ಸಾರಾಂಶ
ಪ್ರತಿವರ್ಷದಂತೆ ಮಹಾಲಿಂಗೇಶ್ವರ ಜಾತ್ರೆಯ ಮೊದಲ ದಿನ ಚನಗಿರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರೀರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಸಾರ್ವಜನಿಕ ಜಟೋತ್ಸವ ಸಂಭ್ರಮದಿಂದ ಜರುಗುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿತು.
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಪ್ರತಿವರ್ಷದಂತೆ ಮಹಾಲಿಂಗೇಶ್ವರ ಜಾತ್ರೆಯ ಮೊದಲ ದಿನ ಚನಗಿರೇಶ್ವರ ದೇವಸ್ಥಾನದಲ್ಲಿ ಮಂಗಳವಾರ ಶ್ರೀರಾಜೇಂದ್ರ ಮಹಾಸ್ವಾಮಿಗಳ ಅಮೃತ ಹಸ್ತದಿಂದ ಸಾರ್ವಜನಿಕ ಜಟೋತ್ಸವ ಸಂಭ್ರಮದಿಂದ ಜರುಗುವುದರೊಂದಿಗೆ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ದೊರಕಿತು.ಶಿವಭಕ್ತೆ ಸಿದ್ದಾಯಿ ತಾಯಿಗೆ ಮಹಾಲಿಂಗೇಶ್ವರರು ತಮ್ಮ ಅಸ್ತಿತ್ವದ ಕುರುಹಾಗಿ ನೀಡಿದ ಜಡೆಯ ಮುಂಗುರುಳು ಪ್ರತಿವರ್ಷ ಒಂದು ಕಡಲೆಯಷ್ಟು ಬೆಳೆಯುತ್ತಿವೆ. ಈ ಪವಿತ್ರ ಜಡೆಯನ್ನು ಶ್ರೀಮಠದ ಮಠಾಧಿಪತಿ ರಾಜೇಂದ್ರ ಮಹಾಸ್ವಾಮಿಗಳ ನೇತೃತ್ವದಲ್ಲಿ ಮಹಾಲಿಂಗೇಶ್ವರ ಮಠದಿಂದ ಕರಡಿ ಮಜಲು, ಶಹನಾಯಿ ಮಂಗಳವಾದ್ಯಗಳೊಂದಿಗೆ ಪಲ್ಲಕ್ಕಿ ಉತ್ಸವವು, ಮಹಾಲಿಂಗೇಶ್ವರ ಮಠದಿಂದ ನಡುಚೌಕಿ ಮಾರ್ಗವಾಗಿ ಚನಗಿರೇಶ್ವರ ದೇವಸ್ಥಾನದವರೆಗೆ ಸಾಗಿತು. ಮೆರವಣಿಗೆಯಲ್ಲಿ ಉಚ್ಚಾಯಿ, ನಂದಿಕೋಲದೊಂದಿಗೆ ಸಾವಿರಾರು ಭಕ್ತರು ಉತ್ಸವದಲ್ಲಿ ಭಾಗವಹಿಸಿದ್ದರು. ವಾಡಿಕೆಯಂತೆ ಚನಗಿರೇಶ್ವರ ಪರ್ವತದ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಜಟೋತ್ಸವ ಜರುಗಿತು.
ವಿಜ್ಞಾನಕ್ಕೆ ಸವಾಲಾಗಿ ಬೆಳೆಯುತ್ತಿರುವ ಜಟಗಳ ಅಭಿಷೇಕವನ್ನು ಪ್ರತ್ಯಕ್ಷವಾಗಿ ಕಾಣಲು ಮುಧೋಳ, ಬಾಗಲಕೋಟೆ, ಬೆಳಗಾವಿ, ಗೋಕಾಕ, ಬೆಳಗಲಿ, ತೇರದಾಳ, ರಬಕವಿ-ಬನಹಟ್ಟಿ ಸಮೀರವಾಡಿ, ಸಂಗಾನಟ್ಟಿ, ಅಕ್ಕಿಮರಡಿ, ಕೆಸರಗೋಪ್ಪ, ನಂದಗಾಂವ, ಢವಳೇಶ್ವರ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಊರುಗಳಿಂದ ಹಾಗೂ ವಿವಿಧ ತಾಲೂಕು-ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದರು.ಜಡೆಗಳ ಕಾಣಿಕೆ:
ಶಿವನ ಅಪ್ಪಣೆಯ ಮೇರೆಗೆ ಶರೀರರಾಗಿ ಭೂಮಿಗೆ ಬಂದ ಮಹಾಲಿಂಗ ಜಂಗಮರು ವಿವಿಧ ಪುಣ್ಯಕ್ಷೇತ್ರಗಳಿಗೆ ಸಂಚರಿಸಿ ಶಿವಸ್ವಪ್ನದ ವಾಣಿಯಂತೆ ಇಂದಿನ ಮಹಾರಾಷ್ಟ್ರದ ಢಪಳಾಪುರದಲ್ಲಿರುವ ಶಿವಯೋಗಿ ಗುರುಲಿಂಗ ಜಗದ್ಗುರಗಳಲ್ಲಿಗೆ ಬಂದು ಅವರ ಶಿಷ್ಯರಾಗಿ, ಅವರಿಂದ ಅಷ್ಟಾವರಣ ಮಹಿಮೆಯನ್ನು ತಿಳಿಯುತ್ತಾರೆ. ಇದು ಮಹಾಲಿಂಗೇಶ್ವರರು ರಾಜನಿಗೆ ಲಿಂಗಮುದ್ರೆ ಸ್ಥಾಪನೆಗೆ ಅನುಮತಿ ನೀಡಲು ಪ್ರೇರಣೆಯಾಗಿರಬಹುದು.ಮಹಾಲಿಂಗೇಶ್ವರರು ಲಿಂಗೈಕ್ಯ ಸಮಯದಲ್ಲಿ ಶಿವಭಕ್ತೆ ಸಿದ್ಧಾಯಿಯ ಬಯಕೆಯಂತೆ ತಮ್ಮ ಇರುವಿಕೆಯ ಗುರುತಿಗಾಗಿ ತಮ್ಮ ತಲೆಯಲ್ಲಿಯ ಎರಡಳೆ ಜಡೆಗಳನ್ನು ಸಿದ್ದಾಯಿಗೆ ಕುರುಹುವಾಗಿ ನೀಡಿದ್ದು. ಈಗ ಅವು ಪ್ರತಿ ವರ್ಷವೂ ಗೋಧಿ ಕಾಳಿನಷ್ಟು ಬೆಳೆಯುತ್ತಿವೆ. ಅವುಗಳಲ್ಲಿ ಅವರು ತಮ್ಮ ಇರುವಿಕೆಯನ್ನು ಭಕ್ತರಿಗೆ ತೋರುತ್ತಿದ್ದಾರೆ.ಚನ್ನಗಿರೇಶ್ವರ ದೇವಾಲಯ ನಿರ್ಮಾಣ:
ಗುರುಗಳ ಅಣತಿಯಂತೆ ಮಹಾಲಿಂಗೇಶ್ವರರು ನರಗಟ್ಟಿ ಗ್ರಾಮಕ್ಕೆ ಬಂದಾಗ ಶಿವಭಕ್ತೆ ಸಿದ್ದಾಯಿ ತಾಯಿ ಬರಮಾಡಿಕೊಳ್ಳುತ್ತಾಳೆ. ನಂತರ ಅಲ್ಲಿಯೇ ನೆಲೆ ನಿಂತು ಅನೇಕ ಪವಾಡಗಳನ್ನು ಮಹಾಲಿಂಗೇಶ್ವರರು ಮಾಡುತ್ತಾರೆ. ಮುಂದೆ ಅವರ ಪವಾಡಗಳ ಶಕ್ತಿಯಿಂದಲೇ ಅವರ ಹೆಸರಿನಿಂದಲೇ ನರಗಟ್ಟಿ ಊರು ಬದಲಾಗಿ ಮಹಾಲಿಂಗಪುರವಾಯಿತು. ಮಹಾಲಿಂಗೇಶ್ವರರಿಗೆ ಕೃಷ್ಣಾ ನದಿ ಇಬ್ಭಾಗವಾಗಿ ದಾರಿ ನೀಡಿದ್ದು. ರುದ್ರಮ್ಮ ಎಂಬ ಹುಟ್ಟು ಕುರುಡಿಗೆ ಶ್ರೀಗಳ ಕೃಪಾಶೀರ್ವಾದದಿಂದ ಕಣ್ಣು ಬಂದಿದ್ದು. ಮಹಾಲಿಂಗೇಶ್ವರರು ತಪಗೈದ ಚನ್ನಗಿರಿಯಲ್ಲಿ ಇದ್ದ ರಾಮಲಿಂಗ ಎಂಬ ಪವಿತ್ರ ಲಿಂಗದ ಗೌರವಾರ್ಥವಾಗಿ ಚನ್ನಗಿರೇಶ್ವರ ದೇವಾಲಯ ನಿರ್ಮಾಣವಾಯಿತು.ಭವ್ಯ ಮೆರವಣಿಗೆ:
ಬೆಳಿಗ್ಗೆ 10 ಗಂಟೆಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಿಂದ ಸಕಲ ಮಂಗಲ ವಾದ್ಯಗಳೊಂದಿಗೆ ಸಹಸ್ರ ಸಹಸ್ರ ಜನಸ್ತೋಮದ ಜಯ ಘೋಷಗಳೊಂದಿಗೆ ಸಾಗಿದ ಮೆರವಣಿಗೆ ಶ್ರೀ ಚನ್ನಗಿರೇಶ್ವರ ದೇವಸ್ಥಾನ ತಲುಪಿ ನಂತರ ಮಠದ ಪೀಠಾಧಿಪತಿಗಳಾದ ಶ್ರೀ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಸ್ವಾಮಿಗಳು ಮಹಾ ಜಟೋತ್ಸವದ ಮಹಾಪೂಜೆ ನೆರವೇರಿಸಿದರು. ನಂತರ ಸುತ್ತಮುತ್ತಲಿನ ಹಲವಾರು ಹಳ್ಳಿಗಳಿಂದ ಆಗಮಿಸಿದ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.