ಗದಗ-ಬೆಟಗೇರಿ ಅವಳಿನಗರದ ಕುಡಿವ ನೀರಿನ ಸಮಸ್ಯೆ, ಪ್ರಧಾನಿಗೆ ಪತ್ರ

| Published : Jul 02 2025, 12:20 AM IST

ಗದಗ-ಬೆಟಗೇರಿ ಅವಳಿನಗರದ ಕುಡಿವ ನೀರಿನ ಸಮಸ್ಯೆ, ಪ್ರಧಾನಿಗೆ ಪತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಗದಗ-ಬೆಟಗೇರಿ ಅವಳಿ ನಗರದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಸಾರ್ವಜನಿಕರ ಹಲವಾರು ದಶಕಗಳ ಹೋರಾಟ ಇಂದಿಗೂ ಮುಂದುವರಿದಿದೆ. ಇದಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದರೂ ಯಾವ ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಜನರು ನಿತ್ಯವೂ ಪರದಾಡುತ್ತಿದ್ದು ಇದರಿಂದ ಆಕ್ರೋಶಗೊಂಡ ಅವಳಿ ನಗರದ ಕೆಲವು ನಾಗರಿಕರು ಈ ಕುರಿತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ವಿಶೇಷ ವರದಿ

ಕನ್ನಡಪ್ರಭ ವಾರ್ತೆ ಗದಗ

ಗದಗ-ಬೆಟಗೇರಿ ಅವಳಿ ನಗರದ ಕುಡಿವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಸಿಗದೇ ಸಾರ್ವಜನಿಕರ ಹಲವಾರು ದಶಕಗಳ ಹೋರಾಟ ಇಂದಿಗೂ ಮುಂದುವರಿದಿದೆ. ಇದಕ್ಕಾಗಿ ಹತ್ತಾರು ಯೋಜನೆಗಳನ್ನು ಜಾರಿ ಮಾಡಿದರೂ ಯಾವ ಯೋಜನೆಗಳೂ ಸಮರ್ಪಕವಾಗಿ ಜಾರಿಯಾಗದ ಹಿನ್ನೆಲೆಯಲ್ಲಿ ಜನರು ನಿತ್ಯವೂ ಪರದಾಡುತ್ತಿದ್ದು ಇದರಿಂದ ಆಕ್ರೋಶಗೊಂಡ ಅವಳಿ ನಗರದ ಕೆಲವು ನಾಗರಿಕರು ಈ ಕುರಿತು ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದು ತಮ್ಮ ಸಮಸ್ಯೆಯನ್ನು ಹೇಳಿಕೊಂಡಿದ್ದಾರೆ.

ಐದು ದಶಕಗಳಿಂದ ಬಗೆಹರಿಯದ ಮೂಲಭೂತ ಸಮಸ್ಯೆಗಳ ಬಗ್ಗೆ ಕೇಂದ್ರ ಸರ್ಕಾರವಾದರೂ ಕೂಡಲೇ ಮಧ್ಯಸ್ಥಿಕೆ ವಹಿಸಿ ಸಾರ್ವಜನಿಕರ ಸಮಸ್ಯೆಗಳಿಗೆ ಇತಿಶ್ರೀ ಹಾಡಬೇಕು ಎಂದು ಮನವಿಯಲ್ಲಿ ವಿನಂತಿಸಿಕೊಂಡಿದ್ದಾರೆ.

ಪ್ರಮುಖ 7 ಸಮಸ್ಯೆಗಳ ಮನವಿ

ಕುಡಿವ ನೀರು: ಗದಗದ ಬಹುಪಾಲು ವಾರ್ಡ್‌ಗಳಲ್ಲಿ ನೀರು 15–30 ದಿನಕ್ಕೊಮ್ಮೆ ಮಾತ್ರ ಬರುತ್ತದೆ. ಜನರು ಕೆಲಸಕ್ಕೆ ಹೋಗುವುದನ್ನು ಬಿಟ್ಟು ಮನೆಯಲ್ಲೇ ಬಕೆಟ್ ಹಿಡಿದು ಕುಳಿತುಕೊಳ್ಳುವ ಸ್ಥಿತಿ ನಿರ್ಮಾಣವಾಗಿದೆ. ಈ ಸ್ಥಿತಿಯನ್ನು ಜನರು ನೀರಿಗಾಗಿ ನಿತ್ಯ ಧರಣಿ ನಡೆಸಿಯೇ ಪಡೆಯುವಂತಾಗಿದೆ. ಮನೆಯಲ್ಲಿ ಕೇವಲ ವಯೋ ವೃದ್ಧರು ಮಾತ್ರ ಇದ್ದರೆ ಅವರ ಸಮಸ್ಯೆಯಂತೂ ಹೇಳ ತೀರದಾಗಿದ್ದು ರಾತ್ರಿಯಲ್ಲಾ ಕೊಡ ನೀರಿಗಾಗಿ ಮತ್ತೊಬ್ಬರನ್ನು ಆಶ್ರಯಿಸುವಂತಾಗಿದೆ.

ನಕ್ಷೆಯೇ ಇಲ್ಲ: 1997ರಲ್ಲಿ ಗದಗ ಜಿಲ್ಲೆ ವಿಭಜನೆಯ ಸಂದರ್ಭದಲ್ಲಿ ನಷ್ಟವಾದ ನಗರ ಸರ್ವೆ ದಾಖಲೆಗಳನ್ನು ಇಂದಿಗೂ ನವೀಕರಿಸಿಲ್ಲ. ಇದರಿಂದಾಗಿ ಹಳೆಯ ಗದಗ ನಗರದ ಜನರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ನಿಗದಿತ ಜಮೀನು, ನಿವೇಶನಗಳಿಗೆ ಮಾಲಿಕತ್ವದ ಬಗ್ಗೆ ಸ್ಪಷ್ಟತೆ ಸಿಗುತ್ತಿಲ್ಲ. ಇದರಿಂದಾಗಿ ಹಲವಾರು ರೀತಿಯ ಸಮಸ್ಯೆಗಳು ಉಂಟಾಗುತ್ತಿದ್ದು ಇದರೊಟ್ಟಿಗೆ ಸರ್ಕಾರದ ಯೋಜನೆಗಳು ಸ್ಥಗಿತವಾಗುತ್ತಿವೆ.

ವಸತಿ ಸಮಸ್ಯೆ: ಗದಗ ನಗರದಲ್ಲಿ ಯಾವುದೇ ಬೃಹತ್ ಕೈಗಾರಿಕೆಗಳು ಇಲ್ಲದೇ ಇರುವ ಹಿನ್ನೆಲೆಯಲ್ಲಿ ಬಡ, ಮಧ್ಯಮ ವರ್ಗದವರು ನಿತ್ಯವೂ ಅವಳಿ ನಗರದಲ್ಲಿಯೇ ಸಿಗುವ ಅಲ್ಪ ಕೂಲಿಗಾಗಿ ದುಡಿದು ಬದುಕುವುದು ಅನಿವಾರ್ಯವಾಗಿದೆ. ಅವರೆಲ್ಲಾ ಸ್ವಂತ ಮನೆಗಳನ್ನು ಕಾಣಲು ಸಾಧ್ಯವೇ ಇಲ್ಲದಂತಾಗಿದೆ. ತೀವ್ರ ಆರ್ಥಿಕ ಒತ್ತಡದಲ್ಲಿ ನಲುಗುತ್ತಿರುವ ಮಧ್ಯಮ ವರ್ಗದವರು ತಮ್ಮ ಆದಾಯದ 25% ಮಕ್ಕಳ ಶಿಕ್ಷಣಕ್ಕೆ, ಉಳಿದ ಶೇ 60 ಹಣವನ್ನು ಮನೆ ಬಾಡಿಗೆ ಇತರೆ ಕೆಲಸ ಕಾರ್ಯಗಳಿಗೆ ಖರ್ಚಾಗುತ್ತಿದ್ದು ಕೂಡಲೇ ಅವಳಿ ನಗರದಲ್ಲಿ ಬಡವರಿಗೆ ಉಚಿತ ಮನೆಗಳನ್ನು ನೀಡಬೇಕು.

ಒಳಚರಂಡಿ ಇಲ್ಲ, ಕೆಲವೆಡೆ ಇದ್ದರೂ ಗುಣಮಟ್ಟವಿಲ್ಲ:

ಜಿಲ್ಲಾ ಕೇಂದ್ರವಾದ ನಂತರ ಗದಗ ಸಾಕಷ್ಟು ಪ್ರಮಾಣದಲ್ಲಿ ಬೆಳವಣಿಗೆ ಹೊಂದಿದೆ. ಆದರೆ ಗದಗ ನಗರದಲ್ಲಿ ಸುಸಜ್ಜಿತವಾದ ಒಳಚರಂಡಿ ವ್ಯವಸ್ಥೆ ನಿರ್ಮಾಣವಾಗಿಲ್ಲ. ಕೆಲವೆಡೆ ಇದ್ದರೂ ಅವುಗಳು ಗುಣಮಟ್ಟದಿಂದ ಕೂಡಿಲ್ಲ ಹಾಗಾಗಿ ಜನರು ನಿತ್ಯವೂ ದುರ್ನಾತಗಳಲ್ಲಿಯೇ ಬದುಕುವಂತಾಗಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವಿಶೇಷ ಗಮನ ನೀಡಬೇಕು. ಅದರಲ್ಲಿಯೂ ಗದಗ ನಗರದ ಪಂಚಾಕ್ಷರಿ ನಗರ ಸೇರಿದಂತೆ ಹಳೆಯ ಗದಗ ಬೆಟಗೇರಿ ಭಾಗದಲ್ಲಿ ಒಳಚರಂಡಿ ವ್ಯವಸ್ಥೆಯ ಕೊರತೆ ಪ್ರಮುಖವಾಗಿದೆ.

ಪಾರ್ಕಿಂಗ್ ವ್ಯವಸ್ಥೆ ಇಲ್ಲ: ಗದಗ ಬೆಟಗೇರಿ ಅವಳಿ ನಗರ ಜಿಲ್ಲಾ ಕೇಂದ್ರವಾಗಿದ್ದು 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿದೆ, ನಿತ್ಯವೂ 50 ಸಾವಿರಕ್ಕೂ ಅಧಿಕ ಜನರು ಗದಗ ನಗರಕ್ಕೆ ಭೇಟಿ ನೀಡುತ್ತಾರೆ. ಆದರೆ ಇದುವರೆಗೂ ಗದಗ ನಗರದಲ್ಲಿ ಸಮರ್ಪಕವಾದ ಪಾರ್ಕಿಂಗ್ ವ್ಯವಸ್ಥೆ ಇಲ್ಲ, ಈ ಬಗ್ಗೆ ಗಮನ ನೀಡಬೇಕಾದ ನಗರಸಭೆಯ ಅಧಿಕಾರಿಗಳು ಮಾತ್ರ ಇದು ನಮಗೆ ಸಂಬಂಧಿಸಿದ್ದೇ ಅಲ್ಲ ಎನ್ನುವ ರೀತಿಯಲ್ಲಿ ವರ್ತಿಸುತ್ತಾರೆ. ಆದರೆ ಎಲ್ಲಾ ಅಂಗಡಿಗಳಿಂದ ತೆರಿಗೆ ಮಾತ್ರ ಪ್ರತಿ ವರ್ಷವೂ ಭರಣಾ ಮಾಡಿಸಿಕೊಳ್ಳುತ್ತಾರೆ.

ಸಣ್ಣ ಉದ್ಯಮಿಗಳಿಗೆ ತೆರಿಗೆ ವಿನಾಯಿತಿ ಇಲ್ಲ: ಕೃಷಿಯನ್ನೇ ಆದಾಯದ ಮೂಲವನ್ನಾಗಿ ಹೊಂದಿರುವ ಗದಗ ಜಿಲ್ಲೆಯಲ್ಲಿ ಕೃಷಿ ಆಧಾರಿತ ಸಣ್ಣ ಸಣ್ಣ ಕೈಗಾರಿಕೆಗಳು ನಡೆಯುತ್ತಿದ್ದರೂ ಅವುಗಳ ಕೂಡಾ ವಿಪರೀತವಾದ ತೆರಿಗೆ ಹೊರೆಯಿಂದ ತತ್ತರಿಸಿದ್ದು ಗದಗ ಜಿಲ್ಲೆಯನ್ನು ವಿಶೇಷ ತೆರಿಗೆ ವಲಯವನ್ನಾಗಿ ಗುರುತಿಸಿ ಸಣ್ಣ ಉದ್ಯಮಿಗಳಿಗೆ ತೆರಿಗೆ ವಿನಾಯಿ ನೀಡುವುದು ಸೇರಿದಂತೆ 7 ಪ್ರಮುಖ ಸಮಸ್ಯೆಗಳನ್ನು ಉಲ್ಲೇಖಿಸಿ ಪ್ರಧಾನ ಮಂತ್ರಿಗಳಿಗೆ ಪತ್ರ ಬರೆದಿದ್ದಾರೆ.

ಗದಗ ಬೆಟಗೇರಿ ಅವಳಿ ನಗರದ ಕುಡಿವ ನೀರಿನ ಸಮಸ್ಯೆ ಕುರಿತು ವಿಪ ಸದಸ್ಯರು ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ. ಕನ್ನಡಪ್ರಭ ಸೇರಿದಂತೆ ವಿವಿಧ ಪತ್ರಿಕೆಗಳು ಮತ್ತು ಟಿವಿ ಮಾಧ್ಯಮಗಳು ಸಾರ್ವಜನಿಕರ ಸಮಸ್ಯೆಗಳ ಕುರಿತು ವರದಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಅದಕ್ಕಾಗಿ ಪ್ರಧಾನ ಮಂತ್ರಿಗಳಿಗೆ ವಿವರವಾಗಿ ಪತ್ರ ಬರೆಯಲಾಗಿದೆ ಸಾಮಾಜಿಕ ಹೋರಾಟಗಾರ ಶಿದ್ಲಿಂಗಯ್ಯ ಹಿರೇಮಠ ಹೇಳಿದರು.