ಹಳ್ಳಿಗಳಿಗೆ ಹೋಗಿ ಸಮಾಜಕಾರಣ ಮಾಡಿದ ಡಾ. ಪ್ರಕಾಶ ಭಟ್‌: ನಾಗೇಶ ಹೆಗಡೆ

| Published : May 20 2024, 01:38 AM IST

ಹಳ್ಳಿಗಳಿಗೆ ಹೋಗಿ ಸಮಾಜಕಾರಣ ಮಾಡಿದ ಡಾ. ಪ್ರಕಾಶ ಭಟ್‌: ನಾಗೇಶ ಹೆಗಡೆ
Share this Article
  • FB
  • TW
  • Linkdin
  • Email

ಸಾರಾಂಶ

ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮೊದಲ ಸಾಲಿನಲ್ಲಿ ಯುದ್ಧದ ಟ್ಯಾಂಕ್‌ಗಳು, ಆನಂತರ ತಂತ್ರಜ್ಞಾನ ಹಾಗೂ ಕೊನೆ-ಕೊನೆಗೆ ಕುಲಶಕರ್ಮಿಗಳು, ಶ್ರಮಜೀವಿಗಳು ಹಾಗೂ ಪಾದಚಾರಿಗಳ ಸಾಲು. ಇದನ್ನು ಗಮನಿಸಿದಾಗ ಗ್ರಾಮೀಣ ಜಗತ್ತನ್ನು ನಮ್ಮ ಸಮಾಜ ಯಾವ ಸ್ಥಾನದಲ್ಲಿಟ್ಟಿದೆ ಎಂಬುದು ತಿಳಿಯಲಿದೆ ಎಂದು ಅಂಕಣಕಾರ ನಾಗೇಶ ಹೆಗಡೆ ಹೇಳಿದರು.

ಕನ್ನಡಪ್ರಭ ವಾರ್ತೆ ಧಾರವಾಡ

ಭಾರತ ದೇಶದಲ್ಲಿ ಹಳ್ಳಿಗರಿಗೆ ಸಿಗಬೇಕಾದ ಆದ್ಯತೆ ಇನ್ನೂ ಸಿಕ್ಕಿಲ್ಲ. ಇಂದಿರಾ ಗಾಂಧಿಯಿಂದ ಹಿಡಿದು ರಾಹುಲ್‌ ಗಾಂಧಿ ವರೆಗೂ ಇನ್ನೂ ಗ್ರಾಮೀಣಾಭಿವೃದ್ಧಿಯ ಮಾತು ಪ್ರಸ್ತುತವಾಗಿದೆಯೇ ಹೊರತು ಗ್ರಾಮಗಳು ಮಾತ್ರ ಸುಸ್ಥಿರ ಅಭಿವೃದ್ಧಿ ಕಾಣುತ್ತಿಲ್ಲ. ಇಂತಹ ಸಂದರ್ಭದಲ್ಲಿ ಹಳ್ಳಿ-ಹಳ್ಳಿಗಳಿಗೆ ಹೋಗಿ ಸುಸ್ಥಿರ ಅಭಿವೃದ್ಧಿ ಕೈಗೊಂಡು ಸಮಾಜಕಾರಣ ಮಾಡಿದ್ದಾರೆ ಡಾ. ಪ್ರಕಾಶ ಭಟ್‌ ಎಂದು ಚಿಂತಕ ಹಾಗೂ ಅಂಕಣಕಾರ ನಾಗೇಶ ಹೆಗಡೆ ಹೇಳಿದರು.

ಸಮಾಜ ವಿಜ್ಞಾನಿ ಡಾ. ಪ್ರಕಾಶ ಭಟ್‌ ಅವರ ಹಳ್ಳಿಗಳನ್ನು ಕಟ್ಟುವ ಕಷ್ಟ ಸುಖ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು. ಗಣರಾಜ್ಯೋತ್ಸವ ಮೆರವಣಿಗೆಯಲ್ಲಿ ಮೊದಲ ಸಾಲಿನಲ್ಲಿ ಯುದ್ಧದ ಟ್ಯಾಂಕ್‌ಗಳು, ಆನಂತರ ತಂತ್ರಜ್ಞಾನ ಹಾಗೂ ಕೊನೆ-ಕೊನೆಗೆ ಕುಲಶಕರ್ಮಿಗಳು, ಶ್ರಮಜೀವಿಗಳು ಹಾಗೂ ಪಾದಚಾರಿಗಳ ಸಾಲು. ಇದನ್ನು ಗಮನಿಸಿದಾಗ ಗ್ರಾಮೀಣ ಜಗತ್ತನ್ನು ನಮ್ಮ ಸಮಾಜ ಯಾವ ಸ್ಥಾನದಲ್ಲಿಟ್ಟಿದೆ ಎಂಬುದು ತಿಳಿಯಲಿದೆ. ಭಾರತ ದೇಶವು ಹಳ್ಳಿಗಳ ನಾಡು ಎನ್ನುತ್ತಾರೆ. ಆದರೆ, ಸಮಾಜ ಮಾತ್ರ ನಗರದ ಜನತೆಗೆ ಹೆಚ್ಚಿನ ಮಾನ್ಯತೆ ನೀಡುತ್ತಾರೆ. ಪ್ರತಿಯೊಂದು ವಿಷಯದಲ್ಲಿ ಹಳ್ಳಿಗರು ಕೊನೆಯ ಸಾಲಿನಲ್ಲಿ ಶ್ರಮಿಕರಾಗಿಯೇ ಬದುಕಬೇಕು. ಈ ಹಿನ್ನೆಲೆಯಲ್ಲಿ ಡಾ. ಪ್ರಕಾಶ ಭಟ್‌ ಅವರ ಕಷ್ಟಗಳನ್ನು ಅರಿತು ಅವುಗಳಿಗೆ ಪರಿಹಾರ ಒದಗಿಸಿದ್ದಾರೆ. ಜತೆಗೆ ಹಳ್ಳಿಗಳನ್ನು ಕಟ್ಟುವ ಕಷ್ಟಗಳನ್ನು ಪುಸ್ತಕ ರೂಪದಲ್ಲಿ ತಂದಿದ್ದು, ಈ ಪುಸ್ತಕ ಜಗತ್ತಿನ ವಿವಿಧ ಭಾಷೆಗಳಲ್ಲೂ ಬರಬೇಕೆಂದು ಹಾರೈಸಿದರು.

ಡಾ. ಪ್ರಕಾಶ ಭಟ್‌ ಅವರ ಬೈಫ್‌ ಸಂಸ್ಥೆಯ ಪ್ರಯೋಜನ ಪಡೆದ ಸೂರಶೆಟ್ಟಿಕೊಪ್ಪದ ದ್ಯಾಮಕ್ಕ ಪಾಟೀಲ ಮಾತನಾಡಿ, ಪ್ರಕಾಶ ಭಟ್‌ ಅವರು ನಮ್ಮೂರಿಗೆ ಬಂದ ಮೊದ ಮೊದಲು ಮಹಿಳೆಯರನ್ನು ಕೂಡಿಸಿ ಸಭೆ ಮಾಡುತ್ತೇವೆಂದಾಗ ಅವರನ್ನು ಯಾರೂ ನಂಬಲಿಲ್ಲ. ಅವರು ಕರೆದ ನಾಲ್ಕೈದು ಸಭೆಗಳಿಗೆ ಯಾರೂ ಹೋಗಲಿಲ್ಲ. ನಿಧಾನವಾಗಿ ಅವರ ಯೋಜನೆಗಳನ್ನು ಅರಿತು ಅವರೊಂದಿಗೆ ಹೆಜ್ಜೆ ಹಾಕಿದೆವು. ಅವರು ಹಳ್ಳಿ ಜನರ ಕಷ್ಟಗಳನ್ನು ತಾವು ತೆಗೆದುಕೊಂಡು ಅವರ ಸುಖವನ್ನು ನಮಗೆ ನೀಡಿದರು. 12ನೇ ವರ್ಷಕ್ಕೆ ಮದುವೆಯಾದ ನಾನು ಅನಾಥಳಾದಾಗ ಆರ್ಥಿಕ ಸೌಲಭ್ಯ ಮಾತ್ರವಲ್ಲದೇ ಆರೋಗ್ಯ ತಿಳಿವಳಿಕೆ, ಸ್ವಚ್ಛತೆ ಸೇರಿದಂತೆ ಇಡೀ ನಮ್ಮ ಬದುಕು ಹಸನು ಮಾಡಿದರು ಎಂದು ಸ್ಮರಿಸಿದರು.

ಡಾ. ಪ್ರಕಾಶ ಭಟ್‌ ಮಾತನಾಡಿ, ದೇಶ-ವಿದೇಶ ಸುತ್ತಾಡಿ ಶಿಕ್ಷಣ ಪಡೆದೆ. ಪಶುವೈದ್ಯ ಸಹ ಆದೆ. ದನಗಳ ಬಗ್ಗೆ ಚಿಂತನೆ, ಮಾತನಾಡುವ ಬದಲು ಜನಗಳ ಬಗ್ಗೆ ಚಿಂತನೆ ಮಾಡಬೇಕೆಂದು ಹಳ್ಳಿಗಳ ಕಡೆಗೆ ಹೋದೆ. ಅವರ ಕಷ್ಟಗಳನ್ನು ಅರಿತು ಪರಿಹಾರ ಒದಗಿಸಿದೆ. ಅವರ ಕಷ್ಟಗಳನ್ನು ಆಮಂತ್ರಿಸಿದೆ. ಹಳ್ಳಿ ಜನರಿಗೆ ನಾವು ತುಸು ಪ್ರೀತಿ ನೀಡಿದರೆ ಅದರ ನೂರರಷ್ಟು ಪ್ರೀತಿ ಅವರು ಮರಳಿ ನಮಗೆ ಕೊಡುತ್ತಾರೆ ಎಂಬುದಕ್ಕೆ ನಾನೇ ದೊಡ್ಡ ಉದಾಹರಣೆ. ಅವರಿಗೆ ಹಣ ಮಾತ್ರ ಮುಖ್ಯವಲ್ಲ. ಜೀವನ ಮುಖ್ಯ ಎಂಬುದನ್ನು ಅರಿತಿದ್ದೇನೆ ಎಂದರು.

ರೊಟ್ಟಿ ಬಿಡುಗಡೆ:

ಸೂರಶಟ್ಟಿಕೊಪ್ಪದ ಒಡನಾಡಿಗಳು ಗೀತೆಗಳನ್ನು ಪ್ರಸ್ತುತ ಪಡಿಸಿದರು. ಕಾರ್ಯಕ್ರಮದ ವಿಶೇಷ ಎಂದರೆ ಸೂರಶೆಟ್ಟಿಕೊಪ್ಪದ ರೈತ ಮಹಿಳೆಯರು ಸಿದ್ಧಪಡಿಸಿದ ಜೋಳದ ರೊಟ್ಟಿಗಳನ್ನು ಸಮಾರಂಭದಲ್ಲಿ ಬಿಡುಗಡೆ ಮಾಡಿದ್ದು. ನಂತರ ನಡೆದ ಸಂವಾದದಲ್ಲಿ ಕೇಂದ್ರೀಯ ಬುಡಕಟ್ಟು ವಿವಿ ಕುಲಪತಿ ಡಾ. ತೇಜಸ್ವಿ ಕಟ್ಟೀಮನಿ, ಚಿಂತಕ ಕೃಷ್ಣಮೂರ್ತಿ ಬಿಳಿಗೆರೆ, ಬಹುರೂಪಿ ಪ್ರಕಾಶನದ ಜಿ.ಎನ್. ಮೋಹನ, ಡಾ. ಪ್ರಕಾಶ ಭಟ್‌ ಅವರ ಸುಸ್ಥಿರ ಬದುಕು, ಹಳ್ಳಿಗಳ ಒಡನಾಟ ಹಾಗೂ ಕೃತಿ ಕುರಿತಾದ ಹಲವು ಪ್ರಶ್ನೆಗಳಿಗೆ ಉತ್ತರ ಪಡೆದರು. ಸುನಂದಾ ಭಟ್‌ ಮಾತನಾಡಿದರು. ಶಾಸಕ ಅರವಿಂದ ಬೆಲ್ಲದ, ಮಾಜಿ ಶಾಸಕ ಡಿ.ಆರ್‌. ಪಾಟೀಲ, ಡಾ. ಮಾಲತಿ ಪಟ್ಟಣಶೆಟ್ಟಿ, ಸಿ.ಯು. ಬೆಳ್ಳಕ್ಕಿ, ಸೂರಶೆಟ್ಟಿ ಹಾಗೂ ವಿವಿಧ ಹಳ್ಳಿಗಳ ಜನರು ಆಗಮಿಸಿದ್ದರು. ಸಮಾಜ ವಿಜ್ಞಾನಿ

ರಾಜಕಾರಣವನ್ನು ಸಮಾಜಕಾರಣವೆಂದು ಕರೆಯಬೇಕು ಎಂಬುದು ನನ್ನ ಅಭಿಪ್ರಾಯ. ರಾಜ ಎಂಬ ಶಬ್ದದಲ್ಲಿಯೇ ಅಧಿಕಾರದ ದರ್ಪವಿದೆ. ಅಧಿಕಾರಿ ಎನ್ನುವುದು ನನ್ನ ಅಭಿಪ್ರಾಯದಲ್ಲಿ ತಪ್ಪು. ಈ ಮೊದಲು ನನಗೆ ಚಿಂತಕ, ಗ್ರಾಮೀಣಾಭಿವೃದ್ಧಿ, ಕೃಷಿ ತಜ್ಞ ಅನ್ನುತ್ತಿದ್ದರು. ಡಾ. ತೇಜಸ್ವಿ ಕಟ್ಟೀಮನಿ ಅವರು ಸಮಾಜ ವಿಜ್ಞಾನಿ ಎಂದಿದ್ದು ಸಾರ್ಥಕ ಎನಿಸಿದೆ.

ಡಾ. ಪ್ರಕಾಶ ಭಟ್‌ಅಧಿಕಾರಕ್ಕೆ ಚ್ಯುತಿ

ರೈತರು, ಹಳ್ಳಿ ಜನರ ಶ್ರಮ ಇಲ್ಲದೇ ಹೋದರೆ ಯಾರಿಗೂ ಬದುಕಿಲ್ಲ. ನಗರದ ಜನತೆ ಹಳ್ಳಿ ಜನರನ್ನು ದಡ್ಡರು ಎನ್ನುತ್ತಾರೆ. ಜತೆಗೆ ಅವರು ದಡ್ಡರಾಗಿಯೇ ಇರಬೇಕು ಎಂದು ಬಯಸುತ್ತಾರೆ. ಹಳ್ಳಿ ಜನರು ಜಾಣರಾದರೆ, ಸ್ವಾವಲಂಬಿಯಾದರೆ ನಮ್ಮ ಅಧಿಕಾರಕ್ಕೆ ಚ್ಯುತಿ ಬರಲಿದೆ ಎಂಬ ಷಡ್ಯಂತ್ರ ಎಲ್ಲ ರಾಜಕೀಯ ಪಕ್ಷಗಳಿಂದಲೂ ನಡೆದಿರುವುದು ಬೇಸರದ ಸಂಗತಿ.

ಡಿ.ಆರ್‌. ಪಾಟೀಲ, ಮಾಜಿ ಶಾಸಕರು