ಸಾರಾಂಶ
ಬೇರೆಯವರ ಜೀವವನ್ನು ಉಳಿಸಲು ಪ್ರತಿಯೊಬ್ಬರೂ ತಪ್ಪದೆ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ.
ಆನಂದಪುರ : ಪ್ರತಿಯೊಬ್ಬ ವ್ಯಕ್ತಿಯೂ ಆರೋಗ್ಯವಂತರಾಗಿರಬೇಕಾದರೆ ತಪ್ಪದೇ ರಕ್ತದಾನ ಮಾಡಬೇಕು ಎಂದು ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯದ ಕುಲಪತಿ ಡಾ.ಆರ್.ಸಿ.ಜಗದೀಶ್ ಪ್ರತಿಪಾದಿಸಿದರು.
ಇಲ್ಲಿಗೆ ಸಮೀಪದ ಇರುವಕ್ಕಿ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕಾ ವಿಜ್ಞಾನಿಗಳ ವಿಶ್ವವಿದ್ಯಾನಿಲಯ, ಶಿವಮೊಗ್ಗ ಕೃಷಿ ವಿಜ್ಞಾನಿಗಳ ಮಹಾವಿದ್ಯಾಲಯ ಇರುವಕ್ಕಿ, ರೆಡ್ ಕ್ರಾಸ್ ಸಂಸ್ಥೆ ಶಿವಮೊಗ್ಗ ಹಾಗೂ ಕೃಷಿ ಮಹಾವಿದ್ಯಾಲಯ ರೆಡ್ ಕ್ರಾಸ್ ಘಟಕ ಸಹಯೋಗದೊಂದಿಗೆ ಇರುವಕ್ಕಿ ಕೃಷಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆಸಲಾದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿ, ಬೇರೆಯವರ ಜೀವವನ್ನು ಉಳಿಸಲು ಪ್ರತಿಯೊಬ್ಬರೂ ತಪ್ಪದೆ ರಕ್ತದಾನ ಮಾಡಬೇಕು. ರಕ್ತದಾನ ಮಾಡುವುದರಿಂದ ಉತ್ತಮ ಆರೋಗ್ಯ ಪಡೆಯಲು ಸಾಧ್ಯ. ಒಬ್ಬ ವ್ಯಕ್ತಿ ಒಮ್ಮೆ ರಕ್ತದಾನ ಮಾಡಿದರೆ ನಾಲ್ಕು ಜನರ ಜೀವ ಉಳಿಸಲು ಸಾಧ್ಯ ಎಂದರು. ಹಾಗೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಹಾಗೂ ಶಿಕ್ಷಕರು ವರ್ಷಕ್ಕೆ ಎರಡು ಬಾರಿ ತಪ್ಪದೇ ರಕ್ತದಾನ ಮಾಡಬೇಕು ಎಂದು ಕರೆ ನೀಡಿದರು.
ಸಂಪಲ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಡಾ.ವಿ.ಎಸ್.ಎಲ್. ಕುಮಾರ್ ಮಾತನಾಡಿ ಎಲ್ಲಾ ದಾನಗಳಿಗಿಂತ ಪವಿತ್ರ ಹಾಗೂ ಶ್ರೇಷ್ಠವಾದ್ದು ರಕ್ತದಾನ. ಒಬ್ಬ ವ್ಯಕ್ತಿ ವರ್ಷಕ್ಕೆ ಎರಡು ಬಾರಿ ರಕ್ತದಾನ ಮಾಡಿ ಇನ್ನೊಬ್ಬರ ಜೀವ ಉಳಿಸಲು ಶ್ರಮಿಸೋಣ ಎಂದರು. ಹಾಗೆ ವಿದ್ಯಾರ್ಥಿಗಳು ಆಕಸ್ಮಿಕವಾಗಿ ಸಂಭವಿಸುವ ಬೆಂಕಿ ಅನಾಹುತ, ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಸಂದರ್ಭದಲ್ಲಿ ಅವನನ್ನು ಹೇಗೆ ಉಳಿಸಬೇಕು ಎಂಬುದರ ಬಗ್ಗೆ ಮಾಹಿತಿ ನೀಡಿದರು.
ನಿರ್ದೇಶಕರಾದ ಡಾ. ಬಿ.ನಾಯಕ್, ಕುಲಸಚಿವ ಡಾ.ಕೆ.ಸಿ.ಶಶಿಧರ್, ವಿದ್ಯಾರ್ಥಿ ಕಲ್ಯಾಣ ನಿರ್ದೇಶಕ ಡಾ. ಶಿವಶಂಕರ್ , ರೆಡ್ ಕ್ರಾಸ್ ಸಂಸ್ಥೆಯ ಡಾ. ದಿನಕರ್, ಧರಣೇಂದ್ರ ದಿನಕರ್, ವಿಶ್ವವಿದ್ಯಾನಿಲಯ ಸಿಬ್ಬಂದಿಗಳು ಹಾಗೂ ವಿದ್ಯಾರ್ಥಿಗಳು ರಕ್ತದಾನ ಶಿಬಿರದಲ್ಲಿ ಭಾಗವಹಿಸಿದ್ದು, 55 ವಿದ್ಯಾರ್ಥಿಗಳು ಹಾಗೂ 10 ಶಿಕ್ಷಕರು ರಕ್ತದಾನ ಮಾಡಿದರು.