ಸಾರಾಂಶ
ವಿಶೇಷ ವರದಿ
ಹಾವೇರಿ: ಮಳೆಯಿಲ್ಲದೇ ಜಿಲ್ಲೆಯ ಎಲ್ಲ 8 ತಾಲೂಕುಗಳಲ್ಲಿ ಬರಗಾಲ ಆವರಿಸಿದೆ. ಈಗಾಗಲೇ 5 ತಾಲೂಕುಗಳನ್ನು ಸರ್ಕಾರ ಬರಪೀಡಿತ ಎಂದು ಘೋಷಿಸಿದ್ದು, ಇನ್ನು 3 ತಾಲೂಕು ಘೋಷಣೆಗೆ ಬಾಕಿ ಉಳಿದಿವೆ. ಬೆಳೆ ನಷ್ಟ ಸಮೀಕ್ಷೆ ನಡೆಸಿ ಸರ್ಕಾರಕ್ಕೆ ವರದಿ ಸಲ್ಲಿಸಿದ್ದ ಮೊದಲ ಜಿಲ್ಲೆಯಾದರೂ ಜಿಲ್ಲೆಯ ಬರ ಅಧ್ಯಯನ ತಂಡ ಜಿಲ್ಲೆಗೆ ಬಾರದಿರುವುದು ರೈತರ ಅಸಮಾಧಾನ ಹೆಚ್ಚಿಸುವಂತೆ ಮಾಡಿದೆ.ಕೃಷಿ ಪ್ರಧಾನವಾಗಿರುವ ಹಾವೇರಿ ಜಿಲ್ಲೆಯಲ್ಲಿ ಮಳೆ ಇಲ್ಲದೆ ಬೆಳೆ ಬಾಡಿ ಭೀಕರ ಬರಗಾಲ ಆವರಿಸಿದೆ. ಆದರೆ ಕೇಂದ್ರ ಅಧ್ಯಯನ ತಂಡ ಈ ಸಾರಿ ಜಿಲ್ಲೆಗೆ ಭೇಟಿ ನೀಡುತ್ತಿಲ್ಲ. ಜಿಲ್ಲೆಯ ೮ ತಾಲೂಕುಗಳ ಪೈಕಿ ಶಿಗ್ಗಾಂವಿ, ಬ್ಯಾಡಗಿ ಹಾಗೂ ಹಾನಗಲ್ಲ ತಾಲೂಕುಗಳನ್ನು ಬರಪೀಡಿತ ಎಂದು ಸರ್ಕಾರ ಘೋಷಿಸಿಲ್ಲ. ಇಡಿ ಜಿಲ್ಲೆಯಲ್ಲಿ ಬರ ಆವರಿಸಿದ್ದರೂ ಮೂರು ತಾಲೂಕುಗಳನ್ನು ಬಿಟ್ಟಿರುವುದಕ್ಕೆ ರೈತರ ಹೋರಾಟ ಶುರುವಾಗಿದೆ. ಕೈಬಿಟ್ಟಿರುವ 3 ತಾಲೂಕುಗಳನ್ನು ಬರಪೀಡಿತ ಘೋಷಿಸಬೇಕು ಎಂಬ ರೈತರು ಅಹೋರಾತ್ರಿ ಹೋರಾಟ ಆರಂಭಿಸಿದ್ದಾರೆ.
ಜಿಲ್ಲೆಯ ೩.೩೦ ಲಕ್ಷ ಹೆಕ್ಟೇರ್ ಬಿತ್ತನೆ ಗುರಿಯಲ್ಲಿ ೩.೨೭ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಆಗಸ್ಟ್ ಆರಂಭದಲ್ಲಿ ಮಾಯವಾದ ಮಳೆ ಇನ್ನೂ ಇತ್ತ ಸುಳಿದಿಲ್ಲ. ಹೊಲದಲ್ಲಿ ಆಳೆತ್ತರಕ್ಕೆ ಬೆಳೆದಿರುವ ಬೆಳೆಗಳು ಕಾಳು ಕಟ್ಟಿಲ್ಲ. ಕೆರೆ ಕಟ್ಟೆಗಳಲ್ಲೂ ನೀರು ಬರಿದಾಗುತ್ತಿದೆ. ಹಿಂಗಾರು ಹಂಗಾಮು ಸಮೀಪಿಸುತ್ತಿದ್ದರೂ ನಿರೀಕ್ಷಿತ ಮಳೆ ಬರುತ್ತಿಲ್ಲ. ಇದೇ ಸ್ಥಿತಿ ಮುಂದುವರಿದರೆ ಜನ, ಜಾನುವಾರುಗಳಿಗೆ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಎದುರಾಗಲಿದೆ. ಈಗಲೇ ಜಿಲ್ಲೆಯ ಜನ ಬರದಿಂದ ತತ್ತರಿಸುವಂತಾಗಿದೆ. ಪ್ರತಿಸಾರಿ ಜಿಲ್ಲೆಯ ವಿವಿಧ ಭಾಗಕ್ಕೆ ಆಗಮಿಸಿ ಪರಿಶೀಲಿಸುತ್ತಿದ್ದ ಕೇಂದ್ರ ಬರ ಅಧ್ಯಯನ ತಂಡ ಈ ಸಲ ಜಿಲ್ಲೆಗೆ ಏಕೆ ಬರುತ್ತಿಲ್ಲ ಎಂಬ ಪ್ರಶ್ನೆ ರೈತರದ್ದಾಗಿದೆ.ವರದಿ ಸಲ್ಲಿಸಿದ್ದ ಮೊದಲ ಜಿಲ್ಲೆ:
ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ೨.೦೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಗುರಿ ಹೊಂದಿದ್ದ ಮೆಕ್ಕೆಜೋಳವನ್ನು ಗುರಿ ಮೀರಿ ೨.೩೪ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಲಾಗಿದೆ. ಇದರ ಜತೆಗೆ ೧೩,೭೭೦ ಹೆಕ್ಟೇರ್ ಪ್ರದೇಶದಲ್ಲಿ ಸೋಯಾಬಿನ್ ಬಿತ್ತನೆಯಾಗಿದೆ. ೩೦,೪೪೪ ಹೆಕ್ಟೇರ್ ಪ್ರದೇಶದಲ್ಲಿ ಬತ್ತ, ೧೫,೫೭೩ ಹೆಕ್ಟೇರ್ ಪ್ರದೇಶದಲ್ಲಿ ಶೇಂಗಾ, ೧೯,೨೯೮ ಹೆಕ್ಟೇರ್ ಪ್ರದೇಶದಲ್ಲಿ ಹತ್ತಿ ಬಿತ್ತನೆ ಮಾಡಲಾಗಿತ್ತು. ಆದರೆ ಮಳೆ ಕೈಕೊಟ್ಟಿದ್ದರಿಂದ ಬಹುತೇಕ ಬೆಳೆಗಳು ಬಾಡಿ ಕೆಂಪಗಾಗುತ್ತಿವೆ. ಜಿಲ್ಲೆಯಲ್ಲಿ ಯಾವ ಬೆಳೆ ಎಷ್ಟು ಪ್ರಮಾಣದಲ್ಲಿ ಹಾನಿಯಾಗಿದೆ ಎಂದು ಸರ್ಕಾರಕ್ಕೆ ಜಿಲ್ಲಾಡಳಿತ ಎಲ್ಲ ಜಿಲ್ಲೆಗಳಿಗಿಂತಲೂ ಮುಂಚೆ ವರದಿ ಸಲ್ಲಿಸಿದ್ದು, ಸುಮಾರು ೨.೫೦ ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಹಾನಿಯಾಗಿದೆ ಎಂದು ಅಂದಾಜಿಸಿದೆ.ಮಳೆ ಮಾಯ:ಜಿಲ್ಲೆಯಲ್ಲಿ ಜುಲೈ ಹೊರತುಪಡಿಸಿದರೆ ಮುಂಗಾರು ಹಂಗಾಮಿನಲ್ಲಿ ಮಳೆ ಕೈಕೊಟ್ಟಿದೆ. ಜುಲೈನಲ್ಲಿ ಬಿತ್ತನೆಯಾದ ಬೆಳೆಗಳಿಗೆ ಆಗಸ್ಟ್ ತಿಂಗಳಲ್ಲಿ ಮಳೆಯಾಗಿದ್ದರೆ ಬೆಳವಣಿಗೆಯಾಗುತ್ತಿತ್ತು. ಆದರೆ, ಕಳೆದ ಆಗಸ್ಟ್ ಇಡೀ ತಿಂಗಳು ಹಾಗೂ ಸೆಪ್ಟೆಂಬರ್‌ನಲ್ಲಿ ಇದುವರೆಗೂ ಮಳೆಯಿಲ್ಲದೇ ಬೆಳೆಗಳು ಬಾಡುತ್ತಿವೆ. ಹೊಲಗದ್ದೆಗಳು ಹಸಿರಾಗಿ ಕಂಡರೂ ಬೆಳೆ ಬಂದಿಲ್ಲ. ಮೆಕ್ಕೆಜೋಳ ಕಾಳು ಕಟ್ಟಿಲ್ಲ. ಇನ್ನಿತರ ಬೆಳೆಗಳು ಬಾಡಿ ಕೆಂಪಗಾಗುತ್ತಿವೆ. ಆಗಸ್ಟ್‌ನಲ್ಲಿ ೧೨೭ ಮಿಮೀ ವಾಡಿಕೆ ಮಳೆಯಲ್ಲಿ ಕೇವಲ ೨೭ ಮಿಮೀ ಮಳೆ ಬಿದ್ದು, ಶೇ. ೭೮ರಷ್ಟು ಮಳೆ ಅಭಾವವಾಗಿದೆ. ಬ್ಯಾಡಗಿ ತಾಲೂಕಿನಲ್ಲಿ ಶೇ. ೭೧ರಷ್ಟು ಕೊರತೆ, ಹಾನಗಲ್ಲ ತಾಲೂಕಿನಲ್ಲಿ ಶೇ. ೮೧, ಹಾವೇರಿ ಶೇ. ೮೫, ಹಿರೇಕೆರೂರು ಶೇ. ೭೯, ರಾಣಿಬೆನ್ನೂರು ಶೇ. ೬೯, ಸವಣೂರು ಶೇ. ೮೩, ಶಿಗ್ಗಾಂವಿ ಶೇ. ೭೨, ರಟ್ಟೀಹಳ್ಳಿ ತಾಲೂಕಿನಲ್ಲಿ ಶೇ. ೬೬ರಷ್ಟು ಮಳೆ ಕೊರತೆ ಕಾಣಿಸಿಕೊಂಡಿದೆ. ಸೆಪ್ಟಂಬರ್ ತಿಂಗಳಲ್ಲಿ ಕೂಡ ಶೇ. ೪೦ರಷ್ಟು ಮಳೆ ಕೊರತೆಯಾಗಿದ್ದು, ಜೂ. ೧ರಿಂದ ಈ ವರೆಗಿನ ಅವಧಿಯಲ್ಲಿ ೪೬೪ ಮಿಮೀ ವಾಡಿಕೆ ಮಳೆ ಎದುರು ೩೩೮ ಮಿಮೀ ಮಳೆಯಾಗಿ ಶೇ. ೨೭ರಷ್ಟು ಕೊರತೆ ಕಾಣಿಸಿಕೊಂಡಿದೆ.ರೈತರ ಪ್ರತಿಭಟನೆ ಭೀತಿಯೇ?
ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಳೆಯಿಲ್ಲದೇ ಬೆಳೆ ಹಾನಿಯಾಗುತ್ತಿದೆ. ಕೆಲವು ಕಡೆ ಹೊಲಗದ್ದೆಗಳು ಹಸಿರಾಗಿ ಕಂಡರೂ ಕಾಳು ಕಟ್ಟಿಲ್ಲ. ಬಿತ್ತನೆ ಬೀಜ, ಗೊಬ್ಬರಕ್ಕಾಗಿ ಎಕರೆಗೆ ಹತ್ತಾರು ಸಾವಿರ ರು. ಖರ್ಚು ಮಾಡಿದ್ದ ರೈತರು ಕಂಗಾಲಾಗಿದ್ದಾರೆ. ಹೀಗಾಗಿ ಬಾಕಿ ಉಳಿದಿರುವ ಬ್ಯಾಡಗಿ, ಹಾನಗಲ್ಲ, ಶಿಗ್ಗಾಂವಿ ತಾಲೂಕುಗಳನ್ನು ಬರಪೀಡಿತ ಎಂದು ಘೋಷಣೆ ಮಾಡಬೇಕು ಎಂದು ರೈತರು ಹೋರಾಟ ತೀವ್ರಗೊಂಡಿದೆ. ಬರ ಅಧ್ಯಯನಕ್ಕೆ ಆಗಮಿಸಿದರೆ ರೈತರಿಂದ ಪ್ರತಿಭಟನೆ ಬಿಸಿ ಎದುರಿಸಬೇಕಾಗಬಹುದು ಎಂಬ ಕಾರಣಕ್ಕೆ ತಂಡ ಜಿಲ್ಲೆಗೆ ಕಾಲಿಡುತ್ತಿಲ್ಲ ಎಂಬುದು ರೈತರ ಆರೋಪವಾಗಿದೆ.