ಸಾರಾಂಶ
ಹೊಸನಗರ : ನಿರಂತರ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ನಗರ ಹೋಬಳಿಯ ಸಮಗೋಡು ಸಮೀಪ ಭಾರೀ ಗುಡ್ಡ ಕುಸಿದ ಪರಿಣಾಮ ರಾಣಿಬೆನ್ನೂರು-ಬೈಂದೂರು ರಾಷ್ಟ್ರೀಯ ಹೆದ್ದಾರಿ-766c ಯಲ್ಲಿ ವಾಹನ ಸಂಚಾರ ಸ್ತಬ್ದಗೊಂಡಿದೆ.
ಬುಧವಾರ ಬೆಳಗ್ಗೆಯಿಂದ ತಾಲೂಕಿನಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಹಲವು ಅವಘಡ ಸೃಷ್ಟಿಸಿದೆ. ಈ ಮಾರ್ಗದಲ್ಲಿ ಸಾಗುವ ವಾಹನಗಳಿಗೆ ತಡೆಯಾಗಿ ಬದಲಿ ದಾರಿಯಲ್ಲಿ ಸಾಗಿದವು. ಜೆಸಿಬಿ ಯಂತ್ರ ಬಳಸಿ ಮಣ್ಣು ತೆರೆಯುವ ಕಾರ್ಯ ಆರಂಭಗೊಂಡಿದ್ದು, ಈ ನಡುವೆ ಮಳೆರಾಯನ ಪ್ರತಾಪ ಕಡಿಮೆ ಆಗದಿರುವುದು ಮಣ್ಣು ತೆರೆಯುವ ಕಾರ್ಯದ ವಿಳಂಬಕ್ಕೆ ಕಾರಣವಾಗಿದೆ.
ಈ ನಡುವೆ ಮತ್ತೆ ಗುಡ್ಡ ಕುಸಿತದ ಲಕ್ಷಣಗಳು ಈ ಪ್ರದೇಶದಲ್ಲಿ ಕಂಡು ಬರುತ್ತಿದ್ದು, ಜನರಲ್ಲಿ ಆತಂಕ ಮನೆ ಮಾಡಿದೆ. ಜಿಲ್ಲಾಡಳಿತ ತಕ್ಷಣ ಸೂಕ್ತ ಕ್ರಮಕೈಗೊಳ್ಳುವಂತೆ ಜನತೆ ಮನವಿ ಮಾಡಿ ಸಂಭವನೀಯ ಅವಗಡ ತಪ್ಪಿಸಲು ಕೋರಿದ್ದಾರೆ.
ತೋಟಕ್ಕೆ ನುಗ್ಗಿದ ನೀರು:
ಶರಾವತಿ ಹಿನ್ನೀರಿನಲ್ಲಿ ಕಳೆದ ಹಲವು ದಿನಗಳಿಂದ ಸುರಿಯುತ್ತಿರುವ ಮಳೆ ಬುಧವಾರವೂ ಆರ್ಭಟ ಮುಂದುವರೆಸಿದ್ದು, ಮಳೆ, ಶೀತಗಾಳಿಗೆ ಜನರು ಹೈರಾಣಾಗಿದ್ದಾರೆ.
ಮಳೆ ಆರ್ಭಟಕ್ಕೆ ನಲುಗಿದ ಜನರು ಮನೆಯಿಂದ ಹೊರಗೆ ಬಾರದಂತಾಗಿದೆ. ಈ ನಡುವೆ ಶೀತಗಾಳಿಗೆ ಹಲವು ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.
ಮಳೆ ಆರ್ಭಟಕ್ಕೆ ಬಾನುಕುಳಿ ಗ್ರಾಮದ ಸಂಪರ್ಕ ಕಲ್ಪಿಸುವ ರಸ್ತೆ ಮೇಲೆ ನೀರು ಹರಿದಿದೆ. ಹಿನ್ನೀರಿನಲ್ಲಿ ಹಲವೆಡೆ ಗದ್ದೆ, ತೋಟಕ್ಕೆ ನೀರು ನುಗ್ಗಿದ್ದು ಕೃಷಿ ತೋಟಗಳು ನೀರಿನಿಂದ ಜಾಲಾವೃತವಾಗಿವೆ. ಬರುವೆ ಗ್ರಾಮದ ಹಲವೆಡೆ ಅಡಿಕೆ ತೋಟಕ್ಕೆ ನೀರು ನುಗ್ಗಿದೆ.
ಕರೂರು ಹೋಬಳಿಯ ಆಡಗಳಲೆ, ಕಾರಣಿ, ಅಬ್ಬಿನಾಲೆ. ಕಟ್ಟಿನಕಾರು, ಭಾಗದಲ್ಲಿ ಮಳೆಯ ಆರ್ಭಟಕ್ಕೆ ರೈತರು ಮನೆಯಿಂದ ಹೊರ ಬರಲು ಸಾಧ್ಯವಾಗುತ್ತಿಲ್ಲ. ಶರಾವತಿ ಎಡದಂಡೆಯ ಹಳ್ಳಕೊಳ್ಳಗಳು ತುಂಬಿ ಅಪಾಯದ ಸ್ಥಿತಿ ಮಿರಿ ಹರಿಯುತ್ತಿವೆ. ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಸಮರ್ಪಕವೂ ಕಟ್ ಆಗಿದೆ.