ಸಾರಾಂಶ
ಕವಿ ಚಕ್ರವರ್ತಿ ರನ್ನನ ಸಾಹಿತ್ಯ ಮುಂದಿನ ಪೀಳಿಗೆಗೂ ವರ್ಗಾವಣೆಯಾಗಲು ಮುಧೋಳದ ಮೋಡಿ ಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿಯವರ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.
ಕನ್ನಡ ಪ್ರಭವಾರ್ತೆ ಮುಧೋಳ
ಕವಿ ಚಕ್ರವರ್ತಿ ರನ್ನನ ಸಾಹಿತ್ಯ ಮುಂದಿನ ಪೀಳಿಗೆಗೂ ವರ್ಗಾವಣೆಯಾಗಲು ಮುಧೋಳದ ಮೋಡಿ ಲಿಪಿ ತಜ್ಞ ಡಾ.ಸಂಗಮೇಶ ಕಲ್ಯಾಣಿಯವರ ಪ್ರಯತ್ನ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ. ಹೇಳಿದರು.ನಗರದ ರಾಷ್ಟ್ರೀಯ ಸಂಶೋಧನಾ ವೇದಿಕೆ ಮುಧೋಳ ವತಿಯಿಂದ ಭಾನುವಾರ ನಡೆದ ಡಾ.ಸಂಗಮೇಶ ಕಲ್ಯಾಣಿ ಅವರ ಶೋಧ-ಪರಿಶೋಧದೊಂದಿಗೆ 10ನೇ ಶತಮಾನದ ಗದಾಯುದ್ಧ ಕಾವ್ಯದ ಐದು ತಾಮ್ರಪಟ ಹಾಗೂ 6ನೇ ಶತಮಾನದ ಬಾದಾಮಿ ಚಾಲುಕ್ಯರ ತಾಮ್ರದ ಪಟಗಳು ಹಾಗೂ ಅವ್ವ ಹೇಳಿದ ಕತೆ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ರಾಜಾಶ್ರಯ ಪಡೆದು ಹಲವಾರು ಕವಿಗಳಿಗೆ ಇರದ ಕವಿ ಚಕ್ರವರ್ತಿ ಬಿರುದು ರನ್ನನಿಗೆ ಮಾತ್ರ ದೊರೆಕಿದೆ. ಮಹಾಕವಿ ರನ್ನ ತನ್ನದೆಯಾದ ಗಂಡು ಭಾಷೆಯಲ್ಲಿ ವಿಶಿಷ್ಟ ರೀತಿಯಲ್ಲಿ ಈ ಗದಾಯುದ್ಧ ಕೃತಿ ರಚನೆ ಮಾಡಿದ್ದರಿಂದ ಅವರಿಗೆ ಈ ಬಿರುದು ಬಂದಿದೆ. ಅಂತಹವರ ಕೃತಿಯನ್ನು ತಾಮ್ರದ ಪಟದಲ್ಲಿ ನೀಡಿದ ಡಾ.ಸಂಗಮೇಶ ಕಲ್ಯಾಣಿ ಅವರಿಗೆ ಸರ್ಕಾರದ ವತಿಯಿಂದ ಅಭಿನಂದಿಸಬೇಕಾಗುತ್ತದೆ. ಶ್ರಮದಾಯಕವಾದ ಕಾರ್ಯವನ್ನು ಮಾಡುತ್ತಾ ಜೊತೆಗೆ ಬಾದಾಮಿಯ ಶಾಸನವನ್ನು ತಾಮ್ರದಪಟದಲ್ಲಿ ಬರೆದಿದ್ದು ಇವರಲ್ಲಿ ಪ್ರಾಚೀನ ಕಾಲದ ಆಶಯಗಳು ಇನ್ನೂ ಉಳಿದಿವೆ ಎಂಬುದನ್ನು ತೋರಿಸುತ್ತದೆ. ಹಳಗನ್ನಡದ ಆಸಕ್ತಿ ನನ್ನನ್ನು ಇಲ್ಲಿಯವರೆಗೆ ಕರೆದು ತಂದಿದೆ ಎಂದು ಹೇಳಿದರು.ಶಾಸಕ ಜಗದೀಶ ಗುಡಗುಂಟಿ ಮಾತನಾಡಿ, ಡಾ.ಎಸ್.ಸಿ.ಕಲ್ಯಾಣಿಯವರ ಶಿಶ್ತು ಹಾಗೂ ನಿರರ್ಗಳತೆಗೆ ಹೆಸರಾದವರು. ಅವರ ಕೃತಿ ಬಿಡುಗಡೆ ಮಾಡಿದ್ದು ಸಂತಸ ತಂದಿದೆ ಎಂದರು.
ಹಂಪಿ ಕ.ವಿ.ವಿ ವಿಶ್ರಾಂತ ಕುಲಪತಿ ಡಾ.ಎ. ಮುರುಗೆಪ್ಪ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಹಳಗನ್ನಡ ಹಾಗೂ ಮೋಡಿ ಲಿಪಿ ಓದುವುದು ವಿರಳ. ಆದರೆ ವಿರಳರಲ್ಲಿ ವಿರಳರಾಗಿ ಸುಲಭವಾಗಿ ಓದುವ ವ್ಯಕ್ತಿ ಡಾ.ಸಂಗಮೇಶ ಕಲ್ಯಾಣಿ. ಅವರ ಕಾರ್ಯ ಶ್ಲಾಘನೀಯ ಎಂದರು.ಮಹಾಲಿಂಗಪುರದ ಶ್ರೀ ಮಹಾಲಿಂಗೇಶ್ವರ ಸಂಸ್ಥಾನಮಠದ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಚಿಂತನ ಸಿರಿಯ ಅಧ್ಯಕ್ಷ ಡಾ.ಎಂ.ಆರ್. ದೇಸಾಯಿ ಅಧ್ಯಕ್ಷತೆ ವಹಿಸಿ ಮಾತನಾಡಿದರು,
ತಹಸೀಲ್ದಾರ್ ವಿನೋದ ಹತ್ತಳ್ಳಿ, ಕಾನಿಪ ಅಧ್ಯಕ್ಷ ಬಿ. ರತ್ನಾಕರಶೆಟ್ಟಿ, ಡಾ.ಪ್ರಕಾಶ ಚಿನ್ನನವರ, ಪತ್ರಕರ್ತ ಗುರುರಾಜ ಪೋತ್ನಿಸ್, ರಮೇಶ ಅಣ್ಣಿಗೇರಿ, ಮನಗೂಳಿಯ ಸೂಪಿಸಂತ ಡಾ. ಪೈರೋಜಿ ಹುಸೇನ್ ಇನಾಮದಾರ, ಬಾಲಕೃಷ್ಣ ಗುರೂಜಿ, ಕಸಾಪ ಅಧ್ಯಕ್ಷ ಆನಂದ ಪೂಜಾರಿ, ಮಾಜಿ ಅಧ್ಯಕ್ಷ ಎನ್.ವಿ. ತುಳಸಿಗೇರಿ, ಕಲ್ಲಪ್ಪಣ್ಣ ಸಬರದ, ಡಾ.ಸಂಗಮೇಶ ಕಲ್ಯಾಣಿ, ಡಿ.ಎಂ.ಬೆಣ್ಣೂರ ಇತರರು ಇದ್ದರು.----
ನನಗೆ ಹಳಗನ್ನಡ ಹಾಗೂ ಮೋಡಿ ಲಿಪಿಯಲ್ಲಿ ಬಹಳ ಆಸಕ್ತಿ. ಅದಕ್ಕೆ ಪುಷ್ಟಿಕೊಟ್ಟು ಹಂಪಿಯ ಕ.ವಿ.ವಿ ಯಲ್ಲಿ ಪ್ರೋತ್ಸಾಹಕೊಟ್ಟ ನಂತರ ಇಂದು ಮೋಡಿ ಲಿಪಿ ಓದುವುದರಲ್ಲಿ ನಿಪುಣನಾಗಿದ್ದೇನೆ. ಇದಕ್ಕೆ ಮಾಜಿ ಡಿಸಿಎಂ ಜಿ.ಎಂ. ಕಾರಜೋಳರ ಪ್ರೋತ್ಸಾಹವೇ ಕಾರಣ. ಧಾರವಾಡದ ಕ.ವಿ.ವಿ ಯಲ್ಲಿ ಮೋಡಿಲಿಪಿ ಡಿಪ್ಲೊಮಾ ಉಪನ್ಯಾಸಕನಾಗುವ ಅವಕಾಶ ಸಿಕ್ಕಿದೆ. ನನನಗೆ ಪ್ರೋತ್ಸಾಹ ನೀಡಿದ ಎಲ್ಲರಿಗೂ ಧನ್ಯವಾದ.- ಡಾ.ಸಂಗಮೇಶ ಕಲ್ಯಾಣಿ, ಮೋಡಿಲಿಪಿ ತಜ್ಞ ಮುಧೋಳ