದ್ಯಂತ ದೀಪಾವಳಿ ಲಕ್ಷ್ಮೀ ಪೂಜೆ ಸಂಭ್ರಮ

| Published : Oct 22 2025, 01:03 AM IST

ಸಾರಾಂಶ

ಸೋಮವಾರದಿಂದ ಆರಂಭವಾಗಿರುವ ಮೂರು ದಿನಗಳ ದೀಪಾವಳಿಯ ಸಂಭ್ರಮ ರಾಜ್ಯಾದ್ಯಂತ ಕಳೆಗಟ್ಟುತ್ತಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರುಸೋಮವಾರದಿಂದ ಆರಂಭವಾಗಿರುವ ಮೂರು ದಿನಗಳ ದೀಪಾವಳಿಯ ಸಂಭ್ರಮ ರಾಜ್ಯಾದ್ಯಂತ ಕಳೆಗಟ್ಟುತ್ತಿದೆ. ದೀಪಾವಳಿಯ ಎರಡನೇ ದಿನವಾದ ಮಂಗಳವಾರ, ಅಮಾವಾಸ್ಯೆ ಪ್ರಯುಕ್ತ ಭಕ್ತರು ತಮ್ಮ ಮನೆ, ಅಂಗಡಿ ಮುಂಗಟ್ಟು, ಕಚೇರಿಗಳಲ್ಲಿ ಲಕ್ಷ್ಮೀಪೂಜೆ ನೆರವೇರಿಸಿ, ಸಿಹಿ ಹಂಚಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು. ಪೂಜೆಯ ಅಂಗವಾಗಿ, ಲಕ್ಷ್ಮೀದೇವಿಯನ್ನು ಪೀಠದಲ್ಲಿ ಪ್ರತಿಷ್ಠಾಪಿಸಿ, ದೀಪ, ರಂಗೋಲಿ, ಹೂವುಗಳಿಂದ ಅಲಂಕರಿಸಲಾಗಿತ್ತು. ಅಂಗಡಿ ಮುಂಗಟ್ಟುಗಳಲ್ಲಿ ವ್ಯಾಪಾರಿಗಳು ವಿಶೇಷವಾಗಿ ಹೊಸ ಖಾತಾ ಪುಸ್ತಕವಿಟ್ಟು ಪೂಜಿಸಿದರು. ಲಕ್ಷ್ಮೀಪೂಜೆ ಜೊತೆ ಕೆಲವೆಡೆ ಕುಬೇರನಿಗೂ ಪೂಜೆಗಳು ನೆರವೇರಿದವು. ಸಂಜೆಯಾಗುತ್ತಿದ್ದಂತೆ ಚಿತ್ತಾಕರ್ಷಕ ಪಟಾಕಿಗಳು, ಬಾಣ ಬಿರುಸುಗಳ ಮಿಂಚಿಂದ ಆಗಸ ಕಂಗೊಳಿಸಿತು. ತಡರಾತ್ರಿವರೆಗೂ ತರಹೇವಾರಿ ಪಟಾಕಿ ಸಿಡಿಸಿ, ಜನ ಸಂಭ್ರಮಪಟ್ಟರು.

ಈ ಮಧ್ಯೆ, ಮೈಸೂರು-ಕೊಡಗು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಅಮಾವಾಸ್ಯೆ ಪ್ರಯುಕ್ತ ಮಂಗಳವಾರ ಮೈಸೂರು ಜಿಲ್ಲೆಯ ಇತಿಹಾಸ ಪ್ರಸಿದ್ಧ ಶ್ರೀ ಶಿಡ್ಲು ಮಲ್ಲಿಕಾರ್ಜುನ ಸ್ವಾಮಿ ಬೆಟ್ಟಕ್ಕೆ ಭೇಟಿ ನೀಡಿ, ವಿಶೇಷ ಪೂಜೆ ನೆರವೇರಿಸಿದರು. ದೀಪಾವಳಿ ಅಂಗವಾಗಿ ಕ್ಷೇತ್ರದಲ್ಲಿ ದೀವಟಿಗೆ ಉತ್ಸವ ನಡೆಯಿತು. ಈ ಮಧ್ಯೆ, ಉಡುಪಿ ಜಿಲ್ಲೆ ಮಲ್ಪೆಯ ತೊಟ್ಟಂನ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಕ್ರೈಸ್ತ ಬಾಂಧವರು ದೀಪಾವಳಿ ಹಬ್ಬ ಆಚರಿಸಿದ್ದು, ಸೌಹಾರ್ದತೆಗೆ ಉದಾಹರಣೆಯಾಗಿತ್ತು. ಬುಧವಾರ ಬಲಿಪಾಡ್ಯಮಿಯ ಸಡಗರವಿದ್ದು, ಭಕ್ತರು ತಮ್ಮ ಮನೆಯ ಹಟ್ಟಿಗಳಲ್ಲಿ ಗೋಪೂಜೆ ನೆರವೇರಿಸಲು ಸಜ್ಜಾಗಿದ್ದಾರೆ. ಅದರಲ್ಲೂ, ರಾಜ್ಯದ ಗ್ರಾಮೀಣ ಭಾಗದಲ್ಲಿ ಹಬ್ಬದ ರಂಗು ಕಳೆಕಟ್ಟಿದೆ. ಹಬ್ಬದ ಪ್ರಯುಕ್ತ ಮನೆ, ಮಳಿಗೆಗಳನ್ನು ತಳಿರು ತೋರಣಗಳಿಂದ ಶೃಂಗರಿಸಲಾಗಿದೆ.