ಸಾರಾಂಶ
ಕನ್ನಡಪ್ರಭ ವಾರ್ತೆ ಪೊನ್ನಂಪೇಟೆ
ರೈತರು ಭತ್ತದ ಗದ್ದೆಗಳನ್ನು ಪಾಳುಬಿಡದೆ ಸಾಂಪ್ರದಾಯಿಕ ಭತ್ತದ ಕೃಷಿ ಮಾಡಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯದ ಉಪ ಕುಲಪತಿ ಡಾ.ಆರ್. ಸಿ. ಜಗದೀಶ್ ಹೇಳಿದ್ದಾರೆ.ಕೊಡಗು ಕೃಷಿ ವಿಜ್ಞಾನ ವೇದಿಕೆ ಬೆಳ್ಳಿಮಹೋತ್ಸವ ಅಂಗವಾಗಿ ಪೊನ್ನಂಪೇಟೆಯ ಅರಣ್ಯ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ರೈತ ಮೇಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.
ಭತ್ತದ ಕೃಷಿಯಲ್ಲಿ ಸಾಕಷ್ಟು ಸಮಸ್ಯೆ ಇರುವದರಿಂದ ಹಲವು ಕೃಷಿಕರು ಭತ್ತದ ಕೃಷಿಯಿಂದ ವಿಮುಖವಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಾರ್ಮಿಕರ ಸಮಸ್ಯೆ ಹೆಚ್ಚಾಗಿದೆ. ಹಲವು ಆಧುನಿಕ ತಂತ್ರಜ್ಞಾನ ಬಂದಿವೆ. ಆದ್ದರಿಂದ ಸಾಂಪ್ರದಾಯಿಕ ತಳಿಗಳನ್ನು ಬೆಳೆಯಬೇಕಿದೆ. ಇದಕ್ಕೆ ನಮ್ಮ ವಿಶ್ವ ವಿದ್ಯಾಲಯದಿಂದ ಸಹಕಾರ ನೀಡಲಾಗುವುದು ಎಂದು ತಿಳಿಸಿದರು.ಭತ್ತದ ಕೃಷಿಯೊಂದಿಗೆ ಗದ್ದೆಗಳಲ್ಲಿ ಮೀನು ಮರಿಗಳನ್ನು ಬಿಟ್ಟು ಮೂರು ತಿಂಗಳು ಕೃಷಿ ಮಾಡುವುದರಿಂದ ಆದಾಯ ಗಳಿಸಬಹುದು ಎಂದು ಹೇಳಿದರು.ಇತ್ತೀಚೆಗೆ ಗ್ರಾಮೀಣ ಭಾಗದಲ್ಲಿ 40 ವರ್ಷ ಮೆಲ್ಪಟ್ಟವರು ಮಾತ್ರ ಕೃಷಿಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಯುವಕರು ಕಾಣಿಸಿಕೊಳ್ಳುತ್ತಿರುವುದು ತೀರಾ ಕಡಿಮೆ. ಇದು ವಿಷಾದಕರ ಎಂದರು.
ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದ ಡೀನ್ ಡಾ.ಜಿ.ಎಂ. ದೇವಗಿರಿ ಮಾತನಾಡಿ, ಜಿಲ್ಲೆಯಲ್ಲಿ ಕಾಫಿ ತೋಟಗಳಲ್ಲಿ ಹಲವು ಬಗೆಯ ಮರಗಳನ್ನು ಕೂಡ ಬೆಳೆಸಲಾಗುತ್ತಿದೆ. ಇದು ಜೀವ ವೈವಿದ್ಯತೆಗೆ ಸಹಕಾರಿ ಎಂದರು.ಕೊಡಗು ಕೃಷಿ ವಿಜ್ಞಾನ ವೇದಿಕೆ ಅಧ್ಯಕ್ಷ ಡಾ. ಸಿ.ಜಿ. ಕುಶಾಲಪ್ಪ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಮಾನವ-ಪ್ರಾಣಿ ಸಂಘರ್ಷ ಪ್ರಮುಖ ಸಮಸ್ಯೆಯಾಗಿದೆ. ಇದರ ಪರಿಹಾರಕ್ಕೆ ಮಾರ್ಗೋಪಾಯ ಕಂಡುಕೊಳ್ಳಲು ಯೋಜನೆ ರೂಪಿಸಲು ಕೆಲಸ ಮಾಡಬೇಕಿದೆ ಎಂದರು.
ಖುಷಿಯಿಂದ ಕೃಷಿ-ರವಿಶಂಕರ್:ತಾನು 35 ಎಕರೆ ಪ್ರದೇಶದಲ್ಲಿ ಸುಮಾರು 35 ತಳಿಯ ಭತ್ತ ಬೆಳೆಯುತ್ತಿದ್ದೇನೆ. ಭತ್ತದಿಂದ ಲಾಭ ಇಲ್ಲ. ಆದರೆ ಖುಷಿಯಿಂದ ಕೃಷಿ ಮಾಡುತ್ತಿದ್ದೇನೆ ಎಂದು ಕೃಷಿಕ ರವಿಶಂಕರ್ ಹೇಳಿದರು.
ರೈತ ಮೇಳದ ವಿಚಾರಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೊಡಗಿನಲ್ಲಿ ಹವಾಮಾನದ ವೈಪರೀತ್ಯಗಳಿಂದಾಗಿ ಎಂದಿಗೂ ಆಕಾಶ ನೋಡುವ ಪರಿಸ್ಥಿತಿ ಇದೆ. ಭತ್ತದ ಕೃಷಿ ಮಾಡುವುದರಿಂದ ಅಂತರ್ ಜಲ ಸಂರಕ್ಷಣೆ ಮಾಡಿಕೊಂಡು ಬರಬಹುದು ಎಂದರು.ಇಶಾ ಸಂಸ್ಥೆಯ ರಾಂಪ್ರಿಯ ಮಾತನಾಡಿ ರೈತ ಉತ್ಪಾದಕ ಸಂಸ್ಥೆಗಳ ಪ್ರಯೋಜನಗಳು, ಇವುಗಳನ್ನು ರೈತರ ಬಳಿಗೆ ತಲುಪಿಸುವ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.
ಕೊಡಗು ಮಹಿಳಾ ಕಾಫಿ ಬಳಕೆ ಉತ್ತೇಜಕ ಸಂಸ್ಥೆಯ ಅನಿತಾ ನಂದ ಮಾತನಾಡಿ, ಜೇನು ಸಾಕಾಣಿಕೆ ಮೂಲಕ ಕಾಫಿ ಉತ್ಪಾದನೆ ಹೆಚ್ಚಿಸಬಹುದು. ಜೇನು ಸಾಕಾಣಿಕೆ ಬೆಳೆಗಾರನಿಗೆ ಮಾತ್ರ ಉಪಯೋಗ ಅಲ್ಲ. ಪರಿಸರಕ್ಕೂ ಪೂರಕ ಎಂದರು.ಕಾಫಿ ಮಂಡಳಿ ಉಪನಿರ್ದೇಶಕಿ ಶ್ರೀದೇವಿ ಕಾಫಿ ಮಂಡಳಿ ಯೋಜನೆಗಳ ಮಾಹಿತಿ ನೀಡಿದರು. ಕೃಷಿ ವಿಜ್ಞಾನ ವೇದಿಕೆ ಮಾಜಿ ಅಧ್ಯಕ್ಷ ಪಿ.ಎಸ್. ಸುಬ್ರಮಣಿ ಅಧ್ಯಕ್ಷತೆ ವಹಿಸಿದ್ದರು.
ಉದ್ಘಾಟನೆ:ಕೃಷಿ ವಿಜ್ಞಾನ ವೇದಿಕೆಯ ಬೆಳ್ಳಿಮಹೋತ್ಸವ ಕಾರ್ಯಕ್ರಮವನ್ನು ಸರ್ಕಾರದ ಕೃಷಿ ನಿರ್ದೇಶಕ ಡಾ. ಜಿ.ಟಿ. ಪುತ್ರ ಉದ್ಘಾಟಿಸಿದರು. ಕಾರ್ಯಕ್ರಮದ ಅಂಗವಾಗಿ ರಾಷ್ಟ್ರಪ್ರಶಸ್ತಿ ಪುರಸ್ಕೃತ ಸೋಮೇಯಂಗಡ ಗಣೇಶ್ ತಿಮ್ಮಯ್ಯ ಅವರ ಜಮೀನಿನಲ್ಲಿ ಕ್ಷೇತ್ರ ಭೇಟಿ ಹಮ್ಮಿಕೊಳ್ಳಲಾಯಿತು. ಜಿಲ್ಲೆಯ ವಿವಿಧ ಭಾಗದ ಕೃಷಿಕರು, ಕೃಷಿ ವಿಜ್ಞಾನ ವೇದಿಕೆ ಸದಸ್ಯರು ಹಾಗೂ ನಾನಾ ಕಾಲೇಜಿನ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.