ಕನ್ನಡ ಬರಿ ನುಡಿ ಅಲ್ಲ<bha>;</bha> ಜೀವ, ನಮ್ಮ ಅಸ್ಮಿತೆ: ಕೆ.ಜೆ. ಜಾರ್ಜ್
KannadaprabhaNewsNetwork | Published : Nov 02 2023, 01:00 AM IST
ಕನ್ನಡ ಬರಿ ನುಡಿ ಅಲ್ಲ<bha>;</bha> ಜೀವ, ನಮ್ಮ ಅಸ್ಮಿತೆ: ಕೆ.ಜೆ. ಜಾರ್ಜ್
ಸಾರಾಂಶ
ಕನ್ನಡ ಬರಿ ನುಡಿ ಅಲ್ಲ; ಜೀವ, ನಮ್ಮ ಅಸ್ಮಿತೆ: ಕೆ.ಜೆ. ಜಾರ್ಜ್
ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರ ಅದರ ಸೊಬಗು । ಸೌಂದರ್ಯ ಅಭಿಮಾನ ಹೆಚ್ಚಾಗುತ್ತದೆ ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು ಕನ್ನಡ ಎಂದರೆ ಬರಿ ನುಡಿ ಅಲ್ಲ, ಅದು ಜೀವ, ಭಾವ, ಉಸಿರು ಮತ್ತು ನಮ್ಮ ಅಸ್ಮಿತೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅಭಿಪ್ರಾಯ ಪಟ್ಟರು. ಜಿಲ್ಲಾಡಳಿತ, ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ಏರ್ಪಡಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ಮಹಾಕವಿ ಕುವೆಂಪು ಅವರು ಹೇಳಿದಂತೆ ‘ಕನ್ನಡವೇ ಸತ್ಯ ಕನ್ನಡವೇ ನಿತ್ಯ’ ಎಂಬ ಭಾವನೆ ಕನ್ನಡಿಗರ ಎದೆಯಲ್ಲಿ ಸದಾ ಹಸಿರಾಗಿ ರಬೇಕು ಎಂದು ಕರೆ ನೀಡಿದರು. “ಕರುನಾಡು "ಎಂಬ ಪದ ಎತ್ತರದ ಭೂ ಭಾಗ ಎನ್ನುವ ಅರ್ಥ ನೀಡುತ್ತದೆ. ಕರ್ನಾಟಕದ ಜನತೆ ನಿಜಕ್ಕೂ ಎಲ್ಲಾ ಅರ್ಥದಲ್ಲೂ ಎತ್ತರದ, ಗೌರವದ ಸ್ಥಾನಮಾನಗಳಿಗೆ ಸದಾ ಅರ್ಹರಾಗಿದ್ದಾರೆ ಎಂದರು. ಕ್ರಿಸ್ತ ಪೂರ್ವದಿಂದಲೂ ಕನ್ನಡ ಭಾಷೆ ಅಸ್ತಿತ್ವ ಪಡೆದಿರುವ ಬಗ್ಗೆ ಹಲವಾರು ದಾಖಲೆಗಳಿವೆ. ಕನ್ನಡ ನುಡಿ ಮೊದಲು ಬೆಳಕಿಗೆ ಬಂದಿದ್ದು ಚಿಕ್ಕಮಗಳೂರು ಸಮೀಪ ಇರುವ ಬೇಲೂರು ತಾಲೂಕಿನ ಹಲ್ಮಿಡಿ ಗ್ರಾಮದ ಶಾಸನ ಕನ್ನಡದ ಮೊದಲ ಶಾಸನವೆಂದೇ ಪ್ರಸಿದ್ದಿಯಾಗಿದೆ. ಈ ಶಾಸನದಲ್ಲಿ ಚಿಕ್ಕಮಗಳೂರು ತಾಲೂಕಿಗೆ ಸೇರಿದ ಮುಗುಳುವಳ್ಳಿ ಗ್ರಾಮದ ಹೆಸರಿಸಿದೆ ಎಂದು ಹೇಳಿದರು. ಮಹಾಕಾವ್ಯಗಳ ರಚನೆಗೆ ಸಂಸ್ಕೃತವನ್ನು ಬಿಟ್ಟು ಕನ್ನಡವನ್ನು ಆಯ್ದುಕೊಂಡ ಕನ್ನಡದ ಧೀಮಂತ ಕವಿಗಳಾದ ಪಂಪ, ಪೊನ್ನ, ರನ್ನ ರಂತಹ ರತ್ನತ್ರಯರು; ಕನ್ನಡ ಭಾಷೆಯನ್ನು ಶ್ರೀಮಂತಗೊಳಿಸಿದ್ದಾರೆ ಎಂದರು. ಕನ್ನಡ ಸಾಹಿತ್ಯ ಲೋಕಕ್ಕೆ ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಪ್ರಾಕಾರಗಳು ವಿಶೇಷ ಮೇರುಗನ್ನು ತಂದುಕೊಟ್ಟಿವೆ ಎಂದರು. ‘ಕನ್ನಡದ ಗಾಯತ್ರಿ ಎಂದೇ ಖ್ಯಾತವಾದ ಜನಪದ ಸಾಹಿತ್ಯವಂತೂ ಕನ್ನಡ ಪರಂಪರೆಯ ಅಮೂಲ್ಯ ಆಸ್ತಿ. ಜನವಾಣಿ ಬೇರು, ಕವಿವಾಣಿ ಹೂವಾಗಿ ಅರಳಿದ ಕನ್ನಡ ಲಿಪಿ ಎಂತಹ ಸುಂದರ ಲಿಪಿ, “ಎಂತಹ ಚೆಲುವಿನ ಬಳ್ಳಿ, ಕನ್ನಡ ಲಿಪಿಯನ್ನು ‘ಲಿಪಿಗಳ ರಾಣಿ’ ಎಂದು ಆಚಾರ್ಯ ವಿನೋಬಾ ಭಾವೆ ವರ್ಣಿಸಿದ್ದಾರೆ ಎಂದು ಹೇಳಿದರು. ಕನ್ನಡಕ್ಕೆ ಈ ಎಲ್ಲವೂ ಸುಲಭವಾಗಿ ಒದಗಿ ಬರಲಿಲ್ಲ. ಕನ್ನಡ ಮಾತನಾಡುವ ಜನರೆಲ್ಲಾ ಒಂದುಗೂಡಲು, ಹರಿದು ಹಂಚಿ ಹೋಗಿದ್ದ ಕನ್ನಡ ನಾಡನ್ನು ಒಂದು ಮಾಡಲು ಕರ್ನಾಟಕದ ಕುಲ ಪುರೋಹಿತರಾದ ಆಲೂರು ವೆಂಕಟರಾಯರ ಜೊತೆಗೂಡಿ ಅಸಂಖ್ಯಾತ ಕನ್ನಡಿಗರು, ಕನ್ನಡಾಭಿಮಾನಿಗಳು ಮಾಡಿದ ಹೋರಾಟದ ಫಲ ಇಂದು ನಾವು ರಾಜ್ಯೋತ್ಸವವನ್ನು ಸಡಗರದಿಂದ ಆಚರಿಸಲು ಕಾರಣವಾಗಿದೆ ಎಂದರು. ಎರಡೂವರೆ ಸಾವಿರ ವರ್ಷಗಳ ಘನ ಇತಿಹಾಸದ ಹೆಗ್ಗಳಿಕೆ ಹೊಂದಿರುವ ಕನ್ನಡಕ್ಕೆ ‘ಶಾಸ್ತ್ರೀಯ ಭಾಷೆ’ ಗೌರವ ಸಿಕ್ಕಿರುವುದು ನಮ್ಮ ಹೆಮ್ಮೆ. ಆದರೆ, ಭಾಷೆ ನಿರಂತರವಾಗಿ ಬಳಕೆಯಾಗುತ್ತಿದ್ದರೆ ಮಾತ್ರವೇ ಅದರ ಸೊಬಗು ಸೌಂದರ್ಯ, ಆದರ ಅಭಿಮಾನ ಹೆಚ್ಚಾಗುವುದು ಮತ್ತು ಈ ಭಾಷೆಯನ್ನು ಸಮೃದ್ಧ ವಾಗಿಸುವ ದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು. ನಿಸರ್ಗ ದೇವಿಯ ಪರಮ ಕೃಪೆಗೆ ಪಾತ್ರವಾಗಿ, ಅಪಾರವಾದ ನೈಸರ್ಗಿಕ ಚೆಲುವನ್ನು ಪಡೆದು ಹಸಿರು ಸಿರಿಯಿಂದ ಕಂಗೊಳಿಸುತ್ತಿರುವ ನಮ್ಮ ಚಿಕ್ಕಮಗಳೂರು ಜಿಲ್ಲೆಗೆ ವಿದ್ಯಾ ದೇವತೆ ಶಾರದಾಂಬೆ ಮತ್ತು ಅನ್ನ ನೀಡುವ ಅನ್ನಪೂರ್ಣೇಶ್ವರಿ ಕೃಪೆ ಸದಾ ಇದೆ ಎಂದರು. ಚಿಕ್ಕಮಗಳೂರು ಶಾಸಕ ಎಚ್.ಡಿ. ತಮ್ಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ, ವಿಧಾನಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿಲ್ಲಾ ರಕ್ಷಣಾಧಿಕಾರಿ ಡಾ. ವಿಕ್ರಂ ಅಮಟೆ, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಗೋಪಾಲಕೃಷ್ಣ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು. --ಬಾಕ್ಸ್--- ಜಿಲ್ಲೆ ಜಲಸಂಪನ್ಮೂಲದ ತವರು ಚಿಕ್ಕಮಗಳೂರು ರಾಜ್ಯದ ಜಲಸಂಪನ್ಮೂಲದ ತವರು ಕೂಡ. ಏಳು ಪ್ರಮುಖ ನದಿಗಳಾದ ತುಂಗಾ, ಭದ್ರಾ, ನೇತ್ರಾವತಿ, ಹೇಮಾವತಿ, ಯುಗಚಿ, ವೇದಾ, ಆವತಿ ನದಿಗಳು ಹುಟ್ಟುವುದು ಈ ಜಿಲ್ಲೆಯ ಪ್ರಸಿದ್ಧ ಪಶ್ಚಿಮ ಘಟ್ಟಗಳಲ್ಲಿ ಮತ್ತು ಚಂದ್ರದ್ರೋಣ ಪರ್ವತದ ಶಿಖರಗಳಲ್ಲಿ. ಈ ನದಿಗಳ ಜೊತೆಗೆ ಮೂವತ್ತಕ್ಕೂ ಅಧಿಕ ಉಪ ನದಿಗಳೂ, ಹೆಸರೇ ಇಲ್ಲದ ನೂರಾರು ಹಳ್ಳ, ತೊರೆ, ಝರಿಗಳು ಹುಟ್ಟುವ ಪ್ರದೇಶ ನಮ್ಮದು. ನಮ್ಮ ರಾಜ್ಯದ ಹತ್ತಾರು ಜಿಲ್ಲೆಗಳಿಗೆ ನೀರುಣಿಸಿ ಆಂದ್ರ, ತಮಿಳುನಾಡುಗಳಿಗೂ ಜಲಧಾರೆ ಹರಿಸುವ ಭಾಗ್ಯ ಇಲ್ಲಿನ ನದಿಗಳದ್ದು. ಆದುದರಿಂದ ಇಲ್ಲಿನ, ಪಶ್ಚಿಮ ಘಟ್ಟಗಳಲ್ಲಿನ ಪ್ರಕೃತಿ ಸಮ ತೋಲನ ಕಾಪಾಡಿಕೊಂಡು ಈ ನೈಸರ್ಗಿಕ ಪರಿಸರ ಸಂರಕ್ಷಿಸುವ ಅನನ್ಯ ಹೊಣೆಗಾರಿಕೆ ಪ್ರತಿಯೊಬ್ಬ ಕನ್ನಡಿಗನೂ ವಹಿಸಿಕೊಳ್ಳಲೇಬೇಕಾಗಿದೆ ಎಂದು ಕೆ.ಜೆ.ಜಾಜ್ ಹೇಳಿದರು. 1 ಕೆಸಿಕೆಎಂ 1 ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭ ದಲ್ಲಿ ಸಚಿವ ಕೆ.ಜೆ. ಜಾರ್ಜ್ ಅವರು ಧ್ವಜಾರೋಹಣ ನೆರವೇರಿಸಿ ಗೌರವ ಸಲ್ಲಿಸಿದರು. 1 ಕೆಸಿಕೆಎಂ 2 ಚಿಕ್ಕಮಗಳೂರಿನ ಜಿಲ್ಲಾ ಆಟದ ಮೈದಾನದಲ್ಲಿ ಬುಧವಾರ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದ ಸಂದರ್ಭದಲ್ಲಿ ಸ್ತಬ್ಧ ಚಿತ್ರಗಳ ಪ್ರದರ್ಶನದಲ್ಲಿ ಚಿಕ್ಕಮಗಳೂರು ಪ್ರೆಸ್ ಕ್ಲಬ್ ಸಿದ್ದಪಡಿಸಿದ್ದ ವಿಜಯನಗರ ವೈಭವ ಸ್ತಬ್ಧ ಚಿತ್ರದಲ್ಲಿ ಪತ್ರಕರ್ತರು ಪಾಲ್ಗೊಂಡಿರುವುದು.