ಸಾರಾಂಶ
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಗೆ 2024-25ನೇ ಸಾಲಿನಲ್ಲಿ 1.55 ಕೋಟಿ ರುಪಾಯಿ ಉಳಿತಾಯ ಬಜೆಟ್ ಮಂಡಿಸಲಾಗಿದೆ. ಬುಧವಾರ ನಗರಸಭಾ ಸಭಾಂಗಣದಲ್ಲಿ ನಡೆದ ಬಜೆಟ್ ವಿಶೇಷ ಸಾಮಾನ್ಯ ಸಭೆಯಲ್ಲಿ ಅಧ್ಯಕ್ಷೆ ಸುಧಾರಾಣಿ ಲಕ್ಷ್ಮೀನಾರಾಯಣ್ ಆಯವ್ಯಯ ಮಂಡಿಸಿದರು.
ದೊಡ್ಡಬಳ್ಳಾಪುರ ನಗರಸಭೆಯ ಪ್ರಸಕ್ತ ಸಾಲಿನ ಆಯ-ವ್ಯಯ ತಯಾರಿಕೆಗಾಗಿ ಎರಡು ಸುತ್ತಿನ ಸಾರ್ವಜನಿಕ ಸಮಾಲೋಚನಾ ಸಭೆಗಳಲ್ಲಿ ನೀಡಿರುವ ಸಲಹೆಗಳನ್ನು ನಗರಸಭೆಯ ಆರ್ಥಿಕ ಪರಿಸ್ಥಿತಿಗೆ ಅನುಗುಣವಾಗಿ ಜನಪರ ಆಯ-ವ್ಯಯ ಮಂಡಿಸುತ್ತಿರುವುದಾಗಿ ತಿಳಿಸಿದರು.1.55 ಕೋಟಿ ಉಳಿತಾಯ ಬಜೆಟ್:
ನಗರಸಭೆಯು ಅಗತ್ಯವಾಗಿ ನಿರ್ವಹಿಸಬೇಕಾಗಿರುವ ನಿರ್ವಹಣೆ ಮತ್ತು ನಾಗರಿಕ ಮೂಲ ಸೌಕರ್ಯಗಳ ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ ನೀಡಲಾಗಿದ್ದು, 1.55 ಕೋಟಿ ಉಳಿತಾಯ ಬಜೆಟ್ ಇದಾಗಿದೆ. 2024-25ನೇ ಸಾಲಿಗೆ ಪ್ರಾರಂಭಿಕ ಶಿಲ್ಕು 12.25 ಕೋಟಿಗಳಾಗಿದ್ದು, 54.96 ಕೋಟಿ ಆದಾಯ ಸೇರಿದಂತೆ ಒಟ್ಟು ಆದಾಯ 67.21 ಕೋಟಿಗಳಾಗಿದೆ. ಈ ಪೈಕಿ ಎಲ್ಲಾ ಮೂಲಗಳಿಂದ ಒಟ್ಟು 65.66 ಕೋಟಿ ಖರ್ಚು ನಿರೀಕ್ಷಿಸಲಾಗಿದ್ದು, ಅಂತಿಮವಾಗಿ 1.55 ಕೋಟಿ ಉಳಿತಾಯ ಅಂದಾಜಿಸಲಾಗಿದೆ ಎಂದರು.ಪ್ಲಾಸ್ಟಿಕ್ ಮುಕ್ತ, ನಿರ್ಮಲ ನಗರ ನಿರ್ಮಾಣ:
ದೊಡ್ಡಬಳ್ಳಾಪುರ ನಿರ್ಮಲ ನಗರ ನಿರ್ಮಾಣ ಚಿಂತನೆಯಡಿ ಉದ್ಯಾನವನಗಳ ಅಭಿವೃದ್ದಿಗೆ 50 ಲಕ್ಷ, ನಿರ್ವಹಣೆಗೆ 15 ಲಕ್ಷ , ಒಳಚರಂಡಿ ನೀರು ಶುದ್ದೀಕರಣ ಘಟಕ ಮತ್ತು ಘನತ್ಯಾಜ್ಯ ವಿಲೇವಾರಿ ಘಟಕಗಳ ಸುತ್ತ ವೈವಿಧ್ಯಮಯ ಮರಗಳ ನಿರ್ಮಾಣಕ್ಕೆ 5 ಲಕ್ಷ ಮೀಸಲಿಡಲಾಗಿದೆ. ರಸ್ತೆ ಬದಿ ಸಸಿ ನೆಟ್ಟು ಸಂರಕ್ಷಿಸಲು ಡಿ.ಕೊಂಗಾಡಿಯಪ್ಪ ಹಸಿರು ವೃಕ್ಷ ಯೋಜನೆಗೆ 10 ಲಕ್ಷ, ನೈರ್ಮಲ್ಯ, ಸ್ವಚ್ಛತೆ, ಘನತ್ಯಾಜ್ಯ ನಿರ್ವಹಣೆ ಕಾಮಗಾರಿಗಳಿಗೆ 5.18 ಕೋಟಿ, ಸ್ವಚ್ಛ ಭಾರತ ಅಭಿಯಾನದಡಿ ಘನತ್ಯಾಜ್ಯ ಮರುಬಳಕೆ ಘಟಕ ನಿರ್ಮಾಣಕ್ಕೆ 1.30 ಕೋಟಿ, ವಡ್ಡರಪಾಳ್ಯದ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ಸಂಗ್ರಹವಾಗಿರುವ 50 ಸಾವಿರ ಟನ್ ಪಾರಂಪರಿಕ ತ್ಯಾಜ್ಯ ವಿಲೇವಾರಿಗೆ 2.08 ಕೋಟಿ, ಸಾರ್ವಜನಿಕ ಜಾಗೃತಿ ಕಾರ್ಯಕ್ರಮಗಳಿಗೆ 19 ಲಕ್ಷ, ನಗರದ ವಿವಿಧ ವೃತ್ತಗಳ ಸುಂದರೀಕರಣಕ್ಕೆ 42.15 ಲಕ್ಷ, ಘನತ್ಯಾಜ್ಯ ನಿರ್ವಹಣೆ ನಿವೇಶನ ಅಭಿವೃದ್ಧಿಗೆ 30 ಲಕ್ಷ, ನೈರ್ಮಲ್ಯ ಕಾಮಗಾರಿಗಳಿಗೆ 2.01 ಕೋಟಿ, ಕಸ ಸಂಗ್ರಹಣೆ ಹೊರಗುತ್ತಿಗೆಗೆ 1.27 ಕೋಟಿ, ಬೀದಿ ನಾಯಿಗಳ ನಿಯಂತ್ರಣಕ್ಕೆ 25 ಲಕ್ಷ ಅಂದಾಜಿಸಲಾಗಿದೆ.ನೀರು ಸರಬರಾಜು, ಒಳಚರಂಡಿ ನಿರ್ವಹಣೆಗೆ ಒತ್ತು:
ನಗರಸಭಾ ವ್ಯಾಪ್ತಿಯಲ್ಲಿಬರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಸೌಲಭ್ಯಕ್ಕಾಗಿ ಪೈಪ್‌ಲೈನ್ ಕಾಮಗಾರಿ, ಬೋರ್‌ವೆಲ್ ಹಾಗೂ ಇತರೆ ಕಾಮಗಾರಿಗಳಿಗಾಗಿ ಸುಮಾರು 60 ಲಕ್ಷ, ಒಳಚರಂಡಿ ವ್ಯವಸ್ಥೆಯ ಹೊರಗುತ್ತಿಗೆ ಮೇರೆಗೆ ನಿರ್ವಹಣೆಗಾಗಿ 30.24 ಲಕ್ಷ, ದುರಸ್ತಿಗಾಗಿ 60 ಲಕ್ಷ ಅಂದಾಜಿಸಲಾಗಿದೆ.ಅಭಿವೃದ್ಧಿ ಕಾಮಗಾರಿಗಳಿಗೆ ಆದ್ಯತೆ:
ನಗರದಲ್ಲಿ ವಿವಿಧ ರಸ್ತೆ, ಚರಂಡಿಗಳ ನಿರ್ಮಾಣಕ್ಕೆ 4.62 ಕೋಟಿ ರು. ಬೀದಿ ದೀಪ ಅಳವಡಿಕೆಗಾಗಿ 25 ಲಕ್ಷ, ಸಿಸಿ ಕ್ಯಾಮರಾಗಳ ಅಳವಡಿಕೆಗಾಗಿ 20 ಲಕ್ಷ, ಮಳೆ ನೀರು ಚರಂಡಿ, ಕಲ್ವರ್ಟ್‌ಗಳ ಮತ್ತು ಕವರಿಂಗ್ ಸ್ಲ್ಯಾಬ್ ನಿರ್ಮಾಣಕ್ಕೆ 52.36 ಲಕ್ಷ ಸೇರಿ ಒಟ್ಟು5.60 ಕೋಟಿ ವೆಚ್ಚವಾಗಲಿದೆ. ದೊಡ್ಡಬಳ್ಳಾಪುರದಲ್ಲಿ 1 ಕೋಟಿ ವೆಚ್ಚದಲ್ಲಿ ನೂತನ ಕೃಷ್ಣರಾಜೇಂದ್ರ ಮಾರುಕಟ್ಟೆ ಮಳಿಗೆಗಳ ನಿರ್ಮಾಣ, 98.2 ಲಕ್ಷ ವೆಚ್ಚದಲ್ಲಿ ಡಿ ಕ್ರಾಸ್ ರಸ್ತೆಯಲ್ಲಿ ನೂತನ ವಾಣಿಜ್ಯ ಮಳಿಗೆ ನಿರ್ಮಾಣ ಪ್ರಸ್ತಾಪಿಸಲಾಗಿದೆ.ಕೊಂಗಾಡಿಯಪ್ಪ ಪುತ್ಥಳಿಗೆ 20 ಲಕ್ಷ ರು:
ನಗರಸಭಾ ಕಚೇರಿ ಆವರಣದಲ್ಲಿ ಶ್ರೀ ಕೊಂಗಾಡಿಯಪ್ಪರವರ ಪುತ್ಥಳಿ ನಿರ್ಮಾಣಕ್ಕೆ 20 ಲಕ್ಷ, ನಗರಸಭೆ ಸ್ವತ್ತುಗಳಿಗೆ ಬೇಲಿ ಅಳವಡಿಕೆಗೆ 30 ಲಕ್ಷ, ಕ್ರೀಡಾ ಪ್ರತಿಭೆಗಳ ಪ್ರೋತ್ಸಾಹಕ್ಕೆ 10 ಲಕ್ಷ, ಬೀದಿದೀಪಗಳ ನಿರ್ವಹಣೆಗಾಗಿ 39.8 ಲಕ್ಷ, ನಗರಸಭೆ ವ್ಯಾಪ್ತಿಯಲ್ಲಿ ನಡೆಯುವ ರಾಷ್ಟ್ರೀಯ ನಾಡಹಬ್ಬ, ಸ್ಥಳೀಯ ಹಬ್ಬಗಳ ಆಚರಣೆಗಾಗಿ 10 ಲಕ್ಷ , ದೊಡ್ಡಬಳ್ಳಾಪುರ ಉತ್ಸವ ಆಚರಣೆಗಾಗಿ 15 ಲಕ್ಷ, ಅಧ್ಯಕ್ಷರ ಕಾರು ಖರೀದಿಗೆ 20 ಲಕ್ಷ ಮೀಸಲಿಡಲಾಗಿದೆ.1.22 ಕೋಟಿ ವೆಚ್ಚದಲ್ಲಿ ಪೌರಕಾರ್ಮಿಕರಿಗೆ ಮನೆ:
ರಾಜ್ಯ ಸರ್ಕಾರದ ಪೌರಕಾರ್ಮಿಕ ಗೃಹಭಾಗ್ಯ ಯೋಜನೆಯಡಿ ವಸತಿ ರಹಿತ ಪೌರಕಾರ್ಮಿಕರಿಗೆ ಗೃಹ ನಿರ್ಮಾಣಕ್ಕಾಗಿ ಪೌರಕಾರ್ಮಿಕರಿಗೆ 1.22 ಕೋಟಿ ವಿನಿಯೋಗಿಸಲಾಗುವುದು. ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರೆ ವರ್ಗಗಳ ಬಡಜನರಕಲ್ಯಾಣಕ್ಕಾಗಿ 56.6 ಲಕ್ಷ, ಇನ್ನಿತರೆ ವರ್ಗದ ಬಡಜನರ ಅಭಿವೃದ್ಧಿಗಾಗಿ 9.45 ಲಕ್ಷ, ವಿಕಲಚೇತನರ ಕಲ್ಯಾಣಕ್ಕಾಗಿ 6.5 ಲಕ್ಷ, ಪೌರಕಾರ್ಮಿಕರ ಬೆಳಗಿನ ಉಪಹಾರಕ್ಕಾಗಿ 15 ಲಕ್ಷ ಮೀಸಲಿಡಲಾಗಿದೆ. ಸ್ಮಶಾನಗಳಿಗೆ ಕಾಂಪೌಂಡ್ ಮತ್ತು ಇತರೆ ಅಭಿವೃದ್ಧಿ ಕಾಮಗಾರಿಗಳಿಗೆ 15 ಲಕ್ಷ, ಚಿತಾಗಾರ ನಿರ್ಮಾಣಕ್ಕಾಗಿ 5 ಲಕ್ಷ ಒದಗಿಸಲಾಗಿದೆ.ನಗರೋತ್ಥಾನ ಅಡಿ 10 ಕೋಟಿ ನಿರೀಕ್ಷೆ:
ಮುಖ್ಯಮಂತ್ರಿಗಳ ನಗರೋತ್ಥಾನ ಹಂತ-4ರ ಯೋಜನೆಯಡಿ ದೊಡ್ಡಬಳ್ಳಾಪುರ ನಗರಸಭೆಗೆ 30 ಕೋಟಿ ಕ್ರಿಯಾಯೋಜನೆ ರೂಪಿಸಲಾಗಿದ್ದು, ಸದರಿ ಯೋಜನೆಯಲ್ಲಿ ಪರಿಶಿಷ್ಟ ಜಾತಿ ವರ್ಗದವರ ಕಲ್ಯಾಣ ಕಾರ್ಯಕ್ರಮಕ್ಕಾಗಿ 4.37 ಲಕ್ಷ, ಪರಿಶಿಷ್ಟ ಪಂಗಡದ 9 ವರ್ಗದವರ ಕಲ್ಯಾಣ ಕಾರ್ಯಕ್ರಮಕ್ಕಾಗಿ 1.77 ಕೋಟಿ, ಇತರೆ ಬಡಜನರಕಲ್ಯಾಣ ಕಾರ್ಯಕ್ರಮಕ್ಕೆ 1.84 ಕೋಟಿ, ವಿಕಲಚೇತನರ ಕಲ್ಯಾಣ ಕಾರ್ಯಕ್ರಮಕ್ಕೆ 1.27 ಕೋಟಿ, ಕುಡಿಯುವ ನೀರಿನ ಪೈಪ್ಲೈನ್ಜಾಗಕ್ಕಾಗಿ 1 ಕೋಟಿ, ಎಸ್.ಟಿ.ಪಿ ಘಟಕವನ್ನು ಮೇಲ್ದರ್ಜೆಗೇರಿಸಲು 2.78 ಕೋಟಿ, ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ 10.8 ಕೋಟಿ, ರಾಜಕಾಲುವೆ ಅಭಿವೃದ್ಧಿಗೆ 1.60 ಕೋಟಿ ಮೀಸಲಿಡಲು ಯೋಜನೆ ರೂಪಿಸಲಾಗಿದೆ.ಬಾಕ್ಸ್..............
10 ವಿಶೇಷ ಯೋಜನೆಗಳ ಪ್ರಸ್ತಾಪ:1.ಮಳೆನೀರು ಕೊಯ್ಲು ಸಂಗ್ರಹಣೆ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವವರ ಉತ್ತೇಜನಕ್ಕಾಗಿ ಪ್ರೋತ್ಸಾಹಧನ
2.ಯುಐಡಿಎಸ್ಎಸ್ಎಂಟಿ ಯೋಜನೆಯಡಿ ಆಧುನಿಕವಾಗಿ ವಿತರಣಾ ಪೈಪ್‌ಲೈನ್ ಮತ್ತು ಮೀಟರ್ ಅಳವಡಿಸಿರುವಂತೆ 10 ಸಾವಿರ ನಲ್ಲಿಗಳ ಸಂಪರ್ಕ ಒದಗಿಸಲು ಅಮೃತ 2.0 ಯೋಜನೆಯಡಿ 9.15 ಕೋಟಿ ವೆಚ್ಚದಲ್ಲಿ ಕಾಮಗಾರಿ.3. ಅಮೃತ ಯೋಜನೆಯಡಿ ನಗರದ ಜಲಮೂಲ ಅಭಿವೃದ್ಧಿಗಾಗಿ ನಗರವ್ಯಾಪ್ತಿಯ 5 ಕಲ್ಯಾಣಿಗಳ ಜೀರ್ಣೋದ್ಧಾರಕ್ಕಾಗಿ 3.2 ಕೋಟಿ ಹಾಗು 5 ಉದ್ಯಾನವನ ಅಭಿವೃದ್ಧಿಗಾಗಿ 80 ಲಕ್ಷ ಯೋಜನೆ.
4. ಉದ್ಯಾನವನಗಳಲ್ಲಿ ಅನುಕೂಲವಿರುವ ಕಡೆ ಕಿರುಅರಣ್ಯ ನಿರ್ಮಿಸಲು ಟ್ರೀ ಪಾರ್ಕ್‌ಗಳನ್ನು ಹಾಗೂ ಮಕ್ಕಳಿಗಾಗಿ ಉದ್ಯಾನವನಗಳಲ್ಲಿ ಮಕ್ಕಳ ಆಟಿಕೆ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದಂತಹ ಆಟಿಕೆಗಳನ್ನು ಅಳವಡಿಸಲು ಕ್ರಮ.5. ನಗರ ವ್ಯಾಪ್ತಿಯಲ್ಲಿ ಮಳೆ ನೀರು ಚರಂಡಿಗಳಿಂದ ನೇರವಾಗಿ ಕೆರೆಗಳು ಕಲುಷಿತಗೊಳ್ಳದಂತೆ ಮಳೆ ನೀರು ಚರಂಡಿಗಳನ್ನು ಪ್ರತಿಬಂಧಕಗಳು ಹಾಗೂ ತಿರುವುಗಳೊಂದಿಗೆ ನಿರ್ಮಿಸಿ, ನಿರ್ವಹಿಸಲು ಅಂದಾಜು 3 ಕೋಟಿ ವೆಚ್ಚದಲ್ಲಿ ಕೆಯುಐಡಿಎಫ್‌ಸಿ ಸಂಸ್ಥೆಯಿಂದ ಅನುಷ್ಠಾನ. ಸದರಿ ಚರಂಡಿಗಳಿಗೆ ಮೆಷ್ ಅಳವಡಿಕೆ.
6. ನಗರದ ಮುಖ್ಯ ವೃತ್ತಗಳಲ್ಲಿ ಜನದಟ್ಟಣಿ ಪ್ರದೇಶಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಕೆಗಾಗಿ 20 ಲಕ್ಷ ನಗರಸಭೆಯ ಕಟ್ಟಡಗಳಲ್ಲಿ ಹೊಸದಾಗಿ ಜಾಹಿರಾತು ಫಲಕಗಳನ್ನು ನಿರ್ಮಿಸಲು 20 ಲಕ್ಷ ರು. ಅಂದಾಜಿಸಲಾಗಿದೆ.7. ನಗರದ ಹೃದಯ ಭಾಗದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಭೋಜನ ಕುಟೀರಗಳನ್ನು ನಿರ್ಮಿಸಲಾಗುವುದು.
8. ನಗರದ ಪ್ರಮುಖ ರಸ್ತೆಗಳ ಅಗಲೀಕರಣಕ್ಕಾಗಿ ಸದರಿ ಸಾಲಿನಲ್ಲಿ ಯೋಜನಾ ವರದಿಯನ್ನು ತಯಾರಿಸಿ ಹಂತ ಹಂತವಾಗಿ ಯೋಜನೆ ಕೈಗೊಳ್ಳಲು ಯೋಜನೆ ರೂಪಿಸಲಾಗುವುದು.9. ನಗರ ರಾತ್ರಿ ವಸತಿ ರಹಿತ ನಾಗರೀಕರ ಪುನರ್ವಸತಿ ಯೋಜನೆಯಡಿ ದೊಡ್ಡಬಳ್ಳಾಪುರ ನಗರದಲ್ಲಿ ವಸತಿ ರಹಿತ ನಾಗರಿಕರನ್ನು ಗುರುತಿಸಲಾಗಿದ್ದು, ಇವರಿಗೆ ರಾತ್ರಿ ವೇಳೆ ತಂಗಲು ತಾತ್ಕಾಲಿಕ ವ್ಯವಸ್ಥೆ ಮಾಡಲು 8.7 ಲಕ್ಷ ರು.
10. ರಾಜ್ಯ ಸರ್ಕಾರದ ಎಸ್.ಎಫ್.ಸಿ. ವಿಶೇಷ ಅನುದಾನದಡಿ 3.67 ಕೋಟಿ ವೆಚ್ಚದಲ್ಲಿ ರಸ್ತೆ, ಚರಂಡಿ ಅಭಿವೃದ್ದಿಗೆ ಯೋಜನೆ.ಬಜೆಟ್ ಮಂಡನೆ ವೇಳೆ ನಗರಸಭೆ ಉಪಾಧ್ಯಕ್ಷೆ ಫರ್ಹಾನಾ ತಾಜ್, ಸ್ಥಾಯಿ ಸಮಿತಿ ಅಧ್ಯಕ್ಷ ವಿ.ಎಸ್.ರವಿಕುಮಾರ್, ಪೌರಾಯುಕ್ತ ಪರಮೇಶ್, ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಫೋಟೋ-6ಕೆಡಿಬಿಪಿ1-ದೊಡ್ಡಬಳ್ಳಾಪುರ ನಗರಸಭೆ ಆಯವ್ಯಯ ಪತ್ರವನ್ನು ಅಧ್ಯಕ್ಷರು ಹಾಗೂ ಸದಸ್ಯರು ಪ್ರದರ್ಶಿಸಿದರು.