ಆಧುನಿಕತೆ ಹೆಸರಲ್ಲಿ ಜಾನಪದ ಕಲೆ ಕೆಡಿಸಬೇಡಿ: ಬಿ.ಟಾಕಪ್ಪ

| Published : Nov 10 2025, 12:30 AM IST

ಆಧುನಿಕತೆ ಹೆಸರಲ್ಲಿ ಜಾನಪದ ಕಲೆ ಕೆಡಿಸಬೇಡಿ: ಬಿ.ಟಾಕಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಜಾನಪದ ಹಾಡು, ನೃತ್ಯ, ಪರಿಕರಕ್ಕೆ ಅದರದ್ದೆ ಆದ ಶ್ರೇಷ್ಠತೆಯಿದ್ದು, ಹೊಸದಾಗಿ ಜಾನಪದ ಕ್ಷೇತ್ರ ಪ್ರವೇಶ ಮಾಡುವವರು ಅದರ ಬಗ್ಗೆ ಅರಿವು ಹೊಂದಿರಬೇಕು. ಆಧುನೀಕರಣದ ಹೆಸರಿನಲ್ಲಿ ಜಾನಪದ ಕಲೆಯ ಮೂಲವನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಬಿ.ಟಾಕಪ್ಪ ಸಲಹೆ ನೀಡಿದರು.

ಕನ್ನಡಪ್ರಭ ವಾರ್ತೆ ಸಾಗರ

ಜಾನಪದ ಹಾಡು, ನೃತ್ಯ, ಪರಿಕರಕ್ಕೆ ಅದರದ್ದೆ ಆದ ಶ್ರೇಷ್ಠತೆಯಿದ್ದು, ಹೊಸದಾಗಿ ಜಾನಪದ ಕ್ಷೇತ್ರ ಪ್ರವೇಶ ಮಾಡುವವರು ಅದರ ಬಗ್ಗೆ ಅರಿವು ಹೊಂದಿರಬೇಕು. ಆಧುನೀಕರಣದ ಹೆಸರಿನಲ್ಲಿ ಜಾನಪದ ಕಲೆಯ ಮೂಲವನ್ನು ಕೆಡಿಸುವ ಕೆಲಸ ಮಾಡಬಾರದು ಎಂದು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಜಾನಪದ ಕಲಾವಿದ ಬಿ.ಟಾಕಪ್ಪ ಸಲಹೆ ನೀಡಿದರು.

ಪಟ್ಟಣದ ಶೃಂಗೇರಿ ಶಂಕರಮಠದಲ್ಲಿ ಸ್ನೇಹಸಾಗರ ಮಹಿಳಾ ಡೊಳ್ಳು ತಂಡ ರಜತ ಮಹೋತ್ಸವ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾನಪದ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ಜಾನಪದ ಕುಣಿತ, ಪರಿಕರದಲ್ಲಿ ಶುದ್ದ ಜಾನಪದ ಇರಲಿ. ನಮ್ಮ ಕಲಾ ಪ್ರದರ್ಶನಕ್ಕಾಗಿ ಕಲೆಗೆ ಕೆಟ್ಟ ಹೆಸರು ತರುವುದು ಬೇಡ. ಇತ್ತೀಚಿನ ದಿನಗಳಲ್ಲಿ ಜಾನಪದ ನೇಪಥ್ಯಕ್ಕೆ ಸರಿಯುತ್ತಿದೆ. ನಮ್ಮ ಕಲೆಗೆ ಅಪಚಾರ ಆಗದಂತೆ ನೋಡಿಕೊಳ್ಳಿ. ಒಂದು ಕಾಲದಲ್ಲಿ ಧಾರ್ಮಿಕತೆಗೆ ಸೀಮಿತವಾಗಿದ್ದ ಡೊಳ್ಳು ಇಂದು ವಿಶ್ವಮಾನ್ಯವಾಗಿದೆ. ಮಹಿಳೆಯರು ಡೊಳ್ಳು ಮುಟ್ಟಲೆ ಬಾರದು ಎಂಬ ನಿಯಮವಿತ್ತು. ಮೊದಲ ಬಾರಿಗೆ ಮಹಿಳೆಯರೂ ಡೊಳ್ಳು ಕಟ್ಟಬಹುದು ಎನ್ನುವುದನ್ನು ಜಗತ್ತಿಗೆ ತೋರಿಸಿ ಕೊಟ್ಟವರು ಚೂಡಾಮಣಿ ರಾಮಚಂದ್ರ ನೇತೃತ್ವದ ಡೊಳ್ಳು ತಂಡವಾಗಿದೆ. ಸತತ ೨೫ ವರ್ಷಗಳ ಕಾಲ ತಂಡವೊಂದನ್ನು ನಡೆಸಿಕೊಂಡು ಬರುವುದು ಸುಲಭದ ಮಾತಲ್ಲ ಎಂದು ಹೇಳಿದರು.

ಜೋಷಿ ಫೌಂಡೇಷನ್ ಮುಖ್ಯಸ್ಥ ದಿನೇಶ ಕುಮಾರ್ ಜೋಷಿ ಮಾತನಾಡಿ, ಜಾನಪದ ಕಲೆ ಅತ್ಯಂತ ಶ್ರೇಷ್ಠ ಕಲಾಪ್ರಕಾರಗಳಲ್ಲಿ ಒಂದಾಗಿದೆ. ಮಹಿಳೆಯರು ಸಹ ಗಂಡುಮೆಟ್ಟಿನ ಕಲೆಯನ್ನು ಕರಗತ ಮಾಡಿಕೊಂಡು ವೇದಿಕೆ ಮೇಲೆ ಪ್ರದರ್ಶನ ಮಾಡಬಹುದು ಎನ್ನುವುದನ್ನು ಸ್ನೇಹಸಾಗರ ತಂಡ ತೋರಿಸಿಕೊಟ್ಟಿದೆ. ತಂಡವು ೨೫ ವರ್ಷ ಪೂರೈಸಿರುವುದು ಹೆಮ್ಮೆಯ ಸಂಗತಿ ಎಂದರು.

ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್ ಮಾತನಾಡಿ, ನಮ್ಮ ನೆಲಮೂಲ ಕಲೆಯನ್ನು ಅಭಿವ್ಯಕ್ತಗೊಳಿಸುವಲ್ಲಿ ಜಾನಪದ ಕಲೆ ಪ್ರಮುಖವಾಗಿದೆ. ಮಹಿಳೆಯರು ನಾಲ್ಕು ಗೋಡೆಗೆ ಸೀಮಿತ ಎನ್ನುವ ಸಂದರ್ಭದಲ್ಲಿ ಸ್ನೇಹಸಾಗರ ಮಹಿಳಾ ಮಂಡಳಿ ಸಮಾಜಮುಖಿಯಾಗಿ ಗುರುತಿಸಿಕೊಂಡಿದೆ. ವಿಶ್ವದ ೨೫ಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ಡೊಳ್ಳು ಪ್ರದರ್ಶನ ನೀಡಿ ಯಶಸ್ವಿಯಾಗಿದ್ದಾರೆ ಎಂದರು.

ಸುನಂದ ಶ್ರೀಧರ್, ಜ್ಯೋತಿ ಸ್ವಾಮಿ, ಬಿ.ಟಾಕಪ್ಪ, ಸುನಂದ ಶಶಿಭೂಷಣ್ ಅವರನ್ನು ಸನ್ಮಾನಿಸಲಾಯಿತು. ಸ್ನೇಹಸಾಗರ ಮಹಿಳಾ ಮಂಡಳಿಯ ಅಧ್ಯಕ್ಷೆ ಚೂಡಾಮಣಿ ರಾಮಚಂದ್ರ ಅಧ್ಯಕ್ಷತೆ ವಹಿಸಿದ್ದರು. ಡಾ.ಸಣ್ಣಹನುಮಪ್ಪ ಇತರರು ಹಾಜರಿದ್ದರು.