ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಕೀಳರಿಮೆ ಬೇಡ: ಶಾಂತಗೌಡ ಪಾಟೀಲ್‌

| Published : May 13 2024, 12:03 AM IST

ಎಸ್ಸೆಸ್ಸೆಲ್ಸಿ ಫಲಿತಾಂಶದ ಬಗ್ಗೆ ಕೀಳರಿಮೆ ಬೇಡ: ಶಾಂತಗೌಡ ಪಾಟೀಲ್‌
Share this Article
  • FB
  • TW
  • Linkdin
  • Email

ಸಾರಾಂಶ

ಯಾದಗಿರಿ ಜಿಲ್ಲೆಯ ಫಲಿತಾಂಶ ಈ ಬಾರಿ ಪರಿಶುದ್ಧವಾದುದ್ದು. ಶಿಕ್ಷಕರ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಹಿಂದುಳಿದೆ. ಆದರೂ, ಆಳವಾಗಿ ಫಲಿತಾಂಶದ ಅಂಕಿಅಂಶಗಳತ್ತ ಗಮನ ಹರಿಸುವುದಾದರೆ, ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿಡಿದ ಕನ್ನಡಿಯಂತಿದೆ. ಕ್ವಾಂಟಿಟಿ ಕಡಮೆ ಇರಬಹುದು, ಆದರೆ ಕ್ವಾಲಿಟಿ ಹೆಚ್ಚಾಗಿದೆ ಎಂದು ‘ಕನ್ನಡಪ್ರಭ’ ಫೋನ್‌ ಇನ್‌ ನೇರ ಸಂವಾದ ಕಾರ್ಯಕ್ರಮದಲ್ಲಿ ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಯಾದಗಿರಿ

2023-24ನೇ ಸಾಲಿನ ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ, ಜಿಲ್ಲಾವಾರು ಪಟ್ಟಿಯಲ್ಲಿ ಯಾದಗಿರಿ ಕೊನೆಯ 35ನೇ ಸ್ಥಾನದಲ್ಲಿ ಇದೆ ಎಂದು ಕೀಳರಿಮೆ ಬೇಡ. ಹಾಗೆ ನೋಡಿದರೆ, ಈ ಬಾರಿ ತೇರ್ಗಡೆಯಾದವರ ಸಂಖ್ಯೆ ಹೆಚ್ಚಿರುವುದು (ಪಾಸಿಂಗ್‌ ಪರ್ಸೆಂಟೇಜ್) ಜಿಲ್ಲೆಯ ಶೈಕ್ಷಣಿಕ ಗುಣಮಟ್ಟದಲ್ಲಿ ಸುಧಾರಣೆಯಾದಂತಿದೆ ಎಂದು ನಿವೃತ್ತ ಡಿಡಿಪಿಐ ಶಾಂತಗೌಡ ಪಾಟೀಲ್‌ ಹೇಳಿದರು.

ಎಸ್ಸೆಸ್ಸೆಲ್ಸಿ ಫಲಿತಾಂಶದ ಕುರಿತು, ಭಾನುವಾರ ‘ಕನ್ನಡಪ್ರಭ’ ಆಯೋಜಿಸಿದ್ದ ಫೋನ್‌ ಇನ್ ನೇರ ಕಾರ್ಯಕ್ರಮದಲ್ಲಿ ಸಾರ್ವಜನಿಕರ ಸಲಹೆ ಸೂಚನೆಗಳಿಗೆ ಪ್ರತಿಕ್ರಿಯಿಸಿದ ಅವರು, ಯಾದಗಿರಿ ಜಿಲ್ಲೆಯ ಫಲಿತಾಂಶ ಈ ಬಾರಿ ಪರಿಶುದ್ಧವಾದುದ್ದು. ಶಿಕ್ಷಕರ ಕೊರತೆ ಹಾಗೂ ಇನ್ನಿತರ ಕಾರಣಗಳಿಂದ ಹಿಂದುಳಿದೆ. ಆದರೂ, ಆಳವಾಗಿ ಫಲಿತಾಂಶದ ಅಂಕಿಅಂಶಗಳತ್ತ ಗಮನ ಹರಿಸುವುದಾದರೆ, ಇಲ್ಲಿನ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಹಿಡಿದ ಕನ್ನಡಿಯಂತಿದೆ. ಕಳೆದ ಕೆಲವು ವರ್ಷಗಳಿಂದ ಅವಲೋಕಿಸಿದರೆ ಜಿಲ್ಲಾವಾರು ಕ್ವಾಂಟಿಟಿ (ಸ್ಥಾನ) ಕಡಮೆಯಾದರೂ, ಶಿಕ್ಷಣದ ಕ್ವಾಲಿಟಿ (ಗುಣಮಟ್ಟ) ಹೆಚ್ಚಿರುವುದು ಕಂಡು ಬಂದಿದೆ ಎಂದರು.

ಜಿಲ್ಲೆಯಲ್ಲಿ ಮಂಜೂರಾದ ಹುದ್ದೆಗಳಿಗಿಂತ ಅರ್ಧದಷ್ಟು ಶಿಕ್ಷಕರ ಕೊರತೆಯಿದೆ. ಸಹಜ ವರ್ಗಾವಣೆಯಿಂದ ಇದೇ ಸಾಲಿನಲ್ಲಿ ಸುಮಾರು 800ಕ್ಕೂ ಹೆಚ್ಚು ಶಿಕ್ಷಕರು ಜಿಲ್ಲೆಯಿಂದ ಬೇರೆಡೆ ವರ್ಗಾವಣೆಗೊಂಡಿರುವುದು ಗಾಯದ ಮೇಲೆ ಬರೆ ಎಳೆದಂತಾಗಿತ್ತು. ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರದ ಮಟ್ಟದಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದ ಅವರು, ಯಾದಗಿರಿ ಜಿಲ್ಲೆ ಅಂದರೆ, ಇಲ್ಲಿನವರು ಕೇವಲು ನಕಲು ಮಾಡುತ್ತಾರೆ ಅನ್ನೋ ಮನೋಭಾವನೆ ಸರಿಯಲ್ಲ. ಸ್ಥಾನವನ್ನು ಹೊರತುಪಡಿಸಿದರೆ, ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ನಮ್ಮಲ್ಲಿನ ತೇರ್ಗಡೆಯಾದವರ ಸಂಖ್ಯೆ ಹೆಚ್ಚಿರುವುದು ಸಮಾಧಾನ ಮೂಡಿಸಿದೆ ಎಂದರು.

ಕನ್ನಡಪ್ರಭ ಫೋನ್‌ ಇನ್‌ ಕಾರ್ಯಕ್ರಮದಲ್ಲಿ ಹಲವಾರು ಜನರು ಕರೆ ಮಾಡಿ ಜಿಲ್ಲೆಯ ಶಿಕ್ಷಣ ವ್ಯವಸ್ಥೆಯ ಬಗ್ಗೆ ಬೇಸರ ವ್ಯಕ್ತಪಡಿಸಿದರೆ, ಮುಂದೇನು ಮಾಡಬೇಕು ಎಂಬುದರ ಸಲಹೆಗಳೂ ಹರಿದು ಬಂದವು.

ಪ್ರಾಥಮಿಕ ಹಂತದಲ್ಲಿ ಶಿಕ್ಷಣದ ಮಟ್ಟ ಸುಧಾರಿಸಬೇಕಿದೆ, ಪ್ರೌಢಶಾಲೆಗೆ ಬಂದ ಬಹುತೇಕ ಮಕ್ಕಳಿಗೆ ಮೂಲಭೂತ ಜ್ಞಾನದ (ಬೇಸಿಕ್‌ ನಾಲೆಜ್ಡ್‌) ಕಲಿಕೆಯ ಕೊರತೆಯಿರುತ್ತದೆ. ಹಾಗಿದ್ದಾಗ, ಫಲಿತಾಂಶದಲ್ಲಿ ಏರುಪೇರಾದರೆ ಶಿಕ್ಷಕರ ಮೇಲೆ ಕ್ರಮಗಳನ್ನು ಕೈಗೊಳ್ಳುತ್ತಿರುವುದು ಅದೆಂಥ ನ್ಯಾಯ ಎಂಬ ಪ್ರಶ್ನೆಗಳು ತೂರಿ ಬಂದರೆ, ಕೆಲವು ಕಡೆಗಳಲ್ಲಿ ಶಿಕ್ಷಕರ ಪಾಠಕ್ಕಿಂತ ಹೆಚ್ಚಾಗಿ ವ್ಯಾಪಾರ-ವಹಿವಾಟು ಹಾಗೂ ರಾಜಕೀಯ ಚಟುವಟಿಕೆಗಳಲ್ಲೇ ಮುಳುಗಿರುವುದರಿಂದ ಮಕ್ಕಳಿಗೆ ಇಂತಹ ಶಿಕ್ಷಕರು ಕಲಿಸುವುದಾದರೂ ಏನು ಎಂಬ ಟೀಕೆಗಳು ಮೂಡಿಬಂದವು.

ಯಾದಗಿರಿ ಜಿಲ್ಲೆಯಲ್ಲಿ ಶಿಕ್ಷಣದ ಗುಣಮಟ್ಟ ಸುಧಾರಿಸಿದೆ ಅನ್ನುವುದಕ್ಕೆ ಈಗಿನ ಫಲತಾಂಶದ ಅಂಕಿ ಅಂಶಗಳ ಸಮೇತ ವಿವರಿಸಿದ ಶಾಂತಗೌಡ ಪಾಟೀಲರು ತೇರ್ಗಡೆಯಾದ 9264 ಮಕ್ಕಳಲ್ಲಿ, 318 ಮಕ್ಕಳು ಶೇ.90ಕ್ಕಿಂತ ಹೆಚ್ಚು (ಎ+ ಶ್ರೇಣಿ), 880 ಮಕ್ಕಳು ಶೇ.80-90ರಷ್ಟು ಅಂಕಗಳು (ಎ) 1357 ಮಕ್ಕಳು ಶೇ. 70 ರಿಂದ 80ರಷ್ಟು (ಬಿ+) 2092 ಮಕ್ಕಳು ಶೇ.60-70 ರಷ್ಟು (ಬಿ) ಹಾಗೂ 2881 ಮಕ್ಕಳು ಶೇ. ಸಿ + ಹಾಗೂ 1753 ಮಕ್ಕಳು ಸಿ ಶ್ರೇಣಿಯಲ್ಲಿ ತೇರ್ಗಡೆಯಾಗಿರುವುದು ಸುಧಾರಣೆಯ ಸಂಕೇತ ಎಂದ ಅವರು, ರಾಜ್ಯದಲ್ಲಿ 6ನೇ ರ್‍ಯಾಂಕ್‌ ಪಡೆದ (620 ಅಂಕಗಳು) ವಿದ್ಯಾರ್ಥಿ ಶರಣಬಸವ ಯಾದಗಿರಿ ಜಿಲ್ಲೆಯ ಹುಣಡಗಿಯರಾಗಿದ್ದು, ಮೊರಾರ್ಜಿ ದೇಸಾಯಿ ಶಾಲೆಯ ವಿದ್ಯಾರ್ಥಿ ಅನ್ನೋದು ಹೆಮ್ಮೆಯ ಸಂಗತಿ. ಹಿಂದಿನ ವರ್ಷಗಳ ಹೋಲಿಸಿದರೆ ಇದು ಸುಧಾರಣೆಯಾದಂತಿದೆ ಎಂದರು.

ಡಿಡಿಯು ಶಿಕ್ಷಣ ಸಂಸ್ಥೆಯ ಮುಖ್ಯಸ್ಥ ಭೀಮಣ್ಣ ಮೇಟಿ, ಸುರಪುರ ರಾಘವೇಂದ್ರ ಭಕ್ರಿ, ಯಾದಗಿರಿಯ ಬಸವರಾಜ್‌ ಮೋಟ್ನಳ್ಳಿ, ಶ್ರವಣಕುಮಾರ್, ಕಕ್ಕೇರಾದ ಮಹಾಂತೇಶ, ಕೆಂಭಾವಿಯ ಸಂಜೀವರಾವ್ ಕುಲ್ಕರ್ಣಿ, ನ್ಯಾಯವಾದಿ ಅಕ್ಬರ್‌, ಯರಗೋಳದ ಸಾಬಣ್ಣ ಬಾನರ್, ಯಾದಗಿರಿಯ ಬಸವರಾಜ್ ಮೋಟ್ನಳ್ಳಿ, ಗುರುಮಠಕಲ್‌ನಿಂದ ನಿಂಗಣ್ಣ, ನಿಂಗು ಪಾಟೀಲ್‌ ಹೆಬ್ಬಾಳ್‌, ಭೀಮಣ್ಣ, ಮಂಜುನಾಥ ಮುಂತಾದವರು ಕರೆಗಳನ್ನು ಮಾಡಿ, ತಮ್ಮ ಸಲಹೆ ಸೂಚನೆಗಳನ್ನು ನೀಡಿದರು. ಈ ವೇಳೆ, ತಮ್ಮನ್ನು ಸಂಪರ್ಕಿಸಿದ ಕನ್ನಡಪ್ರಭ ಫೋನ್‌ ಇನ್‌ ಕರೆಗೆ ಪ್ರತಿಕ್ರಿಯಿಸಿದ ಯಾದಗಿರಿ ಡಿಡಿಪಿಐ ಮಂಜುನಾಥ್‌, ಈ ಸಾಲಿನ ಫಲಿತಾಂಶ ನಿಜಕ್ಕೂ ಸಮಾಧಾನ ಮೂಡಿಸಿದೆ. ಸುಧಾರಣೆಯ ಮಟ್ಟದಲ್ಲಿದ್ದೇವೆ, ಲೋಪಗಳು ಹಾಗೂ ಕೊರತೆಗಳು ಮುಂದೆ ನಡೆಯದಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಕನ್ನಡಪ್ರಭ ಫೋನ್‌ ಇನ್‌ ಕಾರ್ಯಕ್ರಮ ಸಾರ್ವಜನಿಕ ವಲಯದಲ್ಲಿ ಶ್ಲಾಘನೆಗೆ ಪಾತ್ರವಾಯಿತು. ಯಾದಗಿರಿ ಜಿಲ್ಲೆಯಲ್ಲಿನ ಫಲಿತಾಂಶ ಕೊನೆಯ ಸ್ಥಾನಕ್ಕೆ ಬಂದಿರುವ ಬಗ್ಗೆ ಕೀಳರಿಮೆ ತೊರೆದು, ಇದಕ್ಕೇನು ಪರಿಹಾರ? ಮುಂದೇನು ಮಾಡಬೇಕು? ಸರ್ಕಾರಗಳು ಹೇಗೆ ಅನುಕೂಲ ಕಲ್ಪಿಸಬೇಕು ಎಂಬ ಬಗ್ಗೆ ಗಂಭೀರ ಚರ್ಚೆ ನಡೆಯಿತು.