ಸಾರಾಂಶ
ಸೋಮರಡ್ಡಿ ಅಳವಂಡಿ
ಕೊಪ್ಪಳ: ತಜ್ಞ ವೈದ್ಯರಿಗೆ ಬರೋಬ್ಬರಿ ₹ 1.10 ಲಕ್ಷ ಸಂಬಳ ನೀಡಲಾಗುತ್ತದೆ. ಅಷ್ಟೇ ಅಲ್ಲ, ಗುತ್ತಿಗೆ ಆಧಾರದಲ್ಲಿ ಅರ್ಜಿ ಸಲ್ಲಿಸಿದ ಅರ್ಧಗಂಟೆಯಲ್ಲಿ ನೇಮಕಾತಿ ಆದೇಶ ನೀಡುತ್ತೇವೆ ಎಂದರೂ ಕೊಪ್ಪಳ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಿಗೆ ವೈದ್ಯರು ಬರುತ್ತಿಲ್ಲ.
ಹೌದು, ಅದರಲ್ಲೂ ಗ್ರಾಮೀಣ ಭಾಗದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆ ಹೆಚ್ಚಿದೆ. ಇದಕ್ಕಾಗಿ ನೇಮಕಾತಿ ಪ್ರಕ್ರಿಯೆ ನಿರಂತರವಾಗಿ ತೆರೆದಿಟ್ಟಿದ್ದು, ಅರ್ಜಿ ನೀಡಿದ ಅರ್ಧಗಂಟೆಯಲ್ಲಿಯೇ ನೇಮಕಾತಿ ಆದೇಶ ನೀಡುತ್ತೇವೆ ಎಂದರೂ ವೈದ್ಯರ ಸಮಸ್ಯೆ ನೀಗುತ್ತಿಲ್ಲ. ಕೊಪ್ಪಳ ಜಿಲ್ಲಾದ್ಯಂತ 47 ವೈದ್ಯಾಧಿಕಾರಿಗಳ ಹುದ್ದೆ ಇದ್ದು 29 ವೈದ್ಯಾಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. 18 ಹುದ್ದೆ ಖಾಲಿ ಇವೆ. ತಜ್ಞ ವೈದ್ಯರ ಹುದ್ದೆ 58 ಇದ್ದು, ಈ ಪೈಕಿ 37 ತಜ್ಞ ವೈದ್ಯರು ಕಾರ್ಯನಿರ್ವಹಿಸುತ್ತಿದ್ದು, 21 ಖಾಲಿ ಇವೆ. ಸಮುದಾಯ ಆರೋಗ್ಯ ಕೇಂದ್ರದಲ್ಲಿ 9 ಹಿರಿಯ ವೈದ್ಯರು ಇದ್ದು ಕೇವಲ ಇಬ್ಬರು ಮಾತ್ರ ಇದ್ದಾರೆ. 7 ಖಾಲಿ ಇವೆ. ಎನ್‌ಎಚ್‌ಎಂನಲ್ಲಿ 26 ವೈದ್ಯರ ಹುದ್ದೆ ಇದ್ದು, ಕೇವಲ 17 ವೈದ್ಯರು ಇದ್ದಾರೆ.
ಬಹುದೊಡ್ಡ ಸಮಸ್ಯೆ:
18 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರೇ ಇಲ್ಲ. ಹೀಗಾಗಿ, ಅಲ್ಲಿ ಆಸ್ಪತ್ರೆ ಇದ್ದರೂ ಇಲ್ಲದಂತಾಗಿವೆ. ನರ್ಸ್ ಸೇರಿದಂತೆ ಇತರೆ ಸಿಬ್ಬಂದಿಗಳೇ ಆಸರೆಯಾಗಿದ್ದಾರೆ. ಅಕ್ಕಪಕ್ಕದ ಆಸ್ಪತ್ರೆಯ ವೈದ್ಯರನ್ನು ನಿಯೋಜನೆ ಮಾಡಲಾಗುತ್ತದೆ. ಹೀಗಾಗಿ, ಒಬ್ಬರೇ ವೈದ್ಯರು ಎರಡೆರಡು ಆಸ್ಪತ್ರೆಯಲ್ಲಿ ಕಾರ್ಯನಿರ್ವಹಿಸಬೇಕಾದ ಅನಿವಾರ್ಯತೆ ಇದೆ.
ರಾತ್ರಿ ಚಿಕಿತ್ಸೆ ದೊರೆಯುವುದಿಲ್ಲ:
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ರಾತ್ರಿ ಚಿಕಿತ್ಸೆಯೇ ಇರುವುದಿಲ್ಲ. ಇರುವ ಒಬ್ಬೊಬ್ಬ ವೈದ್ಯರು ಹಗಲು ವೇಳೆ ಕಾರ್ಯನಿರ್ವಹಿಸಿ, ಬೇರೆಡೆ ತೆರಳುತ್ತಾರೆ. ರಾತ್ರಿ ಅಲ್ಲಿ ಚಿಕಿತ್ಸೆಯೇ ದೊರೆಯುವುದಿಲ್ಲ. ಇನ್ನು ವೈದ್ಯರೇ ಇಲ್ಲದ ಆಸ್ಪತ್ರೆಯಲ್ಲಿ ಸ್ಥಿತಿ ಇನ್ನು ಘನಘೋರವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ತುರ್ತು ಚಿಕಿತ್ಸೆಗಾಗಿ ಆಸ್ಪತ್ರೆಗೆ ಬರುವವರು ಪಾಡು ದೇವರಿಗೆ ಪ್ರೀತಿ ಎನ್ನುವಂತೆ ಆಗಿದೆ.
₹ 1.10 ಲಕ್ಷ ವೇತನ:
ತಜ್ಞ ವೈದ್ಯರಿಗೆ ₹ 1.10 ಲಕ್ಷ ವೇತನ ನೀಡಲಾಗುತ್ತದೆ. ಇನ್ನು ಎಂಬಿಬಿಎಸ್ ವೈದ್ಯರಿಗೆ ₹ 60 ಸಾವಿರ ನೀಡಲಾಗುತ್ತದೆ. ಇದ್ಯಾವುದಕ್ಕೂ ನೇಮಕಾತಿ ಪ್ರಕ್ರಿಯೇ ನಡೆಸುವ ಪ್ರಶ್ನೆಯೇ ಇಲ್ಲ. ಕಚೇರಿ ವೇಳೆಯಲ್ಲಿ ಅರ್ಜಿ ನೀಡಿದರೇ ಸಾಕು, ಕೇವಲ ಅರ್ಧಗಂಟೆಯಲ್ಲಿ ನೇಮಕಾತಿ ಆದೇಶ ನೀಡಲಾಗುತ್ತದೆ. ಸೇವೆಗೆ ಬರುತ್ತಾರೆ, ಆದರೆ, ಗ್ರಾಮೀಣ ಪ್ರದೇಶಕ್ಕೆ ಹೋಗಲು ಸಿದ್ಧರಿರುವುದಿಲ್ಲ. ನಗರ ಪ್ರದೇಶದ ಆಸ್ಪತ್ರೆಯಲ್ಲಿ ಒಂದಿಷ್ಟು ಸಮಸ್ಯೆ ಇಲ್ಲ. ಆದರೆ, ಗ್ರಾಮೀಣ ಪ್ರದೇಶದ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲದಂತೆ ಆಗಿದೆ.ಜಿಲ್ಲೆಯಲ್ಲಿ ತಜ್ಞ ವೈದ್ಯರ ಸಮಸ್ಯೆ ಗಂಭೀರವಾಗಿದ್ದು, ತಕ್ಷಣ ನೇಮಕಾತಿ ಆದೇಶ ನೀಡುತ್ತೇವೆ ಎಂದರೂ ಸಹ ಯಾರೂ ಬರುತ್ತಿಲ್ಲ. ಹೀಗಾಗಿ, ಗ್ರಾಮೀಣ ಪ್ರದೇಶದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಸಮಸ್ಯೆಯಾಗಿದೆ ಎಂದು ಡಿಎಚ್‌ಒ ಡಾ. ಲಿಂಗರಾಜ ಹೇಳಿದರು. ವೈದ್ಯರ ಕೊರತೆಯಿಂದ ಗ್ರಾಮೀಣ ಪ್ರದೇಶದ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಸಮಸ್ಯೆಯಾಗಿದೆ. ಇದನ್ನು ಸರ್ಕಾರದ ಗಮನಕ್ಕೆ ತಂದು, ವಿಶೇಷ ಕ್ರಮವಹಿಸಲು ಮನವಿ ಮಾಡಲಾಗುವುದು ಎಂದ ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.