ಸೋಲಾರ್‌ ಸಿಸ್ಟಂಗೆ ಅಡ್ಡಿಪಡಿಸದಿರಿ-ಸಚಿವ ಶಿವಾನಂದ ಪಾಟೀಲ

| Published : Jan 05 2025, 01:31 AM IST

ಸಾರಾಂಶ

ರೈತರ ಪಂಪಸೆಟ್‌ಗಳಿಗೆ ಸೋಲಾರ್ ಅಳವಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ-ಹೊಸ ಆವಿಷ್ಕಾರ ಮಾಡಿ ಕಾರ್ಯರೂಪಕ್ಕೆ ತರುತ್ತಿವೆ. ಜಿಲ್ಲೆಯ ಹಲವೆಡೆ ಹೆಸ್ಕಾಂನವರು ಪ್ರಾಯೋಗಿಕವಾಗಿ ಸೋಲಾರ್ ಸಿಸ್ಟಂ ಅಳವಡಿಕೆ ಮಾಡುತ್ತಿದ್ದು, ಯಶಸ್ವಿಯಾದರೆ ಸಹಕಾರ ಕೊಡೋಣ. ಎಷ್ಟು ಜನರಿಗೆ ಸದುಪಯೋಗ ಆಗುತ್ತೋ ಆಗಲಿ, ಆಗದಿದ್ದರೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ. ಅಲ್ಲಿಯವರೆಗೂ ಅಡ್ಡಿಪಡಿಸದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೈತ ಸಂಘದ ಮುಖಂಡರಿಗೆ ಮನವಿ ಮಾಡಿದರು.

ಹಾವೇರಿ: ರೈತರ ಪಂಪಸೆಟ್‌ಗಳಿಗೆ ಸೋಲಾರ್ ಅಳವಡಿಕೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ಹೊಸ-ಹೊಸ ಆವಿಷ್ಕಾರ ಮಾಡಿ ಕಾರ್ಯರೂಪಕ್ಕೆ ತರುತ್ತಿವೆ. ಜಿಲ್ಲೆಯ ಹಲವೆಡೆ ಹೆಸ್ಕಾಂನವರು ಪ್ರಾಯೋಗಿಕವಾಗಿ ಸೋಲಾರ್ ಸಿಸ್ಟಂ ಅಳವಡಿಕೆ ಮಾಡುತ್ತಿದ್ದು, ಯಶಸ್ವಿಯಾದರೆ ಸಹಕಾರ ಕೊಡೋಣ. ಎಷ್ಟು ಜನರಿಗೆ ಸದುಪಯೋಗ ಆಗುತ್ತೋ ಆಗಲಿ, ಆಗದಿದ್ದರೆ ಮುಂದಿನ ದಿನಗಳಲ್ಲಿ ಚರ್ಚೆ ಮಾಡೋಣ. ಅಲ್ಲಿಯವರೆಗೂ ಅಡ್ಡಿಪಡಿಸದಿರಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ರೈತ ಸಂಘದ ಮುಖಂಡರಿಗೆ ಮನವಿ ಮಾಡಿದರು. ನಗರದ ಪ್ರವಾಸಿ ಮಂದಿರದಲ್ಲಿ ಶನಿವಾರ ರೈತ ಮುಖಂಡರೊಂದಿಗೆ ಸಭೆ ನಡೆಸಿ ಚರ್ಚಿಸಿದರು.ಈ ವೇಳೆ ಮಾತನಾಡಿದ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಜಿಲ್ಲೆಯ ಹಲವೆಡೆ ಹೆಸ್ಕಾಂನವರು ರೈತರ ಪಂಪಸೆಟ್‌ಗಳಿಗೆ ಪ್ರಾಯೋಗಿಕವಾಗಿ ಸೋಲಾರ ಅಳವಡಿಕೆ ಮಾಡಿದ್ದಾರೆ. ಕರೆಂಟಿನಿಂದ ನೀರು ಎತ್ತುವುದಕ್ಕೂ ಸೋಲಾರ್‌ನಿಂದ ನೀರು ಎತ್ತುವುದಕ್ಕೂ ಬಹಳಷ್ಟು ವ್ಯತ್ಯಾಸವಿದೆ. ಕರೆಂಟ್ ಸೌಲಭ್ಯದಿಂದ 20 ಸ್ಪಿಂಕ್ಲರ್ ಜೆಟ್‌ಗಳು ನೀರು ಹೊಡೆದರೆ, ಸೋಲಾರ್ ಸೌಲಭ್ಯದಿಂದ ಬೆಳಗ್ಗೆ 11 ಜೆಟ್‌ಗಳು, ಮಧ್ಯಾಹ್ನ ವೇಳೆ 13 ಹಾಗೂ ಸಂಜೆ ವೇಳೆ ಪುನಃ 11 ಜೆಟ್‌ಗಳು ಹೊಡೆಯುತ್ತವೆ. ಈ ಪೈಕಿ ಬೆಳಗ್ಗೆ ಮತ್ತು ಸಂಜೆ ಮೋಡ ಕವಿದ ವಾತಾವರಣ ಇರೋದ್ರಿಂದ ಕಡಿಮೆ ಜೆಟ್‌ಗಳು ಹೊಡೆಯುತ್ತಿದ್ದು, ಮಧ್ಯಾಹ್ನ ಬಿಸಿಲಿಗೆ ಕನಿಷ್ಠ 13 ಜೆಟ್‌ಗಳು ಹೊಡೆಯುತ್ತವೆ. ಹಗಲಿನಲ್ಲಿ ಕೇವಲ 5 ತಾಸು ಕರೆಂಟು ಸಿಗುತ್ತದೆ. ಅಷ್ಟರಲ್ಲಿ ಈ ಸಮಸ್ಯೆ ಉದ್ಭವಿಸಿ, ನೀರಾವರಿ ಮಾಡಲು ಅನಾನುಕೂಲವಾಗುತ್ತದೆ. ಹಾಗಾಗಿ ಸುಖಾಸುಮ್ಮನೆ ಸೋಲಾರ ಅಳವಡಿಕೆಗೆ ಸರ್ಕಾರದ ಹಣ ಪೋಲು ಮಾಡದೇ ನಮಗೆ ಕರೆಂಟ್ ಸೌಲಭ್ಯವನ್ನೇ ನೀಡಿ ಎಂದು ಸಚಿವರಿಗೆ ಮನವಿ ಮಾಡಿದರು.ಆಗ ಪ್ರತಿಕ್ರಿಯಿಸಿದ ಸಚಿವರು, ಬೀದರ್ ಜಿಲ್ಲೆ ಆಳಂದಲ್ಲಿ ಸೋಲಾರ ಅಳವಡಿಸಿಕೊಂಡ ರೈತರಿಗೆ ನಾನೇ ಪ್ರಮಾಣಪತ್ರ ನೀಡಿದ್ದೇನೆ ಎಂದು ಯೋಜನೆ ಸಮರ್ಥಿಸಿಕೊಂಡರು. ಜಿಲ್ಲೆಯಲ್ಲಿ ಇನ್ನಷ್ಟು ಕಡೆಗಳಲ್ಲಿ ಪ್ರಯೋಗ ಮಾಡಿನೋಡಿ, ಎಷ್ಟು ಜನರಿಗೆ ಅನುಕೂಲವಾಗುತ್ತೋ ಆಗಲಿ, ಬಳಿಕ ಸಕ್ಸಸ್ ಆಗದಿದ್ದರೆ ನಂತರ ಚರ್ಚೆ ಮಾಡೋಣ ಎಂದು ಹೆಸ್ಕಾಂ ಅಧಿಕಾರಿಗಳಿಗೆ ತಿಳಿಸಿದರು.ಆರ್.ಆರ್ ನಂಬರ್ ಕೊಡಿ: ವಿದ್ಯುತ್ ಟಿಸಿಗಳಿಗೆ ಹೆಚ್‌ಪಿ ಡಿಪಾಸಿಟ್ ತುಂಬಿಸಿಕೊಂಡ ರೈತರಿಗೆ ಆರ್‌ಆರ್ ನಂಬರ್‌ ಕೊಡಬೇಕು. ಸರ್ಕಾರದ ಎಸ್ಟಿಮೇಟ್ ಪ್ರಕಾರ ರೈತರು ಹಣವನ್ನು ಭರಿಸಲ್ಲ. ಸರ್ವೀಸ್ ಕನೆಕ್ಷನ್‌ಗೆ ಎಷ್ಟು ಇರುತ್ತೋ ಅಷ್ಟು ಹಣವನ್ನು ತುಂಬುತ್ತೇವೆ ಎಂದು ಹೆಸ್ಕಾಂ ಅಧಿಕಾರಿಗಳಿಗೆ ರೈತರು ಒತ್ತಾಯಿಸಿದರು.ಇದಕ್ಕೆ ಧ್ವನಿಗೂಡಿಸಿದ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಸರ್ಕಾರ ಶೀಘ್ರ ಯೋಜನೆಯನ್ನು ಜಾರಿಗೆ ತರುವುದರ ಜತೆಗೆ ರದ್ದು ಮಾಡಿರುವ ಅಕ್ರಮ ಸಕ್ರಮ ಯೋಜನೆಯನ್ನು ಪುನಾರಂಭಿಸಬೇಕು. ಸೋಲಾರ ಅಳವಡಿಕೆ ಬಗ್ಗೆ ಪುನರ್ ಪರಿಶೀಲನೆ ನಡೆಸಬೇಕೆಂದು ಒತ್ತಾಯಿಸಿದರು.ಬಡ್ಡಿರಹಿತ ಸಾಲ ನೀಡಿ: ಜನವರಿಯಲ್ಲಿ ಡಿಸಿಸಿ ಬ್ಯಾಂಕಿನ ವಲಯ ಕಚೇರಿ ಆರಂಭಿಸುವುದಾಗಿ ಸಚಿವರೆ ಭರವಸೆ ನೀಡಿದ್ದು, ಆ ಪ್ರಕಾರ ಜನವರಿ ಮಾಸಾಂತ್ಯದೊಳಗೆ ಪ್ರಾದೇಶಿಕ ಕಚೇರಿ ಸ್ಥಾಪಿಸಿ, ರೈತರಿಗೆ ಶೂನ್ಯ ಬಡ್ಡಿದರದಲ್ಲಿ 3ಲಕ್ಷ ರು.ವರೆಗೆ ಸಾಲ ನೀಡಬೇಕು ಎಂದು ರಾಮಣ್ಣ ಕೆಂಚಳ್ಳೇರ ಆಗ್ರಹಿಸಿದರು. ಆಗ ಸಚಿವರು, ಕೆಸಿಸಿ ಬ್ಯಾಂಕ್‌ನ ಅಧಿಕಾರಿ ಕರೆದು ವಲಯ ಕಚೇರಿಗೆ ಅಗತ್ಯ ಸಿಬ್ಬಂದಿ, ಮೂಲಸೌಲಭ್ಯ ಬಗ್ಗೆ ಏನೇನು ಸಿದ್ದತೆ ಮಾಡಿಕೊಂಡಿದ್ದೀರಿ ಎಂದು ಪ್ರಶ್ನಿಸಿದರು. ವಲಯ ಕಚೇರಿ ಸ್ಥಾಪನೆಗೆ ಬೇಕಾದ ಎಲ್ಲಾ ಸಿಬ್ಬಂದಿ ಇದೆ. ಫೆಬ್ರವರಿ ಮೊದಲ ವಾರದೊಳಗೆ ಕಾಲಾವಕಾಶ ಕೇಳಿದ್ದೇವೆ. ಆದರೆ ಸಾಲ ನೀಡುವ ಬಗ್ಗೆ ಆದೇಶ ಬಂದಿಲ್ಲವೆಂದು ವಿವರಿಸಿದರು. ಬಳಿಕ ಸಚಿವರು ಮೊದಲು ಕಚೇರಿ ಸ್ಥಾಪನೆಯಾಗಲಿ, ಆಮೇಲೆ ಅಪೆಕ್ಸ್‌ ಬ್ಯಾಂಕ್ ಹಾಗೂ ನಬಾರ್ಡ್‌ ಜತೆಗೆ ಕನೆಕ್ಟ್ ಮಾಡಿ ಸಾಲ ಬಗ್ಗೆ ಚರ್ಚಿಸಲಾಗುವುದು ಎಂದು ತಿಳಿಸಿದರು.ಸಭೆಯಲ್ಲಿ ಡೆಪ್ಯೂಟಿ ಸ್ಪೀಕರ್ ರುದ್ರಪ್ಪ ಲಮಾಣಿ, ವಿಪ ಮುಖ್ಯಸಚೇತಕ ಸಲೀಂ ಅಹ್ಮದ್, ಹೆಸ್ಕಾಂ ಅಧ್ಯಕ್ಷ ಅಜ್ಜಂಪೀರ ಖಾದ್ರಿ, ಗ್ಯಾರಂಟಿ ಸಮಿತಿ ರಾಜ್ಯ ಉಪಾಧ್ಯಕ್ಷ ಎಸ್.ಆರ್. ಪಾಟೀಲ, ಶಾಸಕರಾದ ಯು.ಬಿ. ಬಣಕಾರ, ಶ್ರೀನಿವಾಸ ಮಾನೆ, ಪ್ರಕಾಶ ಕೋಳಿವಾಡ, ಯಾಸೀರ್‌ಅಹ್ಮದ್ ಖಾನ ಪಠಾಣ, ಎಸ್.ಆರ್. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸಂಜೀವಕುಮಾರ ನೀರಲಗಿ, ಡಿಸಿ ವಿಜಯಮಹಾಂತೇಶ ದಾನಮ್ಮನವರ, ಜಿಪಂ ಸಿಇಒ ಅಕ್ಷಯ ಶ್ರೀಧರ ಇತರರು ಇದ್ದರು.