ಸಾರಾಂಶ
ಕುರುಗೋಡು: ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳುವುದಕ್ಕೆ ಬರುವ ಫಲಾನುಭವಿಗಳಿಗೆ ಹಾಗೂ ಕಚೇರಿಯ ಅಧಿಕಾರಿಗಳ ಹತ್ತಿರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಿಕೊಳ್ಳುವುದಕ್ಕೆ ಬರುವ ಸಾರ್ವಜನಿಕರನ್ನು ಅಲೆದಾಡಿಸಬೇಡಿ ಎಂದು ಬಳ್ಳಾರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಂಗಮೇಶ್ ಅಧಿಕಾರಿಗಳಿಗೆ ಸೂಚನೆ ನೀಡಿದರು.ಪಟ್ಟಣದ ತಹಶೀಲ್ದಾರ್ ಕಚೇರಿಯ ಸಭಾಂಗಣದಲ್ಲಿ ಲೋಕಾಯುಕ್ತರ ಅಧಿಕಾರಿಗಳ ನೇತೃತ್ವದಲ್ಲಿ ಕರೆಯಲಾಗಿದ್ದ ಸಾರ್ವಜನಿಕರ ಕುಂದು-ಕೊರತೆಗಳ ಅರ್ಜಿ ಸಲ್ಲಿಕೆಯಲ್ಲಿ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡಿದರು.ಮುಂದಿನ ದಿನಗಳಲ್ಲಿ ಮರುಕಳಿಸಿದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ತಾಲೂಕು ಮಟ್ಟದ ಅಧಿಕಾರಿಗಳು ತಮ್ಮ ಕೆಲಸಗಳನ್ನು ಸಾರ್ವಜನಿಕರಿಗೆ ಸಕಾಲಕ್ಕೆ ದೊರೆಯುವಂತೆ ಮಾಡಿದರೆ ಯಾವುದೇ ಸಮಸ್ಯೆಗಳು ಉಲ್ಬಣಗೊಳ್ಳುವುದಿಲ್ಲ. ಸರ್ಕಾರ ತಮಗೆ ನೀಡಿದ ಜವಾಬ್ದಾರಿ ಕೆಲಸವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.
ಕುರುಗೋಡಿನ ರೈತ ರುದ್ರಪ್ಪ ಮಾತನಾಡಿ, ನಮ್ಮ ಜಮೀನಿನ ದಾಖಲೆಗಳ ಪತ್ರಗಳಿಗಾಗಿ ಹತ್ತಾರು ವರ್ಷಗಳಿಂದ ಅಲೆದಾಡಿದರೂ ಇಂದಿಗೂ ಇಲಾಖೆಯಿಂದ ನನಗೆ ಯಾವುದೇ ದಾಖಲೆ ಪತ್ರಗಳನ್ನು ನೀಡಿಲ್ಲ ಎಂದು ನೋವು ತೋಡಿಕೊಂಡರು.ಇದಕ್ಕೆ ಪ್ರತಿಕ್ರಿಯಿಸಿದ ಕುರುಗೋಡು ಗ್ರೇಡ್೨ ತಹಶೀಲ್ದಾರ್ ಮಲ್ಲೇಶಪ್ಪ, ಈ ಹಿಂದೆ ನೀವು ಇಲಾಖೆಗೆ ನೀಡಿದ ಮನವಿ ನಮ್ಮ ಗಮನಕ್ಕೆ ಬಂದಿಲ್ಲ. ಮತ್ತೆ ಪುನಃ ಕಚೇರಿಗೆ ಮನವಿಯನ್ನು ಕೊಡಿ. ನಿಮ್ಮ ಜಮೀನಿಗೆ ಸಂಬಂಧಿಸಿದ ದಾಖಲೆಗಳನ್ನು ಒದಗಿಸಲಾಗುವುದು ಎಂದರು.ರೈತರಿಂದ ಐದು ಅರ್ಜಿ ಸಲ್ಲಿಕೆಯಾದವು.ಈ ಸಂದರ್ಭದಲ್ಲಿ ಗ್ರೇಡ್ ೨ ತಹಸೀಲ್ದಾರ್ ಮಲ್ಲೇಶಪ್ಪ, ಶಿರಸ್ತೇದಾರ್ ವಿಜಯಕುಮಾರ್ ಕುರುಗೋಡು ಶಿರಸ್ತೇದಾರ್ ಸೇರಿದಂತೆ ಕುರುಗೋಡು ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.