ಸಾರಾಂಶ
ತಾಲೂಕು ಕ್ರೀಡಾಂಗಣದಲ್ಲಿ ಕಾಲಿಡಲು ಜಾಗ ಇರದಷ್ಟು ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡು ಬಂದಿತು
ಕೊಪ್ಪಳ: ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಖರೀದಿ ಭರಾಟೆ ಜೋರಾಗಿ ನಡೆಯುತ್ತಿದ್ದು, ಮನೆ, ಅಂಗಡಿ ಸಿಂಗರಿಸಲು ಖರೀದಿಗಾಗಿ ಮಾರುಕಟ್ಟೆಯಲ್ಲಿ ಜನರು ಮುಗಿಬಿದ್ದಿದ್ದಾರೆ.
ಕೊಪ್ಪಳ ಮಾರುಕಟ್ಟೆಯಲ್ಲಿ ಕೆಲಕಾಲಸ ಟ್ರಾಫಿಕ್ ಜಾಮ್ ಆಗುವಂತೆ ಮಾರುಕಟ್ಟೆಗೆ ಜನರು ಮುಗಿಬಿದ್ದಿರುವುದು ಕಂಡುಬಂದಿತು.ನಗರದ ಜವಾಹರ ರಸ್ತೆಯುದ್ದಕ್ಕೂ ಅಂಗಡಿಗಳಲ್ಲಿ ಜನರು ಸಂಭ್ರಮದಿಂದ ಖರೀದಿ ಮಾಡುತ್ತಿರುವುದು ಕಂಡು ಬಂದಿತು. ಹಾಗೆಯೇ ದೀಪಾವಳಿ ಪ್ರಯುಕ್ತ ಕೊಪ್ಪಳ ನಗರದ ತಾಲೂಕು ಕ್ರೀಡಾಂಗಣದಲ್ಲಿ ವಿಶೇಷ ಮಾರುಕಟ್ಟೆ ಏರ್ಪಡಿಸಲಾಗಿರುತ್ತದೆ. ಇಲ್ಲಿ ತಳಿರು, ತೋರಣ, ಪಟಾಕಿ ಸೇರಿದಂತೆ ಹಬ್ಬಕ್ಕೆ ಬೇಕಾದ ಎಲ್ಲವನ್ನು ಮಾರಾಟ ಮಾಡುವ ವ್ಯವಸ್ಥೆ ವಿಶೇಷವಾಗಿರುತ್ತದೆ.
ತಾಲೂಕು ಕ್ರೀಡಾಂಗಣದಲ್ಲಿ ಕಾಲಿಡಲು ಜಾಗ ಇರದಷ್ಟು ಜನರು ಮುಗಿಬಿದ್ದು ಖರೀದಿ ಮಾಡುತ್ತಿರುವುದು ಕಂಡು ಬಂದಿತು. ಜನರು ಮಾರುಕಟ್ಟೆಗೆ ಬಂದಿದ್ದರಿಂದ ನಗರದ ಬಹುತೇಕ ರಸ್ತೆಗಳು ಟ್ರಾಫಿಕ್ ಜಾಮ್ ಆಗಿದ್ದರಿಂದ ಪೊಲೀಸರು ನಿಯಂತ್ರಣ ಮಾಡಲು ಹರಸಾಹಸ ಮಾಡುತ್ತಿರುವುದು ಕಂಡು ಬಂದಿತು.ರೈತರ ಮುಖದಲ್ಲಿಲ್ಲ ಕಳೆ:
ದೀಪಾವಳಿ ಪ್ರಯುಕ್ತ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದ್ದರೂ ಸಹ ರೈತರ ಉತ್ಪಾದಿಸಿದ ಬಹುತೇಕ ಉತ್ಪಾದನೆಯ ದರಗಳು ಪಾತಳಕ್ಕೆ ಕುಸಿದಿವೆ. ಹೀಗಾಗಿ, ದೀಪಾವಳಿ ವಿಶೇಷ ವ್ಯಾಪಾರಕ್ಕೆಂದು ಬಂದಿದ್ದ ರೈತರ ಮುಖದಲ್ಲಿ ಕಳೆಯೇ ಇರಲಿಲ್ಲ.ಈರುಳ್ಳಿ ದರೂ ಕುಸಿದಿದೆ ಟೊಮೆಟೋ ದರವೂ ಇಲ್ಲ. ಅಷ್ಟೇ ಅಲ್ಲ, ಬಾಳೆ ಹಣ್ಣಿನ ದರವೂ ಇಲ್ಲ. ಕಳೆದ ಹತ್ತು ವರ್ಷಗಳಲ್ಲಿಯೇ ಕನಿಷ್ಟ ದರಕ್ಕೆ ಕುಸಿದಿವೆ. ಮೆಕ್ಕೆಜೋಳ ಬೆಲೆಯೂ ಕುಸಿದಿರುವುದರಿಂದ ರೈತರು ತಾವು ಬೆಳೆದ ಮಕ್ಕೆಜೋಳವನ್ನು ಮಾರಾಟ ಮಾಡಲು ಹೆಣಗಾಟ ಮಾಡಬೇಕಾದ ಸ್ಥಿತಿ ಇದೆ.
ರೈತರಿಗೆ ಯಾವುದಕ್ಕೂ ಬೆಲೆ ಸಿಗುತ್ತಿಲ್ಲ. ಆದರೆ, ಗ್ರಾಹಕರು ಖರೀದಿ ಮಾಡುವುದು ಯಾವುದು ಕಮ್ಮಿ ಇಲ್ಲ. ರೈತರಿಂದ ಕೇವಲ ₹10ಗೆ ಡಜನ್ ಬಾಳೆ ಹಣ್ಣು ಖರೀದಿಸುವ ದಲ್ಲಾಳಿಗಳು ಮಾರುಕಟ್ಟೆಯಲ್ಲಿ ಮಾತ್ರ 50-60 ಗೆ ಡಜನ್ ಮಾರಾಟ ಮಾಡುತ್ತಿದ್ದಾರೆ. ಇನ್ನು ಹೂ, ಹಣ್ಣುಗಳನ್ನು ಮಾರುಕಟ್ಟೆಯಲ್ಲಿ ಖರೀದಿ ಮಾಡುವ ಗ್ರಾಹಕರು ಸಹ ಖುಷಿ ಇರದೆ ಇರುವುದು ಕಂಡು ಬಂದಿತು.