ಸಾರಾಂಶ
ಹಾವೇರಿ: ದೀಪಾವಳಿ ಹಬ್ಬವನ್ನು ಬುಧವಾರ ಜಿಲ್ಲಾದ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. ಹಬ್ಬದ ಅಂಗವಾಗಿ ವಿದ್ಯುತ್ ದೀಪಾಲಂಕಾರ, ತಳಿರು ತೋರಣಗಳಿಂದ ಮನೆ, ಅಂಗಡಿಗಳು ಕಂಗೊಳಿಸಿದವು. ಬಲಿ ಪಾಡ್ಯದ ದಿನದಂದು ಮನೆಯಲ್ಲಿ ಎತ್ತಿನ ಸಗಣಿಯಿಂದ ಹಟ್ಟಿ ಲಕ್ಕಮ್ಮ, ಪಾಂಡವರನ್ನು ಪ್ರತಿಷ್ಠಾಪಿಸಿ, ಬಗೆ ಬಗೆಯ ಹೂವುಗಳಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ರೈತಾಪಿ ವರ್ಗದ ಎಲ್ಲರ ಮನೆಯ ಎಲ್ಲ ಕೃಷಿ ಬಳಕೆಯ ಸಾಮಗ್ರಿಗಳನ್ನು ಒಟ್ಟು ಸೇರಿಸಿ ಅರಿಷಿಣ-ಕುಂಕುಮ, ಹೂವುಗಳಿಂದ ಸಿಂಗರಿಸಿದ ಹಟ್ಟಿ ಲಕ್ಕಮ್ಮ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಕೊಟ್ಟಿಗೆಯನ್ನು ಸ್ವಚ್ಛಗೊಳಿಸಿ, ದನ-ಕರುಗಳ ಮೈ ತೊಳೆದು, ಅಲಂಕಾರ ಮಾಡಿ ವಿಶೇಷ ಪೂಜೆ ಸಲ್ಲಿಸಲಾಯಿತು. ಸುಣ್ಣದ ಹೆಜ್ಜೆ ಗುರುತು, ರಂಗೋಲಿಯ ಅಲಂಕಾರ ಹಟ್ಟಿ ಲಕ್ಕಮ್ಮನ ಪೂಜೆಗೆ ವಿಶೇಷ ಮೆರಗು ತಂದಿದ್ದವು. ಸಂಜೆ ದೀಪ ಬೆಳಗಿಸಿ ಪೂಜೆ ಸಲ್ಲಿಸಲಾಯಿತು.ಇನ್ನೂ ಕೆಲವರು ಮನೆಗಳಿಗೆ, ಅಂಗಡಿ-ಮುಗ್ಗಟ್ಟುಗಳಿಗೆ ತೋರಣಕಟ್ಟಿ, ರಂಗೋಲಿ ಹಾಕಿ, ದೀಪಾಲಂಕಾರದ ಮೂಲಕ ಹಣ್ಣು, ಹೂವು ಹಾಗೂ ಸಿಹಿ ಆಹಾರ ಪಾದಾರ್ಥ ತಯಾರಿಸಿ ನೈವೇದ್ಯ ಮಾಡಿ, ಲಕ್ಷ್ಮೀಪೂಜೆ ಸಲ್ಲಿಸಿದರು. ಅನೇಕರು ಸಂಜೆ ಹೊತ್ತಿಗೆ ತಮ್ಮ ಅಂಗಡಿಗಳನ್ನು ಬಣ್ಣ ಬಣ್ಣದ ದೀಪಗಳಿಂದ ಸಿಂಗರಿಸಿ, ರಂಗುರಂಗಿನ ರಂಗೋಲಿಯ ಚಿತ್ತಾರ ಬಿಡಿಸಿ, ಹಣತೆ, ಮೊಂಬತ್ತಿಗಳನ್ನು ಸಾಲು ಸಾಲಾಗಿ ಹಚ್ಚಿ, ಪಟಾಕಿ ಸಿಡಿಸಿ ದೀಪಾವಳಿ ಪೂಜೆ ನೆರವೇರಿಸಿದರು.
ಸಂಜೆಯಾಗುತ್ತಿದ್ದಂತೆ ನಗರದ ಅಂಗಡಿಗಳೆಲ್ಲ ಝಗಮಗಿಸುವ ವಿದ್ಯುತ್ ದೀಪಾಲಂಕಾರದಿಂದ ಎಲ್ಲರನ್ನೂ ಆಕರ್ಷಿಸುತ್ತಿದ್ದವು. ಬಹುತೇಕ ಎಲ್ಲ ಮನೆ ಹಾಗೂ ಅಂಗಡಿಗಳಲ್ಲಿಯೂ ವಿದ್ಯುತ್ ಅಲಂಕಾರ ಮಾಡಿದ್ದರಿಂದ ಇಡೀ ನಗರ, ಹಳ್ಳಿಗಳು ಬೆಳಕಿನಲ್ಲಿ ಮಿಂಚುವಂತಿತ್ತು. ಸಂಜೆ ಹೊತ್ತು ಮಾರುಕಟ್ಟೆ ಪ್ರದೇಶದೆಲ್ಲೆಡೆ ಪೂಜೆ, ಸಿಡಿಮದ್ದಿನ ಶಬ್ದ, ಚಿಣ್ಣರ ಕೈಯಲ್ಲಿದ್ದ ಮಿಂಚಿನ ಕಿಡಿ ಸೂಸುವ ಸುರುಸುರ ಬತ್ತಿ ಹಬ್ಬದ ಸಂಭ್ರಮ ಇಮ್ಮಡಿಗೊಳಿಸಿತು.ದೀಪಾವಳಿಯಲ್ಲಿ ಮಕ್ಕಳಿಗೆ ಪಟಾಕಿ ಹೊಡೆಯುವುದೇ ಹಬ್ಬ. ಮಕ್ಕಳಿಗಾಗಿ ಚಟ್‌ಪಟ್, ಛೋಟಾ ಭೀಮ್, ಆನೆ, ಮಂಗನಬಾಲ ಚಿತ್ರದ ಪಟಾಕಿಗಳು ಆಕರ್ಷಿಸುತ್ತಿದ್ದರೆ, ಮಹಿಳೆಯರು ಸುರುಸರು ಬತ್ತಿ, ಕುಡಕಿ, ಗಿರಿಗಿರಿ ಸೇರಿದಂತೆ ನಾನಾ ಬಗೆಯ ಪಟಾಕಿ ಸಿಡಿಸಿ ಸಂಭ್ರಮಪಟ್ಟರು. ಹಬ್ಬದ ಹಿನ್ನೆಲೆಯಲ್ಲಿ ನಗರದ ಪಟಾಕಿ ಅಂಗಡಿಗಳಲ್ಲಿ ವ್ಯಾಪಾರ ಜೋರಾಗಿ ಕಂಡುಬಂತು.
ಹೋರಿ ಬೆದರಿಸುವ ಕಾರ್ಯಕ್ರಮ: ದೀಪಾವಳಿ ಹಬ್ಬದ ನಿಮಿತ್ತ ಜಿಲ್ಲೆಯ ನಗರದ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಂಭ್ರಮದಿಂದ ಸಾಂಪ್ರದಾಯಕ ಹೋರಿ ಬೆದರಿಸುವ ಕಾರ್ಯಕ್ರಮ ನಡೆಯಿತು. ದೀಪಾವಳಿ ಹಬ್ಬದ ಸಂದರ್ಭದಲ್ಲಿ ಹಾವೇರಿ ಜಿಲ್ಲೆಯಲ್ಲಿ ವಿಶೇಷ ಮಾನ್ಯತೆ ಪಡೆದಿರುವ ಸಾಂಪ್ರದಾಯಿಕ ಕೊಬ್ಬರಿ ಹೋರಿ ಬೆದರಿಸುವ ಕಾರ್ಯಕ್ರಮವನ್ನು ಉತ್ಸಾಹದಿಂದ ನಡೆಸಲಾಯಿತು.ಜಿಲ್ಲೆಯಲ್ಲಿ ಅನ್ನದಾತ ತನ್ನ ನೆಚ್ಚಿನ ಸಂಗಾತಿ ಹೋರಿ ಬೆದರಿಸಿ, ಓಡಿಸಿ ದೀಪಾವಳಿಯ ಸಂಭ್ರಮ ಅನುಭವಿಸಿದರು. ಬಲಿಪಾಡ್ಯದ ದಿನ ಬಹುತೇಕರು ಹೋರಿ ಬೆದರಿಸಿದರು. ದೀಪಾವಳಿ ಹಬ್ಬ ಸಂದರ್ಭದಲ್ಲಿ ಆರಂಭವಾಗುವ ಈ ಸ್ಪರ್ಧೆಗಳು ಸುಮಾರು ಎರಡು ತಿಂಗಳು ಕಾಲ ಬೇರೆ ಬೇರೆ ಪ್ರದೇಶಗಳಲ್ಲಿ ನಡೆಯುವುದು.
;Resize=(128,128))
;Resize=(128,128))
;Resize=(128,128))