ಸಾರಾಂಶ
ಕನ್ನಡಪ್ರಭ ವಾರ್ತೆ ನಂಜನಗೂಡು ಪಟ್ಟಣದ ಆರ್.ಪಿ. ರಸ್ತೆಯ ಭಾರ್ಗವಿ ಚಿತ್ರಮಂದಿರದ ಬಳಿ ರೇಲ್ವೆ ಮೇಲ್ಸೇತುವೆ ಬ್ರಿಡ್ಜ್ ನಿರ್ಮಾಣ ಕಾಮಗಾರಿ ನಡೆಸಲು ಸಿದ್ಧತೆ ನಡೆಸಲಾಗುತ್ತಿದ್ದು, ಶ್ರೀಕಂಠೇಶ್ವರ ದೇವಾಲಯದ ಸೌಂದರ್ಯಕ್ಕೆ ಹಾಗೂ 200ಕ್ಕೂ ಹೆಚ್ಚು ಜನರ ಅಂಗಡಿ ಮುಂಗಟ್ಟುಗಳಿಗೆ ಧಕ್ಕೆಯಾಗುವ ಆತಂಕದಲ್ಲಿದ್ದು, ಬ್ರಿಡ್ಜ್ ಸ್ಥಳಾಂತರಿಸುವಂತೆ ಸ್ಥಳೀಯ ಶಾಸಕ ದರ್ಶನ್ ಧ್ರುವನಾರಾಯಣ, ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ, ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು ಅವರಿಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದಾರೆ.ರೇಲ್ವೆ ಮೇಲ್ಸೆತುವೆ ನಿರ್ಮಾಣದಿಂದ ಶ್ರೀಕಂಠೇಶ್ವರ ದೇವಾಲಯದ ಗೋಪುರ ನಿವಾಸಿಗಳಿಗೆ ದರ್ಶನ ಸಿಗುವುದಿಲ್ಲ, ಇದರಿಂದ ಪುರಾತನ ದೇವಾಲಯದ ಸೌಂದರ್ಯಕ್ಕೆ ಧಕ್ಕೆಯಾಗುತ್ತದೆ, ಜೊತೆಗೆ ರಾಷ್ಟ್ರಪತಿ ರಸ್ತೆಯ ನಾಲ್ಕನೇ ಕ್ರಾಸ್ ನಿಂದ ರಾಕ್ಷಸ ಮಂಟಪದವರೆಗೆ ಸುಮಾರು 200 ಕ್ಕೂ ಹೆಚ್ಚು ಅಂಗಡಿಗಳು ಮತ್ತು ಮನೆಗಳು ಸುಮಾರು 10 ರಿಂದ 20 ಅಡಿ ಜಾಗವನ್ನು ರೇಲ್ವೆ ಇಲಾಖೆಗೆ ಬಿಟ್ಟುಕೊಡಬೇಕಾಗಿರುವುದರಿಂದ ಆಸ್ತಿ ನಷ್ಟವಾಗುವುದಲ್ಲದೆ, ವ್ಯಾಪಾರ ವಹಿವಾಟಿಗಳಿಗೂ ಕಡಿವಾಣ ಬೀಳುವ ಆತಂಕದಲ್ಲಿದ್ದಾರೆ.ದಿವಂಗತ ಆರ್. ಧ್ರುವನಾರಾಯಣ್ ಸಂಸದರಾಗಿದ್ದಾಗ ಬಿಡ್ಜ್ ಮಂಜೂರು ಮಾಡಲಾಗಿತ್ತು. ಪ್ರಸ್ತುತ ರೈಲ್ವೆ ಗೇಟ್ ಬಳಿ ಸಂಚಾರ ದಟ್ಟಣೆಯಿಂದ ಎಚ್ಚೆತ್ತ ರೇಲ್ವೆ ಇಲಾಖೆ ಸರ್ವೆ ಕಾರ್ಯ ನಡೆಸಿ ಮಾರ್ಕಿಂಗ್ ಮಾಡುತ್ತಿರುವುದರಿಂದ ಸಾರ್ವಜನಿಕರು ಆತಂಕ ವ್ಯಕ್ತಪಡಿಸಿದ್ದಾರೆ.ಈಗಾಗಲೇ ಮಹಾತ್ಮ ಗಾಂಧಿ ರಸ್ತೆಯಲ್ಲಿ ನಿರ್ಮಿಸಿರುವ ರೇಲ್ವೆ ಕೆಳ ಸೇತುವೆ ಅವೈಜ್ಞಾನಿಕವಾಗಿ ನಿರ್ಮಾಣವಾಗಿರುವುದರಿಂದ ಸ್ಥಳೀಯ ನಿವಾಸಿಗಳಿಗೆ ತೊಂದರೆಯಾಗಿದೆ. ಈ ಮೇಲ್ಸೇತುವೆ ನಿರ್ಮಾಣದದಿಂದ ಮತ್ತೆ ತೊಂದರೆ ಆಗಬಾರದು, ಅಲ್ಲದೆ ರಾಕ್ಷಸ ಮಂಟಪದ ಬಳಿ ರಥ ತಿರುವು ಪಡೆಯುವುದರಿಂದ ರಥ ಎಳೆಯಲು ಧಕ್ಕೆಯಾಗದಂತೆ ರೇಲ್ವೆ ಇಲಾಖೆ ಕ್ರಮವಹಿಸಬೇಕಾಗಿದೆ, ಎಂದು ಪತ್ರದಲ್ಲಿ ಉಲ್ಲೇಖಿಸಿ ಒತ್ತಾಯಿಸಿದ್ದಾರೆ.ರೈಲ್ವೆ ಮೇಲು ಸೇತುವೆ ನಿರ್ಮಾಣ ಮಾಡುವುದರಿಂದ ಸ್ಥಳೀಯ ನಿವಾಸಿಗಳಿಗೆ ಆಗುವ ತೊಂದರೆಯನ್ನು ತಪ್ಪಿಸುವ ಸಲುವಾಗಿ, ನಾಗಮ್ಮ ಶಾಲೆಯಿಂದ ಸರಸ್ವತಿ ಕಾಲೋನಿಗೆ ಹೋಗಿ ಅಲ್ಲಿಂದ ರೈಲ್ವೆ ಹಳಿಯನ್ನು ದಾಟಿ, ಪೊಲೀಸ್ ಪೆರೇಡ್ ಮೈದಾನದ ಮೂಲಕ ರಾಷ್ಟ್ರಪತಿ ರಸ್ತೆಗೆ ಅನ್ಯಮಾರ್ಗ ಬಳಸಿ ರೈಲ್ವೆ ಮೇಲ್ಸೇತುವೆ ಸೇರಿಸುವಂತೆ ಸ್ಥಳೀಯ ನಿವಾಸಿಗಳು ಪತ್ರ ಬರೆದು ಒತ್ತಾಯಿಸಿದ್ದಾರೆ.ಖಾದಿ ಗ್ರಾಮೋದ್ಯೋಗ ನಿಗಮದ ಮಾಜಿ ಅಧ್ಯಕ್ಷ ಎನ್.ಆರ್. ಕೃಷ್ಣಪ್ಪಗೌಡ, ಜೆಡಿಎಸ್ ಜಿಲ್ಲಾಧ್ಯಕ್ಷ ಎನ್. ನರಸಿಂಹಸ್ವಾಮಿ, ನಗರಸಭಾ ಮಾಜಿ ಅಧ್ಯಕ್ಷ ಮಹದೇವಸ್ವಾಮಿ, ನಗರಸಭಾ ಸದಸ್ಯ ಕಪಿಲೇಶ್, ಉದ್ಯಮಿ ಎಚ್.ಎಂ. ಶಂಕರ್, ಗೋವರ್ಧನ್, ನಂಜನಗೂಡಿನ ನಿವಾಸಿಗಳು ಇದ್ದರು.----------------