ಸಾರಾಂಶ
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದು, ಎಲ್ಲರೂ ಅವರ ತತ್ವಗಳನ್ನು ಪಾಲಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ ಹೇಳಿದರು.
ಕನ್ನಡಪ್ರಭ ವಾರ್ತೆ ಹುಣಸಗಿ
ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜೀವನ ಇಂದಿನ ಯುವ ಪೀಳಿಗೆಗೆ ಆದರ್ಶವಾಗಿದ್ದು, ಎಲ್ಲರೂ ಅವರ ತತ್ವಗಳನ್ನು ಪಾಲಿಸಬೇಕೆಂದು ಬಿಜೆಪಿ ಮಂಡಲ ಅಧ್ಯಕ್ಷ ಸಂಗಣ್ಣ ಸಾಹು ವೈಲಿ ಹೇಳಿದರು.ಪಟ್ಟಣದ ಬಿಜೆಪಿ ಪಕ್ಷದ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ 133ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಭಾರತೀಯ ಇತಿಹಾಸದಲ್ಲಿ ಅನೇಕ ಸ್ವಾತಂತ್ರ್ಯ ಹೋರಾಟಗಾರರು, ಸಮಾಜ ಸುಧಾರಕರು ತಮ್ಮ ಕೊಡುಗೆಗಳನ್ನು ನೀಡಿದ್ದು, ಅದರಲ್ಲಿ ತಮ್ಮ ಹೋರಾಟದ ಮುಖಾಂತರ ಶೋಷಿತರು ಹಾಗೂ ದೀನ ದಲಿತರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಶ್ರಮಿಸಿದ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಯಾವಾಗಲೂ ಮಾದರಿಯಾಗಿ ಉಳಿಯುತ್ತಾರೆ ಎಂದರು.ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರು ಯಾವುದೇ ಒಂದು ಸಮುದಾಯಕ್ಕೆ ಸೀಮಿತರಲ್ಲ. ಅವರು ದೇಶಕ್ಕೆ ಸಂವಿಧಾನವನ್ನು ನೀಡಿದ ಸಮಿತಿಯ ಅಧ್ಯಕ್ಷರಾಗಿ, ಸಮಾಜಶಾಸ್ತ್ರಜ್ಞರಾಗಿ, ಅರ್ಥಶಾಸ್ತ್ರಜ್ಞರಾಗಿ, ಇತಿಹಾಸಕಾರರಾಗಿ ಹೀಗೆ ಅವರಿಗೆ ತಿಳಿಯದ ಕ್ಷೇತ್ರವಿರಲಿಲ್ಲ. ಹಿಂದುಳಿದವರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆತರುವ ಎಲ್ಲರ ಜೊತೆಗೆ ಕರೆದೊಯ್ಯುವ ಉದ್ದೇಶ ಅವರದಾಗಿತ್ತು ಎಂದರು.
ಬಿಜೆಪಿ ಮುಖಂಡ ವಿರೇಶ ಸಾಹು ಚಿಂಚೋಳಿ, ಮಾಜಿ ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಸ್ಥಾವರಮಠ, ಮೇಲಪ್ಪ ಗುಳಗಿ, ತಿಪ್ಪಣ್ಣ ಸಾಹು ಚಂದಾ, ನಾನಗೌಡ ಪಾಟೀಲ್, ಸೋಮಶೇಖರಯ್ಯ ಸ್ವಾಮಿ ಹಿರೇಮಠ, ವಿರುಪಾಕ್ಷಯ್ಯಸ್ವಾಮಿ ಹಿರೇಮಠ, ರಾಜು ಮಲಗಲದಿನ್ನಿ, ಯೂಸುಫ್ ಡೆಕ್ಕನ್, ಶಿವರುದ್ರ ದೇಸಾಯಿ, ರವಿ ಪುರಾಣಿಕಮಠ ಸೇರಿದಂತೆ ಇತರರಿದ್ದರು.